-ರಮ್ಯಾ ಶ್ರೀನಾಥ ಕೊಪ್ಪ
"ಕುಸಿಕಸಿವ ರಾಮಾಯಣ ಕೇಸರಿ" ಎಂಬ ರಾಮಾಯಣ ಕಾವ್ಯಕಥನ ರುಗ್ಮಿಣೀಶವಿಠ್ಠಲ ಹರಿದಾಸ ಅಂಕಿತಹೊಂದಿರುವ, ನವನೀತ- ಪ್ರಾಚೀನ ರಾಮಾಯಣ ಆಧಾರಿತ, ಕೃತಿಯಾಗಿ, ಅಯೋಧ್ಯೆಯಲ್ಲಿ ಪ್ರಾಚೀನ ಶ್ರೀ ರಾಮಮಂದಿರದ ಸ್ಥಳದಲ್ಲೇ ಪುನರ್ ನಿರ್ಮಿತ ನೂತನ ರಮಣೀಯ ಶ್ರೀರಾಮಮಂದಿರದ ಉದ್ಘಾಟನೆಯ ಸುಮಂಗಲ ಸಂಭ್ರಮದ ಸಂದರ್ಭದಲ್ಲಿ ಗುರು ಹನುಮ ಹೃದಯ ಸಂಪುಟೀ ಶ್ರೀ ಸೀತಾರಾಮರ ಪಾವನ ಪಾದಕ್ಕೆ ಭಕ್ತಿ ಪೂರ್ವಕ ಸಮರ್ಪಣೆ. ಈ ರಾಮಾಯಣ ಕಾವ್ಯ ಕಥನ- ಸಂಪೂರ್ಣ ರಾಮಾಯಣ ಸ್ಮರಣ ಸಮೇತವಾಗಿ ರಾಮಸೀತಾ ಅವಿನಾಭಾವ ಅನನ್ಯ ಸಂಬಂಧ, ಅಪಾರ ಅಪಾರ ಪ್ರೀತಿ, ರಾಮದೇವರ ಗುಣಗಣಮಹಿಮಾ, ಕಾರುಣ್ಯ, ರಾಮ ಉತ್ತಮತ್ವ ಹಾಗೂ ನಿರ್ದೋಷತ್ವ ಪ್ರತಿಪಾದನ, ಆರಾಧನ ಸುಸಾಧನವಾಗಿದೆ.
ಇದು 174 ಸಾಲಿನ ರಾಮಾಯಣ ಕಾವ್ಯ ಕಥನ. ಈ ಕೃತಿಯ ಮೊದಲ ಎರಡು ಸಾಲು ಗುರು ಹನುಮಂತ ದೇವರ, ರಾಮಾಯಣ ಕಥಾ ಸಂಕ್ಷಿಪ್ತ ಸ್ಮರಣೆ ಮತ್ತು ಮಂಗಳ ದ್ಯೋತಕ ಸಾಲುಗಳಾಗಿದ್ದು, 172 ಸಾಲುಗಳು ಅಕ್ಷರ "ಕ" ಇಂದ ಪ್ರಾರಂಭಿಸಿ ಅಕ್ಷರ "ಸ" ಅಲ್ಲಿ ಪರ್ಯವಸಾನ ಹೊಂದಿರುತ್ತದೆ. ವೈದಿಕ ಸಂಖ್ಯಾ ಶಾಸ್ತ್ರದಲ್ಲಿ 172 ಸಂಖ್ಯೆ 1 +7+2=10, 1+0=1 -> ಸಂಖ್ಯೆ ಒಂದಕ್ಕೆ ಹೊಂದಿದ್ದು ಇದು ಸೂರ್ಯವಂಶಿ ರಾಘವರಾಮರ ಅನುಗ್ರಹ ಸೂಚಕವಾಗಿದೆ. 174 ಸಂಖ್ಯೆ 1+7+4=12. 1+2=3 ಇದು ಗುರುಅನುಗ್ರಹ ಸೂಚಕವೂ ಆಗಿದೆ. ಹರಿಗುರು ಅನುಗ್ರಹದಿಂದಲೇ ಉತ್ಪತ್ತಿಯಾದ ಕೃತಿಯಾಗಿದೆ.
"ಕ - ಕತ್ತಲ ಕಷ್ಟ ಕಲಹದಿ ಕೂಡಿಹುದ ಕಡಿದು ಕರುಣದಿ ಕಿರಣ ಕಾಣಿಸಿ
ಕೊಡಬೇಕು ಸ - ಸಾಧನೆ ಸುಖ ಸಿರಿ ರಾಮಪಾದಾಂಬುಜ ಸಂಪದ ಸಂತತ ಸೂಸಿ
ಕುಸಿಕಸಿದು ಜ್ಞಾನಕಿಸೆತುಂಬಿಸುವ ಕಾಸಾ ನರಕೇಸರಿಯ ಆಶ್ರಯಿಸಿ"
ಇರುವ ಕುಸಿಕಸಿವ ರಾಮಾಯಣ ಕೇಸರಿ ಎಂದಿನಂತೇ ರಾಮಾಯಣ ಪಠಿಸುವ ಸದ್ಭಕ್ತರ ಎಂದೂ ಕುಸಿಯ ಬಿಡದೇ, ಕಷ್ಟಗಳ ಕಸಿದು, ಧೈರ್ಯ ತುಂಬಿ, ಪರಮಾತ್ಮ ಜ್ಞಾನ ಆನಂದಗಳ ಕರುಣಿಸಿ ಸ್ವಾಮಿ ಶ್ರೀ ರಾಮ ರಕ್ಷಿಸಬೇಕೆಂದುಹೃತ್ಪೂರ್ವಕ ಪ್ರಾರ್ಥನೆಗಳೊಂದಿಗೆ ಶ್ರೀ ರಾಮಾಭಿನ್ನ ಶ್ರೀ ಕೃಷ್ಣಾರ್ಪಣಮಸ್ತು.
