-ಎಸ್.ಎನ್. ಕುಮಾರ ಸ್ವಾಮಿ ಶಿವಮೊಗ್ಗ
ಮರ್ಯಾದಾ ಪುರುಷೋತ್ತಮ, ಕರುಣಾಳುವಾಲ, ಅಸುರ ಕುಲಸಂಹಾರ, ರಘೋತ್ತಮ, ಜಾನಕಿವಲ್ಲಭ ಎಂದೆಲ್ಲ ವಿಸ್ತಾರವಾಗಿರುವ ಮಹಾ ಮಹಿಮಾನ್ವಿತ ಶ್ರೀ ರಾಮನ ಚರಿತ್ರೆಯನ್ನು ಕೊಂಡಾಡುವಲ್ಲಿ ಕನ್ನಡ ಸಾಂಸ್ಕೃತಿಕ ರಂಗಗಳ ಬೇರೆ ಬೇರೆ ಆಯಾಮಗಳಲ್ಲಿ ವಿಭಿನ್ನ ಸ್ವರೂಪದಲ್ಲಿ ಹೆಣೆಯಲಾಗಿದೆ. ಅದರಲ್ಲಿ ಕನ್ನಡ ಚಿತ್ರರಂಗವು ಒಂದು ಪ್ರಧಾನ ಪಾತ್ರವಾಗಿದೆ. ಹಾಗೆ ನೋಡುತ್ತಾ ಹೋದರೆ ರಾಮಾಯಣವು ಇಬ್ಬರು ಆದರ್ಶಪುರುಷರನ್ನೂ ತೋರಿಸಿದೆ. ಶ್ರೀರಾಮ ಮತ್ತು ರಾವಣ ಇಬ್ಬರೂ ಆದರ್ಶಪ್ರಾಯರೇ. ಸಮಾಜದಲ್ಲಿ ಹೇಗಿರಬೇಕು ಎಂಬುದಕ್ಕೆ ಶ್ರೀರಾಮ ಆದರ್ಶವಾದರೆ, ಸಮಾಜದಲ್ಲಿ ಹೇಗಿರಬಾರದು ಎಂಬುದಕ್ಕೆ ರಾವಣ ಆದರ್ಶ. ತನ್ನದೆಲ್ಲವೂ ಪರರದ್ದು ಎಂದು ಭಾವಿಸಿದವ ಶ್ರೀರಾಮನಾದರೆ ಪರರ ಸ್ವತ್ತು ತನಗೆ ಸೇರಬೇಕೆಂದು ಹಂಬಲಿಸಿದವ ರಾವಣ. ರಾಮನ ಬದುಕೇ ಧರ್ಮ ಸೂತ್ರ, ಆ ಸೂತ್ರವೇ ಎಲ್ಲರ ಬದುಕಿಗೆ ಸೂತ್ರ. ಈ ತತ್ವವನ್ನು ಅಳವಡಿಸಿಕೊಂಡು ಕನ್ನಡದ ಅದೆಷ್ಟೋ ಚಲನಚಿತ್ರಗಳಲ್ಲಿ ಶ್ರೀರಾಮನ ಕುರಿತಾದ ಹಾಡುಗಳು ಚಿತ್ರಣಗೊಂಡಿವೆ. ಅದೆಷ್ಟೋ ಕನ್ನಡದ ಭಜನೆಗಳು ಮನೆ ಭಜನೆಗಳಾಗಿದೆ.
