ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಯುವ ಸಾಹಿತ್ಯ ಸಮ್ಮೇಳನ
ಬೋಳೂರಿನ ಅಮೃತ ವಿದ್ಯಾಲಯಂ ಆವರಣದಲ್ಲಿ ಜರಗಿದ ಮಠದ 25 ನೇ ವರ್ಷದ ಸಂಭ್ರಮಾಚರಣೆ
ಮಂಗಳೂರು: ಸಾಹಿತ್ಯದ ಓದು ಮತ್ತು ರಚನೆಯಿಂದ ವ್ಯಕ್ತಿತ್ವದ ಬೆಳವಣಿಗೆ ಆಗುತ್ತದೆ. ಇದು ಶಿಕ್ಷಣಕ್ಕೆ ಪೂರಕವಾದ ಒಂದು ಚಟುವಟಿಕೆಯಾಗಿದ್ದು ಯುವಜನರು ತಮ್ಮ ಆಂತರ್ಯದ ಅಭಿವ್ಯಕ್ತಿಗಾಗಿ ಸಾಹಿತ್ಯವನ್ನು ಅವಲಂಬಿಸುವುದು ಸೂಕ್ತ ಎಂದು ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದ ಸ್ವಾಮಿನಿ ಮಂಗಲಾಮೃತ ಪ್ರಾಣ ಅವರು ಹೇಳಿದರು.
ಬೋಳೂರಿನ ಅಮೃತ ವಿದ್ಯಾಲಯಂ ಆವರಣದಲ್ಲಿ ಜರಗಿದ ಮಠದ 25 ನೇ ವರ್ಷದ ಸಂಭ್ರಮಾಚರಣೆ ಹಾಗೂ ರಾಷ್ಟ್ರೀಯ ಯುವದಿನದ ಅಂಗವಾಗಿ ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ಆಯೋಜಿಸಲಾದ ಯುವ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಅವರು ಸಾಹಿತ್ಯದ ಬೆಳವಣಿಗೆಗೆ ನಾವು ಯುವಜನರ ಕಡೆಗೆ ಹೆಚ್ಚಾಗಿ ಗಮನ ಹರಿಸಿದ್ದೇವೆ. ಯುವಜನರಿಗೆ ಅನ್ವಯವಾಗುವ ಕಾರ್ಯಕ್ರಮಗಳ ಮೂಲಕ ಅವರನ್ನು ತಲಪುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕವಿ ಸಾಹಿತಿ ಹಾಗೂ ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ಅಧ್ಯಕ್ಷ ಡಾ. ವಸಂತುಮಾರ ಪೆರ್ಲ ಅವರು ಸಾಹಿತ್ಯದ ಮೂಲಕ ಒಂದು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವುದು ನಮ್ಮ ಉದ್ದೇಶವಾಗಿರಬೇಕು. ವಿಚಾರಗಳನ್ನು ಆಳವಾಗಿ ಅರಿತುಕೊಳ್ಳಬೇಕು ಮತ್ತು ಅವುಗಳನ್ನು ಅನುಭವಗಮ್ಯ ಮಾಡಿಕೊಂಡು ಒಳ್ಳೆಯ ಭಾಷೆಯ ಮೂಲಕ ಅಭಿವ್ಯಕ್ತಿಸಿದಾಗ ಉತ್ತಮ ಸಾಹಿತ್ಯ ರಚನೆ ಆಗುತ್ತದೆ ಎಂದರು.
ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ಸಂಚಾಲಕಿ ವೀಣಾ ಟಿ. ಶೆಟ್ಟಿ ಸ್ವಾಗತಿಸಿದರು. ಸದಸ್ಯ ಡಾ. ಬಾಲಕೃಷ್ಣ ಭಾರದ್ವಾಜ್ ನಿರ್ವಹಿಸಿದರು. ಇನ್ನೋರ್ವ ಸದಸ್ಯ ಪ್ರವೀಣ್ ಚಂದ್ರ ಶರ್ಮ ವಂದಿಸಿದರು.
ಅನಂತರ ಪ್ರಬಂಧಗೋಷ್ಠಿ, ಕಥಾಗೋಷ್ಠಿ, ಕವನಗೋಷ್ಠಿಗಳು ಜರಗಿದವು. ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಿಂದ ಆಗಮಿಸಿದ್ದ ಯುವಜನರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