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಅನಂತಾವತಾರ ಶ್ರೀರಾಮನ ಅನಂತ ರಾಮಭಕ್ತಿ ಸಾಮ್ರಾಜ್ಯಕ್ಕೆ ಭಕ್ತಿಪೂರ್ವಕ ಅನಂತ ನಮನಗಳು
==============
ಕುಸಿಕಸಿವ ರಾಮಾಯಣ ಕೇಸರಿ
ಗೆಲುವನೀವನು ರಾಮ ಹೆಗಲಲಿ ಹೊತ್ತವಗೆ
ಗಗನ ಹಾರಿ ಹರಿಯರಸಿ ಹರೆಸುವ ಸೋಮಬಂಟನ ಅರೆಸುವಗೆ
ಕೇಳೇ ಸುರರು ಇಳೆಭಾರವಿಳಿಸೆಂಬ ಮೊರೆಯ ಮನ್ನಿಸಿ
ಕೋರಿದ ರಘುಕುಲದಿ ಕೋಟಿಸೂರ್ಯಪ್ರಭ ಚಂದ್ರಮ ಜನಿಸಿ
ಕಲಿಸುವ ಗುರು ಸೂರಿ ವಿಶ್ವಾಮಿತ್ರರ ವಿನಯದಿ ಉಪಚರಿಸಿ
ಕಾನನದಿ ಯಜ್ಞವ ತಡೆವ ದೈತ್ಯರೆಲ್ಲರ ಸಂಹರಿಸಿ
ಕಾಮಿಗಳಚ್ಚರಗೆ ಕಾಮಭಸ್ಮಧರನ ಬಿಲ್ಲಮುರಿದಿರಿಸಿ
ಕಲ್ಯಾಣ ಜಗಕೀವುದಕೆ ಮುದ್ದುಧೀರ ಮೈಥಿಲಿಯವರಿಸಿ
ಕೈಕೇಯಿಯ ಕಾಕುನುಡಿ ದಾಶರಥ ಜಗಕೆ ವರವೆನಿಸಿ
ಕೈಪಿಡಿದ ಸೀತೆ ಲಕ್ಷ್ಮಣರೊಡನೆ ವನವ ಪ್ರಮೋದದಿ ಚರಿಸಿ
ಕ್ಷಮೆ ಬೇಡಿದ ಅನುಜ ಭರತಗೆ ಪಾದುಕೆ ಒಲುಮೆ ಅನುಗ್ರಹಿಸಿ
ಕ್ಷಿತಿ ಜೀವ ಏಕಾಧಾರ ಪತಿತಪಾವನಚರಣ ಗೋದೆ ಉದ್ಧರಿಸಿ
ಕಗವಾಹನಯಮಸೋಮಸವಿತ್ರಾತ್ಮಜ ಪಿತೃಶ್ರಾದ್ಧವ ಅಜ ನಡೆಸಿ
ಕಲ್ಲಾದ ಅಹಲ್ಯೆಯ ಮುಟ್ಟಿ ಪವಿತ್ರ ಮುನಿಮನವ ಮಿಡಿಸಿ
ಕಲುಷವಿಲ್ಲದ ಶಬರಿ ಭಕುತಿವುಂಡು ಫಲ ಹರೆಸಿ
ಕಾಡ್ಗತ್ತಲೊಳು ಜಗಾಭ ಜಗದಾಭಯ ಜನಾರ್ದನ ವಾಸಿಸಿ
ಕರ್ತೃ ಲಕ್ಷ್ಮ್ಯಾದಿ ಸಕಲ ಸೃಷ್ಟಿಗೆ ಶ್ರೀವರದ ಪರ್ಣಕುಟೀರದಿ ನೆಲೆಸಿ
ಕಾಮಿಸಲು ಬಂದು ನೇಮ ಮುರಿಯೆಂದ ಶೂರ್ಪಣೆಯ ಮೂಗ ಕೊಯ್ಯಿಸಿ
ಕಾಣುತ ಮಾಯಾಜಿಂಕೆ ಜಾನಕೀ ಬೇಡೇ ಬೇಡವೆಂದು ಹಿಂಬಾಲಿಸಿ
ಕಪಟ ಮಾರೀಚಗೆ ರಾಮಬಾಣ ತಾಗೇ ಹೋ ಲಕ್ಷ್ಮಣ ಎನುವಸುರನ ಮರ್ಧಿಸಿ
ಕೇಳಿತು ರಾಮರ ಧನಿ ಪೋಗಲೇಬೇಕೆಂದು ಲಕ್ಷ್ಮಣಗೆ ಸೀತಮ್ಮ ಆಜ್ಞಾಪಿಸಿ
ಕಾನನ ಭಯವೇನು ಕೋದಂಡರಾಮನಿಗೆನುತ ಲಕ್ಷ್ಮಣ ರಕ್ಷಾ ರೇಖೆಯ ರಚಿಸಿ
ಕೇಡಿ ರಾವಣ ಸನ್ಯಾಸಿ ವೇಷದಿ ಭಿಕ್ಷವ ಬೇಡಿ ಮಾತಿಗೆ ಮಾತು ಬೆಳೆಸಿ
ಕೊಡಲು ಭಿಕ್ಷವ ಭೂಮಿಜೆ ರೇಖೆಯ ದಾಟೇ ಪುಷ್ಪಕವಿಮಾನದಿ ರಾಕ್ಷಸನವಳ ಅಪಹರಿಸಿ
ಕೂಡಲೇ ವೈದೇಹಿ ಆಭರಣಗಳ ಬಿಚ್ಚಿ ಸುಳಿವ ದಾರಿಯೊಳು ಸುಳುವಾಗಿ ಬೀಳಿಸಿ
ಕೆಡವಿ ಪ್ರತಿಭಟಿಸಿ ಚೀರಿದ ಜಟಾಯು ರೆಕ್ಕೆ ಕಡೆದು ದಶಮುಖ ಲಂಕೆಯತ್ತ ಪಯಣಿಸಿ
