ಶ್ರೀರಾಮ ಕಥಾ ಲೇಖನ ಅಭಿಯಾನ- 36: ಪುಣ್ಯಕ್ಷೇತ್ರಗಳ ಸಂದರ್ಶನದ ಮಹತ್ವ

Upayuktha
0


-ಡಾ. ಗುರುರಾಜ ಪೋಶೆಟ್ಟಿಹಳ್ಳಿ


ಭಾರತವು ತೀರ್ಥಗಳ ನೆಲೆವೀಡು. ಇಲ್ಲಿರುವಷ್ಟು ತೀರ್ಥಗಳಾಗಲೀ, ತೀರ್ಥಗಳಿಗೆ ಈ ದೇಶದ ಸಂಸ್ಕೃತಿ ಧರ್ಮಗಳಲ್ಲಿರುವಷ್ಟು ಪ್ರಮುಖ ಸ್ಥಾನ-ಮಾನಗಳಾಗಲೀ ಬೇರಾವ ದೇಶದಲ್ಲಿಯೂ ಕಂಡುಬರುವುದಿಲ್ಲ. ತೀರ್ಥ ಶಬ್ದದ ಅರ್ಥಪುಷ್ಟಿ. ಅರ್ಥವೈಶಾಲ್ಯ ಗಳಲ್ಲೂ ಎಣೆಯಿಲ್ಲದ ಅತಿಶಯವನ್ನು ಇಲ್ಲಿ ನಾವು ಕಾಣುತ್ತೇವೆ. 


ಪವಿತ್ರವಾದ ನಮ್ಮ ಭಾರತ ಭೂಮಿಯಲ್ಲಿ ಲಕ್ಷ-ಲಕ್ಷ ಪುಣ್ಯಕ್ಷೇತ್ರಗಳಿವೆ. ಹೆಜ್ಜೆ-ಹೆಜ್ಜೆಗೂ ಪುಣ್ಯಕ್ಷೇತ್ರಗಳಿವೆ. ತೀರ್ಥಕ್ಷೇತ್ರಗಳ ಬಗೆಗೆ ಹೇಳುವುದಾದರೆ ನಮ್ಮ ದೇಶದ ಏಕತೆಗೆ ಈ ಕ್ಷೇತ್ರಗಳೇ ಮೂಲಭೂತವಾದುವು. ಭಾಷೆ, ಪ್ರಾಂತ, ಜಾತಿ-ಮುಂತಾದ ಯಾವ ಭೇದಭಾವವೂ ಇಲ್ಲದೆ ಆಸೇತು ಹಿಮಾಲಯದವರೆಗೆ ದ್ವಾರಕೆಯಿಂದ ಕಾಳೀಘಟ್ಟದವರೆಗೆ ಇರುವ ಸನಾತನಿಗಳೆಲ್ಲರೂ ಈ ದಿವ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾರೆ. ಹಿಂದೆ ತೀರ್ಥಯಾತ್ರೆಯೆಂಬುದು ಮನುಷ್ಯನ ಜೀವಮಾನದಲ್ಲಿ ಒಂದು ಮುಖ್ಯ ಕರ್ತವ್ಯವೇ ಆಗಿದ್ದಿತು. ವಿದ್ಯಾಭ್ಯಾಸವು ಮುಗಿದ ನಂತರ ಸ್ನಾತಕನು ಕಾಶೀಯಾತ್ರೆ ಮಾಡಬೇಕೆಂಬುದು ವಿವಾಹದ ಅಂಗಭೂತವಾಗಿಯೇ ಇದೆ. ಹಿಂದೆ ಯಾತ್ರೆ ಮಾಡಲು ಹೊರಟವರು ಆರು ತಿಂಗಳು ವರ್ಷಗಟ್ಟಲೆ ತೀರ್ಥಯಾತ್ರೆ ಮಾಡುತ್ತಿದ್ದರು. ಹಾಗೆ ಮಾಡಿಬಂದು ಧನ್ಯತೆಯನ್ನು ಕಾಣುತ್ತಿದ್ದರು. ಈಗ ತೀರ್ಥಯಾತ್ರೆಗಳನ್ನು ಮಾಡುವವರ ಸಂಖ್ಯೆ ಅಪಾರವಾಗಿ ಬೆಳೆದಿದೆ. 


ಆದರೆ ಯಾತ್ರೆ ಮಾಡುವುದರ ಉದ್ದೇಶ ಸಫಲವಾಗುವುದಿಲ್ಲ. ಏಕೆಂದರೆ; ಪುಣ್ಯಧಾಮಗಳಿಗೆ ಹೋಗಿ ನೋಡಬೇಕಾದ ಯಾವುದನ್ನೂ ನೋಡಲು ಸಾಧ್ಯವಾಗುವುದಿಲ್ಲ. ವೇಳಾಪಟ್ಟಿಯಂತೆ ಕಾಶಿಯಲ್ಲಿ ಅರ್ಧ ದಿವಸ, ಹರಿದ್ವಾರದಲ್ಲಿ ಒಂದು ದಿವಸ- ಹೀಗೆ ಯಾತ್ರೆಯ ಕಾರ್ಯಕ್ರಮಗಳನ್ನು ಮೊದಲೇ ಸಿದ್ಧಪಡಿಸಿರುತ್ತಾರೆ. ವಾಹನವು ಕೆಟ್ಟಿತೆಂದರೆ ಒಂದು ಕ್ಷೇತ್ರದ ಯಾತ್ರೆಯೇ ಕಳಚಿಬೀಳುತ್ತದೆ. ನಾವು ಒಂದು ಪವಿತ್ರ ಕ್ಷೇತ್ರಕ್ಕೆ ಯಾತ್ರೆ ಹೋದರೆ ಅಲ್ಲಿರುವ ಪವಿತ್ರ ಸ್ಥಳಗಳೆಲ್ಲವನ್ನೂ ಸಂದರ್ಶಿಸಬೇಕು. ಜಾಗ್ರತವಾಗಿರುವ ಸ್ಥಳಗಳಲ್ಲಿ ಧ್ಯಾನ, ಜಪಾದಿಗಳನ್ನು ಮಾಡಬೇಕು. ಅಲ್ಲಲ್ಲಿಯ ಸ್ಥಳಪುರಾಣಗಳು ಹೇಳಿರುವಂತೆ ಸೇವಾ ಕೈಂಕರ್ಯಗಳನ್ನು ಮಾಡಬೇಕು. ಹಾಗೆ ಮಾಡುವ ಯಾತ್ರೆಯ ಜೀವಮಾನ ಪೂರ್ತಿ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಇರುತ್ತದೆ. ಮೋಕ್ಷಕ್ಕೂ ಮಾರ್ಗವಾಗುತ್ತದೆ. 


