ಶ್ರೀರಾಮ ಕಥಾ ಲೇಖನ ಅಭಿಯಾನ-37: ಅಯೋಧ್ಯೆಯಲ್ಲಿ 1949ರ ಡಿ. 23ರಂದು ರಾಮ ಲಾಲನ ಪ್ರತಿಷ್ಥಾಪನೆ ಅದ ರೋಚಕತೆ

Upayuktha
0


ಶ್ರೀಕಂಠ ಬಾಲಗಂಚಿ ಬೆಂಗಳೂರು


ಕಲ ಹಿಂದೂಗಳ ಆರಾಥ್ಯದೈವ ಪ್ರಭು ಶ್ರೀರಾಮನ ಭವ್ಯವಾದ ದೇವಾಲಯ ಅಯೋಧ್ಯೆಯಲ್ಲಿ 2024 ರ ಜನವರಿ 22ರಂದು ಲೋಕಾರ್ಪಣೆ ಆಗುತ್ತಿರುವ ಸಂಧರ್ಭದಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ದೇವಾಲಯ ನಿರ್ಮಿಸಲು ಹೋರಾಟ ಮಾಡಬೇಕಾದಂತಹ ಪ್ರಸಂಗ ಉಂಟಾಗಿದ್ದರ ಹಿನ್ನಲೆಯನ್ನು ನಾವು ಅರಿತುಕೊಳ್ಳಬೇಕಾಗುತ್ತದೆ. ಅನಾದಿ ಕಾಲದಿಂದಲೂ ನಮ್ಮ ದೇಶ ಬೌದ್ಧಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಸಂಪಧ್ಭರಿತವಾಗಿದ್ದ ದೇಶವಾಗಿತ್ತು. ಅದರಲ್ಲೂ ವಿಶೇಷವಾಗಿ ಭಾರತದ ಸಾಂಬಾರ ಪದಾರ್ಥಗಳಿಗೆ ವಿದೇಶದಲ್ಲಿ ಅತ್ಯಂತ ಬೇಡಿಕೆ ಇದ್ದರೆ, ಇನ್ನು ಅಪಾರವಾದ ಖನಿಖ ಸಂಪತ್ತುಗಳನ್ನು ಹೊಂದಿದ್ದಂತಹ ಈ ದೇಶದ ಮೇಲೇ ಅನೇಕ ಧಾಳಿಕೋರರ ಕಣ್ಣಿದ್ದ ಪರಿಣಾಮ ಸುಮಾರು 7ನೇ ಶತಮಾನದಿಂದಲೂ ನಮ್ಮ ದೇಶದದ ಮೇಲೆ ಮೊಘಲರು, ಹೂಣರು, ಶಕರು, ಸತತವಾಗಿ ಧಾಳಿ ನಡೆಸಿದರೆ, ನಂತರದ ಕಾಲ ಘಟ್ಟದಲ್ಲಿ ಡಚ್ಚರು, ಫ್ರೆಂಚರು ಅಂತಿಮವಾಗಿ ಆಂಗ್ಲರು ಭಾರತದ ಮೇಲೆ ಧಾಳಿ ನಡೆಸಿ ಭಾರತವನ್ನು ಪ್ರತ್ಯಕ್ಶವಾಗಿಯೋ ಇಲ್ಲವೇ ಪರೋಕ್ಷವಾಗಿ ಸುಮಾರು 1000 ವರ್ಷಗಳ ಕಾಲ ಸತತವಾಗಿ ಲೂಟಿ ಮಾಡಿ ಹೋದದ್ದು ಈಗ ಇತಿಹಾಸ

ಅದೇ ರೀತಿ 15ನೇ ಶತಮಾನದಲ್ಲಿ ನಮ್ಮ ದೇಶದ ಮೇಲೆ ಮೊಘಲರ ಆಕ್ರಮಣವಾಗಿ ಇಂದಿನ ಉಜ್ಬೇಕಿಸ್ತಾನಕ್ಕೆ ಸೇರಿದ ಫರ್ಗಾನಾ ನಗರದ ಜಹೀರ್ ಉದ್ ದಿನ್ ಮೊಹಮ್ಮದ್ ಬಾಬರ್ ಎಂಬ ಮೊಘಲ್ ದೊರೆ 1527ರಲ್ಲಿ ಭಾರತದ ಮೇಲೆ ದಾಳಿ ನಡೆಸಿ ಸಂಗ್ರಾಮ ಸಿಂಗರನ್ನು ಸೋಲಿಸಿದ ನಂತರ ಮತಾಂಧತೆಯ ಉನ್ಮಾದ ಮತ್ತು ದೇವಾಲಯಗಳ ಸಂಪತ್ತುಗಳನ್ನು ಲೂಟಿ ಮಾಡುವ ಉದ್ದೇಶದಿಂದ ಅನೇಕ ದೇವಾಲಯಗಳನ್ನು ನಾಶಪಡಿಸಿಕೊಂಡು ಬರುತ್ತಿರುವಾಗಲೇ ಅವರ ಕಣ್ಣು ಅಯೋಧ್ಯೆಯ ರಾಮ ಮಂದಿರದ ಮೇಲೆ ಬಿದ್ದು ಬಾಬರನ ಸೇನಾಧಿಪತಿ ಮೀರ್ ಬಾಕಿ ಅನೇಕ ಹಿಂದೂಗಳ ತೀವ್ರ ಹೋರಾಟದ ನಡುವೆಯೂ 1528 ರಲ್ಲಿ ಅಯೋಧ್ಯೆಯಲ್ಲಿದ್ದ ರಾಮಮಂದಿರವನ್ನು ಧ್ವಂಸ ಮಾಡಿ ಅದರ ಮೇಲೊಂದು ಮಸೀದಿಯನ್ನು ನಿರ್ಮಿಸಿ ತನ್ನ ಒಡೆಯನ್ನನ್ನು ಸಂಪ್ರೀತಗೊಳಿಸಲು ಅದಕ್ಕೆ ಬಾಬರ್ ಮಸೀದಿ ಎಂದು ಹೆಸರಿಡುತ್ತಾನೆ. ಕಾಲ ಕ್ರಮೇಣ ಅದು ಜನರ ಆಡು ಭಾಷೆಯಲ್ಲಿ ಬಾಬ್ರಿ ಮಸ್ಜೀದ್ ಎಂದೇ ಪ್ರಖ್ಯಾತವಾಗುತ್ತದೆ.


