- ವಿ. ಸಗ್ರಿ ರಾಘವೇಂದ್ರ ಉಪಾಧ್ಯಾಯ
ವಿಷ್ಣುಸಹಸ್ರನಾಮದಲ್ಲಿ ಬಂದಿರುವ ರಾಮನಾಮದ ಮತ್ತು ರಾಮನಿಗೆ ಸಂಬಂಧಪಟ್ಟಂತೆ ಇರುವ ಇತರ ನಾಮಗಳ ವಿಶ್ಲೇಷಣೆಯನ್ನು ಇಲ್ಲಿ ಸಂಗ್ರಹಿಸಲಾಗಿದೆ. ರಾಮನಾಮದ ಅರ್ಥವೈಭವ ಮತ್ತು ಮಹಿಮೆಗಳನ್ನು ನಾವು ತಿಳಿದುಕೊಳ್ಳುತ್ತ ಅದನ್ನು ಅಳವಡಿಸಿಕೊಂಡು ಗುಣಭರಿತರಾಗಿ ಸಜ್ಜನರಾಗೋಣ. ರಾಮನ ಕೃಪೆಗೆ ಪಾತ್ರರಾಗೋಣ.
1. ರಾಮ: ಉತ್ತಮ ಸುಖವನ್ನೂ, ಉತ್ತಮ ತಿಳುವಳಿಕೆಯನ್ನೂ ಹೊಂದಿರುವವನು.
ವಿವರಣೆ : ರ + ಆ + ಮ - ರಾಮ. ಮೊದಲು ರ ಇದೆ. ಕೊನೆಗೆ ಮ ಇದೆ. ಮಧ್ಯದಲ್ಲಿ ಆ ಇದೆ. ರ ಎನ್ನುವುದಕ್ಕೆ ರತಿ, ರಮಣ, ಸುಖ ಎಂಬ ಅರ್ಥ, ಮ ಎಂಬುದಕ್ಕೆ ತಿಳಿವಳಿಕೆ ಎಂಬ ಅರ್ಥ. "ಆ" ಕಾರವನ್ನು ಈಚೆಗೂ ಆಚೆಗೂ ಅನ್ವಯಿಸಿಕೊಳ್ಳಬೇಕು. ಹೊಸ್ತಿಲಲ್ಲಿ ಇಟ್ಟ ದೀಪ ಹೇಗೆ ಹೊರಗೂ ಒಳಗೂ ಬೆಳಕು ಚೆಲ್ಲುವುದೋ ಹಾಗೆ. ಮಧ್ಯದಲ್ಲಿರುವ ಆಕಾರ ಮೊದಲಿನ ರ ಕಾರಕ್ಕೂ, ಕೊನೆಯ ಮ ಕಾರಕ್ಕೂ ಸೇರುವುದು. ಆ ಎಂದರೆ ಒಳ್ಳೆಯ ರ - ಸುಖ ಹಾಗೂ ಮ ತಿಳುವಳಿಕೆ ಉಳ್ಳವನೇ ರಾಮ. ಕೃಷ್ಣನಾಮದ ಉಚ್ಚಾರಣೆಯಾದರೂ ಸ್ವಲ್ಪ ಕಠಿಣ. ಆದರೆ ರಾಮ ನಾಮದ ಉಚ್ಚಾರಣೆಯೂ ಬಹು ಸುಲಭ. ಈ ನಾಮದ ಉಚ್ಚಾರಣೆ ನಡೆಸುತ್ತ ಇರುವಾಗ ಈ ಅರ್ಥದ ಅನುಸಂಧಾನ ಜೊತೆಗೇ ಇರಬೇಕು. ಅರ್ಥವಾಗದೆಯೇ ನಾಮವನ್ನು ಉಚ್ಚಾರಣೆ ಮಾಡಿದರೂ ಫಲ ಇಲ್ಲದಿಲ್ಲ. ಆದರೆ ಅರ್ಥಾನುಸಂಧಾನ ಮಾಡಿಕೊಂಡು ನಾಮದ ಉಚ್ಚಾರಣೆ ನಡೆಸಿದಾಗ ಎಷ್ಟು ಫಲವೋ ಅಷ್ಟು ಫಲ ದೊರಕುವುದಿಲ್ಲ. ರ - ಆ - ಮ ಉತ್ತಮವಾದ ಸುಖ. ಉತ್ತಮವಾದ ತಿಳುವಳಿಕೆ ಉಳ್ಳವನೇ ರಾಮ ನಮ್ಮಲ್ಲಿ ಸುಖವೂ ಇದೆ, ತಿಳುವಳಿಕೆಯೂ ಇದೆ. ಆದರೆ ಸುಖದ ಜೊತೆಗೆ ದುಃಖವೂ ಸೇರಿಕೊಂಡಿದೆ. ಆದುದರಿಂದ ಅದು ಉತ್ತಮ ಸುಖ ಅಲ್ಲ. ನಮ್ಮ ತಿಳುವಳಿಕೆಯ ಜೊತೆಗೆ ಅಜ್ಞಾನವೂ ಸೇರಿಕೊಂಡಿದೆ. ಆದುದರಿಂದ ನಮ್ಮಲ್ಲಿ ಉತ್ತಮ ತಿಳಿವಳಿಕೆ ಇಲ್ಲ. ತಿಳಿಯಾದ ತಿಳುವಳಿಕೆ, ಅಜ್ಞಾನರಹಿತವಾದ ಜ್ಞಾನ, ದುಃಖರಹಿತವಾದ ಸುಖ ಯಾರಲ್ಲಿ ಇದೆಯೋ ಅವನು ರಾಮ, ಯಾರು ರಾಮನೋ ಅವನಲ್ಲಿ ಉತ್ತಮವಾದ ಸುಖ, ಉತ್ತಮವಾದ ತಿಳುವಳಿಕೆ ಇದೆ. "ರಾಮ ರಾಮ ರಾಮ ಎನ್ನಿರೋ"- ಎಂದು ಮೂರು ಬಾರಿ ರಾಮನಾಮವನ್ನು ಪಠಿಸಿದರೆ ಮುಖದಲ್ಲಿ ಆನಂದದ ಲಕ್ಷಣ ಕಾಣಿಸಿಕೊಳ್ಳುವುದು.
2. ವಿರಾಮ: - ಸಂಸಾರ ಪಯಣದಿಂದ ಸೋತವರಿಗೆ ವಿಶ್ರಾಂತಿಯನ್ನುಂಟು ಮಾಡುವವನು.
ವಿವರಣೆ : ಹಿಂದಿನ ನಾಮದಲ್ಲಿ ತಿಳಿಸಿದಂತೆ ಭಗವಂತನನ್ನು ರಾಮ ಎಂದು ಉಪಾಸನೆ ನಡೆಸಿದರೆ ಏನು ಫಲ ದೊರಕುವುದೆಂದು ಮುಂದಿನ ನಾಮ ತಿಳಿಸುತ್ತದೆ "ವಿರಾಮ" - ಜೀವನದಲ್ಲಿ ಒಬ್ಬ ತಾಯಿಯ ಗರ್ಭದಿಂದ ಮತ್ತೊಬ್ಬ ತಾಯಿಯ ಗರ್ಭಕ್ಕೆ ಪ್ರಯಾಣ ನಡೆಸುತ್ತ ಇರುವೆವು. ಈ ಪ್ರಯಾಣ ಎಲ್ಲಿಂದ ಪ್ರಾರಂಭ? ಗೊತ್ತಿಲ್ಲ. ಎಲ್ಲಿ ಕೊನೆಗೊಳ್ಳುವುದು ? ಅದೂ ಗೊತ್ತಿಲ್ಲ. ಹಾಗಾದರೆ ಈ ಪ್ರಯಾಣದಿಂದ ವಿರಾಮ ಬೇಡವೇ ? ವಿಶ್ರಾಂತಿ ಬೇಡವೇ ? ಈ ದೀರ್ಘ ಪ್ರಯಾಣದಿಂದ "ವಿರಾಮ" ಬೇಕೆಂದರೆ ಭಗವಂತನನ್ನು "ರಾಮ" ಎಂದು ಉಪಾಸನೆ ಮಾಡಬೇಕು. ಹುಟ್ಟುವುದು, ಸಾಯುವುದು ಎಂಬ ಕೆಲಸದಲ್ಲಿ ನಿರತರಾದ ನಮಗೆ ವಿಶ್ರಾಂತಿ, ವಿರಾಮ ಎಂದರೆ ಮೋಕ್ಷವನ್ನು ಪಡೆಯುವುದು, ಹುಟ್ಟು ಸಾವು