ನಮ್ಮ ಭಾರತದ ಸಂವಿಧಾನದಲ್ಲೂ ಕೂಡಾ ರಾಮ ರಾಜ್ಯ ಆಡಳಿತದ ಪರಿಕಲ್ಪನೆ ಬಹು ಚೆನ್ನಾಗಿ ಪ್ರತಿ ಬಿಂಬಿತವಾಗಿದೆ. ಗಾಂಧೀಜಿಯವರು ಕೂಡಾ ಈ ರಾಮ ರಾಜ್ಯದ ಕಲ್ಪನೆಯನ್ನು ಗ್ರಾಮರಾಜ್ಯದಿಂದಲೇ ಪ್ರಾರಂಭಿಸಬೇಕು ಅನ್ನುವ ಕನಸು ಹೊತ್ತವರು. ರಾಮರಾಜ್ಯವೆಂದರೆ ಆರ್ಥಿಕವಾಗಿ ಸಾಮಾಜಿಕವಾಗಿ ಸ್ವಾವಲಂಬಿತವಾದ ಬದುಕನ್ನು ನಡೆಸುವ ಪರಿಕಲ್ಪನೆಯ ತತ್ವ. ಹಾಗಾಗಿ ಪ್ರತಿಯೊಂದು ಗ್ರಾಮ ಕೂಡಾ ಸ್ವರಾಜ್ಯದ ತಳ ಹದಿಯಲ್ಲಿ ಕಟ್ಟುವುದೇ ಗಾಂಧಿಯವರು ಕಂಡ ರಾಮರಾಜ್ಜದ ಪರಿಕಲ್ಪನೆ. ಇಲ್ಲಿ ರಾಮ ರಾಜ್ಯವೆಂದರೆ ದೇವರು ಧರ್ಮ ಅನ್ನುವ ಸಂಕಲ್ಪವಲ್ಲ; ಬದಲಾಗಿ ಸರ್ವರೂ ಸುಖಿಯಾಗಿ ಬದುಕಬೇಕೆಂಬ ಶ್ರೀ ರಾಮಚಂದ್ರನ ಆದರ್ಶದ ಆಡಳಿತ ಪ್ರತೀಕ. ಹಾಗಾಗಿ ರಾಮ ರಾಜ್ಯಕ್ಕೆ ಯಾವುದೇ ಜಾತಿ ಧರ್ಮದ ತಳುಕು ಹಾಕವುದು ಅನ್ನುವ ಅಥ೯ವಲ್ಲ. ಸಂವಿಧಾನಿಕ ಪರಿ ಭಾಷೆಯಲ್ಲಿ ವ್ಯಾಖ್ಯಾನಿಸುವುದಿದ್ದರೆ- ಸುಖಿ ರಾಜ್ಯ ಅರ್ಥಾತ್ welfare state concept ಎಂದೇ ಅರ್ಥೈಸಬೇಕು. ಇದು ನಮ್ಮ ಸಂವಿಧಾನದ ಭಾಗ 4 ರಾಜ್ಯ ನಿದೇ೯ಶಿತ ತತ್ವಗಳಲ್ಲಿ ಉಲ್ಲೇಖಿಸಲಾಗಿದೆ.
ಅಯೇೂಧ್ಯೆಯ ಶ್ರೀ ರಾಮಚಂದ್ರನ ಆಡಳಿತ ಪರಿ ಹೇಗಿತ್ತು ಕೇಳಿದರೆ ಶ್ರೀರಾಮಚಂದ್ರ ಎಂದೂ ಅಧಿಕಾರಕ್ಕಾಗಿ ಅರಸೊತ್ತಿಗೆಗೆ ಅಂಟಿಕೊಂಡು ಕುಳಿತ ರಾಜನಲ್ಲವೇ ಅಲ್ಲ. ಯಾವುದೇ ವಿಶ್ವಾಸ ಅವಿಶ್ವಾಸ ಗೊತ್ತುವಳಿಗೆ ಕಾಯದೆ ಕೊಟ್ಟ ಮಾತಿಗೆ ತಲೆಬಾಗಿ ತನ್ನ ಪೀಠವನ್ನೇ ತ್ಯಾಗ ಮಾಡಿದ ರಾಜ ಅನ್ನುವ ಕೀರ್ತಿ ಶ್ರೀ ರಾಮ ಚಂದ್ರನಿಗೆ ಸಂದಾಯವಾಗಿದೆ. ಹಾಗಾಗಿಯೇ ತನ್ನ ತಮ್ಮನಾದ ಭರತನಿಗೆ ಅರಸೊತ್ತಿಗೆಯ ಗದ್ದುಗೆಯನ್ನು ಮನಸಾರೆ ಆರ್ಪಿಸಿ ಹೆಂಡತಿ ಸೀತಾಮಾತೆ ಹಾಗೂ ತಮ್ಮ ಲಕ್ಷ್ಮಣನ ಜೊತೆಗೂಡಿ ವನವಾಸಕ್ಕೆ ತೆರಳಿದ ಸಂಜಾತ ದೊರೆ ಶ್ರೀ ರಾಮಚಂದ್ರ ಅನ್ನುವುದನ್ನು ನಾವಿಂದು ಮನವರಿಕೆ ಮಾಡಿಕೊಳ್ಳಬೇಕು.