ಕಂಡಾ ಕುಟೀರ ಸೀತೆ ಎಲ್ಲಿಹಳೆಂದು ರಾಮಲಕ್ಷ್ಮಣರು ಹುಡುಹುಡುಕಿ ಕಳವಳಿಸಿ
ಕಳೆದುಕೊಂಡಂತೆ ಹೃದಯತಿ ಪ್ರೀತಿ ಸೀತಾ ಸೀತಾ ಎಂದೇ ರಾಮ ರೋಧಿಸಿ
ಕಾಲುಂಗುರ ನಗೆಗಳ ಗಂಟು ಇತರ ಸುಳಿವುಗಳ ಸಿಕ್ಕಸಿಕ್ಕಲ್ಲಿ ಶೋಧಿಸಿ
ಕುಗ್ಗಿ ರೆಕ್ಕೆ ಜರಿದ ಜಟಾಯುವನು ಹರಿಯು ಮುಕುತಿಯೆಡೆಗೆ ಹಾರಿಸಿ
ಕುಣಿಕುಣಿದು ರಾಮನಾಮ ಭಜಿಪ ಬಲವಂತ ಆಂಜನೇಯನಾ ಹೃದಯದಿ ನೆಲೆಸಿ
ಕುಟಿಲ ವಾಲಿಯ ಅಳೆಸಿ ಸುಗ್ರೀವಗೆ ಪಟ್ಟ ನ್ಯಾಯವ ಉಳಿಸಿ
ಕರಡಿ ಜಾಂಬುವನ ಬಲಭಕುತಿ ರನ್ನಕರಡಿಕೆಯ ಕನ್ನಡಿಯೊಳು ಬಿಂಬಿಸಿ
ಕೊರಗುತಿರುವಂತೆ ಅನನ್ಯ ಸೀತೆಗಾಗಿ ಹತ್ತುದಿಕ್ಕೆಲ್ಲ ಹುಡುಕಿಸಿ
ಕೊಟ್ಟು ಕಳುಹಿಸಿ ಉಂಗುರವ ಹನುಮನ ಆಗಸದಿ ಹಾರಿಸಿ ಸಮುದ್ರವನೇ ದಾಟಿಸಿ
ಕಾಯ್ದು ಶೋಕದಲ್ಲಿರುವಂತಿದ್ದ ಸೀತೆಗೆ ಅಶೋಕ ವನದಿ ಸಂತಸ ಪಡಿಸಿ
ಕಟ್ಟಿಸಿ ಪ್ರಾಣಬಂಟನ ಬ್ರಹ್ಮಾಸ್ತ್ರದಿಂದ ಅಸುರ ಲಂಕೆಯ ಜ್ವಲಬಾಲದಿ ಸುಡಿಸಿ
ಕಂಗೆಟ್ಟ ರಾವಣನ ದೇವತಾಗ್ರಹನಿಗ್ರಹ ಮದಕೋಟೆಯ ಭಂಗಿಸಿ
ಕುರುಹು ಪಡೆದು ಕಪಿಗಳ ಕರೆದು ರಾಮ ಸೇತುವೆಯನ್ನೇ ಕಟ್ಟಿಸಿ
ಕಲ್ಪಿಸಿದಾ ಸೇತುಧಿಟ್ಟಿಸಿ ಕಂಡುಕಾವುದೆಂದು ಸೇತುಪತಿ ರಾಮೇಶ್ವರನ್ನ ನೇಮಿಸಿ
ಕಪಿಗಳ ಸೈನ್ಯವ ಸೇರಿಸಿ ಜಯ ಜಯ ರಾಮವೆಂದು ಭಕ್ತಿ ಆವೇಶದಿಂದಲಿ ಕುಣಿಸಿ
ಕಾಳಗ ರಣದೊಳು ಶಂಕೆಯಿಲ್ಲದೆ ವೀರ ಶಂಖವನೆ ಊದಿಸಿ
ಕಂಡು ರಕ್ಕಸರ ಕೋಟೆಯ ಹಿಂಡು ಮುತ್ತಿಗೆ ಹಾಕಲು ಪ್ರಚೋದಿಸಿ
ಕಂಡ ವಿಭೀಷಣಗೊಲಿದು ದಂಡ ಕುಂಭ ಅಕ್ಷಯ ರಾಕ್ಷಸರ ವಧಿಸಿ
ಕುಸಿದನುಜಗೆ ಗಂಧಮಾದ ಪರ್ವತ ಮರುತ ಪವನಗೆ ಹೊರೆಸಿ
ಕಾಪಾಡುವ ದೈವನವ ಸಾವು ಬಿಡಿಸಿ ಸಂಜೀವನವ ತರಿಸಿ
ಕೊಂದ ಅಂಬುಜನಾಭ ಹತ್ತುತಲೆ ರಾವಣನ ನಾಭಿಭೇದಿಸಿ
ಕೇಳಬಾರದೆಂದು ನಾಲ್ವರು ಸೀತೆಗೆ ಅಗ್ನಿ ಪರೀಕ್ಷೆಯ ಮಾಡಿಸಿ
ಕೊಟ್ಟ ವರದಂತೆ ವೇದಾವತಿ ಪದುಮೆಯ ಶ್ರೀನಿವಾಸನಾಗಿ ತಾನೇ ವರಿಸಿ
ಕೋದಂಡ ದಿಗ್ವಿಜಯ ರಾಮ ಸೀತೆಯ ಅಪರ ಪ್ರೀತಿ ನಂಬಿಕೆ ಜಯಿಸಿ
ಕಟ್ಟಿ ಆ ಪಟ್ಟ ವಿಭೀಷಣಗೆ ಸುವರ್ಣ ಲಂಕಾಪುರಿ ಅರಸನೆಂದು ಹರೆಸಿ ಕೂಡಿಸಿ
ಕರೆವ ಅಯೋಧ್ಯೆ ಕೂಗ ಕೇಳಿ ರಾಮ ಸೀತಾ ಲಕ್ಷ್ಮಣ ಪರಿವಾರ ಆಗಮಿಸಿ