ಇಲ್ಲದ ಸ್ಥಳವನ್ನು ಪಡೆಯುವುದು. ಇದಕ್ಕೆ ರಾಮ ಬೇಕು. ಆ ದೃಷ್ಟಿಯಿಂದ ರಾಮನಿಂದಾಗಿ ನಮಗೆ ಜೀವನದಲ್ಲಿ ವಿರಾಮ. ಯಾರಿಂದಾಗಿ ನಮಗೆ ಜೀವನದಲ್ಲಿ ವಿರಾಮ ದೊರಕುವುದೋ ಅವನನ್ನೇ ವಿರಾಮ ಶಬ್ದದಿಂದ ಕರೆಯುವೆವು. ನಮ್ಮ ವಿಶ್ರಾಂತಿಗೆ ಕಾರಣವಾಗಿರುವುದರಿಂದ "ವಿಶ್ರಾಂತಿಗೃಹ" ಎನಿಸುವಂತೆ ನಮ್ಮ "ವಿರಾಮ"ಕ್ಕೆ ಕಾರಣವಾಗಿರುವುದರಿಂದ ಅವನು "ವಿರಾಮ". ದೇವರನ್ನು "ರಾಮ" ಎಂದು ಉಪಾಸನೆ ಮಾಡಿದವೆಂದರೆ ನಮಗೆ ಒಳ್ಳೆಯ ತಿಳುವಳಿಕೆ, ಒಳ್ಳೆಯ ಸುಖ ದೊರಕಿದರೆ, "ವಿರಾಮ" ಎಂದು ಉಪಾಸನೆ ಮಾಡಿದರೆ ನಮ್ಮ ಸಂಸಾರ ಪಯಣದಿಂದ ವಿಶ್ರಾಂತಿ ದೊರಕುವುದು.
3. ವಿರಜ: ಯಾವುದೇ ಕಲ್ಮಶ ಇಲ್ಲದವನು.
ವಿವರಣೆ : ರಾಮ ಎಂದು ಉಪಾಸನೆ ಮಾಡಿದಾಗ ನಮಗೆ ನೆಮ್ಮದಿ, ಶುದ್ಧ ತಿಳುವಳಿಕೆ ಉಂಟಾದದ್ದಾದರೂ ಯಾಕೆ? "ವಿರಾಮ"ಎಂದು ಉಪಾಸನೆ ಮಾಡಿದ್ದರಿಂದ ನಮಗೆ ವಿಶ್ರಾಂತಿ ದೊರತದ್ದಾದರೂ ಯಾಕೆ? ಅವನು "ವಿರದಃ" ವಿಗತರಜಸ್ ರಾಮನಲ್ಲಿ ರಜೋಗುಣ ಇಲ್ಲ. ರಾಮನಿಂದ ಸಿಗುವ ವಿಶ್ರಾಂತಿಯಲ್ಲೂ ರಜೋಗುಣ ಇಲ್ಲ. ಅಂತಹ ವಿಶ್ರಾಂತಿಯನ್ನು ಪಡೆಯಲು ಬೇಕಾದ ಮಾರ್ಗದಲ್ಲೂ ರಜೋಗುಣ ಇಲ್ಲ. ಬರೇ ರಜೋಗುಣ ಅಲ್ಲ, ತಮೋಗುಣವೂ ಇಲ್ಲ, ಸತ್ಯಗುಣವೂ ಇಲ್ಲ. ಮಧ್ಯದ ರಜೋಗುಣವನ್ನು ಉಲ್ಲೇಖ ಮಾಡಿ ಪ್ರಕೃತಿಯ ಮೂರು ಗುಣಗಳೂ ಇಲ್ಲ ಎಂಬುದನ್ನು "ವಿರಜ"ನಾಮದಿಂದ ತಿಳಿಸಲಾಗಿದೆ. ಲೋಕದಲ್ಲಿರುವ ಸತ್ತ್ವಗುಣವೂ ಕಲ್ಮಶದಿಂದ ಕೂಡಿದ್ದು, ರಾಮ ಎಂತಹವನು? ಅವನಿಂದ ಉಂಟಾಗುವ ವಿರಾಮ ಎಂತಹದ್ದು? ಅದನ್ನು ಪಡೆಯಲು ಬೇಕಾದ ಮಾರ್ಗ ಎಂತಹದ್ದು?
