ಶ್ರೀರಾಮ ಕಥಾ ಲೇಖನ ಅಭಿಯಾನ-35: ಅಯೋಧ್ಯೆಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳು

Upayuktha
0

ಪರೂಪದ ಅಂತಃಕರಣ, ಅಸಾಧಾರಣ ಮಾತೃವಾತ್ಸಲ್ಯ ಮತ್ತು ಹಿಂದೂಧರ್ಮದ ಮೇರು ಸಂನ್ಯಾಸಿಗಳಲ್ಲಿ ಒಬ್ಬರಾದ ವರದಪುರದ ಮಹಾಯೋಗಿ ಭಗವಾನ್ ಶ್ರೀಧರಸ್ವಾಮಿಗಳು ಒಬ್ಬ ಅಪರೂಪದ ವಿಶ್ವಸಂತರು. ಸಾಸಿವೆಯಷ್ಟೂ ಕಳಂಕವಿರದ ಇವರ ಬಾಳು- ಬದುಕೇ ಒಂದು ಕೌತುಕ- ವಿಸ್ಮಯ. ದತ್ತಾವತಾರಿಯೆಂದೇ ಅವರ ಭಕ್ತರಲ್ಲಿ ಪರಿಚಿತರಾಗಿದ್ದಾರೆ. ಇವರು ಗುಲಬರ್ಗ ಜಿಲ್ಲೆ ಆಳಂದ ತಾಲೋಕು ಲಾಡ್ ಚಿಂಚೋಳಿಯಲ್ಲಿ ಹುಟ್ಟಿ ಶಿವಮೊಗ್ಗ ಜಿಲ್ಲೆ ಸಾಗರದ ಹತ್ತಿರ ವರದಪುರವನ್ನು ತಮ್ಮ ಸಾಧನಾ ಕ್ಷೇತ್ರವನ್ನಾಗಿ ಮಾಡಿಕೊಂಡರು.  ಶ್ರೀಧರರು ತಮ್ಮ ಭೌತಿಕ ಜೀವಿತಾವಧಿಯಲ್ಲಿ ಕರ್ನಾಟಕ ಮಾತ್ರವಲ್ಲ ಭಾರತದ ಉದ್ದಗಲಕ್ಕು ಸಂಚಾರ ಮಾಡಿದ್ದಾರೆ. ಪ್ರಸ್ತುತ ಇವರು ಅಯೋಧ್ಯೆಯಲ್ಲಿ ತಂಗಿ ಅಲ್ಲಿಯೇ ಒಂದು ಚಾತುಮಾಸ್ಯವನ್ನೂ ಆಚರಿಸಿ ಭಕ್ತರಿಗೆ ಅನುಗ್ರಹಿಸಿದ ಕಿರು ಪರಿಚಯವೇ ಈ ಲೇಖನದ ವಸ್ತು.


ಭಗವಾನರು ಸಂಚಾರ ಮಾಡುತ್ತ ಮಾಡುತ್ತ ಹೃಷೀಕೇಶ-ಹರಿದ್ವಾರದಿಂದ ಅಯೋಧ್ಯೆಗೆ ಬಂದರು. ಆವಾಗ ಅವರೊಂದಿಗೆ ಅವರ ಪ್ರಿಯಶಿಷ್ಯ ಕುಗ್ವೆ ನಾರಾಯಣಪ್ಪನವರು ಮಾತ್ರ ಇದ್ದರು. ಇನ್ನೇನು ಗುರುಶಿಷ್ಯರಿಬ್ಬರೂ ಅಯೋಧ್ಯೆಯ ರೈಲ್ವೇ ನಿಲ್ದಾಣದಲ್ಲಿ ಇಳಿದಿದ್ದಾರೆ. ಒಡನೆಯೇ ತರುಣ ಪಂಡನೊಬ್ಬ ಬಂದು ಅವರ ವಸ್ತುಗಳನ್ನೆಲ್ಲ ಒಂದು ಟಾಂಗಾದಲ್ಲಿ ಹಾಕಿ ಅವರಿಬ್ಬರನ್ನೂ ತನ್ನ ಮನೆಗೆ ಕರೆದುಕೊಂಡು ಹೋಗುವಂತೆ ಆ ಟಾಂಗಾದವನಿಗೆ ತಿಳಿಸಿದನು. ತಮ್ಮಲ್ಲಿಗೆ ಬರುವ ಯಾತ್ರಿಕರಿಗೆ ಎಲ್ಲ ಅನುಕೂಲ ಮಾಡಿಕೊಡುವ ಕ್ಷೇತ್ರಪುರೋಹಿತರಿಗೆ 'ಪಂಡ' ಎಂದು ಕರೆಯುತ್ತಾರೆ.  ಸರಿ ಶ್ರೀಧರರು ಅವರ ಶಿಷ್ಯ ನಾರಾಯಣಪ್ಪನವರೊಂದಿಗೆ ಅಲ್ಲಿ ತಂಗಿ ಶಿಷ್ಯನ ಮೂಲಕ ಕ್ಷೇತ್ರವಿಧಿಗಳನ್ನೆಲ್ಲ ಮಾಡಿಸಿದರು.