ಕುಸುಮ ಅರವಿಂದ ರಾರಾಜಿಸುವ ಮೊಗಂಗಳ ಸಂತಸ ಅರಳಿಸಿ
ಕೊಳಲು ವೀಣಾನಾದಕೆ ಮಿಗಿಲಾದ ಮನದೊಳು ಶ್ರುತಿಮಿಡಿಸಿ
ಕುಂದಣ ಖಚಿತ ರನ್ನ ಸುವರ್ಣ ಮಿನುಗ ವೇದಾಭರಣದಿ ಮುನಿಜನ ಹೆಚ್ಚಿಸಿ
ಕುಂದಿಲ್ಲದ ಸಕಲರಸು ಅಯೋಧ್ಯೆಯ ಸಿಂಹಾಸನವ ವರ್ಧಿಸಿ
ಕಣ್ಣು ಸಹಸ್ರ ಕಾಣಲು ಸಾಲದೆನ್ನುವಂತೆ ಪಟ್ಟಾಭಿ ಸೀತಾರಾಮರು ಶೋಭಿಸಿ
ಕ್ಷಣ ಬಿಡದೇ ಲಕ್ಷ್ಮಣ ಭರತ ಶತೃಘ್ನರು ನಿರತ ಸತಿಯರ ಕೂಡೆ ಸೇವಿಸಿ
ಕಣ್ಣೊಳು ಆನಂದಭಾಷ್ಪದಿ ಕೌಸಲ್ಯ ಸುಮಿತ್ರ ಕೈಕೇಯಿ ಮಾತೆಯರು ಮೋದಿಸಿ
ಕರ ಮುಗಿದು ಕೂತ ವೀರ ಪರಮಾತ್ಮೀಯ ಮಾರುತನ ಬಳಿಗೆ ಕರೆಸಿ
ಕುಂದದ ಹರಿ ಸಿರಿ ಮುತ್ತಿನಸರಮಾಲೆಯ ರಾಮನ ಸೀತೆ ತಾ ಕರುಣಿಸಿ
ಕರ್ಪೂರದ ಆರತಿಯ ಬೆಳಗುವ ಭಕುತಜನರ ರಾಮರಾಜ್ಯದಿ ಮೆರೆಸಿ
ಕೃಪಾಳು ಸತ್ಯಧರ್ಮರಥನೆಂದು ನಿರತ ರಾಘವರಾಮನೆನಿಸಿ
ಕೇಳಿ ಅಗಸನ ಮಾತ ಸೀತೆಗಿಲ್ಲ ದೋಷವೆಂದು ಮನದಿ ಮಂಥಿಸಿ
ಕಾಡಿಗೆ ಜಾನಕಿಯ ಪೋಗೆನುತಲಿ ಕಳುಹಿಸಿ ಬಿಡದೇ ವಿರಾಮ ವಿರಹಿಸಿ
ಕೂಡಿರಿಸಿ ಅವಳ ಸಜ್ಜನರ ವಾಲ್ಮೀಕಿ ಮುನಿಗಳ ನಡುವೆ ಸನ್ಮಾನದಿ ಸಂರಕ್ಷಿಸಿ
ಕಲುಷ ಕಳೆವ ನಾರದರು ವ್ಯಾಸ ವಾಲ್ಮೀಕಿ ರಾಮಾಯಣವ ಬೋಧಿಸಿ
ಕಿರಣೋಜ್ವಲದ್ವಯರ ರಘುಕುಲಕೆ ಲವ ಕುಶರು ಸೀತಾಂಗನೆಗೆ ಜನಿಸಿ
ಕರುಣಾಳು ಜಗಜ್ಜನನಿ ಸೀತಾಮಾತೆ ಮಿಗಮಮತೆಯಲ್ಲವರ ಪೋಷಿಸಿ
ಕುಮಾರರು ಗುರುಕುಲದಿ ವೇದಾದಿ ಶಾಸ್ತ್ರ ಶಾಸ್ತ್ರಾರ್ಥಗಳ ಶ್ರವಣಿಸಿ
ಕಲಿತು ಮುದ್ದು ಗಿಳಿಗಳಂತೆ ಹರಿಮಧುರ ನಿರ್ಮಲ ಕಥೆಗಳ ತುತಿಸಿ
ಕಾಡು ವನದಲಿ ನಲಿನಲಿದು ಬೆಳೆದು ಪ್ರಾಣಿಗಳೊಡನೆ ಶೌರ್ಯದಿ ಆಟವಾಡಿಸಿ
ಕ್ಷತ್ರೀಯ ಅಸ್ತ್ರ ಶಸ್ತ್ರ ಶಿಕ್ಷಣ ರಾಜನೀತಿಯ ಧರ್ಮವ ಬೋಧಿಸಿ
ಕರುಣೆಯ ಪಾಠಗಳ ಹೃದಯದಲಿರುವಂತೆ ಅರುಣಾಭರಣರಿಗೆ ಕಲಿಸಿ
ಕಾಂತೆ ಮೆರೆದಳು ವೀರ ಸೀತೆ ರಾಮರಾಜ್ಯಕೆ ತಕ್ಕರಾಜಕುಮಾರರ ಬೆಳೆಸಿ
ಕರೆದು ಪೋಗೆ ಅಯೋಧ್ಯಾ ಪುರಕೆ ವಾಲ್ಮೀಕಿ ರಾಮರಾಜ್ಯ ತೋರಿಸಬೇಕೆಂದೆನಿಸಿ
ಕುಣಿಕುಣಿದು ಪಾಡಿದರು ಭಕ್ತಿಯಲಿ ಬೀದಿ ಬೀದಿಯಲಿ ಬಾಲಕರು ರಾರಾಜಿಸಿ
ಕಥನ ತಂದೆತಾಯಿಯದು ಅವರು ಅತಿ ಪ್ರೇಮದಿಂದಲಿ ಸ್ತುತಿಸಿ