ತೀರ್ಥ ಎಂದರೆ ಪವಿತ್ರವಾದ ನೀರು ಮುಂತಾದವು. ಪುಣ್ಯನದೀ-ಸರೋವರಗಳೇ ಮುಂತಾದ ಜಲಾಶಯಗಳನ್ನೂ ಮತ್ತು ಪುಣ್ಯಸ್ಥಳಗಳನ್ನೂ ತೀರ್ಥವೆಂದು ಕರೆಯುತ್ತೇವೆ. ಇವು ಪರಮಾತ್ಮನ ಮತ್ತು ಪ್ರಕೃತಿಮಾತೆಯ ವಿಶೇಷವಾದ ಅನುಗ್ರಹದಿಂದಲೂ ಮತ್ತು ಪರಮಾತ್ಮನ ಸಾಕ್ಷಾತ್ಕಾರದಿಂದ ಪರಿಪೂರಿತರಾದ ಸಾಧು-ಸಂತರ, ಮಹರ್ಷಿ-ಬ್ರಹ್ಮರ್ಷಿಗಳ ಸೇವನೆಯಿಂದಲೂ, ವಿಶಿಷ್ಟವಾದ ಪಾವಿತ್ರ್ಯವನ್ನು ಪಡೆದುಕೊಂಡಿರುವ ಪುಣ್ಯತೀರ್ಥಗಳು. ಇಂತಹ ತೀರ್ಥಗಳಿಗೆ ಒಯ್ಯುವ ಮಾರ್ಗಗಳನ್ನೂ ಮತ್ತು ಸೋಪಾನ ಪ್ರಘಟ್ಟಗಳನ್ನೂ ಕೂಡ ತೀರ್ಥಶಬ್ದದಿಂದ ವ್ಯವಹರಿಸುತ್ತೇವೆ. ಇವುಗಳಲ್ಲದೇ ಶಾಸ್ತ್ರಗಳೂ ಮತ್ತು ಶಾಸ್ತ್ರಪವರ್ತಕರಾದ ಶ್ರೀಮದಾಚಾರ್ಯರೂ ತೀರ್ಥಶಬ್ದದಿಂದ ಕರೆಯಲ್ಪಡುತ್ತಾರೆ. ರಾಜನ ಪರಿವಾರಕ್ಕೆ ಸೇರಿದ ಮಂತ್ರಿ. ಪುರೋಹಿತರೇ ಮುಂತಾದ ಹದಿನೆಂಟು ಮಂದಿ ಅಧಿಕಾರಿಗಳನ್ನೂ ಮತ್ತು ಕಾರ್ಯಸಾಧನೆಯ ಉಪಾಯ. ಯುಕ್ತಿಗಳನ್ನೂ ತೀರ್ಥಕ್ಷೇತ್ರಗಳೆನ್ನುತ್ತಾರೆ. ಇವೆಲ್ಲಕ್ಕೂ ತೀರ್ಥಶಬ್ದವು ಹೇಗೆ ವಾಚಕವಾಯಿತು? ಎಂಬ ಪ್ರಶ್ನೆಗೆ ಉತ್ತರವು ತೀರ್ಥಶಬ್ದದ ವ್ಯುತ್ಪತ್ತಿಯಲ್ಲಿಯೇ ಅಡಕವಾಗಿದೆ. ಈಜು, ತೇಲಾಡು, ದಾಟು, ದಡಮುಟ್ಟು, ಗುರಿಯನ್ನು ಮುಟ್ಟು, ಕಾರ್ಯವನ್ನು ಪೂರ್ಣಗೊಳಿಸು –ಎಂಬ ಅರ್ಥಗಳುಳ್ಳ ಧಾತುವಿನಿಂದ ಈ ಶಬ್ದವು ನಿಷ್ಪನ್ನವಾಗಿದೆ. ಕಷ್ಟ, ಕಾರ್ಪಣ್ಯಗಳನ್ನು ದಾಟಿಸುವ ಸಾಮಥ್ರ್ಯ ಇವುಗಳೆಲ್ಲಕ್ಕೂ ಇರುವುದರಿಂದ ಇವೆಲ್ಲವನ್ನೂ ತೀರ್ಥವೆಂದು ಕರೆಯುವುದು ಉಚಿತವೇ ಆಗಿದೆ. 


ಜ್ಞಾನಿಗಳು ತಮ್ಮ ದಿವ್ಯವಾದ ಸಂಕಲ್ಪ ಮತ್ತು ಸೇವನೆಗಳಿಂದ ಅನುಗ್ರಹ ಮಾಡಿರುವ ಜಲಾಶಯ ಮತ್ತು ಸ್ಥಳ ವಿಶೇಷಗಳಿಗೆ ಯಾತ್ರೆ ಮಾಡವುದನ್ನು ತೀರ್ಥಯಾತ್ರೆ ಎಂದು ಕರೆಯುವುದು ವಿಶೇಷವಾಗಿ ಬಳಕೆಯಲ್ಲಿದೆ. ಆದರೆ ಈ ಹೊರಗಿನ ತೀರ್ಥಗಳ ಮೂಲವು ನಮ್ಮ ಒಳಭೂಮಿಯಲ್ಲಿಯೇ ಇದೆ- ಎಂಬುದನ್ನು ಸನಾತನ ಆರ್ಯ ಭಾರತೀಯ ಮಹರ್ಷಿಗಳು ಸ್ಪಷ್ಟವಾಗಿ ಸಾರುತ್ತಾರೆ. ಪರಮಾತ್ಮನೇ ಸರ್ವತೀರ್ಥಗಳೂ ಆಗಿದ್ದಾನೆ ಎಂದು ಆಧ್ಯಾತ್ಮಶಾಸ್ತ್ರವು ಘೋಷಣೆ ಮಾಡುತ್ತದೆ. ಈ ಆಧಾರದ ಮೇಲೆ ತೀರ್ಥಗಳನ್ನು ಮಾನಸತೀರ್ಥ, ಜಂಗಮ ತೀರ್ಥ ಮತ್ತು ಸ್ಥಾವರತೀರ್ಥಗಳೆಂದು ಮೂರಾಗಿ ವಿಂಗಡಿಸಿದ್ದಾರೆ. ಸತ್ಯ, ಕ್ಷಮೆ, ಇಂದ್ರಿಯನಿಗ್ರಹ, ಭೂತದಯೆ, ಆರ್ಜವ, ದಾನ, ದಮ, ಸಂತೋಷ, ಬ್ರಹ್ಮಚರ್ಯ, ಪುಣ್ಯ, ಪ್ರಿಯವಚನ, ಜ್ಞಾನ, ಧೃತಿ-ಇತ್ಯಾದಿಗಳು ಮಾನಸತೀರ್ಥಗಳು, ಬ್ರಹ್ಮಜ್ಞಾನಿಗಳು ಜಂಗಮ (ಓಡಾಡುವ) ತೀರ್ಥಗಳು ಮತ್ತು ಪುಷ್ಕರ, ಗಯಾ, ಪ್ರಯಾಗ, ಅಯೋಧ್ಯೆ, ಕಾಶೀ ಮುಂತಾದವು ಸ್ಥಾವರ (ಸಂಚರಿಸದೇ ಇರುವ) ತೀರ್ಥಗಳು ಎಂದು ಈ ತೀರ್ಥವನ್ನು ಉದಾಹರಿಸುತ್ತಾರೆ. ದೇವತೀರ್ಥ ಋಷಿತೀರ್ಥ, ಪಿತೃತೀರ್ಥ, ಬ್ರಹ್ಮತೀರ್ಥಗಳು ನಮ್ಮ ದೇಹದಲ್ಲಿಯೇ ನೆಲೆಗೊಂಡಿವೆ. ಬ್ರಹ್ಮಜ್ಞಾನಿಯ ಶ್ರೀಚರಣಗಳು ಮತ್ತು ಕರ್ಣಗಳು ಪುಣ್ಯತಮವಾದ ತೀರ್ಥಗಳು ವಿಶೇಷವಾಗಿ ಭಗವಂತನ ಮತ್ತು ಭಗವಂತನ ಪ್ರತ್ಯಕ್ಷರೂಪವಾದ ಗುರುದೇವನ ಬಲಪಾದದಲ್ಲಿ ಎಲ್ಲ ತೀರ್ಥಗಳೂ ನೆಲೆಗೊಂಡಿವೆ. ಇದನ್ನು ಮನವರಿಕೆ ಮಾಡಿಕೊಡುವ ಒಂದು ಭವ್ಯವಾದ ಪ್ರಸಂಗವೂ ಶ್ರೀಕೃಷ್ಣನ ದಿವ್ಯ ಮಂಗಳ ವಿಗ್ರಹದ ಒಂದು ಮುದ್ರೆಯ ವಿವರಣೆಯಲ್ಲಿ ಕಂಡುಬರುತ್ತದೆ. ಅದು ಶ್ರೀಕೃಷ್ಣನ ತನ್ನ ಪಾದಗಳ ಕಡೆಗೆ ಕೈ ನೀಡಿ ತೋರಿಸುತ್ತಿರುವ ಮುದ್ರೆ. ಬಲರಾಮನು ತೀರ್ಥಯಾತ್ರೆಗೆ ಹೊರಡುವುದಕ್ಕಾಗಿ ತಕ್ಕ ಏರ್ಪಾಡುಗಳನ್ನು ಮಾಡಬೇಕೆಂದು ಶ್ರೀಕೃಷ್ಣನಿಗೆ ಆಣತಿಯನ್ನು ನೀಡಿದ. ಅಣ್ಣನ ಅಪ್ಪಣೆಯನ್ನು ಶಿರಸಾವಹಿಸಿ ಶ್ರೀಕೃಷ್ಣನು ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನೂ ಮಾಡಿದ. ಕಡೆಗೆ ಬಲರಾಮನು ತೀರ್ಥಯಾತ್ರೆಗೆ ಇನ್ನೇನು ಹೊರಟು ಬಿಡಬೇಕು ಎನ್ನುವಾಗ ಶ್ರೀಕೃಷ್ಣನು ತನ್ನ ಪಾದಗಳ ಕಡೆಗೆ ಕೈಗಳಿಂದ ನಿರ್ದೇಶನ ಮಾಡುವ ಭವ್ಯವಾದ ಭಂಗಿಯಲ್ಲಿ ಕುಳಿತುಕೊಳ್ಳುತ್ತಾನೆ. ತೀರ್ಥಗಳೆಲ್ಲವೂ ತನ್ನ ಪಾದಗಳಲ್ಲಿಯೇ ಅಡಗಿದೆ. ಇವುಗಳ ಸ್ಮರಣೆಯೊಡನೆ ಲೋಕಸಂಗ್ರಹಕ್ಕಾಗಿ ಬಲರಾಮನು ಹೊರಗಿನ ತೀರ್ಥಯಾತ್ರೆಗೆ ಹೋಗಿ ಬರಬಹುದು- ಎಂಬುದು ಶ್ರೀಕೃಷ್ಣ ಪರಮಾತ್ಮನ ಆಶಯ. 