ಆವಾಗೊಂದು ಕೌತುಕ:- ಒಂದು ದಿನ ಗುರು ಶಿಷ್ಯರಿಬ್ಬರೂ ಆಂಜನೇಯನಿಗೆ ನೈವೇದ್ಯ ಮಾಡಿಸಲೆಂದು ದೊಡ್ಡ ಗಾತ್ರದ ಹದಿಮೂರು ಉಂಡೆಗಳನ್ನು ತರಿಸಿ ಮಾರುತಿಗೆ ನೈವೇದ್ಯ ಮಾಡಿಸಿದರು. ಪ್ರಸಾದವನ್ನು ಮಂಗಗಳಿಗೆ ಹಂಚಿ ಉಳಿದ ನಾಲ್ಕು ಉಂಡೆಗಳನ್ನು ಬಟ್ಟೆಯಲ್ಲಿ ಕಟ್ಟಿಕೊಂಡು ಅಲ್ಲಿದ್ದ ಶ್ವೇತರಾಮ ಮಂದಿರಕ್ಕೆ ಬರುತ್ತಿದ್ದರು. ಹಾಗೆ ಬರುತ್ತಿರುವಾಗ ಹಠಾತ್ತನೆ ಮಂಗವೊಂದು ನಾರಾಯಣಪ್ಪನವರ ಕಂಕುಳಲ್ಲಿದ್ದ ಲಾಡುಗಳನ್ನು ಕಸಿದುಕೊಂಡಿತು. ಒಡನೆಯೇ ಗಂಟನ್ನು ಬಿಚ್ಚಿ ಲಾಡನ್ನು ಪಡೆದು ಬಟ್ಟೆಯನ್ನು ಅಲ್ಲಿಯೇ ಬಿಸಾಡಿತು. ಶಿಷ್ಯನಿಗಾದರೋ ಬೇಸರ- ಪ್ರಸಾದ ಸಿಗಲಿಲ್ಲವೆಂದು. ಗುರುಗಳಾದರೋ ಆತನನ್ನು ಸಮಾಧಾನಪಡಿಸಿ 'ಆ ಬಟ್ಟೆಗಳನ್ನು ಹಾಗೆ ಇಟ್ಟುಕೋ, ಅದೇ ಆಂಜನೇಯನ ಪ್ರಸಾದವೆಂದು ತಿಳಿ' ಎಂದು ಸಮಾಧಾನಪಡಿಸಿದರು. ಆತ ಗುರುಗಳ ಮಾತಿಗೆ ಬೆಲೆಕೊಟ್ಟು ಬಟ್ಟೆಯನ್ನು ಹಾಗೆಯೇ ಇಟ್ಟುಕೊಂಡ.