"ರಾಮ" ಎಂಬ ಎರಡಕ್ಷರದ ಮಹಿಮೆಯನ್ನು ಪಾಮರರು ತಾವೇನು ಬಲ್ಲರಯ್ಯ ಧರೆಯೊಳು, ನಾಮಕೆ ಸರಿಮಿಗಿಲು ಇಲ್ಲೆಂದು ಪರಮ ವೇದಗಳೆಲ್ಲ ಪೊಗಳುತಿಹವು" ಅಂತಾ ಒಂದೆಡೆ ಹೇಳಲಾಗಿದೆ. ಮುಂದುವರಿದು ರಾಮ ರಾಮ ಎಂಬ ಎರೆಡಕ್ಷರ ಪ್ರೇಮದಿ ಸಲುಹಿತು ಸುಜನರನ್ನು, ರಾಮನಾಮವ ನುಡಿ ನುಡಿ ಕಾಮ ಕ್ರೋದಗಳ ಬಿಡಿ ಬಿಡಿ, ಹರಿ ನೈರ್ಮಲ್ಯವಾ ಮುಡಿ ಮುಡಿ, ಬಂದ ದುರಿತವ ಹೊಡಿ ಹೊಡಿ ಎನ್ನುತ್ತಾರೆ. ಆ ಮಂತ್ರ ಈ ಮಂತ್ರ ಜಪಿಸಿ ಕೆಡಲು ಬೇಡ, ರಾಮ ಮಂತ್ರವ ಜಪಿಸೋ ಹೇ ಮನುಜ. ದೀನ ರಕ್ಷಕ ನಿಮ್ಮನ್ನು ಕಾಪಾಡುತ್ತಾನೆ ಎನ್ನುತ್ತದೆ ವೇದ ಪುರಾಣಗಳು. ಹಾಗಾದರೆ ಅಂತಹ ರಾಮನಾಮ ಪಾಯಸಕ್ಕೆ ವಿಠ್ಠಲ ನಾಮ ಸೆಕ್ಕರೆ ಬೆರೆಸಿ ಸವಿಯುವ ಶ್ರೀರಾಮನ ಕುರಿತಾದ ಕನ್ನಡ ಚಲನಚಿತ್ರ ಹಾಗೂ ಅದರಲ್ಲಿ ಅಳವಡಿಸಿಕೊಂಡ್ಡಿರುವ ಗೀತೆಗಳನ್ನು ನೋಡೋಣ.
1934 ರಲ್ಲಿ ತೆರೆಕಂಡ ಪ್ರಪ್ರಥಮ ಕನ್ನಡದ ವಾಕ್ಚಿತ್ರ ಅಂದರೆ ಅದು ವೈ.ವಿ ರಾವ್ ನಿರ್ದೇಶನದ "ಸತಿ ಸುಲೋಚನಾ" ಅನ್ನೋ ಚಿತ್ರ. ರಾಮಾಯಣದ ಸುಲೋಚನಾಳ ಪಾತ್ರವನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿತ್ತು. ಸುಲೋಚನಾ ಇಂದ್ರಜಿತುವಿನ ಹೆಂಡತಿ. ರಾಮಾಯಣದ ರಾಕ್ಷಸ ರಾಜ ರಾವಣನ ಸೊಸೆ. ಹಿಂದೂ ದೇವರಾದ ಶ್ರೀ ರಾಮ ರಾವಣರ ನಡುವಿನ ಯುದ್ಧದ ನಡೆಯನ್ನು ಸುಲೋಚನಾ ದೃಷ್ಟಿಕೋನದಿಂದ ಚಿತ್ರೀಸಲು ಪ್ರಯತ್ನಿಸಿದೆ. ಲಕ್ಷ್ಮಣ ಇಂದ್ರಜಿತುವನ್ನು ಕೊಂದು ಸುಲೋಚನಾ ಳನ್ನು ವಿಧವೆಯನ್ನಾಗಿ ಮಾಡುತ್ತಾನೆ. ಭಗವಾನ್ ರಾಮನಿಂದ ರಾವಣನ ಸೋಲು, ಮತ್ತು ಇಂದ್ರಜಿತು ಹತ್ಯೆ ಇವೆರೆಡನ್ನು ಸುಲೋಚನಾ ಕಣ್ಣುಗಳ ಮೂಲಕ ನೋಡಲಾಗುತ್ತದೆ. ಪತಿಯ ಸಾವನ್ನು ಸಹಿಸಲಾರದೇ ಸತಿ ತ್ಯಾಗ ಮಾಡುತ್ತಾಳೆ. ಇದು ಈ ಚಿತ್ರದ ತಿರುಳು. ಇಂದ್ರಜಿತುವಾಗಿ ಸುಬ್ಬಯ್ಯ ನಾಯ್ದು, ರಾವಣನಾಗಿ ಆರ್ ನಾಗೇಂದ್ರರಾಯರು, ಸೀತೆಯಾಗಿ ತ್ರಿಪುರಾಂಬಾ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಸಾಹಿತ್ಯ ಬೆಳ್ಳಾವೆ ನರಹರಿಶಾಸ್ತ್ರಿ ಅವರು ಮಾಡಿದ್ದಾರೆ.