ಕೇಳಿದವಗಿನ್ನೂ ಕೇಳಬೇಕೆನಿಸುವಂತೆ ಸಮೂಹಗಳ ಆಕರ್ಷಿಸಿ
ಕೊರಳಿಂದ ಕಿವಿಗಲ್ಲ ಭಕ್ತಿಪ್ರೋಕ್ತ ಹೃದಯಗಳನ್ನೇ ಸೆಳೆಸೆಳೆದು ಬೆಸೆಬೆಸೆಸಿ
ಕೇಳೇ ಅಘ ಜರಿದು ಕುಸಿಕಸೆವ ಮಿಗು ಆನಂದವೀವ ಸಿಹಿ ಸವಿಸಿ
ಕಾವ್ಯ ರಾಮಾಯಣ ರಮ್ಯ ರಸವನ್ನು ಅಯೋಧ್ಯೆಗೇ ಉಣಿಸಿ
ಕಂಚಿನ ಕಂಠದವರಿವರು ರವಿತೇಜ ಶ್ರೀಕಾಂತದತ್ತವೆಂದೆನಿಸಿ
ಕಮಲಕಣ್ಣ ರಾಮನಂತಿಹರು ಯಾರಿವರು ಯಾರೆಂದೆಲ್ಲರೂ ಊಹಿಸಿ
ಕುಧರ್ಮಿಗಳ ಗೆಲಿದು ರಾಘವ ಧರ್ಮ ಸಾರಲು ಸರ್ವ ಸತ್ಯ ಸ್ವರಾಟ್ ಆಧಿಪತ್ಯ ಸಾಧಿಸಿ
ಕುದುರೆಯ ಹೊರಬಿಟ್ಟು ಅಯೋಧ್ಯಾ ರಾಜ್ಯದಿ ಘನ ಅಶ್ವಮೇಧ ಯಜ್ಞವ ಮಾಡಿಸಿ
ಕುಣಿಕುಣಿದು ಬಂದ ಹಯವ ಕಟ್ಟಿ ಸೀತಾಸುತರು ನಕ್ಕರು ಅದನ್ನುವಿನೋದಿಸಿ
ಕೇಳದೇ ಮಾತು ಹಠಕ್ಕೆ ಬಿದ್ದಿಹರು ಹಸುಳೆ ಬಾಲರೆಂದು ಭಟರು ಅನುರೋಧಿಸಿ
ಕಟ್ಟು ಬಿಚ್ಚಿ ರಾಜಾಶ್ವ ಬಿಡುವುದೆಂದು ರಾಜಾ ರಾಮನೇ ಬಂದು ಹಿತ ಬೋಧಿಸಿ
ಕಲಹತಾನೇ ರಣವಾಡುವೆವೆಂದು ನಿಂದರು ಬಿಲ್ಲು ಬಾಣಕ್ಕಿಬ್ಬರು ಜೋಡಿಸಿ
ಕಾಣೀ ಶೂರರ ರಘುವೀರ ಸೂರ್ಯವಂಶಿ ಅನುಮೋದಿಸಿ
ಕುವರಪ್ರತಾಪ ಕಂಡು ರಾಮಚಂದ್ರನೇ ಸಂತೋಷದಿ ಆಶ್ಚರ್ಯಿಸಿ
ಕಾದು ಕೂತಿಹೆನು ಈ ಆಡುವ ಬಾಲಕರೆಲ್ಲೆನುತ ಮಾತೆಯು ಮಮತೆಯಲಿ ಚಿಂತಿಸಿ
ಕಾನನದಿ ರಾಮಲಕ್ಷ್ಮಣರಂತೆ ವೀರರೆಲ್ಲಿಹರೋ ವಿಹರಿಸಿ
ಕಾಡೊಳಾಡಿ ಪೋದರೋ ಮೃದುಪಾದವೆಲ್ಲಿ ಬೆಳೆಸಿ
ಕಾನನ ಕೂಗಿ ಪೇಳುತಿದೆ ತಂಗಾಳಿಯೂ ಆನಂದದಿ ಏಕರೀತಿಯಲಿ ಬೀಸಿ
ಕೋಗಿಲೆ ರಾಮಗಿಣಿ ಪಕ್ಷಿ ಮಧುರಪಾಡುತಿದೆ ಸುರಗಾಯನವಾ ನೆನಪಿಸಿ
ಕಿನ್ನರಗಾನಕೆ ಜಿಂಕೆ ಮೊಲ ಆಡಿವೆ ಪೂಲತೆಗಳು ಹೆಮ್ಮರಗಳ ಬಳಸಿ
ಕುಸುಮಗಳು ಅರಳಿ ಚೆಲ್ಲುತಲಿವೆ ಅಪರ ಸುಗಂಧ ಬೀರಿ ಬೆರೆಬೆರೆಸಿ
ಕುಣಿನಲಿ ನಲಿದು ನವಿಲು ನಾಟ್ಯವಾಡಿದೆ ಮನದಾ ಜೋಕಾಲೆ ತೂಗಿಸಿ
ಕೂಡಿ ಕಾನನಮೇಘ ಶ್ಯಾಮವಾಗಿದೆ ಎನ್ನರಸನ ಕಾಯವ ಹೋಲಿಸಿ
ಕೊಟ್ಟುವುದು ಹನಿ ಹನಿ ಇನ್ನೇನು ಹೃದಯನಾಥನ ನೆನೆ ನೆನೆಸಿ
ಕಳವಳದಂತಿದೆ ಯಾಕೋ ಹೃದಯದಾ ತಳಮಳವಿಂದು ಕಸಿ
ಕೊರಳು ಕೇಳಿದಂತಾಯಿತು ಕರೆದಂತಾಯಿತು ಸೆಳೆದೆನ್ನ ಕೂಗಿದಂತೆ ಕೇಳಿಸಿ
ಕಲಹ ಎಂದುಕೊಂಡಿಹರು ಬಿಡದ ಪ್ರೀತಿ ಅರಿಯದವರು ವಿಪರೀತ ಆರ್ಥಿಸಿ