ರಾಮ ಮಂದಿರ ನಾಶವಾದಗಲಿಂದಲೂ ಅದರ ಪುರರ್ನಿಮಾಣ ಮಾಡಲು ಅನೇಕ ಹಿಂದೂಗಳು ಪ್ರಯತ್ನಿಸಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರ ತ್ಯಾಗ ಬಲಿದಾನಗಳಾಗಿವೆ. ಅನೇಕರು ಅಲ್ಲಿನ ನವಾಬರಿಗೆ ಹಣವನ್ನು ಕೊಟ್ಟು ಆ ಪ್ರದೇಶವನ್ನು ಖರೀದಿಸಿ ಅಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಪ್ರಯತ್ನಿಸಿದರಾದರೂ ಫಲಕಾರಿಯಾಗದೇ ಯಥಾ ಸ್ಥಿತಿಯೇ ಮುಂದುವರಿದುಕೊಂಡು ಹೋಗಲೂ ಸಹಾ ಪ್ರಯತ್ನಿಸಿದ್ದರು. 1857ರಲ್ಲಿ ಮುಸಲ್ಮಾನರು ಇಡೀ ರಾಮಮಂದಿರದ ಸಂಕೀರ್ಣವನ್ನು ಹಿಂದೂಗಳಿಗೆ ಬಿಟ್ಟು ಕೊಡಲು ಮುಂದಾದರೂ ಬ್ರಿಟೀಷರ ವಿರುದ್ಧದ ಯುದ್ದದಲ್ಲಿ ಸೋಲುಂಟಾದ ಪರಿಣಾಮ ಆ ವಿಷಯ ನೆನೆಗುದಿಗೆ ಬೀಳುತ್ತದೆ. 1885ರಲ್ಲಿ ಪ್ರಪ್ರಥಮ ಬಾರಿಗೆ ಮಹಂತಾ ರಘುವರ್ ದಾಸ್ ಎಂಬವರು ರಾಮ ಜನ್ಮಸ್ಥಳಕ್ಕೆ ಮೇಲ್ಛಾವಣಿ ನಿರ್ಮಿಸಲು ಅವಕಾಶ ನೀಡಬೇಕು ಎಂದು ಕೋರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತಾರೆ. ಹೀಗೆ ಹಿಂದೂ-ಮುಸ್ಲಿಮರ ನಡುವೆ ಪೂಜಾ ಸ್ಥಳ ತೀವ್ರ ವಿವಾದಕ್ಕೆ ಕಾರಣವಾಗುತ್ತಿರುವುದನ್ನು ಮನಗಂಡ ಬ್ರಿಟೀಷರು, ಮೂರು ಗುಮ್ಮಟಗಳು ಮತ್ತು ರಾಮ ಚಬೂತರ್ ಗಳ ಮಧ್ಯೆ ಗೋಡೆಗಳನ್ನು ನಿರ್ಮಿಸಿ ಎರಡೂ ಧರ್ಮೀಯರಿಗೆ ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುತ್ತಾರೆ.


ತೀವ್ರವಾಗುತ್ತಿದ್ದ ಸ್ವಾತಂತ್ತ್ಯ ಹೋರಾಟವನ್ನು ಹತ್ತಿಕ್ಕಲು ಹೈರಾಣಾಗಿದ್ದ ಬ್ರಿಟೀಷರು ಹಿಂದೂ ಮತ್ತು ಮುಸಲ್ಮಾನರ ನಡುವೆ ಸಂಘರ್ಷನ್ನು ತರಲು ಸ್ಥಳೀಯ ಮುಸಲ್ಮಾನರಿಗೆ ಕುಮ್ಮಕ್ಕು ನೀಡಿ 1934ರಲ್ಲಿ ರಾಮಮಂದಿರದ ಸ್ಥಳದಲ್ಲಿ ಗೋಹತ್ಯೆ ಮಾಡಿಸುತ್ತಾರೆ. ಇದರಿಂದ ಕೆರಳಿದ ಹಿಂದೂ ಯುವಕರು ಅಂದಿನ ಕಾಲದಲ್ಲಿಯೇ ಆ ವಿವಾಧಿತ ಪ್ರದೇಶಕ್ಕೆ ನುಗ್ಗಿ ಮೂರು ಗುಂಬಜ್ ಗಳ ಮೇಲೇರಿ ಬಹಳಷ್ಟು ಹಾನಿ ಮಾಡಲು ಮುಂದಾದಾಗ, ಬ್ರಿಟೀಷರು ತಮ್ಮ ಸೈನ್ಯದ ಪ್ರಯೋಗದಿಂದಾಗಿ ಅದನ್ನು ವಿಫಲಗೊಳಿಸಿದ ನಂತರ ಆ ಪ್ರದೇಶಕ್ಕೆ ಮುಸಲ್ಮಾನರು ಮತ್ತೆಂದೂ ಕಾಲು ಇಡಲೇ ಇಲ್ಲ. ಆದರೂ ಸಹಾ ಮುಸಲ್ಮಾನರ ತುಷ್ಟೀಕರಣಕ್ಕೆ ಮುಂದಾದ ಅಲ್ಲಿನ ಕಲೆಕ್ಟರ್ ಹಿಂದುಗಳ ಮೇಲೆ ಪುಂಡಗಂದಾಯ ಹೇರಿ ಅದರಿಂದ ಬಂದ ಹಣದಲ್ಲಿ ಹಾನಿಯಾಗಿದ್ದ ಗುಂಬಜ್ ಗಳನ್ನು ಸರಿಪಡಿಸುತ್ತಾನೆ. ಇಷ್ಟೆಲ್ಲಾ ಗಲಾಟೆಗಳು ಆದರೂ ಅಲ್ಲಿ ನಿರಂತರವಾಗಿ ಪೂಜೆ ಪುನಸ್ಕಾರಗಳು ನಡೆಯುತ್ತಲೇ ಇರುತ್ತದೆ.