ಗಂಗೆಯೇ ಮುಂತಾದ ಪುಣ್ಯತಮತೀರ್ಥಗಳಲ್ಲಿ ಮನುಷ್ಯರು ಸ್ನಾನ ದಾನಾದಿಗಳನ್ನು ಮಾಡಿ ತಮ್ಮ ಪಾಪಗಳನ್ನು ಕಳೆದುಕೊಳ್ಳುತ್ತಾರೆ. ಆದರೆ ಆ ಪುಣ್ಯ ತೀರ್ಥದೇವತೆಗಳು ತಮ್ಮಲ್ಲಿ ಆ ಪಾಪಿಜೀವಗಳು ಬಿಟ್ಟು ಹೋಗಿರುವ ಪಾತಕಗಳನ್ನು ಹೇಗೆ ಕಳೆದುಕೊಳ್ಳುತ್ತಾರೆ. ಎಂದರೆ ಬ್ರಹ್ಮಜ್ಞಾನಿಗಳ ಸೇವೆಯಿಂದ ಎಂದು ಭಕ್ತರ ಕಥೆಗಳು ಹೇಳುವುದನ್ನೂ ಇಲ್ಲಿ ನೆನೆಯಬಹುದು. 


ನಮ್ಮ ಹೃದಯ ಮಧ್ಯದಲ್ಲಿರುವ ಅನಾಹತ ಚಕ್ರವೇ ಚಿದಂಬರ ಕ್ಷೇತ್ರ. ಹುಬ್ಬುಗಳ ಮಧ್ಯದ ಸ್ಥಾನವೇ ವಾರಾಣಸೀ ತೀರ್ಥಕ್ಷೇತ್ರ, ಹೃದಯವೇ ಅಯೋಧ್ಯೆ. ಶರೀರವೇ ಕಾಶೀ ಕ್ಷೇತ್ರ, ಜ್ಞಾನವೇ ಶ್ರೀಗಂಗಾ ನದೀ, ಭಕ್ತಿ ಶ್ರದ್ಧೆಗಳೇ ಗಯಾ ಕ್ಷೇತ್ರ. ಗುರುಚರಣಧ್ಯಾನಯೋಗವೇ ಪ್ರಯಾಗತೀರ್ಥವು. ಸಹಸ್ರಾರುಪದ್ಮವೇ ಶ್ರೀರಂಗಮಂದಿರ ಸಾವಿರಕಾಲಿನ ಮಂಟಪವು. ಇವೇ ಮೊದಲಾದ ಜ್ಞಾನಿಗಳ ಉಪದೇಶಗಳೂ ತೀರ್ಥಕ್ಷೇತ್ರಗಳ ಆಧ್ಯಾತ್ಮಿಕವಾದ ಹಿನ್ನೆಲೆಯನ್ನು ಸಾರುತ್ತವೆ. ಈ ಹಿನ್ನೆಲೆಯಲ್ಲಿಂದ ಕೂಡಿ ಹೊರಗಿನ ತೀರ್ಥಗಳಲ್ಲಿ ಅವಗಾಹನೆ ಮಾಡಿದರೆ ನಿಜವಾಗಿಯೂ ನೈರ್ಮಲ್ಯವುಂಟಾಗಿ ಸದ್ಗತಿಯು ದೊರೆಯುವುದು. ಈ ಆಧ್ಯಾತ್ಮಿಕ ಭಾವನೆಯ ಜೊತೆಗೆ ತೀರ್ಥಗಳಲ್ಲಿ ಸೇರಿರುವ ಭೂಗುಣ, ಓಷಧಿಗಳ ಗುಣ, ಪ್ರಕೃತಿ ಸನ್ನಿವೇಶಗಳ ಗುಣ ಮುಂತಾದವುಗಳೂ ಸೇರಿ ತೀರ್ಥಯಾತ್ರೆಗಳು ಆಧಿ-ವ್ಯಾಧಿಗಳನ್ನು ನಿವಾರಣೆ ಮಾಡುತ್ತವೆಯೆಂಬುದರಲ್ಲಿ ಸಂಶಯವಿಲ್ಲ. ಯಾತ್ರಿಕರು ತಮ್ಮ ಹಣಕಾಸನ್ನೇ ಬಳಸಿಕೊಂಡು ತಮ್ಮ ಪ್ರಯೋಜನಕೋಸ್ಕರವೇ ತೀರ್ಥಯಾತ್ರೆ ಮಾಡುವುದು ಉತ್ತಮ. ಇಲ್ಲದೇ ಇದ್ದರೆ ಯಾತ್ರೆಯ ಫಲವು ಅದಕ್ಕೆ ಸಹಾಯ ಮಾಡಿದ ಇತರರೊಡನೆ ಹಂಚಿಕೆಯಾಗುವುದು. ಇತರರಿಗಾಗಿ ತೀರ್ಥಯಾತ್ರೆ ಮಾಡುವವನು ಯಾತ್ರೆಯ ಫಲದಲ್ಲಿ ಹದಿನಾರನೇ ಒಂದು ಭಾಗವನ್ನು ಮಾತ್ರ ಪಡೆಯುತ್ತಾನೆ. ಬೇರಾವುದೋ ಕೆಲಸಕ್ಕೆ ಹೋಗಿದ್ದು ಅ ಪ್ರಸಂಗದಲ್ಲಿ ತೀರ್ಥಕ್ಷೇತ್ರಕ್ಕೂ ಹೋಗುವವನು ಪುಣ್ಯದಲ್ಲಿ ಅರ್ಧಭಾಗಕ್ಕೆ ಪಾತ್ರನಾಗುತ್ತಾನೆ. 


ತೀರ್ಥಯಾತ್ರೆ ಹೊರಡುವುದಕ್ಕೆ ಮೊದಲು ಮತ್ತು ತೀರ್ಥಯಾತ್ರೆ ಮುಗಿಸಿಕೊಂಡು ಬಂದ ನಂತರ ಗಣೇಶನ ಪೂಜೆ, ದೇವತಾ, ಪಿತೃಪೂಜೆ ಮತ್ತು ಬ್ರಾಹ್ಮಣ ಸಂತರ್ಪಣೆ ಮಾಡಿಸಬೇಕು. ಇಡೀ ತೀರ್ಥಯಾತ್ರಾ ಕಾಲದಲ್ಲಿ ಜಿತೇಂದ್ರಿಯನಾಗಿರಬೇಕು. ಆಧ್ಯಾತ್ಮ ಚಿಂತನೆಯಲ್ಲಿರಬೇಕು. ಇಂತಹ ಸಂಯಮಿಯಾದ ಜ್ಞಾನಿಯು ಮಾತ್ರವೇ ತೀರ್ಥದ ಫಲವನ್ನು ಅನುಭವಿಸುತ್ತಾನೆ. 


ಇತರ ಜಾಗಗಳಲ್ಲಿ ಮಾಡಿದ ಪಾಪವು ತೀರ್ಥಕ್ಷೇತ್ರಗಳಿಗೆ ಹೋದಾಗ ಪರಿಹಾರಹೊಂದುತ್ತವೆ. ಆದರೆ ತೀರ್ಥಕ್ಷೇತ್ರಗಳಲ್ಲಿಯೇ ಪಾಪವನ್ನಾಚರಿಸಿದರೆ ಅದು ತೊಲಗುವುದು ಕಷ್ಟ. ಇಂತಹ ತೀರ್ಥಕ್ಷೇತ್ರಗಳ ಸಂಖ್ಯೆ ಅನಂತವಾಗಿದೆ. ಆತ್ಮಗುಣಗಳು ಮತ್ತು ಅನಂತವಾದ ಆತ್ಮವೃತ್ತಿಗಳೆಲ್ಲವೂ ತೀರ್ಥಗಳೇ ತಾನೇ! ಅದಕ್ಕೆ ತೀರ್ಥಗಳ ಸಂಖ್ಯೆ ಮೂರುವರೆಕೋಟಿ ಮತ್ತು ನೂರೆಂಟು ಎಂದು ಮೊದಲಾಗಿ ಜ್ಞಾನಿಗಳು ಹೇಳುತ್ತಾರೆ. 