1958ರಲ್ಲಿ ತೆರೆ ಕಂಡ ಒಂದು ಪೌರಾಣಿಕ ಚಲನಚಿತ್ರ "ಭೂಕೈಲಾಸ". ಅದುವರೆಗೂ ಭಕ್ತಿ, ಸೌಮ್ಯ ಪಾತ್ರಗಳಲ್ಲಿ ನಟಿಸುತ್ತಿದ್ದ ಡಾ ರಾಜ್ ಕುಮಾರ್ ಅವರು ಈ ಚಿತ್ರದಲ್ಲಿ ದಾನವ ಅಸುರನಾಗಿ ಶ್ರೀ ರಾವಣನ ರೌದ್ರ ಪಾತ್ರದಲ್ಲಿ ನಟಿಸಿರೋದು ಒಂದು ವಿಶೇಷ. ಸುಮಾರು ಹತ್ತು ಹಾಡುಗಳು ಈ ಚಿತ್ರದಲ್ಲಿ ಮೂಡಿಬಂದಿವೆ. ಅಪ್ರತಿಮ ಭಕ್ತ ರಾವಣ ಈಶ್ವರನಲ್ಲಿ ವರ ಪಡೆದು ಆತ್ಮಲಿಂಗವನ್ನೇ ಕೋರಿ ಅದು ತಿರುಗಿ ಭೂಮಿಯಲ್ಲಿಯೇ ಸ್ಪರ್ಶವಾಗಿದ್ದು ಈ ಚಿತ್ರದ ತಿರುಳು. ಈ ಚಿತ್ರಕ್ಕೆ ಆರ್ ಸುದರ್ಶನಂ ಸಂಗೀತ ನಿರ್ದೇಶಕ. ಈ ಚಿತ್ರದಲ್ಲಿ ಬರುವ ಒಂದು ಹಾಡು ಅಂದಿಗೂ ಇಂದಿಗೂ ಎಂದೆಂದಿಗೂ ಶ್ರೀ ರಾಮಾಯಣದ ಕಥೆಯನ್ನು ಬಿತ್ತರಿಸುವ ಹಾಡಾಗಿ ಅಜರಾಮರವಾಗಿ ಉಳಿದಿದೆ. ಮತ್ತೆ ಈ ಹಾಡನ್ನು ಕೇಳದೆ ಇರುವ ಆಸ್ತಿಕರು ಇಲ್ಲ. ಆಗೆಲ್ಲಾ ತೆಲುಗು ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರ ತಯಾರಾಗುತ್ತಿತ್ತು. ತೆಲುಗಿನಲ್ಲಿ ಆಗಿನ ಜನಪ್ರಿಯ ನಟ ಎನ್‌ಟಿಆರ್, ಹಾಗೂ ಕನ್ನಡದಲ್ಲಿ ವರ ನಟ ಡಾ ರಾಜ್ ಕುಮಾರ್ ಅಭಿನಯಿಸುತ್ತಿದ್ದರು. ಬೆಳಿಗ್ಗೆ ತೆಲಗು ಚಿತ್ರ ಚಿತ್ರೀಕರಣವಾದರೆ ರಾತ್ರಿ ಕನ್ನಡ, ಎನ್ ಟಿ ಆರ್ ಅವರು ರಾಜ್ ಕುಮಾರ್ ಅವರ ಅಭಿನಯ ನೋಡಬೇಕು ಎಂದು ರಾತ್ರಿ ವರೆಗೂ ಶೂಟಿಂಗ್ ಸ್ಪಾಟ್ ನಲ್ಲಿಯೇ ಕಾದಿರುತ್ತಿದ್ದರಂತೆ. ಚಿತ್ರಕ್ಕೆ 7 ನಿಮಿಷಗಳ ಒಂದು ಹಾಡಿನ ಅಗತ್ಯತೆ ಕಂಡು ಬಂದಿತು.