ಸ್ವಾತಂತ್ರ್ಯಾ ನಂತರ ಸರ್ದಾರ್ ಪಟೇಲ್ ಗುಜರಾತಿನಲ್ಲಿ ಸೋಮನಾಥ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲು ಮುಂದಾದಾಗ ಅನೇಕ ಸಾಧು ಸಂತರು ಅದರ ಜೊತೆಯಲ್ಲಿಯೇ ಅಯೋಧ್ಯೆಯಲ್ಲಿಯೂ ರಾಮ ಮಂದಿರವನ್ನು ಭವ್ಯವಾಗಿ ನಿರ್ಮಿಸಲು ಅಂದಿನ ಸರ್ಕಾರಕ್ಕೆ ಕೋರಿಕೆ ಸಲ್ಲಿಸುತ್ತಾರೆ. 1949ರ ಡಿಸೆಂಬರ್ 23ರಂದು ಗುಂಬಜ್ ಇದ್ದ ಮಸೀದಿಯ ಒಳಗೆ ಇದ್ದಕ್ಕಿದ್ದಂತೆಯೇ ಪುಟ್ಟ ಶ್ರೀರಾಮ ಲಲಾ ವಿಗ್ರಹವನ್ನು ಕಾಣಿಸಿಕೊಂಡ ಪರಿಣಾಮವಾಗಿ ಹಿಂದೂಗಳೆಲ್ಲರೂ ಉತ್ಸಾಹದಿಂದ ಲಕ್ಷೋಪ ಲಕ್ಷ ಸಂಖ್ಯೆಯಲ್ಲಿ ರಾಮಲಲ್ಲಾನ ದರ್ಶನ ಮಾಡಲು ಧಾವಿಸುತ್ತಿದ್ದಂತೆಯೇ ಅಂದಿನ ನೆಹರೂ ಸರ್ಕಾರ ಸ್ಥಳೀಯ ಉತ್ತರ ಪ್ರದೇಶದ ಸರ್ಕಾರದ ಮೇಲೆ ಒತ್ತಡ ಹೇರಿ ರಾಮನ ವಿಗ್ರಹವನ್ನು ತೆಗೆಸಲು ಪ್ರಯತ್ನಿಸಿತಾದರೂ ವಿಫಲವಾದ ಪರಿಣಾಮ ಕೇವಲ ಪೂಜೆಗೆ ಮಾತ್ರವೇ ಅವಕಾಶ ನೀಡಿ, ದೇವಾಲಯಕ್ಕೆ ಬೀಗವನ್ನು ಜಡಿದು, ಭಕ್ತಾದಿಗಳಿಗೆ ಬಾಗಿಲಿನ ಹೊರಗಿನಿಂದಲೇ ಸರಳುಗಳ ಮೂಲಕ ದೇವರ ದರ್ಶನ ಮಾಡಲು ಅನುವು ಮಾಡಿಕೊಡುತ್ತದೆ. ಇದೇ ಸಮಯದಲ್ಲಿ ಸ್ಥಳೀಯ ಮುಸಲ್ಮಾನರಿಂದ ಸಿವಿಲ್ ಕೇಸ್ ದಾಖಲಾದ ನೆಪ ಹಿಡಿದುಕೊಂಡು ಆ ಪ್ರದೇಶವನ್ನು ವಿವಾದಿತ ಸ್ಥಳ ಎಂದು ಘೋಷಿಸಿ ಸುಲಭವಾಗಿ ಪರಿಹರಿಸ ಬಹುದಾಗಿದ್ದ ಸಮಸ್ಯೆಯನ್ನು ಮತ್ತೊಮ್ಮೆ ಜಟಿಲ ಗೊಳಿಸುತ್ತದೆ.


ಹಾಗಾದರೆ, ಆ ಪ್ರದೇಶದಲ್ಲಿ ಏಕಾಏಕಿ ಶ್ರೀರಾಮ ಲಲಾ ವಿಗ್ರಹ ಹೇಗೆ ಕಾಣಿಸಿಕೊಂಡಿತು? ಎಂಬುದರ ಹಿಂದಿನ ರೋಚಕತೆಯನ್ನು ತಿಳಿಯೋಣ ಬನ್ನಿ.