ಇಂತಹ ಆಧ್ಯಾತ್ಮಕ ಸ್ಪೂರ್ತಿಯನ್ನು ನೀಡುವ ನೂರಾರು ದಿವ್ಯತೀರ್ಥಕ್ಷೇತ್ರಗಳನ್ನು ಭಾರತದೇಶದಲ್ಲಿ ಜ್ಞಾನಿಗಳು ಗುರುತಿಸಿದ್ದಾರೆ. ನಮ್ಮ ಪುರಾಣೇತಿಹಾಸಗಳಲ್ಲಿ ಅವುಗಳ ವರ್ಣನೆ ಪುಷ್ಕಳವಾಗಿದೆ. ಇತರ ದೇಶಗಳಲ್ಲಿ ಪುಣ್ಯತೀರ್ಥಗಳು ಇಲ್ಲವೆಂಬುದು ನಮ್ಮ ಅಭಿಪ್ರಾಯವಲ್ಲ. ಜ್ಞಾನಿಗಳು ನೆಲೆಸಿದ ಜಾಗಗಳೆಲ್ಲಾ ತೀರ್ಥಕ್ಷೇತ್ರಗಳೇ. ಆದರೆ ಭಾರತಭೂಮಿಯಲ್ಲಿ ಮೇಲೆ ಹೇಳಿದ ತಾತ್ತ್ವಿಕವಾದ ಹಿನ್ನೆಲೆ ಮತ್ತು ಪ್ರಕೃತಿಮಾತೆಯ ಅನುಗ್ರಹವು ತೀರ್ಥಕ್ಷೇತ್ರಗಳ ರಚನೆಗೆ ಅತ್ಯಂತ ಅನುಕೂಲವಾಗಿದೆ ಮತ್ತು ಅಂತಹ ಯಾತ್ರೆಗಳ ಸಂಪ್ರದಾಯ ಮತ್ತು ಪರಂಪರೆಗಳು ಅನುಸ್ಯೂತವಾಗಿ ಬೆಳೆದುಬಂದಿವೆಯೆಂಬುದನ್ನು ಎಲ್ಲ ವಿವೇಕಿಗಳೂ ಒಪ್ಪಲೇಬೇಕು. 


ಇದು ತೀರ್ಥಯಾತ್ರೆಯ ಆದರ್ಶ, ಆದರೆ ಪ್ರಕೃತದಲ್ಲಿ ತೀರ್ಥಕ್ಷೇತ್ರಗಳಲ್ಲಿ ನಡೆಯುತ್ತಿರುವ ಹೇಸಿಗೆ, ಅನಾಚಾರ ಅತ್ಯಾಚಾರಗಳನ್ನು ಗಮನಿಸಿದರೆ ಧಾರ್ಮಿಕರೆಲ್ಲರೂ ಮನಸ್ಸಿಗೆ ಬೇಸರವಾಗುತ್ತಿರುವುದು ಸಹಜವಾಗಿದೆ. ಆದರೆ ಈ ಕಾರಣದಿಂದ ತೀರ್ಥಕ್ಷೇತ್ರಗಳನ್ನಾಗಲೀ, ಅವುಗಳನ್ನು ಕುರಿತ ಯಾತ್ರಾಪದ್ಧತಿಯನ್ನಾಗಲೀ ನಿಂದಿಸಬಾರದು. ಅವಿವೇಕದಿಂದ ಕೆಟ್ಟುಹೋಗಿರುವ ವಿಷಯಗಳನ್ನು ಸರಿಪಡಿಸಿ ಪಾವಿತ್ರ್ಯವನ್ನು ಮತ್ತೆ ತರುವ ಮತ್ತು ವೃದ್ಧಿಪಡಿಸುವ ರಚನಾತ್ಮಕ ದೃಷ್ಟಿಯು ನಮಗೆ ಇರಬೇಕು. ಇಂತಹ ಪವಿತ್ರವಾದ ತೀರ್ಥಕ್ಷೇತ್ರಗಳು ಭಾರತದೇಶದ ಎಲ್ಲ ದಿಕ್ಕುಗಳಲ್ಲೂ ಉದ್ದ ಅಗಲಗಳಲ್ಲಿ ಬೆಳಗುತ್ತಿವೆ. ಇವುಗಳಿಗೆ ಯಾತ್ರೆ ಮಾಡುವುದರಿಂದ ಪುಣ್ಯಸಂಪಾದನೆಯ ಜೊತೆಗೆ ದೇಶಪರಿಚಯ, ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತಾಭಾವನೆಗಳೂ ನಮ್ಮಲ್ಲಿ ಮೂಡುವುದರಲ್ಲಿ ಸಂಶಯವಿಲ್ಲ. ಭಾರತಭೂಮಿಯಲ್ಲಿ ನಾನಾಭಾಷಾರೀತಿ ನೀತಿ ಸಂಪ್ರದಾಯಗಳಿದ್ದರೂ ಈ ತೀರ್ಥಯಾತ್ರೆಯ ಭಾಷೆ ಆಸೇತುಹಿಮಾಚಲ ಒಂದೇ ಆಗಿರುವುದನ್ನು ಗಮನಿಸಿ ನಮ್ಮ ಐಕ್ಯವನ್ನು ಕಾಪಾಡಿಕೊಂಡು ಉಳಿಸಿಕೊಳ್ಳಬೇಕು. ಭಾರತೀಯರೆಲ್ಲರ ಮೇಲೂ ಇದರ ಹೊಣೆಗಾರಿಕೆಯಿದೆ. ಭಗವತ್ ಪ್ರಾಪ್ತಿಗಾಗಿ ತೀರ್ಥಯಾತ್ರೆ ಮಾಡಬೇಕು. ಕಾಮ-ಕ್ರೋಧಾದಿಗಳನ್ನು ತ್ಯಜಿಸಿ ಸಾಧು-ಸಂತರ ಸಂಗಮದಿಂದ ಭಗವಂತನ ಪ್ರಾಪ್ತಿ ಸಾಧ್ಯ. ತೀರ್ಥಗಳ ದರ್ಶನ ಈ ಕೆಲಸವನ್ನು ಸುಗಮಗೊಳಿಸುತ್ತದೆ. 


ಪದ್ಮಪುರಾಣ ಪಾತಾಲಖಂಡ ತಿಳಿಸುವಂತೆ  ಮಾನವನ ಏಕಮಾತ್ರ ಉದ್ದೇಶ ಹಾಗೂ ಅಂತಿಮ ಧ್ಯೇಯ ಭಗವತ್ಪ್ರಾಪ್ತಿಯೇ ಆಗಿರುತ್ತದೆ. ಮಾನವನ ಶರೀರ ಶಿಥಿಲವಾಗಿರಲಿ, ತಲೆಯ ಕೂದಲು ಪಕ್ವವಾಗಿರಲಿ ಅಥವಾ ಅವನು ನವಯುವಕನಾಗಿರಲಿ-ಬಂದೊದಗುವ ಮೃತ್ಯುವಿನಿಂದ ಪಾರಾಗಲು ಸಾಧ್ಯವೇ ಇಲ್ಲ. ಈ ತತ್ವವನ್ನು ಅರಿತು ಭಗವಂತನ ಸಾಕ್ಷಾತ್ಕಾರಕ್ಕಾಗಿ ಆತನಲ್ಲಿ ಶರಣುಹೋಗಬೇಕು. ಆತನ ಕೀರ್ತನೆ, ಶ್ರವಣ, ವಂದನೆ ಹಾಗೂ ಪೂಜಾದಿಗಳನ್ನು ಮನಸ್ಸಿಟ್ಟು ಮಾಡುತ್ತಿರಬೇಕು. ಹೆಂಡತಿ, ಮಕ್ಕಳು ಹಾಗೂ ಇತರೇ ಪ್ರಾಪಂಚಿಕ ವ್ಯವಹಾರಗಳಿಂದ ಆದಷ್ಟು ದೂರ ಸರಿಯುತ್ತಿರಬೇಕು. ಈ ಪ್ರಪಂಚವೆಲ್ಲಾ ನಶ್ವರವೆಂದೂ ಅತ್ಯಂತ ದುಃಖದಾಯಕವೆಂದು ತಿಳಿಯಬೇಕು. ಆ ಪರಮಾತ್ಮನು ಜನ್ಮ ಮೃತ್ಯುರಹಿತನೆಂಬುದನ್ನು ಅರಿಯಬೇಕು. ಆತನು ನಿತ್ಯಸತ್ಯನೆಂದೂ -ಭಕ್ತಿದೇವಿಯ ಪ್ರಾಣವಲ್ಲಭ ಹಾಗೂ ಸಚ್ಚಿದಾನಂದ ಸ್ವರೂಪನೆಂದೂ ತಿಳಿಯಬೇಕು. ಹೀಗೆಂದು ತಿಳಿದು ಭಗವಂತನನ್ನು ಸ್ಮರಿಸುವುದು ನಿಜಕ್ಕೂ ಶ್ರೇಯಸ್ಕರ. 