ಇದನ್ನು ಕನ್ನಡದ ಉದ್ದಾಮ ಸಾಹಿತಿ ಕು. ರಾ. ಸೀ. ಯವರು ಕೈಗೆತ್ತಿಕೊಂಡು ಈ ಹಾಡನ್ನು ರಚಿಸಿದರಂತೆ. ಪ್ರಾಸ ಕೂರಿಸೋದು, ಪದಗಳ ಜೋಡಣೆ, ವ್ಯಾಕರಣ, ಛಂದಸ್ಸು, ಹಾಡಿನ ಅರ್ಥವಂತಿಕೆ ಎಲ್ಲವೂ ಕಾಪಾಡಿಕೊಂಡು ಬರುವಂತೆ ರಚಿಸಿದ ಕೀರ್ತಿ ನಮ್ಮ ಹೆಮ್ಮೆಯ ಸಾಹಿತಿ ಕು. ರಾ. ಸೀ ಅವರದ್ದು. ಶ್ರೀ ಕು ರಾ ಸೀತಾರಾಮ ಶಾಸ್ತ್ರೀ ಯವರು ಈ ಅದ್ಭುತ ಗೀತೆಯ ಕರ್ತೃವಾಗಿರುತ್ತಾರೆ. ಈ ಹಾಡಿಗೆ ಉಚ್ಚ ಸ್ಥಾಯಿಯಲ್ಲಿ ಹಾಡುವಂತ ಗಾಯಕನ ಅವಶ್ಯಕತೆ ಇತ್ತು, ಇದನ್ನು ತಮಿಳಿನ ಶಿರ್ಕಾಳಿ ಗೋವಿಂದರಾಜನ್ ಅವರ ವಿಶೇಷ ಕಂಠ ಸಿರಿಯಲ್ಲಿ ಮೂಡಿ ಬಂದು ಒಂದು ಗೀತೆ ಇಡೀ ರಾಮಾಯಣದ ಕಥೆಯನ್ನೇ ಹೇಳುತ್ತದೆ. ಹಾಡಿನ ಆರಂಭ ಗದ್ಯ ರೂಪದಲ್ಲಿ ಆರಂಭಗೊಳ್ಳುವುದು ಹೀಗೆ- "ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ, ಜಾರತನ ಸದೆಬಡಿವ ಸಂಭ್ರಮದ ನೆಪವೋ...... ರಾಮನ ಅವತಾರ, ರಘುಕುಲ ಸೋಮನ ಅವತಾರ, ನಿರಪಮ ಸಂಯಮ ಜೀವನಸಾರ ಹರಿವುದು ಭೂಮಿಯ ಬಾರಾ ರಾಮನ ಅವತಾರ, ಅನ್ನೋ ಪಲ್ಲವಿಯೊಂದಿಗೆ ಹಾಡು ಮುಂದುವರಿಯುತ್ತದೆ. ಈ ಗೀತೆಯ ಒಂದೊಂದು ಸಾಹಿತ್ಯದ ಸಾಲು ರಾಮಾಯಣದ ಒಂದೊಂದು ದೃಶ್ಯಗಳನ್ನು ಕಣ್ಮುಂದೆ ಕಟ್ಟಿ ನಿಲ್ಲಿಸುತ್ತದೆ. ಯಾವ ಹೆಣ್ಣಿಗೆ ರಾವಣ ಆಸೆ ಪಡುತ್ತಾನೋ ಅದನ್ನು ಹೀಗೆ ವರ್ಣಿಸಿದ್ದಾರೆ- ಕಪಟ ನಾಟಕದ ಪಟ್ಟಾಭಿಷೇಕ, ಭರತಗೆ ಪಾದುಕೆ ನೀಡುವ ವೇಷ, ಆಆಹಾ ನೋಡದು ಹೊನ್ನಿನ ಜಿಂಕೆ, ಹಾಳಾಗುವದಯ್ಯೋ ಲಂಕೆ, ಹೆಣ್ಣಿದು