1949ರ ಡಿಸೆಂಬರ್ 23ರಂದು ಗುಂಬಜ್ ಇದ್ದ ಮಸೀದಿಯ ಒಳಗೆ ಇದ್ದಕ್ಕಿದ್ದಂತೆಯೇ ಪುಟ್ಟ ಶ್ರೀರಾಮ ಲಲಾ ವಿಗ್ರಹ ಕಾಣಿಸಿಕೊಂಡಿದೆ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ನೇರವಾಗಿ ಜನರಿಂದ ಆಯ್ಕೆಯಾಗದೇ, ಕೇವಲ ಮಹಾತ್ಮಾ ಗಾಂಧಿಯವರ ಆಶಯದಂತೆ ಭಾರತ ದೇಶದ ಪ್ರಧಾನಿಯಾಗಿ ನೇಮಕಗೊಂಡಿದ್ದ ನೆಹರು ಅವರು ಇದೊಂದು ಗಂಭೀರವಾದ ವಿಷಯವಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ಕೋಮು ಸೌಹಾರ್ಧತೆ ಹಾಳಾಗಬಹುದು ಎಂಬುದನ್ನು ಮನಗಂಡು ಈ ಕುರಿತಂತೆ ಸುದೀರ್ಘವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶವನ್ನು ಹೊರಡಿಸುತ್ತಾರೆ. ಈ ಆದೇಶದ ಪ್ರಕಾರ, ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಶ್ರೀ ಗೋವಿಂದ ವಲ್ಲಭ ಪಂತ್ ಅವರು ಅಲಹಾಬಾದ್ ಪ್ರದೇಶದ ಕಮಿಷಿನರ್ ಆಗಿದ್ದ ಶ್ರೀ ಕೆ.ಕೆ.ನಾಯರ್ ಅವರಿಗೆ ಈ ಕುರಿತಂತೆ ವಿಚಾರಿಸಲು ವಿನಂತಿಸಿಕೊಳ್ಳುತ್ತಾರೆ. ಈ ಆದೇಶದಂತೆ ನಾಯರ್ ಅವರು ತಮ್ಮ ಅಧೀನದಲ್ಲಿದ್ದ ಶ್ರೀ ಗುರುದತ್ ಸಿಂಗ್ ಅವರನ್ನು ಈ ಕುರಿತಾಗಿ ತನಿಖೆ ನಡೆಸಲು ಸೂಚಿಸಿದಾಗ, ಅವರು ಆ ಸ್ಥಳಕ್ಕೆ ಹೋಗಿ ಕೂಲಂಕುಶವಾಗಿ ಪರಿಶೀಲಿಸಿ ಅಕ್ಟೋಬರ್ 10, 1949 ರಂದು, ಸಿಂಗ್ ಅವರು ನೀಡಿದ ವರದಿಯಲ್ಲಿ, ಅಯೋಧ್ಯೆಯು ಪ್ರಭು ಶ್ರೀರಾಮನ ಜನ್ಮಸ್ಥಳ ಎಂಬುದಾಗಿ ಪುರಾಣಗಳಲ್ಲಿ ಉಲ್ಲೇಖವಾದ ಪರಿಣಾಮ ಈ ಪ್ರದೇಶವನ್ನು ಹಿಂದೂಗಳು ರಾಮನ ಜನ್ಮಸ್ಥಳ ಎಂದು ಸಾವಿರಾರು ವರ್ಷಗಳಿಂದಲೂ ಪೂಜೆ ಸಲ್ಲಿಸುತ್ತಾ ಬಂದಿದ್ದಾಗ, ಧಾಳಿಕೋರ ಬಾಬರ್ ನ ಸೈನಧಿಪತಿ ಮೀರ್ ಬಾಕಿ ಆ ದೇವಾಲಯದ ಶಿಖರವನ್ನು ಕೆಡವಿ ಅದರ ಮೇಲೆ ಗುಂಬಸ್ ನಿರ್ಮಿಸಿ ಅದನು ಬಾಬರ್ ಮಸೀದಿ ಎಂದು ಮರುನಾಮಕರಣ ಮಾಡಿದ ನಂತರ ಅಲ್ಲಿ ಈ ರೀತಿಯಾಗಿ ಹಿಂದೂ ಮತ್ತು ಮುಸಲ್ಮಾನರ ನಡುವೆ ಸಮಸ್ಯೆ ಆರಂಭವಾಗಿದ್ದು, ಈ ಪ್ರದೇಶ ಮಸೀದಿಯಾಗಿರದೇ, ಅದೋಂದು ಹಿಂದೂ ದೇವಾಲಯವಾಗಿದೆ ಎಂದೇ ಬರೆಯುವುದಲ್ಲದೇ, ಬಹುಸಂಖ್ಯಾತ ಹಿಂದೂಗಳ ಶ್ರದ್ಧಾ ಕೇಂದ್ರವಾದ ಈ ಸ್ಥಳದಲ್ಲಿ ಸರ್ಕಾರದ ವತಿಯಿಂದಲೇ ಈ ಚಿಕ್ಕದಾದ ದೇವಾಲಯದ ಸ್ಥಾನದಲ್ಲಿ ಭವ್ಯವಾದ ದೇವಸ್ಥಾನವನ್ನು ನಿರ್ಮಿಸಿ ಕೊಡುವ ಮೂಲಕ ಆ ಪ್ರದೇಶಕ್ಕೆ ಮುಸಲ್ಮಾನರು ಹೋಗುವುದನ್ನು ನಿಷೇಧಿಸಬೇಕು ಎಂಬುದಾಗಿಯೂ ಆ ವರದಿಯಲ್ಲಿ ತಿಳಿಸುತ್ತಾರೆ.