ಅನಂತರ ಗುರು- ಶಿಷ್ಯರಿಬ್ಬರೂ ಶ್ವೇತರಾಮನ ದರ್ಶನ ಮಾಡಿ ತಾವು ತಂಗಿದ್ದ ಸ್ಥಳಕ್ಕೆ ಬಂದು ಸೇರಿದರು. ಅಲ್ಲಿ ನಾರಾಯಣಪ್ಪ ಕಂಕುಳಲ್ಲಿದ್ದ ಬಟ್ಟೆಯನ್ನು ಬಿಚ್ಚಿ ಕೊಡವಿದರೆ? ಒಳಗೆ ಅವಿತಿದ್ದ ಉಂಡೆಯೊಂದು ಹೊರಗೆ ಬಂತು! ಇದು ಮಾರುತಿಯ ಮಹಿಮೆಯೋ? ಗುರುಗಳ ಕೌತುಕವೋ? ಎಲ್ಲ ಊಹೆಗಳೂ ಸರಿಯಿರಬಹುದು! ಭಗವಂತ ಭಕ್ತನನ್ನು ಬೀಳ್ಕೊಡಲು ಬಂದರು! ಪ್ರಾಥಮಿಕವಾಗಿ ಮಾಡಬೇಕಾದ ಕ್ಷೇತ್ರವಿಧಿಗಳನ್ನೆಲ್ಲ ಮುಗಿಸಿದರು. ಅನಂತರ ನಾರಾಯಣಪ್ಪನವರು ಊರಿಗೆ ಮರಳಿ ಹೋಗಬೇಕಿತ್ತು. ಆವಾಗ ನಾರಾಯಣಪ್ಪನವರಿಗೆ ಹಿಂದಿ ಭಾಷೆ ಗೊತ್ತಿರಲಿಲ್ಲ. ಗುರುಶಿಷ್ಯರಿಬ್ಬರೂ ಟಾಂಗಾದಲ್ಲಿ ರೈಲ್ವೇ ನಿಲ್ದಾಣ ಸೇರಿದರು. ಗುರುಗಳು ಎಂದೂ ಹಣವನ್ನು ಮುಟ್ಟುತ್ತಿರಲಿಲ್ಲ ಹಾಗಾಗಿ ನಾರಾಯಣಪ್ಪನವರೇ ಟಾಂಗಾದವನಿಗೆ ಹಣ ಕೊಟ್ಟು ಗುರುಗಳನ್ನು ಮೌನಿ ಆಶ್ರಮದಲ್ಲಿ ಬಿಡಲು ತಿಳಿಸಿದರು. ಇತ್ತ ನಾರಾಯಣಪ್ಪನವರಿಗೆ ಉಭಯ ಸಂಕಟ- ಗುರುಗಳು ಒಬ್ಬರನ್ನೇ ಹೇಗೆ ಬಿಟ್ಟು ಹೋಗುವುದು? ಗುರುಗಳಾದರೋ ಶಿಷ್ಯನನ್ನು ಸಮಾಧಾನಪಡಿಸಿದರು- 'ತಾವೊಬ್ಬರೇ ಇರುತ್ತೇವೆ' ಗುರುಗಳ ಆಜ್ಞೆ ಮೀರುವಂತಿಲ್ಲ-  ಎದುರುತ್ತರ ಕೊಡುವಂತಿಲ್ಲ. ಇನ್ನೇನು ರೈಲು ಬಂದೇ ಬಿಟ್ಟಿತು! ಸಾಕ್ಷಾತ್ ದತ್ತಾವತಾರಿ ಭಗವಂತ ಭಕ್ತನನ್ನು ಬೀಳ್ಕೊಡಲು ಬಂದರು! ಗುರುಗಳು ಒಬ್ಬರೇ ಎಂದು ಶಿಷ್ಯನಿಗೆ ಉಮ್ಮಳ! ಭಾಷೆ ಬರದ ಶಿಷ್ಯ ಹೇಗೆ ಊರು ತಲುಪುತ್ತಾನೆ ಎಂದು ಗುರುಗಳಿಗೆ ಆತಂಕ! ಇಂಥ ಮಾತೃವಾತ್ಸಲ್ಯದ ಗುರುಗಳನ್ನೇ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿ ಆಶೀರ್ವಾದ ಪಡೆದ ನಾರಾಯಣಪ್ಪನವರು ಎಂಥ ಭಾಗ್ಯಶಾಲಿಗಳು! ಸಾವಿರ- ಲಕ್ಷಕ್ಕೊಂದು ಇಂಥ ದೃಷ್ಟಾಂತ ಸಿಗಲಾರದೇನೋ?