ಶಿವನುರಿಗಣ್ಣೋ ಮಂಕೆ, ಮಣ್ಣಾಗುವೆ ನೀ ನಿಶ್ಯoಕೆ ಅಂತಾ ಮುಂದಿನ ಒಂದೊಂದು ಭವಿಷ್ಯವನ್ನು ತಿಳಿಸುವ ಹಾಡಿನ ಸಾಲುಗಳು ಅದ್ಭುತವಾಗಿದೆ. ಹಾಡಿನ ಕಡೇ ಸಾಲಿನಲ್ಲಿ ರಾವಣನ ನೀಚತನ ಅಂತಾ ಎಲ್ಲೂ ಬೆರಳು ಮಾಡಿ ತೋರದೆ ಅದೊಂದು ಅವನಿಗೆ ಕವಿದ ಮಂಕು ಎಂದು ಅರ್ಥೈಸಿ "ಅಯ್ಯೋ ದಾನವ ಭಕ್ತಾಗ್ರೇಸರ ಆಗಲಿ ನಿನ್ನೀ ಕಥೆ ಅಮರ, ಮೆರೆಯಲಿ ಈ ಶುಭ ತತ್ವ ವಿಚಾರ ಪರಸತಿ ಬಯಕೆಯ ಸಂಹಾರ" ಅಂತಾ ಇದೊಂದು ಹೆಣ್ಣಿಗೆ ಆಸೆ ಪಟ್ಟವರಿಗೆ ಒಂದು ನೀತಿ ಪಾಠವಾಗಲಿ ಅಂತಾ ಹೇಳೋ ಜಾಣ್ಮೆಯನ್ನು ಕುರಾಸಿ ಅವರು ತಮ್ಮ ಹಾಡಿನಲ್ಲಿ ತೋರಿಸಿದ್ದಾರೆ.
ವಾಲ್ಮೀಕಿ ರಾಮಾಯಣವು ಶ್ರೀ ರಾಮ ಪಟ್ಟಾಭಿಷೇಕದವರೆಗೆ ಕೊನೆಗೂಳ್ಳುತ್ತದೆ, ನಂತರ ಉಳಿದ ಕಥೆಯನ್ನು ವಾಲ್ಮೀಕಿ ಬರೆದಿಲ್ಲ, ಸಮಾಜದ ಅಪನಿಂದೆಗೆ ಒಳಗಾಗಿ ರಾಮನು ಸೀತೆಯನ್ನು ಕಾಡಿಗೆ ಕಳುಹಿಸುತ್ತಾನೆ. ಅಲ್ಲಿ ವಾಲ್ಮೀಕಿ ಆಶ್ರಯದಲ್ಲಿ ಸೀತೆ ಲವಕುಶರಿಗೆ ಜನ್ಮ ನೀಡುತ್ತಾಳೆ. ಈ ಕಥೆ "ಲವ ಕುಶ" ಈ ಚಿತ್ರದಲ್ಲಿ ಅತ್ಯಂತ ಸುಂದರವಾಗಿ ಮುಡಿ ಬಂದಿದೆ. 1963ರಲ್ಲಿ ರಾಜ್ ಕುಮಾರ್ ಲೀಲಾವತಿ ಮತ್ತಿತರು ನಟಿಸಿದ "ವಾಲ್ಮೀಕಿ" ಚಿತ್ರ ತೆರೆಕಂಡಿತು. ಕಣಗಾಲ್ ಪ್ರಭಾಕರ ಶಾಸ್ತ್ರೀ ಸಾಹಿತ್ಯ ರಚನೆ ಮಾಡಿದ 8 ಹಾಡುಗಳು ಈ ಚಿತ್ರದಲ್ಲಿದೆ. ಅದರಲ್ಲಿ ಅತ್ಯಂತ ಜನಪ್ರಿಯವಾದ ಒಂದು ಹಾಡು "ಜಲಲ ಜಲಲ ಜಲಧಾರೆ" ಅನ್ನೋ ದೋಣಿಯೊಳಗೆ ಸಾಗುವ ಚಿತ್ರಣವುಳ್ಳ ಹಾಡಿನ ದೃಶ್ಯ ಹಾಗೂ ರಾಗ ಸಂಯೋಜನೆ ಅದ್ಭುತವಾಗಿ ಮೂಡಿಬಂದಿದೆ.