ಈ ವರದಿ ಸಲ್ಲಿಕೆ ಆಗುತ್ತಿದ್ದಂತೆಯೇ, ಆ ದೇವಸ್ಥಾನದ ಸುತ್ತಮುತ್ತಲಿನ ಸುಮಾರು 500 ಮೀಟರ್ ವ್ಯಾಪ್ತಿಯೊಳಗೆ ಮುಸ್ಲಿಮರು ಹೋಗದಂತೆ ನಿಷೇದಾಜ್ಞೆಯನ್ನು ಶ್ರೀಯುತ ನಾಯರ್ ಅವರು ಹೊರಡಿಸಿದ್ದನ್ನು ತೆಗೆದುಹಾಕಲು ಇಂದಿಗೂ ಸರ್ಕಾರಕ್ಕಾಗಲೀ ಅಥವಾ ನ್ಯಾಯಾಲಯಕ್ಕಾಗಲೀ ಸಾಧ್ಯವಾಗಿಲ್ಲ ಎಂಬುದು ಗಮನಾರ್ಹವಾಗಿದೆ. ನಾಯರ್ ಅವರ ಈ ಆಜ್ಞೆ ನೆಹರು ಅವರನ್ನು ಮತ್ತಷ್ಟು ವ್ಯಗ್ರಗೊಳಿಸಿದ ಪರಿಣಾಮ, ಪರಿಸ್ಥಿತಿಯನ್ನು ತಹಬದಿಗೆ ತರುವ ಸಲುವಾಗಿ ಆಲ್ಲಿ ಕಾಣಿಸಿಕೊಂಡ ರಾಮ ಲಾಲನ ವಿಗ್ರಹವನ್ನು ಈ ಕೂಡಲೇ ತೆಗೆದು ಹಾಕುವ ಮೂಲಕ ದೇಶ ವಿದೇಶಗಳಿಂದ ತಂಡೋಪ ತಂಡವಾಗಿ ರಾಮ ಲಾಲನನ್ನು ನೋಡಲು ಬರುತ್ತಿದ್ದಂತಹ ಹಿಂದೂಗಳನ್ನು ತಡೆಯುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡುವಂತೆ ತಿಳಿಸುತ್ತಾರೆ.

ಪ್ರಧಾನಿಗಳ ಆದೇಶವನ್ನು ಯಥಾವತ್ ಪಾಲಿಸಲು ಮುಂದಾದ ಮುಖ್ಯಮಂತ್ರಿ ಗೋವಿಂದ್ ವಲ್ಲಭ ಪಂತ್ ಅದೇ ಆದೇಶವನ್ನು ಕಮಿಷಿನರ್ ಆಗಿದ್ದ ಶ್ರೀ ನಾಯರ್ ಅವರಿಗೆ ತಿಳಿಸಿದಾಗ, ಆ ಆದೇಶವನ್ನು ಜಾರಿಗೊಳಿಸಲು ಸ್ಪಷ್ಟವಾಗಿ ನಿರಾಕರಿಸಿದ್ದಲ್ಲದೇ, ರಾಮ ಲಲಾನಿಗೆ ಪ್ರತಿನಿತ್ಯವೂ ಸರ್ಕಾರೀ ವೆಚ್ಚದಲ್ಲಿಯೇ ಶಾಸ್ತ್ರೋಕ್ತವಾಗಿ ನಿತ್ಯ ಪೂಜೆ ಸಲ್ಲಿಸಬೇಕು ಮತ್ತು ಆ ಅರ್ಚಕರ ವೇತನವನ್ನು ಸರಕಾರವೇ ಭರಿಸಬೇಕೆಂಬ ಹೊಸಾ ಆದೇಶದಲ್ಲಿ ಹೊರಡಿಸುವ ಮೂಲಕ ರಾಮನಿಗೆ ನಿತ್ಯ ಪೂಜಾ ಕೈಂಕರ್ಯಗಳು ನಡೆಯುವಂತೆ ಮಾಡುತ್ತಾರೆ. ಸರ್ಕಾರದ ಆಜ್ಞೆಯನ್ನು ಪಾಲಿಸದ ನಾಯರ್ ವಿರುದ್ಧ ಕೋಪಗೊಂಡ ನೆಹರು ಅವರು ನಾಯರ್ ಅವರನ್ನು ತಕ್ಷಣವೇ ಸರ್ಕಾರೀ ಸೇವೆಯಿಂದ ವಜಾಗೊಳಿಸುತ್ತಾರೆ. ಈ ರೀತಿಯ ಆದೇಶದಿಂದ ಧೃತಿಗೆಡದ ನಾಯರ್ ಅವರು ಈ ಆದೇಶದ ವಿರುದ್ಧ ಅಲಹಾಬಾದ್ ನ್ಯಾಯಾಲಯಕ್ಕೆ ಮೊರೆ ಹೋಗಿ, ಕೇಂದ್ರ ಸರ್ಕಾರ ತಮ್ಮನ್ನು ವಜಾಗೊಳಿಸಿದ್ದ ಆದೇಶದ ವಿರುದ್ಧ ಸ್ವತಃ ವಾದ ಮಾಡಿ ಆ ಆದೇಶದ ವಿರುದ್ಧ ಜಯಗಳಿಸಿ, ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಪ್ರದೇಶದಲ್ಲಿಯೇ ಮತ್ತೆ ನೇಮಕವಾಗುವ ಮೂಲಕ, ನೆಹರೂ ಅವರಿಗೆ ಮೊತ್ತಮೊದಲ ಬಾರಿಗೆ ಮುಖ ಭಂಗವಾಗುವಂತೆ ಮಾಡಲು ಸಫಲರಾಗಿದ್ದದ್ದು ಈಗ ಇತಿಹಾಸ.