ಮೌನಿ ಆಶ್ರಮದಲ್ಲಿ ಶ್ರೀಧರರು:- ರೈಲ್ವೇ ನಿಲ್ದಾಣದಿಂದ ಹೊರಗೆ ಬಂದು ನೊಡುವಾಗ ಟಾಂಗಾದವನೇ ನಾಪತ್ತೆ!. ಕಾದೂ ಕಾದೂ ಕೊನೆಗೆ ನಡೆದುಕೊಂಡೇ ಆಶ್ರಮ ತಲುಪಿದರು. ಮೊದಮೊದಲು ಶ್ರೀಗಳವರನ್ನು ಸ್ವಲ್ಪ ಉದಾಸೀನತೆಯಿಂದ ಕಂಡರೂ ಕೊನೆಗೆ ಗೌರವಾದರಗಳಿಂದ ಸ್ವೀಕರಿಸಿದರು. ಸುಮಾರು ಎರಡು ತಿಂಗಳು ಅಲ್ಲಿದ್ದ ಗುರುಗಳು ಕಡಲೇಕಾಳುಗಳನ್ನು ಮಾತ್ರ ತಿನ್ನುತ್ತಿದ್ದರು! ಅನಂತರ ಕೆಲವು ದಿನಗಳು ಅಲ್ಲಯೇ ಇದ್ದು ಹತ್ತಿರದಲ್ಲಿದ್ದ ಶ್ರೀ ರಾಮ ಮಂದಿರಕ್ಕೆ ಬಂದರು. ಶ್ರೀರಾಮನ ವಿಗ್ರಹವು ಕಪ್ಪಾಗಿರುವುದರಿಂದ 'ಕಾಲೇರಾಮ' ಎಂದು ಅಲ್ಲಿನ ಭಕ್ತರು ಕರೆಯುತ್ತಿದ್ದರು.


"ಕಾಶಿಯಲ್ಲಿ ನಿನ್ನ ಭಗಿನಿ":-  ಶ್ರೀಧರರು ಕಾಲೇರಾಮ ಮಂದಿರದಲ್ಲಿ ಇರುವಾಗ ಒಂದು ದಿನ ಇಂದೂರಿನ ಮೀರಾ ಎನ್ನುವವಳು ಶ್ರೀಗಳ ದರ್ಶನಕ್ಕಾಗಿ ಅಯೋಧ್ಯೆಗೆ ಬಂದಳು. ಆಕೆಗೆ ಸ್ವಪ್ನದಲ್ಲಿ 'ಇಲ್ಲಿಯೇ ಯೋಗ್ಯ ಸದ್ಗುರು ಶ್ರೀ ಶ್ರೀಧರಸ್ವಾಮಿಗಳಿದ್ದಾರೆ. ಇವರಿಂದ ಉಪದೇಶ ಪಡೆ' ಎಂದಂತಾಯಿತು. ಆಕೆ ಶ್ರೀಧರ ಸ್ವಾಮಿಗಳನ್ನು ಭೇಟಿಯಾಗಿ ಗುರುಗಳಿಂದ ಉಪದೇಶವನ್ನು ಪಡೆದಳು. ಒಂದು ದಿನ "ಕಾಶಿಯಲ್ಲಿ ನಿನ್ನ ಭಗಿನಿ ಇದ್ದಾಳೆ. ಆಕೆಯ ಹೆಸರು ಸಾವಿತ್ರಿ. ಆದರೆ ನೀನು ಅವಳಲ್ಲಿ ನನ್ನ ಸುದ್ದಿ ಹೇಳಬಾರದು' ಎಂದರು.  ಆಕೆಯಾದರೋ ಕಾಶಿಗೆ ಹೋಗಿ ಸಾವಿತ್ರಿಯನ್ನು ಭೇಟಿಮಾಡಿ ತನಗೆ ಗುರುದರ್ಶನವಾದದ್ದನ್ನು ಹೇಳಿಬಿಟ್ಟಳು. ಕೊನೆಗೆ ತನ್ನ ತಪ್ಪಿನ ಅರಿವಾಗಿ ಮತ್ತೆ ಅಯೋಧ್ಯೆಗೆ ಬಂದು ನಿಜಸ್ಥಿತಿಯನ್ನು ಗುರುಗಳಲ್ಲಿ ತಿಳಿಸಿ ಕ್ಷಮಿಸಬೇಕೆಂದಳು. ಕರುಣಾಸಾಗರರಾದ ಶ್ರೀಧರರು ಆಕೆಯನ್ನು ಮನ್ನಿಸಿ ಆಶೀರ್ವದಿಸಿದರು. ಈ ಕಡೆ ಶ್ರೀಗಳು ಕಾಶಿಯಲ್ಲಿ ಇದ್ದಾರೆಂಬುದನ್ನು ಮೀರಾಳಿಂದ ತಿಳಿದ ಸಾವಿತ್ರಕ್ಕನು ಸೀದ ಅಯೋಧ್ಯೆಗೇ ಬಂದಳು.


