ಭ್ರೂಣದಿಂದಲೇ
ಹೆಣ್ಣಿನ
ರಕ್ಷಣೆ
ಆಗಲಿ:
ಡಾ
ರೇವತಿ
ಭಟ್
ವಿದ್ಯಾಗಿರಿ: ‘ಹೆಣ್ಣು ಮಕ್ಕಳ ರಕ್ಷಣೆಯು ಭ್ರೂಣದಿಂದಲೇ ಆರಂಭಗೊಳ್ಳಬೇಕು’ ಎಂದು ಆಳ್ವಾಸ್ ಆರೋಗ್ಯ ಕೇಂದ್ರದ ಸ್ವ್ರೀರೋಗ ತಜ್ಞೆ ಡಾ ರೇವತಿ ಭಟ್ ಹೇಳಿದರು.
ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ‘ಹೆಣ್ಣು ಮಕ್ಕಳ ರಕ್ಷಣೆಗಾಗಿ ಆಂದೋಲನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳ ರಕ್ಷಣೆಗಾಗಿ ಜಾಗೃತಿಯ ಜೊತೆಗೆ ನಿರಂತರ ಕಾರ್ಯಕ್ರಮಗಳು ಅವಶ್ಯ. ಭ್ರೂಣದ ಲಿಂಗ ಪತ್ತೆ ಅಪರಾಧ ಎಂದರು.
ಹೆಣ್ಣು ಇಲ್ಲದ ಸಮಾಜವನ್ನು ಊಹಿಸಲೂ ಸಾಧ್ಯವಿಲ್ಲ. ಆಕೆ ಸೃಷ್ಟಿಕರ್ತೆ. ಅದೇ ರೀತಿಯಲ್ಲಿ ಗಂಡು ಇಲ್ಲದೆಯೂ ಸಮಾಜ ಇಲ್ಲ ಎಂದ ಅವರು, ಹೆಣ್ಣು ಗಂಡು ಎಂಬ ಭೇದ ಅಥವಾ ತಾತ್ಸರವನ್ನು ಮಾಡಬಾರದು. ದಕ್ಷಿಣ ಕನ್ನಡ ಮುಂದುವರಿದಿದ್ದರೂ, ಇಲ್ಲಿನ ಹೆಣ್ಣು ಮಕ್ಕಳ ಲಿಂಗಾನುಪಾತವು ಆತಂಕ ಮೂಡಿಸುತ್ತದೆ. ಶಿಕ್ಷಣ ನೀಡುವ ಮೂಲಕ ಹೆಣ್ಣನ್ನು ಸಬಲೀಕರಣಗೊಳಿಸಿ. ಬಹುತೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹೆಣ್ಣು- ಗಂಡಿನ ನಡುವೆ ತಾರತಮ್ಯವಿಲ್ಲ. ಭಾರತದ ಹಲವೆಡೆ ಮಾತೃಪ್ರಧಾನ ವ್ಯವಸ್ಥೆ ಇದ್ದು, ಹೆಣ್ಣಿಗೆ ಗೌರವ ನೀಡಲಾಗುತ್ತಿದೆ. ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಮಹಿಳೆಯಾಗಿದ್ದಾರೆ. ಯಾರೂ ಭ್ರೂಣ ಹತ್ಯೆ ಮಾಡಬಾರದು. ಇದಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ತಿಮ್ಮಯ್ಯ ಎಚ್.ಆರ್., ಹೆಣ್ಣು ಮಕ್ಕಳ ಸಂರಕ್ಷಣಾ ದಿನವನ್ನು ಆಚರಿಸಬೇಕಾದ ಸ್ಥಿತಿ ಬಂದಿರುವುದಕ್ಕೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು. ಹೆಣ್ಣು ಮತ್ತು ಗಂಡು ಮಕ್ಕಳ ಮಧ್ಯೆ ಭೇಧಭಾವ ತಪ್ಪು ಎಂದ ಅವರು, ‘ಅಮ್ಮ ಹಚ್ಚಿದ ಹಣತೆ ಇನ್ನೂ ಬೆಳಗಿದೆ. ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ’ ಎಂಬ ಕವನ ವಾಚಿಸಿದರು. ಹೆಣ್ಣಿಂದಲೇ ಇಹವು, ಹೆಣ್ಣಿಂದಲೇ ಪರವು, ಹೆಣ್ಣಿಂದ ಸಕಲ ಸಂಪದವು, ಹೆಣ್ಣ ಒಲ್ಲದ ಅಣ್ಣಗಳು ಯಾರಿರುವರು ಸರ್ವಜ್ಞ’ ಎಂದು ತ್ರಿಪದಿ ವಾಚಿಸಿದರು. ಭ್ರೂಣ ಹತ್ಯೆ ಮಾಡುವ ವೈದ್ಯರು ಕೇವಲ ವೈದ್ಯರಾಗಿ ಮಾತ್ರವಲ್ಲ, ಮನುಷ್ಯನಾಗಿರಲೂ ಅಯೋಗ್ಯ. ದೇಶದಲ್ಲಿ ಹೆಣ್ಣು ಮಕ್ಕಳ ಲಿಂಗಾನುಪಾತ ಹೆಚ್ಚಾಗಬೇಕಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ಡಾ ವಿನಯ್ ಆಳ್ವ ಮಾತನಾಡಿ, ನಾವು ನದಿಗೆ ಹೆಣ್ಣಿನ ಹೆಸರನ್ನು ಇಡುತ್ತೇವೆ. ಆ ಮೂಲಕ ಪಾವಿತ್ರ್ಯತೆ ಹಾಗೂ ಗೌರವ ದೊರಕಿಸಲು ಯತ್ನಿಸುತ್ತೇವೆ. ಆದರೆ, ನಾವು ಹೇಗೆ ನಡೆದುಕೊಳ್ಳುತ್ತೇವೆ. ಅದೇ ಸ್ಥಿತಿ ಹೆಣ್ಣು ಮಕ್ಕಳಿಗೂ ಬಂದಿದೆ. ನಾವು ಹೆಣ್ಣನ್ನು ಆದಿಶಕ್ತಿಯಾಗಿ ಆರಾಧಿಸುತ್ತೇವೆ. ಆದರೆ, ಬದುಕಿನಲ್ಲಿ ಹೇಗೆ ನಡೆಸಿಕೊಳ್ಳುತ್ತೇವೆ ಎಂದರು. ನಾವು ಹೆಣ್ಣನ್ನು ನೋಡುವ ದೃಷ್ಟಿ ಬದಲಾಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಜಾಗೃತಿ ಮೂಡಿಸಬೇಕು ಎಂದರು.
ನಂತರ ನಡೆದ ಗೋಷ್ಠಿಯಲ್ಲಿ ವಾಮಂಜೂರು ಸಿಡಿಎಸ್‍ಸಿ ನಿರ್ದೇಶಕಿ ಡಾ. ರೀಟಾ ನೊರೊನ್ಹಾ, ಹಣದ ದುರಾಸೆಯು ಮೌಲ್ಯ ಕುಸಿತಕ್ಕೆ ಕಾರಣವಾಗಿದ್ದು, ಇದೇ ಲಿಂಗ ತಾರತಮ್ಯಕ್ಕೂ ಕಾರಣವಾಗುತ್ತಿದೆ. ಪ್ರತಿ ಹೆಣ್ಣು ವಜ್ರ. ಆದರೆ, ನಮ್ಮ ಸಾಮಾಜಿಕ, ಆರ್ಥಿಕ, ಧಾರ್ಮಿಕ ವಿಚಾರಗಳು ಆಕೆಯನ್ನು ಮಸಿ ಬಳಿದು ಬಂಧಿಸಿವೆ. ಇವುಗಳಿಂದ ಆಕೆ ಹೊರಬರಬೇಕಾಗಿದೆ. ಮಾನವೀಯ ಮೌಲ್ಯ ಹೆಚ್ಚಿಸುವ ಗುಣಗಳಾದ ಹಂಚಿಕೊಳ್ಳುವುದು, ಕಾಳಜಿ ವಹಿಸುವುದು ಹಾಗೂ ತ್ಯಾಗವನ್ನು ನಾವು ಮರೆತು, ದುರಾಸೆಯಲ್ಲಿ ತೊಡಗಿದ್ದೇವೆ ಎಂದರು.
