ಗೋವಿಂದದಾಸ ಕಾಲೇಜಿನಲ್ಲಿ ರಘು ಇಡ್ಕಿದು ಅವರ ‘ಎನ್ನ ನಲಿಕೆ’ ಕೃತಿ ಬಿಡುಗಡೆ

Upayuktha
0

ದೈವಾರಾಧನೆಯ ದಾಖಲೀಕರಣ ಪ್ರಚಾರಕಷ್ಟೇ ಸೀಮಿತವಾಗಬಾರದು:  ಲೋಕಯ್ಯ ಸೇರ ಮಾಣಿ ಆಶಯ 




ಸುರತ್ಕಲ್ :  ತುಳುನೆಲದ ಸಂಸ್ಕೃತಿ, ಆಚಾರ-ವಿಚಾರ, ಸಂಪ್ರದಾಯ, ನಂಬಿಕೆಗಳಂತಹ ಜಾನಪದ ಸೊಗಡಿನ ಮಹತ್ವದ ಸಂಗತಿಗಳು ಪುಸ್ತಕ ರೂಪದಲ್ಲಿ ಶಾಶ್ವತವಾಗಿ ದಾಖಲಾಗಬೇಕು. ಸಾಹಿತಿಗಳು ಈ ನಿಟ್ಟಿನಲ್ಲಿ ಮನ ಮಾಡಬೇಕು ಎಂದು ಜಿಲ್ಲಾ ರಾಜ್ಯೋತ್ಸವ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ದೈವನರ್ತಕ ಲೋಕಯ್ಯ ಸೇರ ಮಾಣಿ ಆಶಯ ವ್ಯಕ್ತಪಡಿಸಿದರು.




ಸುರತ್ಕಲ್ ಗೋವಿಂದದಾಸ ಕಾಲೇಜಿನ ಸಾಹಿತ್ಯ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಹಾಗೂ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಮತ್ತು ವಿದ್ಯಾ ಪ್ರಕಾಶನ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ರಘು ಇಡ್ಕಿದು ಅವರ 30ನೇ ಕೃತಿ ‘ಎನ್ನ ನಲಿಕೆ’ ತುಳು ಕವನ ಸಂಕಲನವನ್ನು ಗೋವಿಂದದಾಸ ಕಾಲೇಜು ಸಭಾಂಗಣದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.




ಇಂದಿನ ಆಧುನಿಕತೆಯ ಭರಾಟೆಯಲ್ಲಿ ಹಳೆಯ ಆಚಾರ ವಿಚಾರಗಳು ಮರೆಗೆ ಸರಿಯುತ್ತಿದೆ. ಅದು ಮುಂದಿನ ಪೀಳಿಗೆಗೂ ಉಳಿಯುವಂತಾಗಲು ಗ್ರಂಥರೂಪದಲ್ಲಿ ದಾಖಲಾಗಬೇಕಾದುದು ಅಗತ್ಯ. ತುಳುನಾಡಿನ ದೈವಾರಾಧನೆಯ ಮೌಖಿಕ ಸಾಹಿತ್ಯದಲ್ಲಿ ಮೊಗೆದಷ್ಟೂ ಅದ್ಭುತ ವಿಚಾರಗಳಿವೆ. ಇಂದು ದೈವರಾಧನೆ ಬಗ್ಗೆ ಬಹಳಷ್ಟು ದಾಖಲೀಕರಣ ನಡೆಯುತ್ತಿದೆ. ಆದರೆ ಕೇವಲ ಪ್ರಚಾರಕ್ಕಷ್ಟೇ ಸೀಮಿತವಾಗದೆ ಕ್ಷೇತ್ರ ಪರಿಣಿತರು, ವಿಷಯತಜ್ಞರಿಂದ ಮೂಲಮಾಹಿತಿ ಪಡೆದು ನೈಜ ವಿಷಯದ ದಾಖಲೀಕರಣ ಕಾರ್ಯವಾಗಬೇಕಿದೆ ಎಂದರು.