ಅಯೋಧ್ಯೆಯಲ್ಲಿ ಶ್ರೀಧರರೊಂದಿಗೆ ಸಾವಿತ್ರಕ್ಕ:- ಈ ಸಾವಿತ್ರಕ್ಕ ಗುರುಚರಿತ್ರೆಯಲ್ಲಿ ಒಬ್ಬ ವಿಶೇಷ ಭಕ್ತೆ. ಹೆಚ್ಚೇನು ಗುರುಗಳ ನೆನಪಿನೊಂದಿಗೇ ಈಕೆಯ ನೆನಪು. 'ಜಯದೇವ ಜಯದೇವ' ಭಜನಾ- ಹಾಡನ್ನು ರಚಿಸಿರುವವಳೇ ಈ ಸಾವಿತ್ರಕ್ಕ! ಈಕೆಯ ಬಗ್ಗೆ ಬರೆದಷ್ಟೂ ಇದೆ. ಪುಟದ ಮಿತಿಯಿಂದ ಇಷ್ಟು ಸಾಕು. ಹೀಗೆ ಗುರು ಭಕ್ತೆ ಸಾವಿತ್ರಕ್ಕ ಅಯೋಧ್ಯೆಗೆ ಬಂದು ನೋಡಿದರೆ? ಶ್ರೀಧರರ ಬಳಿ ಒಂದು ಕುಡಿಕೆಯ ಕಮಂಡಲು, ಮಣ್ಣಿನ ಬಟ್ಟಲು-ಲೋಟ, ಒಂದೆರಡು ಸಾಮಾನ್ಯ ವಸ್ತ್ರ! ಅವರ ಬಳಿಯಿದ್ದ ಕಮಂಡಲುವನ್ನೆಲ್ಲಾ ಸರಯೂ ನದಿಗೆ ಅರ್ಪಿಸಿಬಿಟ್ಟಿದ್ದರು. ಗುರುಗಳ ಈ ಸ್ಥಿಯಿಯನ್ನು ಕಂಡು ಗುರುಭಕ್ತೆ ಮಮ್ಮಲ ಮರುಗಿದಳು.


ಸಾವಿತ್ರಕ್ಕಳಿಗೆ ಮರುಜನ್ಮ:- ಒಂದು ದಿನ ಶ್ರೀಧರರು ಸಾಯಂ ಸ್ನಾನಕ್ಕೆ  ಸರಯೂ ನದಿಗೆ ಹೋಗಿದ್ದರು. ಕಾಲೇ ರಾಮ ಮಂದಿರದ ಎರಡನೇ ಅಂತಸ್ತಿನಲ್ಲಿ ಒಂದು ಗೋಡೆಗಾತು ಸಾವಿತ್ರಕ್ಕ ಧ್ಯಾನಕ್ಕೆ ಕುಳಿತಿದ್ದಳು. ಹಾಗೆ ಧ್ಯಾನಮಾಡುತ್ತಿದ್ದಾಗ ಆಕೆ ಹಠಾತ್ತನೆ ತಲೆ ಕೆಳಗಾಗಿ- ಕಾಲು ಮೇಲಾಗಿ ಬಿದ್ದುಬಿಟ್ಟಳು. 'ರಾಮಾ' ಎಂದು ಅಂಗಲಾಚಿದಂತೆ, ಶ್ರೀಧರರೇ ಮುಂದಾಗಿ ಬಂದು ತಾಯಿ ಮಗುವನ್ನು ಬಾಚಿ ಎತ್ತಿದಂತೆ ಭಾಸವಾಯಿತು. ಎಚ್ಚರವಾಗಿ ಕಣ್ಣು ಬಿಟ್ಟು ನೋಡುವಾಗ? "ಮಗಳೇ ನೀನೀಗ ಸಾಯುವ ಹಂತಕ್ಕೆ ಹೋಗಿದ್ದೆ. ಹಾಗಾಗಿದ್ದರೆ ರಾಮನ ಮೇಲೆ ವೃಥಾ ಅಪವಾದ ಬರುತ್ತಿತ್ತು. ನನಗೂ ಹೆಣ ಸುಡುವ ಕೆಲಸ ಬರುತ್ತಿತ್ತು. ಈ ಎರಡೂ ಅಪವಾದಗಳನ್ನು ತಪ್ಪಿಸಲೆಂದೇ ಶ್ರೀರಾಮನೇ ತಮ್ಮ ರೂಪದಿಂದ ಕಳುಹಿಸಿದನು" ಎಂದು ಶ್ರೀಧರರು ಹೇಳಿದರು. ಮತ್ತೊಮ್ಮೆ ಸೀತಾಮಾತೆಯ ಮೈಮೇಲಿದ್ದ ಬಂಗಾರವನ್ನು ಕದಿಯಲು ಬಂದ ಕಳ್ಳನನ್ನೂ ನಯವಾಗಿ ತಪ್ಪಿಸಿದರು. ಇಂಥ ಕೆಲವು ಅನುಭೂತಿಗಳನ್ನು ಪಡೆದ ಸಾವಿತ್ರಕ್ಕ ಶ್ರೀಧರರ ಅಣತಿಯಂತೆ ಮತ್ತೆ ಕಾಶಿಗೆ ಹೋದಳು. ಅಂತೂ ಸಾವಿತ್ರಕ್ಕಳಿಗೂ ಮರುಜನ್ಮ ಬಂತು!