"ವಿರಜಃ"- ಯಾವುದೇ ಕಲ್ಮಶವನ್ನು ಹೊಂದದಿರುವಂತಹದ್ದು. ರಾಮನೂ ಅವನಿಂದ ದೊರೆಯತಕ್ಕ ವಿಶ್ರಾಂತಿಯೂ, ಅದನ್ನು ಪಡೆಯಲು ಬೇಕಾದ ಮಾರ್ಗವೂ ವಿರಜ: - ಕಲ್ಮಷರಹಿತ. ರಾಮನನ್ನು ತಿಳಿಯಲು ಅವನಿಂದ ವಿರಾಮವನ್ನು ಪಡೆಯಲು ಇರುವ ಮಾರ್ಗ "ವಿರಜಃ" ಯಾವುದೇ ದೋಷವಿಲ್ಲದ ಮಾರ್ಗ.ಹೀಗೆ ರಾಮನನ್ನು "ವಿರಜಃ"ಎಂದು ಉಪಾಸನೆ ಮಾಡಿದಲ್ಲಿ ನಾವು ಶುದ್ಧ ತಿಳಿವಳಿಕೆಯನ್ನೂ, ನೆಮ್ಮದಿಯನ್ನೂ ನಿರ್ಮಲವಾದ ವಿಶ್ರಾಂತಿಯನ್ನೂ ಪಡೆಯಬಲ್ಲೆವು.
4. ಮಾರ್ಗ: ಉತ್ತಮ ವಿಶ್ರಾಂತಿಯನ್ನು ಪಡೆಯಲು ಸಾಧನ ಆಗಿರುವವನು.
ವಿವರಣೆ : ಒಳ್ಳೆಯ ತಿಳಿವಳಿಕೆ ಬೇಕು. ಒಳ್ಳೆಯ ನೆಮ್ಮದಿ ಬೇಕು, ಒಳ್ಳೆಯ ವಿಶ್ರಾಂತಿ ಬೇಕು ಇದಕ್ಕೆಲ್ಲ ಯಾರು ಸಾಧನ? ರಾಮನೇ. ಆದುದರಿಂದ ಅವನೇ ಮಾರ್ಗ. ಮರವನ್ನು ತುಂಡು ಮಾಡಲು ಸಾಧನ ಕೊಡಲಿ. ಅದರಂತೆ ಜೀವನದಲ್ಲಿ ವಿಶ್ರಾಂತಿಗೆ ಮಾರ್ಗ - ರಾಮ. ಶಾಸ್ತ್ರದಲ್ಲಿ ಒಂದು ಮಾತು ಬಂದಿದೆ. ಲೋಕದಲ್ಲಿ ನದಿಯನ್ನು ದಾಟಲು ದೋಣಿ ಬೇಕು. ಹಾಗೆಯೇ ಸಂಸಾರ-ಸಾಗರವನ್ನು ದಾಟಲೂ ದೋಣಿ ಬೇಕು. ಭಗವಂತನ ಪಾದವೇ ಆ ದೋಣಿ. ಲೋಕದಲ್ಲಿ ನದಿಯನ್ನು ದೋಣಿಯಿಂದ ದಾಟಿ ಅದನ್ನು ಅಲ್ಲಿಗೇ ಬಿಟ್ಟು ಬೇರೆ ದಡಕ್ಕೆ ಹೋಗುವೆವು. ಆದರೆ ಸಂಸಾರ ಸಾಗರವನ್ನು ಭಗವಂತನ ಪಾದದಿಂದ ದಾಟಿ, ಅದನ್ನು ಅಲ್ಲಿಗೇ ಬಿಟ್ಟು ಬಿಡಲು ಆಗುವುದಿಲ್ಲ. ಯಾಕೆಂದರೆ ಅದು ಸಂಸಾರ-ಸಾಗರವನ್ನು ದಾಟಿದ ಮೇಲೂ ಆಸರೆಯಾಗಿರುವುದು. ಮೋಕ್ಷದಲ್ಲೂ ಅದನ್ನು ಬಿಟ್ಟರೆ ಬೇರೆ ಗತಿ ಇಲ್ಲ. ಹೀಗೆ ಸಂಸಾರಸಾಗರವನ್ನು ದಾಟುವುದಕ್ಕೂ, ದಾಟಿದ ಮೇಲೂ "ಮಾರ್ಗ"ನಾಗಿರುವವನು ಭಗವಂತ. ಅವನೇ ರಾಮ. ಆದ್ದರಿಂದಲೇ ರಾಮತಾರಕಮಂತ್ರವು ಬಹಳ ಪ್ರಸಿದ್ಧ.