ಕಡುಬಿಡದೇ ಕಾಯ್ವ ಎನ್ನದೇವ ಅಹೇಯ ಸ್ವಾಮಿಯ ಸ್ಮರಿಸಿ
ಕ್ಷಣಕ್ಷಣ ಬಿಡದೇ ಆರಾಧಿಪೇ ಹೃದಿವ ನಂದಾದೀಪವಾ ಉರಿಸಿ
ಕಪಟವರಿಯದೆ ಮಾಯಾ ಜಿಂಕೆಯನೆ ತಾರೆಂದ ಹಠ ತಪ್ಪ ಕ್ಷಮಿಸಿ
ಕಳುಹಾದ ಸತಿಗಾಗಿ ಬಿಡದೇ ಘೋರ ಅಪಾರ ಖಂಡವ ಸಂಚರಿಸಿ
ಕಾನನದಿ ಕಳುಹಾಗಿ ಕಳುಹಿಹ ಹೆಣ್ಣ ಹುಡುಕುವರೇ ಹುಡುಕಿ ಅವಳ ಗಳಿಸಿ
ಕಡಲಸೀಳಿ ಪ್ರೇಮದಿ ಸತಿಗೆ ಸಾಗರ ಸೇತುವೆಯನೇ ನಿರ್ಮಿಸಿ
ಕೇಳು ಚರಿತ್ರೆಯೋಳು ಮತ್ತಾರು ನಿಂದಾರು ಈ ಪರಿಯಲಿ ವೀರರು ಕಟ್ಟಿಸಿ
ಕಳ್ಳ ಅಸುರರ ಸೀಳಿ ಘನಮಂಗಳ ಬಂದನವ ಪೆಣ್ಣಗರ್ವ ಸೂತ್ರಗೆಲಿಸಿ
ಕರುಣಾಳು ಸೇರಿ ಸಲಹಿದನೆನ್ನ ತಾರಕ ಅಮರ ರಮಣ ರಾಘವ ರಾಮ ಎನ್ನ ಒಲಿಸಿ
ಕೋಟಿ ಕೋಟಿ ದೇವತೆಗಳಲ್ಲಿ ಸಾಟಿ ಇಲ್ಲದವನೆಂದೆನಿಸಿ
ಕಮಲಜಗೆ ಒರ್ವನವನು ಬ್ರಹ್ಮಸೂತ್ರವಾ ಒರೆಸಿ
ಸರ್ವ ವೇದ್ಯ ಪೂರ್ಣನು ಬ್ರಹ್ಮಾಂಡಜಗೆ ಅರುಹಿಸಿ
ಕರ್ತೃ ಸಕಲಕಾರ್ಯಕೆ ಸ್ವಾಮಿ ಸರ್ವಾಂತರ್ಯಾಮಿ ನಿರ್ದೋಷನ ಸ್ತುತಿಸಿ
ಕಂಡರಿಯುತಿಹರು ಸಂತಹೃದಯರು ಅಗಣಿತ ಸದ್ಗುಣಗಣನಾಮ ಸಂತಸದಿ ಎಣಿಸಿ ಎಣಿಸಿ
ಕ್ರೂರ ಮಾತನು ಕೇಳಿ ಘಾಸಿಯಾಗುವುದು ಮನವೆಂದು ಕಾಯಲೆನ್ನ ಕಾನನಕೆ ಕಳುಹಿಸಿ
ಕಣ್ಣು ತೆರೆದವರು ಹರಿಯ ಉನ್ನತ ಭಕುತರ ಅರಿತು ತಾನೇ ಆರಿಸಿ
ಕಂಡವರಾ ಮನೆಯೊಳು ಸಿರಿ ಪೋಗಿ ನೀ ನೆಲೆಸುವುದೆಂದೇ ಕಂಡು ಪೇಳಿದನು ಆಜ್ಞಾಪಿಸಿ
ಕಾಮಿತಗಳ ಕೊಡುವ ಸ್ವಾಮಿ ಸೀತಾರಮಣ ಇನ್ನೆಂತೆಂತು ಪೇಳಲಿ ನಿನ್ನ ಗುಣಗಣ ಬಣ್ಣಿಸಿ
ಕೇಳದೆ ಮೊರೆ ದೂರವಿದ್ದಂತೆ ಹತ್ತಿರವಿರುವೆ ದೊರೆ ಕಾಣಬಾರೆಯಾ ಎನ್ನ ಪಿಸುಗುಟ್ಟ ಕರೆಮನ್ನಿಸಿ
ಕಾಂತ ಬಂದಿಹನೆಂದು ಅಭಿನ್ನ ಮನದೊಳರುಹಿ ರಾಮಸತಿ ಪುಳಕಿತಳಾದಳು ಮಿಗು ಸಂತೈಸಿ
ಕಂಬನಿಯೊಳು ಓಡಿದಳು ಹೃದಯಬಡೆತ ಸೆಳೆಗೆ ಸೀತೆ ರಾಮ ಪಾದವನರೆಸಿ
ಕಂಡ ರಾಮ ಸೀತೆಯ ಸುತರ ಬೆರಗಾಗಿ ನಿಂದ ನಿಂದಲ್ಲಿ ಆಶ್ಚರ್ಯಿಸಿ
ಕೈಜೋಡಿಸಿ ಪಾದಕೆ ಪೋಗೆರಗಿ ಘನಪಿತಗೆ ನಮಿಪುದೆಂದಳು ಸೀತಾಮಾತೆ ಆದೇಶಿಸಿ
ಕಮಲ ಪಾದನ ಕಂಡು ಕೋಮಲೆಯು ಕಣ್ಣ ಮುತ್ತಿನೊಡನೇ ಅರ್ಚಿಸಿ
ಕೆಂಗಮಲ ನಯನನ ಕಠೋರ ಕಾಯನ ಕುಸುಮ ಹೃದಯದಿ ಸ್ಪರ್ಶಿಸಿ
ಕರೆದು ಕುವರರ ಸಜಲ ನಯನರು ವಿಶಾಲಬಾಹು ಬಂಧನದಿ ಆಲಿಂಗಿಸಿ