ಮಂದಿರದ ಅಭಿವೃದ್ಧಿ:- ಈಗಿನ ಕಾಲದಲ್ಲಿಯಾದರೆ ಸಮಾಜ- ಸರ್ಕಾರ ಎರಡೂ ಒಂದಾಗಿ ಅಯೋಧ್ಯೆ-ರಾಮಮಂದಿರ ಎಲ್ಲವನ್ನೂ ಊಹೆಗೂ ಮಿರಿ ಅಭಿವೃದ್ಧಿ ಪಡಿಸಿವೆ/ ಪಡಿಸುತ್ತಿವೆ. ಆದರೆ ಶ್ರೀಧರರು 1951 ಇಸವಿಯಲ್ಲಿಯೇ ಭಕ್ತರು ತಮಗೆ ಅರ್ಪಿಸಿದ ಕಾಣಿಕೆಯಿಂದಲೇ ಕಾಲೇರಾಮ ಮಂದಿರದ ಸಾಲವನ್ನು ತಿರಿಸಿದರು. ಆಶ್ರಮ ಮತ್ತು ಮಂದಿರದಲ್ಲಿ ಅಗತ್ಯವಾದ ವಿದ್ಯುತ್ ದೀಪ ಮತ್ತು ಪಂಕಗಳನ್ನು ಹಾಕಿಸಿದರು. ರಾಮಮಂದಿರಕ್ಕೆ ತಾಗಿದಂತೆ ಇನ್ನೊಂದು ಮಹಡಿಯನ್ನು ಕಟ್ಟಿಸಿ ಹಲವು ಕೊಠಡಿಗಳನ್ನೂ ನಿರ್ಮಿಸಲಾಯಿತು. ಭಕ್ತರಿಗೆ ಪ್ರಸಾದ ಭೋಜನದ ವ್ಯವಸ್ಥೆ- ಮನಶ್ಶಾಂತಿಗಾಗಿ ಸುತ್ತಲೂ ಸುತ್ತಲು ಒಂದು ಉದ್ಯಾನವನ! ನೆನಪಿಡಬೇಕಾದ ಸಂಗತಿಯೆಂದರೆ ಇವೆಲ್ಲವೂ ಸಾಕಾರಗೊಂಡಿದ್ದು ಗುರುಗಳಿಗೆ ಬರುತ್ತಿದ್ದ ಪಾದಕಾಣಿಕೆಗಳಿಂದ (ಅವರು ಹಣವನ್ನು ಮುಟ್ಟುತ್ತಲೇ ಇರಲಿಲ್ಲ), ಅದೂ 1951 ಇಸವಿಯಲ್ಲಿ!. ಭಕ್ತರಿಗೆ ಗೊತ್ತಿರುವಂತೆ ಶ್ರೀಧರರು ರಾಮೋಪಾಸಕರು, ಅದರಂತೆ ಶ್ರೀರಾಮನ ಸಾನ್ನಿಧ್ಯ- ಮೋಕ್ಷ ಪುರಿಯಲ್ಲಿ ಸಂಪನ್ನವಾದ ಏಕಾಂತ- ಇವುಗಳು ಅವರಿಗೆ ಸಂತೃಪ್ತಿ ಕೊಟ್ಟಿದ್ದನ್ನು ತಮ್ಮ ಪ್ರಿಯಶಿಷ್ಯ ಗಣಪತಿ ಮಾಸ್ತರರ ಪತ್ರಕ್ಕೆ ಉತ್ತರಿಸಿದ್ದು ಗಮನಿಸುವಂತಿದೆ.