ಪಾಪರಹಿತ ಸಾಧು ಸಂಗತಿಯಿಂದ ಆ ಭಗವಂತನ ಸ್ವರೂಪ, ತತ್ತ್ವ, ಗುಣ, ಲೀಲೆ-ಇತ್ಯಾದಿಗಳ ಅರಿವುಂಟಾಗುತ್ತದೆ. ಇದರಿಂದ ಮಾನವ ದುಃಖಗಳಿಂದ ಪಾರಾಗಬಲ್ಲ. ಯಾರು ಇಹಲೋಕ ಪರಲೋಕಗಳಲ್ಲಿ ನಿರಾಸಕ್ತರಾಗಿರುತ್ತಾರೋ, ಕಾಮಾದಿ ದುರ್ಗಣಗಳಿಂದ ದೂರವಿರುತ್ತಾರೋ, ಲೋಭರಹಿತರೋ, ಸ್ತ್ರೀಧನಾದಿಗಳ ಸಂಪರ್ಕವನ್ನು ತ್ಯಜಿಸಿರುತ್ತಾರೋ, ಮುಕ್ತಿದಾಯಕಗಳಾದ ಉಪದೇಶಗಳನ್ನು ನೀಡಬಲ್ಲರೋ-ಅಂತಹವರೇ ನಿಜವಾದ ಸಾಧುಗಳು. ತೀರ್ಥಕ್ಷೇತ್ರಗಳಲ್ಲಿ ಶ್ರೀರಾಮಚಂದ್ರನ ಭಜನೆಯಲ್ಲೇ ಮಗ್ನರಾಗಿರುವ ಸಾಧುಗಳನ್ನು ಸಂದರ್ಶಿಸಬಹುದು. ಇಂತಹ ಸಾಧು ಸಂತರ ಸಂದರ್ಶನ ಮಾತ್ರದಿಂದಲೇ ಮಾನವರ ಪಾಪರಾಶಿಗಳು ಭಸ್ಮೀಭೂತವಾಗುತ್ತವೆ. ಆದುದರಿಂದ ಯಾರು ಭವಸಾಗರವನ್ನು ದಾಟಬಯಸುತ್ತಾರೋ ಅವರು ತೀರ್ಥಕ್ಷೇತ್ರಗಳನ್ನು ಅವಶ್ಯವಾಗಿ ಸಂದರ್ಶಿಸಬೇಕು. ಈ ರೀತಿ ತೀರ್ಥಕ್ಷೇತ್ರಗಳು ನಿಜಕ್ಕೂ ಸುಖ-ಶಾಂತಿದಾಯಕಗಳೇ ಹೌದು.


ರಾಮ ರಾಮ ರಾಮ ಎನ್ನಿರೊ| ಇಂಥ ಸ್ವಾಮಿಯ ನಾಮವ ಮರೆಯದಿರೊ


ಶ್ರೀರಾಮಜನ್ಮಭೂಮಿ ಅಯೋಧ್ಯೆಯ ಐತಿಹ್ಯ


ಶ್ರೀರಾಮಜನ್ಮಭೂಮಿ ಎಂದರೆ ಶ್ರೀರಾಮನು ಹುಟ್ಟಿದ ನೆಲ. ಭೂಮಿಯ ಯಾವ ನಿರ್ದಿಷ್ಟವಾದ ಪ್ರದೇಶದಲ್ಲಿ ಆತನ ಜನನವಾಯಿತೋ ಆ ಜಾಗ. ಅದು ಯಾವುದು? ಅದರ ಪ್ರಾಮುಖ್ಯವೇನು?  


ಶ್ರೀರಾಮನು ನಮ್ಮ ಇತಿಹಾಸದ ಮಹಾಪುರುಷ. ಮಹಾಪುರುಷನೆಂದರೆ ಪರಮಪುರುಷ. `ಪುರುಷ` ಎಂದರೆ ಆತ, ``ಕ್ಷೇತ್ರಜ್ಞ ಆತ್ಮಾ ಪೂರುಷಃ`` ಆದ್ದರಿಂದ ಪರಮಪುರುಷ ಎಂದರೆ ಪರಮಾತ್ಮ, ಆತನ ಅವತಾರಭೂಮಿಯ ವಿಷಯ ಪುರುಷೋತ್ತಮನಲ್ಲಿ ಆಸಕ್ತಿಯುಳ್ಳ ಪುರುಷನಿಗೆ ಅತಿಮುಖ್ಯವಾದ ವಿಷಯವೇ ಆಗುತ್ತದೆ. 


ಭಾರತ ದೇಶದ ಒಂದು ಸಣ್ಣ ಭಾಗವಾದ ಅಯೋಧ್ಯೆಯಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಇಡೀ ಭಾರತದೇಶದ ಮತ್ತು ದೇಶ-ದೇಶಾಂತರಗಳ ಜನರ ಹೃದಯವನ್ನು ಸೂರೆಗೊಂಡಿರಬೇಕಾದರೆ ಅವನು ಎಂತಹ ಮಹಾತ್ಮನಾಗಿರಬೇಕು? ಮನುಷ್ಯನಾಗಿ ಹುಟ್ಟಿದರೂ ತನ್ನ ಮಹಾಮಹಿಮೆ ಮತ್ತು ಕಲ್ಯಾಣ ಗುಣಗಳಿಂದ ದೇವತ್ವವನ್ನು ಸಾಧಿಸಿದವನಾಗಿ ಸಾವಿರಾರು ವರ್ಷಗಳಿಂದ ಕೋಟ್ಯಂತರ ಜನರ ಮನಸ್ಸಿನಲ್ಲಿ ತುಂಬಿಕೊಂಡಿರುವ ಆತನ ಅಗ್ಗಳಿಕೆ ಎನಿರಬೇಕು? ಇಂತಹ ಮಹಾತ್ಮನ ಜೀವನಚರಿತ್ರೆ ಮಾತ್ರವಲ್ಲದೇ ಅವನ ಹುಟ್ಟಿದ ಜಾಗ, ಮೆಟ್ಟದ ನೆಲ-ಇವುಗಳೂ ಕೂಡ ನಮಗೆ ಪವಿತ್ರಸ್ಮಾರಕಗಳಾಗಿರಬೇಕು. 


ಮಹಾತ್ಮರು ಹುಟ್ಟಿದ ನೆಲ ಯಾವುದು ಎಂಬುದೂ ಅವರ ಜೀವನ-ಜೀವನಚರಿತ್ರೆಯ ಒಂದು ಅವಿಭಾಜ್ಯವಾದ ಅಂಗವೇ ಆಗಿದೆ. ಅವರು ಜನಿಸಿದ ಜಾಗ, ಅವರ ವಾಸದ ಮನೆ-ಬಿಡಾರಗಳು, ಅವರ ಕಾರ್ಯಕ್ಷೇತ್ರದ ಜಾಗ, ಅವರು ಪರಂಧಾಮ ಹೊಂದಿದ ಪ್ರದೇಶ, ಅವರು ಬಳಸುತ್ತಿದ್ದ ಪದಾರ್ಥಗಳು-ಇತ್ಯಾದಿಗಳೆಲ್ಲವೂ ಕೂಡ ನಮಗೆ ಅವರ ಪವಿತ್ರವಾದ ನೆನಪನ್ನು ತರುತ್ತವೆ; ನಮಗೆ ಸ್ಫೂರ್ತಿ ನೀಡುತ್ತವೆ. ಅದಕ್ಕೋಸ್ಕರವೇ ಲಂಡನ್ ನಗರದಲ್ಲಿ ಷೇಕ್‍ಸ್ಪೀಯರ್ ಮಹಾಕವಿಯ ಮನೆ, ನಾಟಕರಂಗ-ಇತ್ಯಾದಿಗಳನ್ನು ದೇಶಭಕ್ತರಾದ ಇಂಗ್ಲೀಷ್ ಜನರು ಕಾಪಾಡಿ ಗೌರವಿಸುತ್ತಿದ್ದಾರೆ. ಮಹಾತ್ಮಗಾಂಧಿಯವರು ಉಪಯೋಗಿಸುತ್ತಿದ್ದ ಕನ್ನಡಕ, ದೊಣ್ಣೆ-ಮುಂತಾದವುಗಳನ್ನು ಪವಿತ್ರಸ್ಮಾರಕಗಳೆಂದು ಭಾರತದೇಶದಲ್ಲಿ ಸಂರಕ್ಷಿಸುತ್ತಿದ್ದೇವೆ. ಹೀಗಿರುವಾಗ ಆ ಗಾಂಧೀಜೀ ಅವರಿಗೂ ಸ್ಫೂರ್ತಿಯ ಚಿಲುಮೆಯಾಗಿದ್ದ ಶ್ರೀರಾಮನ ಸ್ಮಾರಕವಾದ ಅವನ ಜನ್ಮಭೂಮಿಯನ್ನು ಕುರಿತು ಸುಸಂಸ್ಕøತ ಜನರು, ಭಾವುಕರು ಭಕ್ತರು, ಜ್ಞಾನಿಗಳು, ಎಲ್ಲರೂ ಚಿಂತನೆ ಮಾಡುವುದು ಅತ್ಯಂತ ಸಹಜವಾಗಿದೆ. 