ಹಾಗಾದರೇ ಅಸಲಿಗೆ ಅಲ್ಲಿ ರಾಮಲಾಲ ಇದ್ದಕ್ಕಿದ್ದಂತಯೇ ಪ್ರತ್ಯಕ್ಷ ಆಗಿದ್ದು ಹೇಗೆ? ಎಂಬ ರಹಸ್ಯದ ಹಿಂದೆ, ಇದೇ ಕೆ.ಕೆ. ನಾಯರ್ ಅವರ ಶ್ರೀಮತಿ ಶಕುಂತಲಾ ನಾಯರ್ ಅವರ ದಿಟ್ಟತನವಿದೆ. 1949ರ ಡಿಸೆಂಬರ್ 23ರ ಹಿಂದಿನ ರಾತ್ರಿ ಆ ಗುಂಬಜ್ ಇದ್ದ ಮಸೀದಿಯ ಒಳಗೆ ತಮ್ಮ ಸಹಚರರ ಜೊತೆ ಮುದ್ದಾದ ರಾಮ ಲಾಲನ ಪ್ರತಿಷ್ಠಾಪನೆ ಮಾಡಿಸಿದ್ದು ಶ್ರೀಮತಿ ಶಕುಂತಲಾ ನಾಯರ್ ಅವರೇ ಎಂದು ಬಹಳ ದಿನಗಳ ನಂತರ ಜನರಿಗೆ ತಿಳಿದು ಬರುತ್ತದೆ. ಇಂತಹ ದಿಟ್ಟತನದ ಕಂಡಂಗಲಂ ಕರುಣಾಕರನ್ ನಾಯರ್ ಅವರು ಸೆಪ್ಟೆಂಬರ್ 7, 1907 ರಂದು ಕೇರಳದ ಆಲಪ್ಪುಳದ ಗುಟಂಕಾಡು ಎಂಬ ಸಣ್ಣ ಹಳ್ಳಿಯಲ್ಲಿ ಜನಿಸುತ್ತಾರೆ. ಬಾಲ್ಯದಿಂದಲೇ ಆಟ ಪಾಠಗಳಲ್ಲಿ ಚುರುಕಾಗಿದ್ದ ನಾಯರ್ ತಮ್ಮ ಕಾಲೇಜು ಶಿಕ್ಷಣವನ್ನು ಮುಗಿಸಿ ತಮ್ಮ 21 ನೇ ವಯಸ್ಸಿನಲ್ಲಿಯೇ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಪದವಿಯನ್ನು ಮುಗಿಸಿದ್ದಲ್ಲದ ನಂತರ ICS ಪರೀಕ್ಷೆಯನ್ನೂ ಮುಗಿಸಿ, ಕೇರಳದಲ್ಲಿ ಕೆಲಕಾಲ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ನಂತರ 1945 ರಲ್ಲಿ ಅವರು ಉತ್ತರ ಪ್ರದೇಶದ ನಾಗರಿಕ ಸೇವಕರಾಗಿ ಕೆಲಸಕ್ಕೆ ಸೇರಿ ಅಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ನಂತರ ಜೂನ್ 1, 1949 ರಂದು ಫೈಜಾಬಾದ್‌ನ ಡೆಪ್ಯುಟಿ ಕಮಿಷನರ್ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ನೇಮಕವಾಗಿದ್ದರು.


ಅಂದಿನ ಪ್ರಧಾನ ಮಂತ್ರಿಗಳ ಆದೇಶವನ್ನೂ ಧಿಕ್ಕರಿಸಿ, ಹಿಂದೂಗಳ ಶ್ರದ್ಧಾ ಕೇಂದ್ರವಾದ ಅಯೋಧ್ಯೆಯ ರಾಮ ಮಂದಿರಕ್ಕಾಗಿ ನ್ಯಾಯವನ್ನು ಒದಗಿಸಿದ ನಾಯರ್ ಅವರ ದೃಢ ಸಂಕಲ್ಪವು ಉತ್ತರ ಪ್ರದೇಶದವರ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿಕೊಟ್ಟಿದ್ದಲ್ಲದೇ, ಅಲ್ಲಿನ ಜನರು ಪ್ರೀತಿಯಿಂದ ನಾಯರ್ ಸಾಹಬ್ ಎಂದು ಕರೆಯ ತೊಡಗಿದರಲ್ಲದೇ, ಅಯೋಧ್ಯೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದರು. ಸರ್ಕಾರಿ ನೌಕರನಾಗಿರುವ ಕಾರಣ, ತಾನು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದಾಗ, ಅಯೋಧ್ಯೆಯ ನಿವಾಸಿಗಳು ನಾಯರ್ ಅವರ ಪತ್ನಿಯಾದ ಶ್ರೀಮತಿ ಶಕುಂತಲಾ ನಾಯರ್ ಅವರನ್ನು ಅಯೋಧ್ಯೆಯಿಂದ ಅಭ್ಯರ್ಥಿಯನ್ನಾಗಿಸಿದ್ದರು. ಇಡೀ ದೇಶಾದ್ಯಂತ ಕಾಂಗ್ರೆಸ್ಸಿನ ಅಭ್ಯರ್ಥಿಗಳು ಗೆದ್ದರೆ, ಅಯೋಧ್ಯೆಯಲ್ಲಿ ಮಾತ್ರ ಶ್ರೀಮತಿ ಶಕುಂತಲಾ ನಾಯರ್ ಅವರು ಸಾವಿರಾರು ಮತಗಳ ಅಂತರದಿಂದ ಕ್ರಾಂಗ್ರೇಸ್ ಅಭ್ಯರ್ಥಿಯ ವಿರುದ್ಧ ಜಯಶಾಲಿಯಾಗಿದ್ದರು. 1952 ರಲ್ಲಿ ಜನಸಂಘವನ್ನು ಸೇರಿದ ಶ್ರೀಮತಿ ಶಕುಂತಲಾ ನಾಯರ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡರು.