ಅಯೋಧ್ಯೆಯಲ್ಲಿಯೇ ಚಾತುಮಾಸ್ಯ:- ಭಗವಾನ್ ಶ್ರೀ ಶ್ರೀಧರಸ್ವಾಮಿಗಳ ಒಂಬತ್ತನೆಯ ಚಾತುಮಾಸ್ಯ ಶಾ|| ಶ|| 1823ನೇ ಖರನಾಮ ಸಂವತ್ಸರ, ಆಷಾಢ ಶುದ್ಧ ಹುಣ್ಣಿಮೆ ಅಂದರೆ ತಾ|| 18-07-1951 ನೇ ಬುಧವಾರ ಅಯೋಧ್ಯೆಯಲ್ಲಿ ಸಂಪನ್ನವಾಯಿತು. ಗುರುಪೌರ್ಣಿಮೆಗೆ ಒಂದೆರಡು ದಿನ ಮೊದಲೇ ಕಾಶಿಯಿಂದ ಸುಬ್ರಾಯ ಭಾಗವತರು- ಸಾವಿತ್ರಕ್ಕ ಎಲ್ಲವನ್ನೂ ಸಜ್ಜುಗೊಳಿಸಿದ್ದರು. ಗುರುಗಳು ಪ್ರತಿದಿನ ಪವಿತ್ರ ಸರಯೂ ನದಿಗೆ ಸ್ನಾನಕ್ಕಾಗಿ ಹೋಗುತ್ತಿದ್ದರು. ಆ ನದಿಯಲ್ಲಿ ಇದ್ದ ದೊಡ್ಡ ದೊಡ್ಡ ಆಮೆಗಳಿಗೆ ಯಾತ್ರಿಕರು ಆಹಾರಪದಾರ್ಥ ಅಥವಾ ಕಾಳುಗಳನ್ನು ಹಾಕುತ್ತಿದ್ದರು. ಆ ಆಮೆಗಳಲ್ಲಿ ಒಂದು ಆಮೆ ಅಕಾಸ್ಮತ್ತಾಗಿ ಗುರುಗಳ ಕಾಲನ್ನು ಕಚ್ಚಿತು. ಮೊದಲು ನೋವು ತಿಳಿಯದಿದ್ದರೂ ಕೊನೆಗೆ ಕಾಲು ಬಾತು ಕೆಲವು ದಿನಗಳವರೆಗೆ ಶ್ರೀಧರರಿಗೆ ಓಡಾಡಲೂ ಆಗದಂಥ ವೇದನೆ! ಅಂತೂ ವ್ರತ ನಿರ್ವಿಘ್ನವಾಗಿ ನೆರವೇರಿತು.


"ಒಳಗೆ ನೋಡದೆ ಹೊರಗೆ ಪರಿತಪಿಸಿದೆ":- ಅಂದು ಗುರುಗಳನ್ನು ಅಯೋಧ್ಯೆಯಲ್ಲಿ ಬಿಟ್ಟು ಹೋದ ಕುಗ್ವೆ ನಾರಾಯಣಪ್ಪನವರಿಗೆ ಏನೋ ಕಸಿವಿಸಿ, ಅನುಭವಿಸಲಾರದ ತಳಮಳ-ವೇದನೆ. ಹಾಗಾಗಿ ಅವರು ಮತ್ತೆ ಅಯೋಧ್ಯೆಗೇ ಬಂದುಬಿಟ್ಟರು. ಹಿಂದಿಯೂ ಬಾರದು- ಕಾಲೇರಾಮ ಮಂದಿರಬಿಟ್ಟರೆ ಬೇರೇನೂ ತಿಳಿಯದು. ಗುರುಗಳು ಸಿಗುವ ತನಕ ಒಂದು ಹನಿ ನೀರನ್ನೂ ಕುಡಿಯಲಾರೆನೆಂದು ಶಪಥ ಮಾಡಿ ಊರೆಲ್ಲಾ ಹುಡುಕಿದ್ದೇ ಹುಡುಕಿದ್ದು. ಹಸಿವು- ಆಯಾಸದಿಂದ ಮಂದಿರದ ಮೂಲೆಯಲ್ಲಿ ಮಲಗಿಬಿಟ್ಟರು. ಸರ್ವಸ್ವವನ್ನೂ ಅರಿತಿದ್ದ ಗುರುಗಳು ಮುಸುಕು ತೆಗೆದು ಒಂದೇಟು ಬಿಟ್ಟರೆ? ಕುಗ್ವೆಯವರು ಕಕ್ಕಾಬಿಕ್ಕಿ. ಇಲ್ಲಿಯೂ ಗುರುಗಳು ಮಾರ್ಮಿಕವಾಗಿ ವಿವರಿಸಿ ಕುಗ್ವೆಯವರ ಒಳಗಣ್ಣು ತೆರೆದರು. "ಮಗ! ನೀನು ಒಳಗೆ ನನ್ನನ್ನು ನೋಡದೇ ಹೊರಗೆಲ್ಲ ಪರಿಪಿಸಿದೆ. ನೀನು ಒಳಗೆ ಪರಿತಪಿಸಲು ತೊಡಗಿದ ಕೂಡಲೇ ಗುರುದರ್ಶನವಾಯಿತು ಮಗ!" ಎಂದು ವೇದಾಂತದ ಸಾರವನ್ನೇ ಕುಗ್ವೆಯವರಿಗೆ ಬೋಧಿಸಿದರು! (ಮಹಾಭಾರತದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ಗೀತೋಪನಿಷತ್ತನ್ನು ಉಪದೇಶಿಸಿದ್ದನ್ನು ನೆನಪು ಮಾಡಿಕೊಳ್ಳಬಹುದು.