ಶ್ರೀರಾಮನು ಸನಾತನ ಭಾರತದ ಶ್ರೇಷ್ಠತಮನಾದ ಒಬ್ಬ ಮನುಷ್ಯ. ಜ್ಞಾನಿಗಳ ಮತ್ತು ಭಕ್ತರ ದೃಷ್ಟಿಯಿಂದ ಶ್ರೀರಾಮನು ಆದರ್ಶಮಾನವನಷ್ಟೇ ಅಲ್ಲದೇ ಸಾಕ್ಷಾತ್ ಭಗವಂತನ ಅವತಾರವೇ ಆಗಿದ್ದಾನೆ. ದೇವರ ಅವತಾರಗಳು ಅವುಗಳ ಮೂಲರೂಪದಷ್ಟೇ ಪವಿತ್ರವಾಗಿವೆ. ಅವತಾರಪುರುಷರ ಜನ್ಮಸ್ಥಾನ, ಅವತಾರದ ಉಪಸಂಹಾರಸ್ಥಾನ, ಧ್ಯಾನಸ್ಥಾನ, ಅನುಗ್ರಹದೀಕ್ಷಾ ಸ್ಥಾನ- ಇವುಗಳೆಲ್ಲಾ ಶ್ರೀಕ್ಷೇತ್ರ ಎನಿಸುತ್ತವೆ. ಅವರು ಸ್ನಾನಮಾಡಿದ ಜಲಾಶಯಗಳೆಲ್ಲಾ ತೀರ್ಥ ಎನಿಸುತ್ತವೆ. ಅವುಗಳೆಲ್ಲವೂ ಅದ್ಭುತವಾದ ಆಧ್ಯಾತ್ಮಿಕ ತರಂಗಗಳಿಂದ ತುಂಬಿರುತ್ತವೆ. ಆ ತೀರ್ಥಕ್ಷೇತ್ರಗಳನ್ನು ಸೇವಿಸುವವರು ಅವುಗಳಿಂದ ಪ್ರಭಾವಿತರಾಗುತ್ತಾರೆ. ಅವುಗಳ ದರ್ಶನ ಮಾಡಿದರೆ ಮತ್ತು ಅವುಗಳಲ್ಲಿ ಸ್ನಾನ, ದಾನ, ಜಪ, ತಪಸ್ಸು, ಧ್ಯಾನ- ಇತ್ಯಾದಿಗಳನ್ನು ಮಾಡಿದರೆ ಶೀರ್ಘತಮ ಕಾಲದಲ್ಲಿ ಸಿದ್ಧಿಯುಂಟಾಗುತ್ತದೆ- ಎಂಬುದು ಶಾಸ್ತ್ರಗಳ ಉಪದೇಶ ಮತ್ತು ಸಾಧಕರ ಅನುಭವಗಳಿಂದ ಸಿದ್ಧವಾದ ವಿಷಯವಾಗಿದೆ. ಆದುದರಿಂದ ಶ್ರೀರಾಮನ ಜನ್ಮ ಭೂಮಿಯನ್ನು ಗುರುತಿಸಿ ಗೌರವಿಸುವುದು ಭಾರತದ ಎಲ್ಲ ರಾಷ್ಟ್ರಭಕ್ತರ ಮತ್ತು ಆಧ್ಯಾತ್ಮಸಾಧಕರ ಕರ್ತವ್ಯವೇ ಆಗಿದೆ. 



ಅಯೋಧ್ಯಾ ನಗರಿಯ ಎಲ್ಲ ಪ್ರದೇಶಗಳೂ ಪುಣ್ಯಕರ, ಸರಯೂ ತೀರ್ಥವೂ ಅತ್ಯಂತ ಪವಿತ್ರ ಎಂಬುದರಲ್ಲಿ ಸಂಶಯವಿಲ್ಲ. ``ಈ ಜನ್ಮಸ್ಥಾನವು ಮೋಕ್ಷವೇ ಮುಂತಾದ ಎಲ್ಲ ಪುರುಷಾರ್ಥಗಳನ್ನೂ ಅನುಗ್ರಹಿಸುವುದು. ಇದರ ದರ್ಶನಮಾತ್ರದಿಂದಲೇ ದಾನ, ತಪಸ್ಸು, ತೀರ್ಥಯಾತ್ರೆ, ಯಜ್ಞ-ಇವುಗಳನ್ನು ಆಚರಿಸದಿದ್ದರೂ ಮುಕ್ತಿ ದೊರೆಯುತ್ತದೆ. ಮತ್ತೆ ಗರ್ಭವಾಸದ ಅನಿಷ್ಟ ಇರುವುದಿಲ್ಲ. ರಾಮನವಮಿಯ ದಿನ ಅಲ್ಲಿ ವ್ರತವನ್ನು ಆಚರಿಸುವವನು ಸ್ನಾನ-ದಾನಗಳ ಪ್ರಭಾವದಿಂದ ಜನ್ಮಬಂಧನವನ್ನು ಕಳೆದುಕೊಳ್ಳುತ್ತಾನೆ. ಪ್ರತಿದಿನವೂ ಸಾವಿರಾರು ಕಪಿಲೆ ಗೋವುಗಳನ್ನು ದಾನಮಾಡುವುದರಿಂದ ಯಾವ ಫಲವು ದೊರಕುತ್ತದೆಯೋ ಅದೇ ಫಲವು ರಾಮಜನ್ಮ ಭೂಮಿಯ ದರ್ಶನ ಮಾತ್ರದಿಂದಲೇ ಲಭಿಸುತ್ತದೆ. ಆಶ್ರಮದಲ್ಲಿ ವಾಸಮಾಡುವ ತಪಸ್ವಿ ಜನರಿಗೆ, ಜೀವನ ಪೂರ್ತಿ ಅಗ್ನಿಹೋತ್ರವನ್ನು ಆಚರಿಸುವವರಿಗೆ ಮತ್ತು ಸಾವಿರಾರು ರಾಜಸೂಯಯಜ್ಞಗಳನ್ನು ಮಾಡುವವರಿಗೆ ಸಿಕ್ಕುವ ಮಹತ್ಫಲವು ರಾಮಜನ್ಮಭೂಮಿಯ ದರ್ಶನಮಾತ್ರದಿಂದಲೇ ದೊರೆಯುತ್ತದೆ. ತಾಯಿ, ತಂದೆಗಳಲ್ಲೂ, ಗುರುಜನರಲ್ಲೂ ಸದಾ ಭಕ್ತಿಯನ್ನು ಹೊಂದಿರುವ ಮತ್ತು ಧ್ಯಾನಸಮಾಧಿಯಲ್ಲಿರುವ ಮಹಾತ್ಮರನ್ನು ದರ್ಶನಮಾಡುವುದರಿಂದ ಯಾವ ಫಲವು ದೊರೆಯುತ್ತದೆಯೋ ಆ ಫಲವು ಶ್ರೀರಾಮ ಜನ್ಮಭೂಮಿಯ ದರ್ಶನದಿಂದಲೇ ದೊರೆಯುತ್ತದೆ`` - ಎಂದು ಪುರಾಣಗಳು ಹೇಳುತ್ತವೆ. 



ಪ್ರತಿಯೊಂದು ಶ್ರೀಕ್ಷೇತ್ರದ ವಿಷಯದಲ್ಲೂ ಪುರಾಣಗಳೂ ಹೊಗಳಿಕೆಯ ಮಾತುಗಳನ್ನು ಹೇಳುತ್ತವೆ. ಅವುಗಳಲ್ಲಿ ಅಯೋಧ್ಯೆಯು: 

``ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಹ್ಯವನ್ತಿಕಾ |

ಪುರೀ ದ್ವಾರಾವತೀ ಚೈವ ಸಪ್ತೈತಾ ಮೋಕ್ಷದಾಃ ಸ್ಮೃತಾಃ ||``

ಎಂಬಂತೆ ಮೋಕ್ಷಪ್ರದವೆಂದು ಪರಿಗಣಿತವಾದ ಶ್ರೀಕ್ಷೇತ್ರಗಳಲ್ಲಿ ಅಗ್ಗಳಿಕೆಯ ಸ್ಥಾನವನ್ನು ಪಡೆದಿರುವುದರಿಂದ ಪುರಾಣಗಳಲ್ಲಿ ಅದರ ಕೊಂಡಾಟ ಸಹಜವಾಗಿದ್ದರೂ ಅಂಥಾ ಅಯೋಧ್ಯೆಯಲ್ಲಿಯೂ ಶ್ರೀರಾಮಜನ್ಮ ಭೂಮಿಗೆ ಅಗ್ರಸ್ಥಾನವನ್ನು ಪುಣ್ಯಗ್ರಂಥಗಳು ಹೇಳುವುದನ್ನು ನಾವು ಗಮನಿಸಬೇಕು. 