ನೆಹರು ಅವರನ್ನು ಎದುರು ಹಾಕಿಕೊಂಡಿದ್ದಲ್ಲದೇ, ತಮ್ಮ ಪತ್ನಿಯನ್ನು ಶಾಸಕಿಯನ್ನಾಗಿ ಮಾಡಿದ್ದನ್ನು ಸಹಿಸಿಸದ ನೆಹರು ಮತ್ತು ಸ್ಥಳೀಯ ಕಾಂಗ್ರೆಸ್ ನಾಯಕರು ಪದೇ ಪದೇ ನಾಯರ್ ಅವರ ಮೇಲೆ ದರ್ಪವನ್ನು ತೋರಿಸುತ್ತಿದ್ದರಿಂದ ಬೇಸತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕೆಲ ಕಾಲ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ ನಂತರ 1962ರ ಲೋಕಸಭಾ ಚುನಾವಣೆ ನಾಯರ್ ಮತ್ತು ಅವರ ಪತ್ನಿ ಕ್ರಮವಾಗಿ ಬಹ್ರೈಚ್ ಮತ್ತು ಕೈಸರ್‌ಗಂಜ್ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅಭೂತಪೂರ್ವವಾಗಿ ವಿಜಯಶಾಲಿಗಳಾಗುವ ಮೂಲಕ ಪತಿ ಪತ್ನಿ ಇಬ್ಬರೂ ಏಕಕಾಲಕ್ಕೇ ಸಂಸದರಾದ ಐತಿಹಾಸಿಕ ಸಾಧನೆಗೆ ಪಾತ್ರರಾದರು. ಇದಷ್ಟೇ ಅಲ್ಲದೇ, ಅವರ ಕಾರಿನ ಚಾಲಕನನ್ನೂ ಸಹಾ ಫೈಸಲಾಬಾದ್ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಜನರು ಆಯ್ಕೆ ಮಾಡುವಷ್ಟರ ಮಟ್ಟಿಗೆ ನಾಯರ್ ದಂಪತಿಗಲು ಜನಮಾನಸರಾಗಿದ್ದರು ಎನ್ನುವುದು ಗಮನಾರ್ಹವಾಗಿದೆ.


1975 ಇಂದಿರಾಗಾಂಧಿಯವರ ತುರ್ತು ಪರಿಸ್ಥಿತಿ ಕಾಲದಲ್ಲಿ ನಾಯರ್ ದಂಪತಿಯನ್ನು ಬಂಧಿಸಿ ಸೆರೆಮನೆಯಲ್ಲಿ ಕೂಡಿಟ್ಟಾಗ ಜನರು ದಂಗೆ ಎದ್ದದ್ದನ್ನು ಕಂಡು ಬೆಚ್ಚಿದ ಉತ್ತರ ಪ್ರದೇಶ ಸರ್ಕಾರ ಕೂಡಲೇ ಸೆರೆಮನೆಯಿಂದ ಬಿಡುಗಡೆ ಮಾಡಿದ್ದದ್ದು ಈಗ ಇತಿಹಾಸ. 1976ರಲ್ಲಿ, ಉತ್ತರ ಪ್ರದೇಶದಿಂದ ತಮ್ಮೂರಿಗೆ ಮರಳಲು ಮುಂದಾದಾಗ, ಅಲ್ಲಿನ ಜನರು ಭಾರೀ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ ಅವರು ಅಯೋಧ್ಯೆಯಲ್ಲಿಯೇ ಉಳಿಯಬೇಕೆಂದು ಬಯಸಿದರು. ಅದಾಗಲೇ ಆದರೆ, ಅದಾಗಲೇ ೭೦ರ ವಯಸ್ಸಿನಲ್ಲಿದ್ದ ನಾಯರು ಆವರು ತಮ್ಮ ಅಂತಿಮ ದಿನಗಳನ್ನು ಹುಟ್ಟೂರಿನಲ್ಲೇ ಕಳೆಯಬೇಕೆಂದು ಕೋರಿಕೊಂಡು ಅಯೋಧ್ಯೆಗೆ ವಿದಾಯ ಹೇಳಿ ತಮ್ಮೂರಿಗೆ ಮರಳಿದ ಕೆಲವೇ ತಿಂಗಳುಗಳಲ್ಲಿ ಸೆಪ್ಟೆಂಬರ್ 7, 1977 ರಂದು ತಮ್ಮ ಸ್ವಗ್ರಾಮದಲ್ಲಿ ನಿಧನರಾದ ವಿಷಯ ತಿಳಿದ ಅಯೋಧ್ಯೆಯ ನಿವಾಸಿಗಳು ಅಕ್ಷರಷಃ ಕಣ್ಣೀರು ಸುರಿಸಿದ್ದಲ್ಲದೇ, ಕೇರಳಕ್ಕೆ ಬಂದು ಅವರ ಚಿತಾಭಸ್ಮವನ್ನು ತೆಗೆದುಕೊಂಡು ಅಲಂಕೃತ ರಥದಲ್ಲಿ ಸಾರ್ವಜನಿಕ ಮೆರವಣಿಗೆಯನ್ನು ಮಾಡಿದ ನಂತರ ಸರಯೂ ನದಿಯಲ್ಲಿ ವಿಸರ್ಜಿಸುವಂತಹ ಹೃದಯವಿಹಂಗಮ ಸನ್ನಿವೇಶಕ್ಕೆ ಕಾರಣೀಭೂತವಾಯಿತು.


ನಾಯರ್ ಅವರಿಗೆ ಕೇರಳ ಜನ್ಮ ಭೂಮಿಯಾದರೆ ಉತ್ತರ ಪ್ರದೇಶದ ಅಯೋಧ್ಯೆಯನ್ನು ಕರ್ಮಭೂಮಿಯನ್ನಾಗಿಸಿ ಕೊಂಡು ಅಲ್ಲಿನ ಪ್ರಸಿದ್ಧ ವ್ಯಕ್ತಿಯಾಗಿ ಅಪಾರವಾದ ಜನಮನ್ನಣೆಯನ್ನುಗಳಿಸಿ ತಮ್ಮ ಉಳಿದ ಜೀವಮಾನವನ್ನು ಜೀವನವನ್ನು ಜನಸಂಘ ಮತ್ತು ರಾಮಮಂದಿರದ ಉದ್ದೇಶಕ್ಕಾಗಿ ಮುಡಿಪಾಗಿಟ್ಟದ್ದರ ನೆನಪಿನ ಕುರುಹಾಗಿ ಅವರು ಅವರ ಸ್ವಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ತು ನೀಡಿದ ಭೂಮಿಯಲ್ಲಿ ಕೆಕೆ ನಾಯರ್ ಸ್ನಾರಕವೊಂದನ್ನು ನಿರ್ಮಿಸಿದೆಯಲ್ಲದೇ ಅವರ ಹೆಸರಿನಲ್ಲಿ ದತ್ತಿಯನ್ನು ಆರಂಭಿಸಿ ಸ್ಥಳೀಯವಾಗಿ ಕಲ್ಯಾಣ ಚಟುವಟಿಕೆಗಳ ಜೊತೆಗೆ, ಟ್ರಸ್ಟ್ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ತರಬೇತಿ ಮತ್ತು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡುತ್ತಿರುವುದು ಅಬಿನಂದನಾರ್ಯವಾಗಿದೆ.