5. ಭೂಶಯಃ - ರಾಮಾವತಾರದಲ್ಲಿ ಭೂಮಿಯ ಮೇಲೆ ಮಲಗಿದವನು. ಪಾರ್ಥಿವ ಶರೀರಗಳಲ್ಲಿ ಮಲಗಿರುವವನು.
ವಿವರಣೆ : ಭುವಿ ಶೇತೇ ಇತಿ ಭೂಶಯಃ, ಭೂಮಿಯ ಮೇಲೆ ಮಲಗಿದವನು. ನಾರಾಯಣ ರಾಮನಾಗಿ ಬಂದಿದ್ದಾಗ ಭೂಮಿಯ ಮೇಲೆ ದರ್ಭೆ ಹಾಸಿ ಮೂರುದಿನಗಳ ಕಾಲ ನೆಲದ ಮೇಲೆ ಮಲಗಿದ್ದನು. ಸಮುದ್ರರಾಜ ಲಂಕೆಗೆ ಹೋಗಲು ಅವಕಾಶ ನೀಡಬೇಕೆಂದು. ಈಗಲೂ ರಾಮೇಶ್ವರದಲ್ಲಿ ಶ್ರೀ ರಾಮಚಂದ್ರ "ಭೂಶಯ"ನಾಗಿದ್ದ ಸ್ಥಳವನ್ನು ತೋರಿಸುವರು. ಇದೊಂದು ರಾಮಾವತಾರಕ್ಕೆ ಸಂಬಂಧಿಸಿದ ಅರ್ಥ.
6. ನಿವೃತ್ತಾತ್ಮಾ - ಲೌಕಿಕ ಜೀವನದಿಂದ ನಿವೃತ್ತರಾದವರನ್ನು ತನ್ನವರನ್ನಾಗಿ ಸ್ವೀಕರಿಸುವವನು.
ವಿವರಣೆ : ನಿವೃತ್ತಿ ಎಂದರೆ ಹಿಂದೆ ಸರಿಯುವಿಕೆ. ಉದ್ಯೋಗದಲ್ಲಿದ್ದು, ಅದರಿಂದ ಹಿಂದೆ ಸರಿದಾಗ ನಿವೃತ್ತರಾದರು ಎಂದು ವ್ಯವಹರಿಸಲಾಗುವುದು. ಯಾರು ಗೃಹಸ್ಥಾಶ್ರಮದಲ್ಲಿ ಇರುವಾಗ ಲೌಕಿಕ ಜೀವನದಲ್ಲಿ ಮುಳುಗಿದ್ದು, ಮುಂದೆ ವಾನಪ್ರಸ್ಥಾಶ್ರಮದಲ್ಲಿ ಲೌಕಿಕ ಜೀವನದಿಂದ ನಿವೃತ್ತರಾಗುವರು. ಅಂತಹವರನ್ನು ಪರಮಾತ್ಮನು "ಆದತ್ತೇ ಇತಿ ನಿವೃತ್ತಾತ್ಮಾ" ಉದ್ಧಾರಕ್ಕಾಗಿ ಸ್ವೀಕರಿಸುವನು.