ಅಧ್ಯಕ್ಷತೆ ವಹಿಸಿದ್ದ ಗೋವಿಂದದಾಸ ಕಾಲೇಜು ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಮಾತನಾಡಿ, ರಘು ಇಡ್ಕಿದು ಅವರ ಕೃತಿಗಳಲ್ಲಿ ಜೀವಂತಿಕೆಯಿದೆ. ಹೊಸತನದೊಂದಿಗೆ ವೈವಿಧ್ಯಮಯ ಸಾಹಿತ್ಯ ರಚನೆ ಅವರ ವಿಶೇಷತೆ ಎಂದರು.




ಉಪ ಪ್ರಾಂಶುಪಾಲ ಪ್ರೊ.ರಮೇಶ್ ಭಟ್ ಎಸ್.ಜಿ., ಪ್ರಕಾಶಕ ಕಲ್ಲೂರು ನಾಗೇಶ, ಪತ್ರಕರ್ತ ರಾಜೇಶ್ ಶೆಟ್ಟಿ ದೋಟ ಮುಖ್ಯ ಅತಿಥಿಗಳಾಗಿದ್ದರು. ಕೃತಿಕಾರ ರಘು ಇಡ್ಕಿದು ಕೃತಿಯ ಹಿನ್ನಲೆಯಲ್ಲಿ ತಿಳಿಸಿದರು.




ಮಂಗಳೂರು ವಿಶ್ವವಿದ್ಯಾಲಯ ತುಳು ಎಂಎ ವಿಭಾಗ ಪ್ರಾಧ್ಯಾಪಕಿ ಮಣಿ ಮನಮೋಹನ್ ರೈ ಕೃತಿ ಕುರಿತು ಮಾತನಾಡಿದರು. ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷೆ ಡಾ.ಜ್ಯೋತಿ ಚೇಳಾರು ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಡಾ.ಸುರೇಶ ನೆಗಳಗುಳಿ, ಡಾ.ಸಂತೋಷ ಆಳ್ವ, ಚೆನ್ನಪ್ಪ ಅಳಿಕೆ, ರೇಮಂಡ್ ಡಿ’ಕುನ್ಹ ತಾಕೊಡೆ, ಸುಲೋಚನಾ ಪಚ್ಚಿನಡ್ಕ, ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ, ಅಶೋಕ್ ಎನ್.ಕಡೇಶಿವಾಲಯ, ಉಮೇಶ್ ಶಿರಿಯ, ಜೀವಪರಿ, ಯಶವಂತ ಡಿ.ಎಸ್., ರೇಖಾ ಸುದೇಶ್ ರಾವ್, ಸೌಮ್ಯಾ ಆರ್.ಶೆಟ್ಟಿ, ಅನುರಾಧಾ ರಾಜೀವ್ ಸುರತ್ಕಲ್, ಭಾಸ್ಕರ್ ವರ್ಕಾಡಿ, ಎಸ್.ಕೆ.ಕುಂಪಲ, ಎಂ.ಎಸ್.ವೆಂಕಟೇಶ್ ಗಟ್ಟಿ, ಗೀತಾ ಲಕ್ಷ್ಮೀಶ್, ಸೌಮ್ಯಾ ಗೋಪಾಲ್, ರಶ್ಮಿ ಸನಿಲ್, ರಾಜೇಶ್ವರಿ ಎಚ್.ಬಜ್ಪೆ, ಹಿತೇಶ್ ಕುಮಾರ್ ಭಾಗವಹಿಸಿದ್ದರು.




ದ.ಕ. ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಸ್ವಾಗತಿಸಿದರು. ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರಿ ವಂದಿಸಿದರು. ಸುಲೋಚನಾ ಪಚ್ಚಿನಡ್ಕ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter


Post a Comment

0 Comments
Post a Comment (0)
Advt Slider:
To Top