ಶ್ರೀ ರಾಮ ಆತನ ಪರಮಭಕ್ತ ಸ್ವಾಮಿನಿಷ್ಠೆ ಪ್ರತೀಕವಾದ ಶ್ರೀ ಆಂಜನೇಯರ ನಡುವೆ ಆಕಸ್ಮಿಕವಾಗಿ ನೆಡೆಯುವ ಘೋರ ಯುದ್ಧದ ಕುರಿತು ತೆರೆಗೆ ಬಂದ ಮತ್ತೊಂದು ಮಹೋನ್ನತ ಚಿತ್ರವೇ" ಶ್ರೀ ರಾಮಾoಜನೇಯ ಯುದ್ಧ". ಈ ಚಿತ್ರ 1963ರಲ್ಲಿ ತೆರೆ ಕಂಡಿತು. ರಾಜ್ ಕುಮಾರ್ ಶ್ರೀ ರಾಮನಾಗಿ ಉದಯ್ ಕುಮಾರ್ ಶ್ರೀ ಆಂಜನೇಯನಾಗಿ ಅಭಿನಯ ನೀಡಿದ ಸುಂದರ ಚಿತ್ರವಿದು. ಸತ್ಯಂ ಅವರ ಸಂಗೀತ ನಿರ್ದೇಶನ, ಪಿ.ಬಿ.ಎಸ್, ಘಂಟಸಾಲ ಅವರ ಹಿನ್ನೆಲೆ ಗಾಯನ ದಲ್ಲಿ ಅದ್ಭುತ ಗೀತೆಗಳು ಈ ಚಿತ್ರದಲ್ಲಿ ಮೂಡಿ ಬಂದಿವೆ. ಪಿ. ಬಿ. ಎಸ್ ಹಾಡಿದ ಒಂದು ಗೀತೆ- "ಜಗದೀಶನಾಡುವ ಜಗವೇ ನಾಟಕ ರಂಗ, ಸಂಚಾರಿಇಡೀ ಜೀವನ ಸಾರವನ್ನೇ ಈ ಹಾಡಿನ ರೂಪದಲ್ಲಿ ಬಿತ್ತರಿಸಲಾಗಿದೆ.