ಶ್ರೀ ರಾಮಚಂದ್ರ ವನವಾಸಕ್ಕಾಗಿ ಹೊರಟಾಗ ಲಕ್ಷ್ಮಣನೂ ಶ್ರೀರಾಮಚಂದ್ರನ ಜೊತೆಗೆ ಸಾಗಲು ತೊಡಗುವನು. ಲಕ್ಷ್ಮಣನಿಗೂ ಆಗ ವಿವಾಹವಾಗಿತ್ತು. ಅವನ ಪತ್ನಿ ಅಲ್ಲೇ ಇದ್ದಳು. ಆದರೂ ಲಕ್ಷ್ಮಣ ಅವರಿಂದೆಲ್ಲ ನಿವೃತ್ತರಾಗಿದ್ದ. ಆದುದರಿಂದಲೇ ಶ್ರೀರಾಮ ನಿವೃತ್ತನಾದ ಲಕ್ಷ್ಮಣನನ್ನು ಆದತ್ತೇ ಇತಿ ಆತ್ಮಾ ತನ್ನ ಭಕ್ತನನ್ನಾಗಿ ಸ್ವೀಕರಿಸಿದನು. ಶ್ರೀ ರಾಮ ಲಕ್ಷ್ಮಣನಿಗೆ "ಆತ್ಮಾ"ನಾಗಿ ದೊರೆಯುವನು.
7. ಸುಂದರ: ಒಮ್ಮೆ ಕಾಣಿಸಿಕೊಳ್ಳುತ್ತಿದ್ದು, ಮತ್ತೆ ಕಾಣಿಸದೆ, ಆ ಬಳಿಕ ಕಾಣಿಸಿಕೊಳ್ಳುವವನು.
ವಿವರಣೆ : ಸೌಂದರ್ಯ ಉಳ್ಳವನು ಸುಂದರ ಎನಿಸುವನು. ರಾಮಾಯಣದಲ್ಲಿ "ಸುಂದರಕಾಂಡ" ಎಂದೇ ಒಂದು ಕಾಂಡ ಇದೆ. ಯಾಕೆ ಉಳಿದ ಕಾಂಡಗಳು ಸುಂದರಗಳಾಗಿಲ್ಲವೇ? ಅಯೋಧ್ಯಾಕಾಂಡದಲ್ಲಿ ಕೈಕೇಯಿಯ ಆರ್ಭಟ ಅಧಿಕವಾಗಿರುವುದರಿಂದ ಅದನ್ನು ನಾವು ಸುಂದರ ಎಂದು ವರ್ಣಿಸಲಾರೆವಾದರೂ ಉಳಿದವುಗಳು ಸುಂದರಗಳೇ ಆಗಿವೆ ತಾನೇ? ಆದರೂ ನಿರ್ದಿಷ್ಟವಾದ ಆ ಕಾಂಡವೇ ಸುಂದರ ಎನಿಸಲು ಹೀಗೊಂದು ಕಾರಣವನ್ನು ತಿಳಿಸುವರು. ಆ ಕಾಂಡದಲ್ಲಿ ರಾಮನ ಸೌಂದರ್ಯದ ವರ್ಣನೆ ಅತ್ಯಧಿಕವಾಗಿ ನಡೆದಿದೆ. ನಿಜವಾಗಿ ಯಾರು ರಾಮನನ್ನು ತಿಳಿದಿರುವನೋ ಅಂತಹ ಆಂಜನೇಯನ ಮೂಲಕವೇ ನಡೆದಿದೆ. ಯಾರಿಗೆ ಆಂಜನೇಯ ತಿಳಿದದ್ದಕ್ಕಿಂತಲೂ ಅಧಿಕವಾಗಿ ಶ್ರೀರಾಮನ ಸೌಂದರ್ಯದ ಬಗ್ಗೆ ತಿಳುವಳಿಕೆ ಇದೆಯೋ ಅಂತಹ ಸೀತೆಯ ಮುಂದೆಯೇ ಆಂಜನೇಯ ಶ್ರೀರಾಮನ ಗುಣಗಾನ ನಡೆಸಿ, ಕಲ್ಯಾಣ ಗುಣಗಳಿಗೆ ಸಂಬಂಧಿಸಿದ್ದ ಸೌಂದರ್ಯವನ್ನು ವರ್ಣಿಸಿದ್ದ. ಸೀತೆಗೆ ಅದೆಲ್ಲ ಗೊತ್ತಿದ್ದರಿಂದ ಆಕೆ ಅದನ್ನು ಒಪ್ಪಿಕೊಂಡಿದ್ದಳು. ಒಂದು ವೇಳೆ ಗೊತ್ತಿಲ್ಲದವರ ಎದುರು ಹೀಗೆ ಗುಣಗಾನ ನಡೆಸಿದರೆ ಅದು ಪೂರ್ಣವಾಗಿ ಪ್ರಾಮಾಣಿಕ ಎಂದು ನಂಬಲಾಗುವುದಿಲ್ಲ. ಆದರೆ ರಾಮನ ಗುಣಗಳನ್ನು ಸಾಕಷ್ಟು ಬಲ್ಲ ಸೀತೆಯ ಎದುರೇ ಗುಣಗಾನ ನಡೆಸಿ, ಆಕೆಯ ಒಪ್ಪಿಗೆಯನ್ನು ಆಂಜನೇಯ ಪಡೆದುಕೊಂಡಿದ್ದ. ಹೀಗೆ ರಾಮನ ಗುಣಗಳಿಗೆ ಸಂಬಂಧಿಸಿದ ಸೌಂದರ್ಯದ ವರ್ಣನೆಗೆ ಮುಖ್ಯ ಅಧಿಕಾರಿಯಾದ ಹನುಮನ ಮೂಲಕ ನಡೆದ ಘಟನೆಗಳು ಸುಂದರ ಕಾಂಡದಲ್ಲಿ ಇರುವುದರಿಂದ ಸುಂದರ ನಾಮವು ರಾಮನಿಗೂ ಅನ್ವರ್ಥಕ.