ಶ್ರೀ ರಾಮಚಂದ್ರನ ಯುದ್ಧ ಮತ್ತು ವಿದೇಶಾಂಗ ನೀತಿಯೂ ಅಷ್ಟೇ ಇಂದಿನ ಭಾರತದ ವಿದೇಶಾಂಗ ನೀತಿಯ ಪಂಚ ಶೀಲ ತತ್ವಗಳಲ್ಲಿ ಪಡಿ ಮೂಡಿ ಬಂದಿದೆ.ನಮ್ಮ ವಿದೇಶಾಂಗ ನೀತಿಯ ಒಂದು ಪ್ರಮುಖ ತತ್ವವೆಂದರೆ, ಶಾಂತಿಯುತ ಸಹಬಾಳ್ವೆ. ಯಾರ ಕೂಡಾ ನಾವಾಗಿ ಯುದ್ಧಕ್ಕೆ ಹೇೂಗಲ್ಲ. ಶಾಂತಿ ಪ್ರಿಯರು ನಾವು. ಅದೇ ರೀತಿ ತಟಸ್ಥ ನೀತಿ. (neutrality) ತಟಸ್ಥರು ಅಂದರೆ ಜಗತ್ತಿನಲ್ಲಿ ನಡೆಯುವ ನ್ಯಾಯ ಅನ್ಯಾಯಗಳನ್ನು ನೇೂಡಿ ಕಣ್ಣು ಮುಚ್ಚಿ ಕುಳಿತುಕೊಳ್ಳುವವರು ಅನ್ನುವ ನಿರ್ಲಿಪ್ತ ಅರ್ಥವೂ ಅಲ್ಲ. ಇದೇ ತತ್ವಗಳನ್ನು ಶ್ರೀರಾಮಚಂದ್ರ ಕೂಡಾ ತನ್ನ ಯುದ್ಧ ನೀತಿ ಮತ್ತು ವಿದೇಶಾಂಗ ನೀತಿಯಲ್ಲಿ ಕೂಡಾ ಸ್ವಷ್ಟವಾಗಿ ಪ್ರತಿಪಾದಿಸಿದ್ದಾನೆ. ಲಂಕಾಧೀಶನಾದ ರಾವಣನು ಸೀತೆಯನ್ನು ಅಪಹರಿಸಿಕೊಂಡು ಲಂಕೆಗೆ ಹೇೂದಾಗಲೂ ಕೂಡಾ ಶ್ರೀರಾಮಚಂದ್ರ ಒಮ್ಮೆಲೆ ಯುದ್ಧ ಘೇೂಷಿಸಲೇ ಇಲ್ಲ. ಬದಲಾಗಿ ಸಂಧಾನದ ಮಾತುಕತೆಗಾಗಿ ಹನುಮಂತನನ್ನು ರಾಯಭಾರಿಯಾಗಿ ಕಳುಹಿಸಿದ್ದ. ಸಂಧಾನದ ಮಾತು ಕತೆಮುರಿದು ಬಿದ್ದ ಮೇಲೇ ಕೊನೆಯ ಅಸ್ತ್ರವಾಗಿ ಯುದ್ಧ ಸಾರಬೇಕಾದ ಅನಿವಾರ್ಯತೆ ಬಂತು. ಇಲ್ಲಿಯೂ ಕೂಡಾ ಶ್ರೀ ರಾಮಚಂದ್ರನ ಸರ್ಜಿಕಲ್ ಸ್ಟೈಕ್ ರಾವಣನ ಮೇಲೆ ಆಗಿತ್ತು ಬಿಟ್ಟರೆ ಸಾಮಾನ್ಯ ನಾಗರಿಕರ ಬದುಕಿನಲ್ಲಿ ಮಾಡಿಯೇ ಇಲ್ಲ.
ಶ್ರೀ ರಾಮಚಂದ್ರನ ವಿದೇಶಾಂಗ ನೀತಿಯ ಇನ್ನೊಂದು ಉತ್ಕೃಷ್ಟ ಗುಣವೆಂದರೆ ರಾವಣನನ್ನು ಸದೆ ಬಡಿದು ಲಂಕೆಯನ್ನು ಗೆದ್ದ ಶ್ರೀ ರಾಮಚಂದ್ರ ಇಡೀ ರಾಜ್ಯವನ್ನು ತಾನು ಇಟ್ಟು ಕೊಳ್ಳ ಬಹುದಿತ್ತು. ಆದರೆ ಅದನ್ನು ತನ್ನ ವೈರಿ ರಾವಣನ ತಮ್ಮ ವಿಭೀಷಣನಿಗೆ ಆರ್ಪಣೆ ಮಾಡಿ ಅಯೇೂಧ್ಯಗೆ ಮರಳಿ ಬಂದಿರುವುದೆ ನಮ್ಮ ವಿದೇಶಾಂಗ ನೀತಿಯ ಆದರ್ಶತನದ ಪರಮ ಶ್ರೇಷ್ಠ ಗುಣವೆಂದೇ ಇಂದಿನ ಅಂತರರಾಷ್ಟ್ರೀಯ ನೀತಿಯ ಅಧ್ಯಯನದ ವಿದ್ಯಾರ್ಥಿಗಳಿಗೆ ತಿಳಿಸಬೇಕಾದ ಮೂಲ ಪಾಠವೂ ಹೌದು.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