ಸ್ವಾತ್ರಂತ್ರ್ಯಾ ನಂತರ ಕೆ ಕೆ ನಾಯರ್ ದಂಪತಿಗಳ ನೇತೃತ್ವದ ಅಧಿಕೃತವಾಗಿ ಆರಂಭವಾದ ರಾಮಜನ್ಮಭೂಮಿ ಆಂದೋಲನವನ್ನು ನಂತರದ ದಿನಗಳಲ್ಲಿ ಎಲ್ ಕೆ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಅಶೋಕ್ ಕುಮಾರ್ ಸಿಂಘಾಲ್, ಪೇಜಾವರ ಶ್ರೀಗಳು, ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್ ಮತ್ತು ಉಮಾಭಾರತಿ ಮುಂತಾದ ನಾಯಕರ ನೇತೃತ್ವದಲ್ಲಿ ಕೋಟ್ಯಾಂತರ ರಾಮ ಭಕ್ತರು ಹೋರಾಟ ನಡೆಸಿ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ 2019ರ ಆದೇಶದಂತೆ ಅದೇ ಜಾಗದಲ್ಲಿ ಭವ್ಯವಾದ ರಾಮ ಮಂದಿರ ಲೋಕಾರ್ಪಣೆ ಆಗುತ್ತಿರುವ ಸಂಧರ್ಭದಲ್ಲಿ ರಾಮ ಮಂದಿರಕ್ಕಾಗಿ ಹೋರಾಡಿದ ಕೆ ಕೆ ನಾಯರ್ ಅವರಂತಹ ಲಕ್ಷಾಂತರ ಮಂದಿಯ ತ್ಯಾಗ ಮತ್ತು ಬಲಿದಾನಗಳನ್ನು ನೆನೆಯುವುದು ಪ್ರತಿಯೊಬ್ಬ ರಾಮಭಕ್ತರ ಆದ್ಯ ಕರ್ತವ್ಯವಾಗಿದೆ ಅಲ್ವೇ?


- ಶ್ರೀಕಂಠ ಬಾಲಗಂಚಿ ಬೆಂಗಳೂರು 

 9844080172


ಲೇಖಕರ ಸಂಕ್ಷಿಪ್ತ ಪರಿಚಯ:

ಶ್ರೀಕಂಠ ಬಾಳಗಂಚಿ, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಖಾಸಗೀ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ ಮತ್ತು ಅಂಕಣಕಾರ. ಇವರ ಬರಹಗಳು ನಾಡಿನ ಪ್ರಮುಖ ದಿನಪತ್ರಿಕೆಗಳು, ವಾರಪತ್ರಿಕೆಗಳು ಮತ್ತು ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ತಮ್ಮ ಏನಂತೀರೀ? ಬ್ಲಾಗ್ ಮತ್ತು ಏನಂತೀರೀ? ಯೂಟ್ಯೂಬ್ ಛಾನೆಲ್ ಮುಖಾಂತರ ಕ್ರೀಡೆ, ಸಾಮಾಜಿಕ, ಪ್ರಸ್ತುತ ವಿಷಯ,  ಸಾಂಪ್ರದಾಯಕ ಅಡುಗೆ ಹೀಗೆ ಅನೇಕ ವಿಷಯಗಳ ಬಗ್ಗೆ  ಲೇಖನ ಮತ್ತು ವೀಡೀಯೋಗಳ ಮುಖಾಂತರ  ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಿದ್ದಿ ಪಡೆದಿದ್ದಾರೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವ ಅವರು, ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಾ ತಮ್ಮ ಅಧಿಕೃತ ಸಹಿಯೂ ಸೇರಿದಂತೆ ಬಹುತೇಕ ವ್ಯವಹಾರಗಳನ್ನು ಕನ್ನಡದಲ್ಲೇ ಮಾಡುತ್ತಿರುವ ಅಪ್ಪಟ ಕನ್ನಡದ ಕಟ್ಟಾಳು ಎಂದರು ಅತಿಶಯೋಕ್ತಿಯೇನಲ್ಲ. 

ಇತ್ತೀಚೆಗೆ  ತಮ್ಮದೇ ಬರಹಗಳ ಆಯ್ದ ಲೇಖನಗಳ ಏನಂತೀರೀ? ಎಂಬ ಪುಸ್ತಕವೂ ಪ್ರಕಟಣೆಯಾಗಿ ಅಪಾರವಾದ ಮನ್ನಣೆಗಳಿಸಿದೆ.  ಇಷ್ಟೆಲ್ಲಾ ಕೆಲಸ ಕಾರ್ಯಗಳ ನಡುವೆಯೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬೆಂಗಳೂರು ಮಹಾ ನಗರದ ಕಾರ್ಯದರ್ಶಿ ಗಳಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಿಡುವಿಲ್ಲದ ಬರಹಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top