ಹೀಗೆ ರಾಮ ನಾಮದ ಕಂಪನ್ನು ನಾವು ವಿಷ್ಣುಸಹಸ್ರ ನಾಮದಲ್ಲೂ ಕಾಣಬಹುದು. ರಾಮನೆ ವಿಷ್ಣುವಾದ್ದರಿಂದ ರಾಮನ ಚಿಂತನೆ ಪುಣ್ಯಕರ. ರಾಮ ಮಂದಿರ ನಿರ್ಮಾಣ ಮತ್ತು ಉದ್ಘಾಟನೆಯಲ್ಲಿ ಸಹಸ್ರ ನಾಮದ ಪಾರಾಯಣ ಮನೆಮನೆಗಳಲ್ಲಿ ನಡೆದಿರುವುದನ್ನು ನಾವು ಮರೆಯುವಂತಿಲ್ಲ. ಎಲ್ಲರಿಗೂ ರಾಮ ಮಂಗಳವನ್ನು ಅನುಗ್ರಹಿಸಲಿ.
ವಿ. ಸಗ್ರಿ ರಾಘವೇಂದ್ರ ಉಪಾಧ್ಯಾಯ,
ದ್ವೈತ ವೇದಾಂತ ವಿದ್ವಾಂಸರು, ಉಡುಪಿ,
9964025922
ಲೇಖಕರ ಸಂಕ್ಷಿಪ್ತ ಪರಿಚಯ:: ಪೇಜಾವರ ಸ್ವಾಮಿಗಳಲ್ಲಿ ಸುಧಾ ಅಧ್ಯಯನ ಮಾಡಿ ವೇದಾಂತದ ಪ್ರಾಧ್ಯಾಪಕರಾಗಿ ನೂರಾರು ವಿದ್ವಾಂಸರಿಗೆ ಉಪನಿಷತ್, ಸರ್ವಮೂಲ, ಸುಧಾ ಗ್ರಂಥಗಳನ್ನು ಪಾಠ ಮಾಡಿರುವರು. 100 ಕ್ಕೂ ಅಧಿಕ ಕೃತಿಗಳನ್ನು ತಮ್ಮದೇ ಆದ ಪರವಿದ್ಯಾ ಪ್ರಕಾಶನದಿಂದ ಪ್ರಕಟಿಸಿ ಬರೆದಿದ್ದಾರೆ. ವಿವಿಧ ಮಾಧ್ವ ಮಾಸ ಪತ್ರಿಕೆಗಳಲ್ಲಿ ಖಾಯಂ ಅಂಕಣಕಾರರೂ ಆಗಿ 7000 ಕ್ಕೂ ಅಧಿಕ ಲೇಖನಗಳನ್ನು 50 ವರ್ಷಗಳಲ್ಲಿ ಬರೆದಿದ್ದಾರೆ. ಎಲ್ಲ ಮಾಧ್ವ ಮಠಗಳು ಇವರನ್ನು ಗೌರವಿಸಿದೆ. ಸದಾ ಸರ್ವಮೂಲ ಚಿಂತನೆಯಲ್ಲಿ ತೊಡಗಿಕೊಂಡಿರುವ ಅಪರೂಪದ ಲೇಖಕರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