ಕೊಂಡುಪೋಗುವುದು ಪುರಕೆ ನಿಮ್ಮನು ಎಂದು ಪೇಳಿದ ರಾಮ ಆನಂದಿಸಿ
ಕಳೆಯಬೇಕೀ ಬದುಕು ಸೀತೆ ನಿನ್ನೊಡನೆ ನಾ ಬಾಳ ವಿನೋದಿಸಿ
ಕೂಡಿ ಇನ್ನು ಇರಲಿಬೇಕು ಕುವರರ ನೋಡಿ ಆಟಗಳ ಆಡಿಸಿ
ಕತ್ತಲೆ ದಿನಗಳು ಪೋದವೆಂದುಕೊಂಡು ಬೆಳದಿಂಗಳಾ ಮಧುಮೋದಿಸಿ
ಕಡೆದು ಪೋಗಲಿ ಹೀನ ವಿಷಯಗಳು ಏನು ಫಲವು ದುರಿತಗಳ ವಿಚಾರಿಸಿ
ಕಷ್ಟವೇ ಸತಿ ನೀನಿಲ್ಲದೆ ಹೇಗಿರುವೆ ನಾನಿಲ್ಲದೇ ನೀನೇ ಕಲ್ಪಿಸಿ
ಕೊಂಡೊಯ್ಯಬೇಕು ನಿನ್ನ ಪ್ರೀತಿಹಿತ ಮಾತು ಆಡುತಲೇ ಇರೋಣವೆನ್ನಿಸಿ
ಕೋದಂಡವ ತೊರೆದ ಸೇತುರಾಮ ಬಂದಿಹೆನು ಬಾ ಸೀತಾ ಎನ್ನ ಏಕೈಕ ಪ್ರೇಯಸಿ
ಕರೆದರೆ ಬರಲಿಲ್ಲವೆಂದು ಕೋಪಿಸಬಾರದು ಚಿನ್ನ ನಿನ್ನರಿವೆ ನಾನೇ ನರಸಿಂಹನರಸಿ
ಕರವ ಪಿಡಿದಿನ್ನು ಕಾಯಬೇಕು ಕುವರರನ್ನು ಅಭಯ ಕರದಿ ಹರೆಸಿ
ಕಾಯ್ದು ಕಟ್ಟುವರು ರಾಮರಾಜ್ಯವ ರಾಘವ ಪಾದೆಯೊಳು ನಡೆದು ಬೆಳೆಸಿ
ಕಾದು ನೋಡಿದೆನಯ್ಯಾ ಇಲ್ಲಿ ಸುಖ ಬಂದು ಪೋಪ್ಪುದು ದುಃಖ ಮಿಶ್ರಜಗವೆನಿಸಿ
ಕೊನೆಯಿಲ್ಲ ಸಂತಸ ಬೇಸರ ಸಂಸಾರಾಬ್ಧಿಯೊಳಲೆ ಏಳಿಸಿ ಬೀಳಿಸಿ
ಕರೆದೊಯ್ಯುವ ರಾಮಚರಣ ದೋಣಿಯ ಸ್ಥಿರನಂಬಿದೆ ಭವದಿ ಆರಿಸಿ
ಕಾಯಬೇಕು ಸಕಲವ ಕಾವ ಧಣಿಯೇ ಸಲಹಬೇಕು ಭವಸಾಗರ ದಾಟಿಸಿ
ಕೊನೆಗಾಣಿಸಿನ್ನು ತಾಳಲಾರೆ ಮನೆಗೆ ಪೊಪ್ಪೆನಾ ತಾರಕರಾಮ ಈ ಭ್ರಮೆವಿರಹವ ತ್ಯಜಿಸಿ
ಕೃತಿ ನಿನ್ನ ಮಾಯೆ ಸೃಷ್ಟಿಯೊಳು ಹೆಣೆ-ಹೆಣೆದಿಹೆನು ಸಿರಿಹರಿ ಹರುಷಿಸಿ
ಕೊಂಡೊಯ್ಯಮ್ಮಾ ಅವನಿ ತಾಯಿ ನಿನ್ನ ಮಮತೆಯ ತೆರೆದ ಮಡಿಲಲ್ಲಿ ಎನ್ನನಿರಿಸಿ
ಕಾಪಾಡುವ ಸೀತಾರಾಮ ಮರಳಿ ಬರುವ ಭುವಿಗೆ ರುಗ್ಮಿಣೀಶವಿಠ್ಠಲನೆನಿಸಿ
ಕಾಯುವವ ಯುಗ ಯುಗದಿ ಧರ್ಮವ ಭೂಮಿಯಲವತರಿಸಿ
ಕೆಡವಿ ಧರಣಿಯಲಿ ದುರುಳರ ಪಾಪಹೊರೆಯ ಭಾರವನ್ನಿಳಿಸಿ
ಕಂಪಿಸಿ ನೆಲಬಿರಿಯೇ ಭುವಿಜೆ ಪಾದಾರ್ಪಣೆ ಮಾಡಿದಳು ವೈಕುಂಠದರಸಿ
ಕರಕಮಲೆ ನಾರಾಯಣನ ಕಮಲಪಾದ ಸೇವೆಯ ನಿರತ ಹರಿಸಾರೂಪ್ಯವ ಬಯಸಿ
ಕುಶಲದಿ ಲವ ಕುಶರಾಳಿದರು ಧರ್ಮ ಸತ್ಯದಿ ನಿತ್ಯ ವರ್ತಿಸಿ
ಕುಲದೀಪರು ವೃದ್ಧಿಸಿದರು ದೀರ್ಘ ರಾಮರಾಜ್ಯವ ಮನುಹಿತ ಉನ್ನತಿಸಿ
ಕೂತುಕೇಳುವ ರಾಮಕಥೆ ಹನುಮನು ಕಾಯ್ದು ನಿಲ್ಲಿಸುವ ಮಲಗಿದ್ದ ಕೆಲಸಗಳ ಗೆಲ್ಲಿಸಿ