ನಂತರದ ಗೋಷ್ಠಿಯಲ್ಲಿ ಎ.ಜೆ. ವೈದ್ಯಕೀಯ ಕಾಲೇಜಿನ ಡಾ.ಎ.ಅಮೃತಾ ಭಂಡಾರಿ ಮಾತನಾಡಿದರು. ಜಿಲ್ಲಾ ಕುಟುಂಬ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ದೀಪಾ ಪ್ರಭು ಇದ್ದರು. ಸಮಾಜ ಕಾರ್ಯ ವಿಭಾಗದ ಸಂಯೋಜಕಿ ಡಾ. ಶೆರ್ಲಿ ಟಿ. ಬಾಬು ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನವ್ಯಾ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಅಲೆಕ್ಸಾಂಡರ್ ಬೋಸ್ ವಂದಿಸಿದರು.
ಬಹುಮಾನ:
ಆಂದೋಲನದ ಅಂಗವಾಗಿ ಹಮ್ಮಿಕೊಂಡ ಭಿತ್ತಿಚಿತ್ರ ರಚನಾ ಸ್ಪರ್ಧೆಯಲ್ಲಿ ಆಳ್ವಾಸ್ ಪ್ರಕೃತಿ ಚಿಕತ್ಸೆ ಹಾಗೂ ಯೋಗವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಅರ್ಜುನ ಆಳ್ವ ಪ್ರಥಮ, ಆಳ್ವಾಸ್ ಆರ್ಯುವೇದ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಕೇಶವ್ ದ್ವಿತೀಯ ಹಾಗೂ ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಜಿ. ಗೌತಮಿ ಭಟ್ ತೃತೀಯ ಸ್ಥಾನ ಪಡೆದರು.
ಇಂಗ್ಲಿಷ್ ಘೋಷ ವಾಕ್ಯ ರಚನೆಯಲ್ಲಿ ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಸಿದ್ಧಾರ್ಥ ಪ್ರಥಮ, ಆಳ್ವಾಸ್ ಪ್ರಕೃತಿ ಚಿಕತ್ಸೆ ಹಾಗೂ ಯೋಗವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಅನಿರುದ್ಧ ಡಿ. ಪ್ರಭು ದ್ವಿತೀಯ ಹಾಗೂ ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನ ಸಾಲ್ಮಿ ನಜೀಬಾ ತೃತೀಯ ಬಹುಮಾನ ಪಡೆದರು.
ಕನ್ನಡ ಘೋಷ ವಾಕ್ಯ ರಚನೆಯಲ್ಲಿ ಆಳ್ವಾಸ್ ಸಂಯುಕ್ತ ಆರೋಗ್ಯ ವಿಜ್ಞಾನ ಕಾಲೇಜಿನ ಜಾಯ್ಲಿನ್ ಕೊರ್ಡೆರೊ ಪ್ರಥಮ, ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಲಿಖಿತ್ ಆರ್.ಬಿ ದ್ವಿತೀಯ, ಆಳ್ವಾಸ್ ಸಂಯುಕ್ತ ಆರೋಗ್ಯ ವಿಜ್ಞಾನ ಕಾಲೇಜಿನ ಸನೇತ್ ಕುಮಾರ್ ತೃತೀಯ ಬಹುಮಾನ ಪಡೆದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