"ಶ್ರೀರಾಮ ಮಂತ್ರರಾಜ ಸ್ತೋತ್ರ:- ಅನಂತರ ಗುರುಗಳೊಡನೆ ಹಲವು ದಿನವಿದ್ದ ನಾರಾಯಣಪ್ಪನವರು ಗುರುಗಳ ಅಪ್ಪಣೆ ಪಡೆದು ಸಾಗರಕ್ಕೆ ಹೊರಟು. ಗುರುಗಳು ಕಾರ್ತಿಕ ಶುದ್ಧ ದಶಮಿಯಂದು "ಶ್ರೀ ರಾಮ ತ್ರಯೋದಶಾಕ್ಷರೀ ತಾರಕಮಂತ್ರ ಸ್ತೋತ್ರವನ್ನು (ಶ್ರೀರಾಮ ಮಂತ್ರರಾಜ ಸ್ತೋತ್ರ) ವನ್ನು ರಚಿಸಿದರು. ಈ ಮಂತ್ರದ ಬಗ್ಗೆಯೇ ಹತ್ತಾರು ಪುಟಗಳನ್ನು ಬರೆಯಬಹುದು. ಪುಟದ ಮಿತಿಯಿಂದ ಇಲ್ಲಿ ವಿವರಿಸಿಲ್ಲ.


ಅಯೋಧ್ಯೆಯಲ್ಲಿರುವಾಗಲೇ ಗುರುಗಳು ಅಯೋಧ್ಯೆಯ ಹತ್ತಿರ ನಂದಿಗ್ರಾಮಕ್ಕೂ ಹೋಗಿ ಬಂದರು. ಅನಂತರ ಚಾತುರ್ಮಾಸ್ಯ ಮುಗಿಸಿ ಕಾಶಿಯಿಂದ ಬಂದಿದ್ದ ಸುಬ್ರಾಯ ಭಾಗವತರೊಡನೆ ರೈಲಿನ ಮೂಲಕ ಕಾಶಿಗೆ ತೆರಳಿದರು. (ನಾವು ಈಗೀಗ ಅಯೋಧ್ಯೆ ಬಗ್ಗೆ ಮತ್ತೆ ಮತ್ತೆ ಮಾತನಾಡುತ್ತೇವೆ- ಶ್ರೀಧರಸ್ವಾಮಿಗಳು ಆವಾಗಲೇ ಅಯೋಧ್ಯೆಯಲ್ಲಿ ಸಾಧಿಸಿ ಉದಾಹರಣೆಯಾದರು).


- ಜಿ.ಟಿ. ಶ್ರೀಧರ ಶರ್ಮಾ, ಸಾಗರ

“ಅಥರ್ವ”

80 ಅಡಿ ರಸ್ತೆ, ಮೂರನೆಯ ತಿರುವು

ವಿಜಯನಗರ ಬಡಾವಣೆ ಸಾಗರ- 577401

ದೂರವಾಣಿ:- 9480473568


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
To Top