ಕೆಟ್ಟ ದುರಿತ ಸುಟ್ಟು ಸಂಶಯವಿಲ್ಲದೇ ಬಲವಿತ್ತು ಸಲಹುವ ಜೀವೋತ್ತಮ ಪಾಲಿಸಿ
ಕ - ಕತ್ತಲ ಕಷ್ಟ ಕಲಹದಿ ಕೂಡಿಹುದ ಕಡಿದು ಕರುಣದಿ ಕಿರಣ ಕಾಣಿಸಿ
ಕೊಡಬೇಕು ಸ - ಸಾಧನೆ ಸುಖ ಸಿರಿ ರಾಮಪಾದಾಂಬುಜ ಸಂಪದ ಸಂತತ ಸೂಸಿ
ಕುಸಿಕಸಿದು ಜ್ಞಾನಕಿಸೆತುಂಬಿಸುವ ಕಾಸಾ ನರಕೇಸರಿಯ ಆಶ್ರಯಿಸಿ
ಕಾಮಿತಾರ್ಥ ಕೊಡವ ಕಲಹಶಾಂತಿಪ ಶ್ರೀ ರಾಮಾಯಣವ ನಮಿಸಿ ಮನ್ನಿಸಿ
ಕೈಯಲಿ ಪಿಡಿದು ಕೈಪಿಡಿಯೆಂದು ಪಾರಾಯಣ ನಿತ್ಯ ಸಾಧನೆಯಾಗಿ ಪಠಿಸಿ
ಕೂಡುತ ನಿಲ್ಲುತ ಓಡುತ ಮಲಗುತ ಮರುಗುತ ಸಂತಸದಿ ರಾಮ ಸಾಸಿರನಾಮವ ಜಪಿಸಿ
ಕೋಟಿಕೋಟಿ ಉಸಿರ ಕೊಟ್ಟವಗೆ ಕೋಟಿ ಶ್ರೀರಾಮ ಹಂಸಜಪದ ಭಕ್ತಿಸೇತುವೆ ಅರ್ಪಿಸಿ
ಕಣಕಣದೊಳು ಇರ್ಪನ ಕ್ಷಣಕ್ಷಣಬಿಡದೇ ಅಕ್ಷರಾಕ್ಷರ ಪೇಳ್ವನ ಅರಿತು ದೇವನ ಉತ್ತಮತ್ವ ಸಾಧಿಸಿ
ಕ್ಷೀರಾದಿ ಪಂಚಾಮೃತ ಸರಯೂ ಜಲಮಂಜನ ಪರಮ ಪವಿತ್ರ ಮೂರುತಿಗೆ ನಡೆಸಿ
ಕೇಸರಿ ಕಸ್ತೂರಿ ಸುಗಂಧ ಲೇಪಿಸಿ ಸುರಪಾರಿಜಾತ ಪುಷ್ಪಾದಿ ಆಭರಣ ಪೀತಾಂಬರದಿ ಅಲಂಕರಿಸಿ
ಕಲ್ಪವೃಕ್ಷಾದಿ ಫಲ ಪಾಯಸಾದಿ ಸಕಲಪಾಕ ವೇದಪರಮಾನ್ನ ಸರ್ವಭುಜನಿಗೆ ನಿವೇದಿಸಿ
ಕರದಿ ಧೂಪ ರಮ್ಯಶ್ರುತಿಅನಂತದೀಪಾರತಿ ಶ್ರೀರಮಣ ಆನಂದಮಯಗೆ ಬೆಳಗಿಸಿ
ಕರತಟ್ಟಿ ಶ್ರೀರಾಮ ಜಯರಾಮ ಜಯಜಯರಾಮ ಪುನರಾವರ್ತಿಸಿ ಜಯಜಯಿಸಿ
ಕರುಣಾಪೂರ್ಣ ವರಪ್ರದ ಚರಿತನ ಪಾಡುತ ಭಕ್ತಿಯಲಿ ಬೆಳೆ ಬೆಳೆದು ಗ್ರಹಿಸಿ
ಕುರುಮುಖ್ಯಪ್ರಾಣ ಹೃದಿವಸಂಪುಟಿ ಶ್ರೀಕೃಷ್ಣ ರಾಮಾಭಿನ್ನಗೆ ತುಳಸಿಯೊಡೆ ಸುಮನಸ ಆರಾಧನೆ ಸಮರ್ಪಿಸಿ
ಕೈವಲ್ಯಾನಂದ ಪದುಮಾಲಯ ರುಗ್ಮಿಣೀಶವಿಠ್ಠಲ ಲೀಲೆ ಆಲಿಸಿ ಒಲುಮೆಯಲಿ ಸೀತಾರಾಮರ ಹೃದ್ಕಮಲದಿ ಲಾಲಿಸಿ ಶೋಭಾನೆ
ಶ್ರೀರಾಮ ರಕ್ಷ
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
-ಶ್ರೀಮತಿ ರಮ್ಯಾ ಶ್ರೀನಾಥ ಕೊಪ್ಪ
ಮ್ಯಾನೇಜಿಂಗ್ ಡೈರೆಕ್ಟರ್ - ಪ್ರಭಾವ್
#22 ಏನ್ ಎಚ್ ಸೀ ಎಸ ಲೇಔಟ್, ಬಸವೇಶ್ವರ ನಗರ, ಬೆಂಗಳೂರು -560079
email-rsk@prabhav-impact.com , ramya.srinath@gmail.com
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