1960 ರಲ್ಲಿ ತೆರೆಕಂಡ ಮತ್ತೊಂದು ಮಹೋನ್ನತ ಪೌರಾಣಿಕ ಕನ್ನಡ ಚಲನ ಚಿತ್ರ "ದಶಾವತಾರ". ಶ್ರೀ ಬಿ. ಎಸ್. ರಂಗ ನಿರ್ಮಾಣ ಮಾಡಿದ ಚಿತ್ರವಿದು. ಈ ಚಿತ್ರದಲ್ಲಿ ಕನ್ನಡದ ಆ ಕಾಲದ ಮೇರು ನಟರ ದಂಡೇ ಇತ್ತು, ಪ್ರಮುಖ ತಾರಾಗಣದಲ್ಲಿ ರಾಜ್ ಕುಮಾರ್, ಉದಯ್ ಕುಮಾರ್, ನರಸಿಂಹರಾಜು, ರಾಜಾಶಂಕರ್, ಆದವಾನಿ ಲಕ್ಷ್ಮೀದೇವಿ ಮುಂತಾದವರು ಪಾತ್ರ ವಹಿಸಿದ್ದಾರೆ. ಚಿತ್ರದ ಪ್ರಮುಖ ಹಾಡುಗಳನ್ನು ಜಿ.ವಿ. ಅಯ್ಯರ್ ಅವರು ಬರೆದಿದ್ದಾರೆ. ಅದರಲ್ಲಿ ಒಂದು ಪ್ರಮುಖ ಹಾಡು ಸೀತಾಮಾತೆಯ ಕುರಿತು ರಚಿಸಲಾಗಿರುವುದು ಹೀಗಿದೆ. "ವೈದೇಹಿ ಏನಾದಳೋ", ಹಾಡಿನ ಆರಂಭ "ಗೋದಾವರಿ ದೇವಿ, ಮೌನವಾoತಿಹೆ ಏಕೆ, ವೈದೇಹಿ ಏನಾದಳೋ ಅಂತಾ. ಪ್ರೀತಿ ಅಮೃತವನೆರೆದು ಜೀವ ಜ್ಯೋತಿಯ ಬೆಳಗಿ ನೀತಿ ನೇಹದ ದಾರಿ ತೋರಿದವಳು, ವೈದೇಹಿ ಏನಾದಳು ಅಂತಾ ಸೀತೆ ಬಗ್ಗೆ ಅದ್ಭುತವಾದ ಸಾಲುಗಳು ಮೂಡಿಬಂದಿದೆ. ಶ್ರೀರಾಮ ಹಾಗೂ ಸಹೋದರ ಲಕ್ಷ್ಮಣ ವೈದೇಹಿಯನ್ನು ಹುಡುಕುತ್ತಾ ಘೋರ ಕಾಡಿನಲ್ಲಿ ಸಂಚಾರಿಸುತ್ತ ಹಾಡುವ ದೃಶ್ಯ ಮನಸೂರೆಗೋಳ್ಳುತ್ತದೆ.
ದೃಶ್ಯ ಮಾಧ್ಯಮದಲ್ಲಿ ಶ್ರೀ ರಾಮನ ಮಹಿಮೆ, ವ್ಯಕ್ತಿತ್ವ ಆದರ್ಶ ಪರಿಪಾಲನೆಗಳನ್ನು ಕನ್ನಡ ಚಲನಚಿತ್ರರಂಗ ಬಹಳ ಆರಂಭದಿಂದಲೂ ಬಳಸಿಕೊಳ್ಳುತ್ತಾ ಬಂದಿದೆ. ಪೌರಾಣಿಕ ಚಿತ್ರಗಳಲ್ಲಿ ಶ್ರೀ ರಾಮನ ಗುಣಗಾನ ಮಾಡುವ ಅನೇಕ ಚಿತ್ರಗಳು ಬಂದಿವೆ. ತ್ರೇತಾ ಯುಗದಲ್ಲಿ ಶ್ರೀ ರಾಮಚಂದ್ರನು ನೆಡೆಸಿದ ರಾಮರಾಜ್ಯದ ಆದರ್ಶದ ಸುಂದರ ಪರಿಕಲ್ಪನೆ, ಅದರಲ್ಲಿ ದೊರಕುವಷ್ಟು ನೀತಿಪಾಠಗಳು, ಅನುಕರಣಿಯ ಆದರ್ಶಗಳು, ಸಿದ್ಧಾಂತಗಳು ಬೇರೆಲ್ಲೂ ಹುಡುಕಿದರೂ ಸಿಗಲಾರದು. ಸತಿ ಧರ್ಮ ಪರಿಪಾಲನೆ, ಸೀತೆಯ ಆದರ್ಶ, ಲಕ್ಷ್ಮಣನ ಬ್ರಾತೃ ಪ್ರೇಮ, ಹನುಮಂತನ ಸ್ವಾಮಿನಿಷ್ಠೆ ಎಲ್ಲವನ್ನು ಇಲ್ಲಿ ಕಾಣಬಹುದು.