ಶ್ರೀರಾಮನು ಲಂಕೆಯನ್ನು ಜಯಿಸಿದ ನಂತರ ಅಯೋಧ್ಯೆಗೆ ಹಿಂದಿರುಗುವ ಪ್ರಸ್ತಾಪ ಮಾಡಿದಾಗ ಲಂಕಾನಗರಿಯ ಸೌಂದರ್ಯ-ಸಮೃದ್ಧಿ-ಸೌಭಾಗ್ಯಗಳಿಗೆ ಸೂರೆಹೋದ ಲಕ್ಷ್ಮಣನು ``ನೀನು ಲಂಕಾನಗರಿಯನ್ನೇ ರಾಜಧಾನಿಯನ್ನಾಗಿ ಮಾಡಿಕೊಂಡು ಇಲ್ಲಿಂದಲೇ ಭೂಮಿಯನ್ನು ಆಳುತ್ತಿರು, ಭರತನು ಅಯೋಧ್ಯೆಯಲ್ಲಿ ಸುಖವಾಗಿ ಆಳುತ್ತಿರಲಿ`` ಎಂದು ಸಲಹೆ ಮಾಡಿದನಂತೆ. ಅದಕ್ಕೆ ಶ್ರೀರಾಮಚಂದ್ರನು "ಲಕ್ಷ್ಮಣ! ಹೊನ್ನಿನ ನಗರಿಯಾದ ಈ ಲಂಕೆಯೂ ನನಗೆ ಅಷ್ಟಾಗಿ ರುಚಿಸುತ್ತಿಲ್ಲ. ಏಕೆಂದರೆ: ತಾಯಿ ಮತ್ತು ತಾಯಿನೆಲ ಇವು ಸ್ವರ್ಗಕ್ಕಿಂತಲೂ ಶ್ರೇಷ್ಠ.`` 


``ಅಪಿ ಸ್ವರ್ಣಮಯೀ ಲಂಕಾನ ಮೇಲೆ ಲಕ್ಷ್ಮಣ ರೋಚತೇ | 

ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ ||`` 


ಎಂದು ಜನ್ಮಭೂಮಿಯ ಸ್ಮರಣೆಯಿಂದ ರೋಮಾಂಚಿತನಾಗಿ ಉತ್ತರಕೊಟ್ಟನಂತೆ. ಹೀಗೆ ವೈಕುಂಠನಾಥನೇ ಜನ್ಮಭೂಮಿಯ ವಿಶಿಷ್ಟತೆಯನ್ನು ಕೊಂಡಾಡಿರುವಾಗ ಅದರ ಮಹಿಮೆ ಸರ್ವಾತಿಶಯವೆಂಬುದಕ್ಕೆ ಬೇರೆ ಏನು ಪ್ರಮಾಣಬೇಕು? ಎಂದು ಭಗವದ್‍ಭಕ್ತರು ಕೇಳುತ್ತಾರೆ. ತನ್ನ ಈ ಅವತಾರ ಭೂಮಿಯು ತನಗೆ ವೈಕುಂಠಕ್ಕಿಂತಲೂ ಹೆಚ್ಚು ಪ್ರಿಯವಾದುದೆಂದು ಶ್ರೀಭಗವಂತನು ಹೇಳಿದುದಾಗಿ ಸಂತ ತುಲಸೀದಾಸರ ಮಾನಸ ರಾಮಾಯಣವು ಸಾರುತ್ತದೆ.


ಅಯೋಧ್ಯೆಯಲ್ಲಿ ರಾಮಜನ್ಮಸ್ಥಾನಲ್ಲದೇ ಇನ್ನೂ ಅನೇಕ ಪವಿತ್ರಸ್ಥಾನಗಳಿವೆ, ಗೋಪ್ರತಾರಘಟ್ಟ, ಸ್ವರ್ಗದ್ವಾರ, ಸಹಸ್ರಧಾರ-ಮುಂತಾದವು ಉದಾಹರಣೆಗಳು. ಆದರೆ ರಾಮಜನ್ಮಸ್ಥಾನಕ್ಕೆ ಇವೆಲ್ಲಕ್ಕಿಂತಲೂ ಮಿಗಿಲಾದ ಪ್ರಾಶಸ್ತ್ಯವನ್ನು ಪುರಾಣಗಳು ಹೇಳುತ್ತವೆ. ಅದು ದರ್ಶನಮಾತ್ರದಿಂದಲೂ ಪವಿತ್ರತಮವಾದುದು. ``ಜನ್ಮಭೂಮೇಃ ಪ್ರದರ್ಶನಾತ್``. 


ಭಾರತದೇಶದ ಮಹಾಪುರುಷಪುಂಗವನೂ, ರಾಷ್ಟ್ರನಾಯಕನೂ, ಸಾರ್ವಭೌಮನೂ ಆಗಿದ್ದು ಭಕ್ತರ ಆರಾಧ್ಯ ದೇವತೆಯಾಗಿ ಸತ್ಪುರುಷರೆಲ್ಲರೂ ಪ್ರಿಯತಮನಾಗಿರುವ ಶ್ರೀರಾಮಚಂದ್ರಪ್ರಭುವಿಗೇ ಪ್ರಿಯತಮವೆಂದು ಆತನಿಂದಲೇ ಘೋಷಿಸಲ್ಪಟ್ಟ ಈ ಜನ್ಮಸ್ಥಾನದ ಗೌರವದ ರಕ್ಷಣೆ ನಮ್ಮೆಲ್ಲರ ಪವಿತ್ರ ಕರ್ತವ್ಯವೆಂಬುದನ್ನು ಸತ್ಪುರುಷರಿಗೆ ಒತ್ತಿ ಹೇಳಬೇಕಾಗಿಲ್ಲ. 


``ಶ್ರೀರಾಮನು ಐತಿಹಾಸಿಕ ವ್ಯಕ್ತಿಯೇ ಅಲ್ಲ. ಅವನು ಕಲ್ಪನೆಯ ಕುಸುಮ, ಅವನನ್ನು ಕುರಿತ ಕಥೆ, ತೀರ್ಥಕ್ಷೇತ್ರಗಳು ಎಲ್ಲವೂ ಅಂತೆಯೇ ಕಲ್ಪನೆಗಳು`` ಎಂದು ಕೆಲವರು ವಾದಿಸುತ್ತಾರೆ. ಇಂತಹವರು ಶ್ರೀರಾಮನು ಪವಿತ್ರವಾದ ಅಯೋಧ್ಯಾನಗಿರಯ ಮೇರೆ, ವಿಸ್ತಾರ, ರಚನೆ ಇತ್ಯಾದಿಗಳ ವರ್ಣನೆಯನ್ನು ಅಲ್ಲಿ ನೋಡುತ್ತೇವೆ. ಅಲ್ಲಿಯ ಕಾರ್ಯಕ್ಷೇತ್ರಗಳ ವರ್ಣನೆಯೂ ಕಂಡು ಬರುತ್ತದೆ. 


ಅಯೋಧ್ಯಾನಗರಿಯಲ್ಲಿ ಶ್ರೀರಾಮನು ತನ್ನ ಜನ್ಮವನ್ನು ಪ್ರಕಟಿಸಿದ ಸ್ಥಾನ ಯಾವುದು? ಎಂಬುದನ್ನು ಅಲ್ಲಿ ನಿರ್ದೇಶನ ಮಾಡಿಲ್ಲವಲ್ಲ?`` ಎಂದರೇ: ಅದನ್ನು ಪುರಾಣಗಳು ಸ್ಪಷ್ಟವಾಗಿ ನಿರ್ದೇಶನ ಮಾಡುತ್ತವೆ. ಮತ್ತು ವಾಲ್ಮೀಕಿ ರಾಮಾಯಣದ ಉಕ್ತಿಗೆ ಆ ನಿರ್ದೇಶನವು ವಿರೋಧವಾಗಿಲ್ಲ. ಆದುದರಿಂದ ``ಅನುಕ್ತ ಮನ್ಯಶೋಗ್ರಾಹ್ಯಂ`` ಎಂಬ ನ್ಯಾಯದಂತೆ ಒಂದು ಕಡೆ ಹೇಳದೇ ಇರುವ ವಿಷಯವನ್ನು ಪ್ರಾಮಾಣಿಕವಾದ ಮತ್ತೊಂದು ಕಡೆಯಿಂದ ಸಂಗ್ರಹಿಸಿಕೊಳ್ಳಬೇಕು. ಇಂಥದೇ ಶ್ರೀರಾಮನು ಅವತರಿಸಿದ ಸ್ಥಾನ, ಅದರ ಮೇರೆಗಳು ಇವು ಎಂಬುದನ್ನು ಸ್ಕಾಂದಪುರಾಣವು ಖಚಿತಪಡಿಸುತ್ತದೆ. 