ಇನ್ನು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರು ಶರಪಂಜರ ಚಿತ್ರದಲ್ಲಿ ಮಿನುಗುತಾರೆ ಕಲ್ಪನಾ ಅಭಿನಯದಲ್ಲಿ ಚಿತ್ರೀಸಿರುವ ಒಂದು ಹಾಡು "ಹದಿನಾಲ್ಕು ವರ್ಷ ವನವಾಸದಿಂದ ಮರಳಿ ಬಂದಳು ಸೀತೆ, ಸಾರ್ವಭೌಮ ಶ್ರೀ ರಾಮಚಂದ್ರನ ಪ್ರೇಮದ ಆಸರೆ ಒಂದೇ, ಸಾಕೆಂದಳು ಆ ಮಾತೆ" ಅನ್ನೋ ಹಾಡು. ಗೊಂಬೆ ಆರತಿ ಮಾಡುವ ದೃಶ್ಯ ಅಳವಡಿಸಿಕೊಂಡು ಈ ಗೀತೆ ರಚಿಸಲಾಗಿದ್ದು ಸೊಗಸಾಗಿ ಮೂಡಿಬಂದಿದೆ. ಪುಟ್ಟಣ್ಣಾಜಿ ನಿರ್ದೇಶನದ ಮತ್ತೊಂದು ಚಿತ್ರ ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ಶ್ರೀರಾಮ ಬಂದ್ವನೇ, ಸೀತೆಯ ಕಾಣಲಿಕ್ಕೆ ಅಂತಾ ಒಂದು ಗೀತೆಯನ್ನು ಬಳಸಿಕೊಳ್ಳಲಾಗಿದೆ, ಇನ್ನು ಅಣ್ಣಾವ್ರ ಅಭಿನಯದ ರವಿಚಂದ್ರ ಚಿತ್ರದಲ್ಲಿ ಇದು ರಾಮ ಮಂದಿರ ನೀ ರಾಮಚಂದಿರ ಅಂತಾ ಒಂದು ಗೀತೆ ನೋಡಬಹುದು, ಹೀಗೆ ಕನ್ನಡ ಸಾಮಾಜಿಕ ಚಿತ್ರಗಳಲ್ಲಿಯೂ ಅಲ್ಲಲ್ಲಿ ಶ್ರೀ ರಾಮನ ಆದರ್ಶ ಬಿತ್ತರಿಸುವ ಗೀತೆಗಳನ್ನು ಕಾಣಬಹುದು.
ಎಸ್.ಎನ್. ಕುಮಾರಸ್ವಾಮಿ, ಶಿವಮೊಗ್ಗ
ಸಂಪರ್ಕ: 8971242853
ಲೇಖಕರ ಸಂಕ್ಷಿಪ್ತ ಪರಿಚಯ:
ಎಸ್. ಎನ್. ಕುಮಾರ ಸ್ವಾಮಿ, 64 ವರ್ಷ. ಮೂಲ ಹುಟ್ಟೂರು ಮಲೆನಾಡ ನರಸಿಂಹರಾಜಪುರ, ವೃತ್ತಿ ಮಾಡಿದ್ದು ಭಾರತೀಯ ಜೀವವಿಮಾ ನಿಗಮ, ಇದೀಗ ವೃತ್ತಿಯಿಂದ ನಿವೃತ್ತಿ, ಪ್ರವೃತ್ತಿಯಾಗಿ ಲೇಖನಗಳನ್ನು ಬರೆಯುವುದು,. ರಸಪ್ರಶ್ನೆ ಆಯೋಜಿಸುವುದು, ಗಾಯನ, ಇತ್ಯಾದಿ ರೂಡಿಸಿಕೊಂಡು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