"ವಿಘ್ನೇಶ್ವರಕ್ಕೆ ಪೂರ್ವಭಾಗದಲ್ಲಿ ವಸಿಷ್ಠ ಸ್ಥಾನಕ್ಕೆ ಉತ್ತರದಲ್ಲಿ ಮತ್ತು ಲೋಮಶಸ್ಥಾನದಿಂದ ಪಶ್ಚಿಮಕ್ಕೆ ಶ್ರೀರಾಮ ಜನ್ಮಸ್ಥಾನವು ಕಂಡುಬರುತ್ತದೆ`` ಎಂದು ಪುರಾಣವು ಹೇಳುತ್ತದೆ. 


ಮೇಲ್ಕಂಡ ಮೇರೆ ಮತ್ತು ಎಲ್ಲೆ ಕಟ್ಟುಗಳ ಸ್ಥಾನಗಳು ಈಗಲೂ ಪ್ರಸಿದ್ಧವಾಗಿವೆ ಮತ್ತು ಅವುಗಳಿಂದ ನಿರ್ದಿಷ್ಟವಾದ ರಾಮಜನ್ಮಭೂಮಿಯೂ ಚಿರಕಾಲದಿಂದಲೂ ಪ್ರಸಿದ್ಧವಾಗಿದೆ. ಈ ಶಾಸ್ತ್ರಪ್ರಯಾಣವನ್ನು ಸಂಪ್ರದಾಯಪರಂಪರೆಯೂ ಸಾವಿರಾರು ವರ್ಷಗಳಿಂದಲೂ ಮಾನ್ಯಮಾಡಿ ನಿರ್ದಿಷ್ಟವಾದ ಸ್ಥಾನವನ್ನೇ ರಾಮಜನ್ಮಭೂಮಿಯೆಂದು ಗುರುತಿಸಿ ಗೌರವಿಸುತ್ತಾ ಬಂದಿದೆ. ಹೀಗಿರುವಾಗ ಇದೇ ರಾಮಜನ್ಮಭೂಮಿಯೆಂಬುದಕ್ಕೆ ಬೇರೆ ಯಾವ ಪ್ರಮಾಣವು ಬೇಕು? ಆ ನಿರ್ದಿಷ್ಟಸ್ಥಾನದಲ್ಲಿ ಆಧ್ಯಾತ್ಮಿಕರಂಗಗಳು ತುಂಬಿವೆಯೆಂದು ಸಾಧಕರೂ ಪ್ರಮಾಣಿಸಿದ್ದಾರೆ. 


ಇದಲ್ಲದೇ ಇದೇ ರಾಮಜನ್ಮಭೂಮಿಯೆಂಬುದಕ್ಕೆ ಪ್ರಬಲವಾದ ಮತ್ತೆರಡು ಪ್ರಮಾಣಗಳಿವೆ. ಧರ್ಮಾಂಧರಾದ ಪರಮತೀಯ ಧಾಳಿಕಾರರು ಅಕ್ಕ-ಪಕ್ಕಗಳ ಪ್ರದೇಶಗಳನ್ನು ಬಿಟ್ಟು ಈ ಪ್ರದೇಶದಲ್ಲಿದ್ದ  ರಾಮದೇವಾಲಯವನ್ನೇ ಒಡೆದುಹಾಕುವುದು; ಆ ಜಾಗದಲ್ಲಿ ಕೆಲವು ಕಾಲಾನಂತರ ಶ್ರೀರಾಮಭಕ್ತರು ಮತ್ತೆ ರಾಮದೇವಾಲಯವನ್ನು ಕಟ್ಟುವುದು; ಮತ್ತೆ ಅದನ್ನು ಧರ್ಮಾಂಧ ಪರಮತೀಯ ದುಷ್ಟರು ಧ್ವಂಸ ಮಾಡುವುದು; ಪುನಃ ಅಲ್ಲಿ ಭಕ್ತರಿಂದ ಶ್ರೀರಾಮ ದೇವಾಲಯ ನಿರ್ಮಾಣವಾಗುವುದು –ಎಂಬೀ ಪರಂಪರೆಯು ಈ ಜಾಗವನ್ನೇ ಕುರಿತದ್ದಾಗಿದೆ. ಇಲ್ಲಿ ದೇವಾಲಯ ನಿರ್ಮಾಣಕ್ಕಾಗಿ ಶ್ರೀರಾಮಭಕ್ತರ ಸೈನ್ಯವು ತನ್ನ ರಕ್ತಸೇಚನೆಯನ್ನು ಹಲವಾರು ಬಾರಿ ಮಾಡಿದೆ. 


ರಾಮಜನ್ಮಭೂಮಿ ಎಂದು ಕರೆಯಲ್ಪಡುವ ಬೇರೆ ಯಾವುದಾದರೂ ಇನ್ನೊಂದು ಜಾಗವಿದ್ದರೆ ಆಗ ರಾಮಜನ್ಮ ಭೂಮಿಯು ನಿಜವಾಗಿಯೂ ಯಾವುದು ಎಂಬುದರ ಬಗೆಗೆ ಸಂಶಯಪಡಬಹುದಾಗಿತ್ತು. ಆದರೆ ಈ ಹೆಸರಿನ ಬೇರೆ ಯಾವ ಪ್ರದೇಶವೂ ಪ್ರಾಮಾಣಿಕವಾಗಿ ಪ್ರಸಿದ್ಧವಾಗಿಲ್ಲ. ಆದುದರಿಂದ ಇದನ್ನೇ ರಾಮ ಜನ್ಮಭೂಮಿಯೆಂದು ನಿರ್ಧರಿಸಬೇಕಾಗುತ್ತದೆ.




- ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಬೆಂಗಳೂರು 

ಸಂಸ್ಕೃತಿ ಚಿಂತಕರು,  9739369621


ಲೇಖಕರ ಸಂಕ್ಷಿಪ್ತ ಪರಿಚಯ: 

ವೃತ್ತಿಯಿಂದ ಮಾಧ್ಯಮ ಸಮನ್ವಯಕಾರರು; ಪ್ರವೃತ್ತಿಯಿಂದ ಬರಹಗಾರರು, ಎರಡು ದಶಕಗಳಿಂದ ಆಧ್ಯಾತ್ಮಿಕ ಬರವಣಿಗೆಯಿಂದ ಗುರುತಿಸಿಕೊಂಡವರು, ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ರೂವಾರಿ, ವಂದೇ ಗುರು ಪರಂಪರಾಂ, ಸತ್ಸಂಗ ಸಂಪದ, ದಾಸ ಪಂಥ ಹೊತ್ತಗೆಗಳು ಕನ್ನಡ ಸಾಹಿತ್ಯಕ್ಕೆ ಮೌಲಿಕ ಕೊಡುಗೆ. ಸದ್ಯ ಬೆಂಗಳೂರು ನಿವಾಸಿ. ಹಲವು ಸಾಂಸ್ಕøತಿಕ ಮತ್ತು ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಬಿಎಸ್‍ಡಬ್ಲ್ಯೂ ಪದವಿ ತರಗತಿಯ ಪಠ್ಯಕ್ಕೆ ಇವರು ಬರೆದ ‘ಸಂತ ಶಿಶುನಾಳ  ಷರೀಫ’ ಲೇಖನ ಆಯ್ಕೆಗೊಂಡಿದೆ. ‘ಶ್ರೀ ಕೃಷ್ಣಾರ್ಪಣ’ ಇತ್ತೀಚೆಗೆ ಪ್ರಕಟಗೊಂಡ ಕೃತಿ, ಟಿಟಿಡಿಯ ಪ್ರತಿಷ್ಠಿತ ‘ಪುರಂದರಾನುಗ್ರಹ’ ಪ್ರಶಸ್ತಿ, ‘ಟಿ.ವಿ.ಕಪಾಲಿ ಶಾಸ್ತ್ರಿ’ ಪುರಸ್ಕಾರಕ್ಕೆ ಭಾಜನರು.

ಸಂಪರ್ಕ: ಡಾ.ಗುರುರಾಜ ಪೋಶೆಟ್ಟಿಹಳ್ಳಿ #307, ವಿ2 ಸ್ನೇಹ ಅಪಾರ್ಟಮೆಂಟ್, 14ನೇ ಕ್ರಾಸ್, ಗಿರಿನಗರ ಮೂರನೇ ಹಂತ , ಆವಲಹಳ್ಳಿ ಬಿಡಿಎ ಬಡಾವಣೆ, ಬೆಂಗಳೂರು-560085 ಮೋ: 97393 69621 padmapranava@yahoo.com



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top