ಹರೇರಾಮ ಶ್ರೀಗುರುಭ್ಯೋನಮಃ
•ಉತ್ತರಗಳನ್ನೆಲ್ಲಾ ಬರೆದಾದ ಬಳಿಕ ಸಮಯವುಳಿದಲ್ಲಿ ಎಲ್ಲ ಉತ್ತರಗಳನ್ನು ಅವಲೋಕಿಸಬೇಕು.
ಆಗ- ಮರೆತುಹೋದ,ಬಿಟ್ಟುಹೋದ,ತಪ್ಪಾಗಿರುವ,ಕಾಗುಣಿತ(spelling)ತಪ್ಪಾಗಿರುವ....ಇಂತಹವುಗಳನ್ನು ಸರಿಪಡಿಸಬೇಕು.
•ಉತ್ತರಗಳ ಅಂಶಗಳು(points) ಅನುಕ್ರಮವಾಗಿರಬೇಕಾದ್ದಲ್ಲಿ ಹಿಂದುಮುಂದಾಗಿದ್ದರೆ ಮೊದಲು ಬರೆದಲ್ಲಿ ನಕ್ಷತ್ರ ಗುರುತುಹಾಕಿ ಅಲ್ಲಿನ ಕ್ರಮಸಂಖ್ಯೆಯನ್ನು ಬದಲಿಸಿ ಕೆಳಗೆ ಬಿಟ್ಟಿರುವ ಗೆರೆಗಳಲ್ಲಿ ಸರಿಪಡಿಸಿದುದನ್ನು ನಕ್ಷತ್ರ ಗುರುತಿನೊಂದಿಗೆ ಸ್ಫುಟವಾಗಿ ಬರೆಯಬೇಕು.
•ಇನ್ನೂ ಸಮಯವುಳಿದಲ್ಲಿ ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರವನ್ನು ಬರೆಯಬೇಕು.
•ಪ್ರತ್ಯೇಕ ಪುಟವೊಂದರಲ್ಲಿ ಮೇಲ್ಭಾಗದಲ್ಲಿ ಸರಿಯಾಗಿ ಕಾಣುವಂತೆ "ಹೆಚ್ಚುವರಿ ಉತ್ತರಗಳು"(Extra answers)ಎಂದು ಬರೆದು ಪ್ರಶ್ನೆಸಂಖ್ಯೆಯನ್ನು ಈ ಹಿಂದಿನಂತೆ ಬರೆದು ಉತ್ತರಿಸಬೇಕು.
•ಎಷ್ಟೋ ಸಲ ನಮಗೆ; ನಾವು ಬರೆದ ಉತ್ತರ ಸರಿಯಿದೆ,
ಪರಿಪೂರ್ಣವಾಗಿದೆ ಎಂದಿರುತ್ತದೆ.ಆದರೆ ಹಾಗಿರುವುದಿಲ್ಲ.ಇಂತಹ ಸಂದರ್ಭಗಳಲ್ಲಿ ಹೆಚ್ಚುವರಿ ಉತ್ತರಗಳನ್ನು ನಾವು ಬರೆದಿದ್ದರೆ ಅದರಿಂದ ನಮಗೆ ಪ್ರಯೋಜನವಿದೆ. ಈ ಮೊದಲು ನಾವು ಆಯ್ದು ಬರೆದ ಉತ್ತರಕ್ಕಿಂತ ಈ ಹೆಚ್ಚುವರಿ ಉತ್ತರವು ಹೆಚ್ಚಿನ ಅಂಕಗಳನ್ನು ಪಡೆದಿದ್ದರೆ ಮೌಲ್ಯಮಾಪಕರು ಇದನ್ನು ಉಳಿಸಿ ಮೊದಲನೆಯದನ್ನು ಅಳಿಸುತ್ತಾರೆ.ಮೊದಲನೆಯದು ತಪ್ಪಾಗಿದ್ದರೆ ಮತ್ತಷ್ಟು ಲಾಭ!
ಹೀಗೆ ಪರೀಕ್ಷೆಯಲ್ಲಿ ಉತ್ತರ ಬರೆಯುವುದನ್ನು "ಪರೀಕ್ಷೆಯಲ್ಲಿ ಧನಾತ್ಮಕವಾಗಿ ಬರೆಯುವಿಕೆ" (Positive writing in Examination)ಎನ್ನುತ್ತೇವೆ.
"Positive writing Positive valuation ಗೆ ದಾರಿ" ಎಂಬುದನ್ನು ಮರೆಯಬಾರದು.Positive valuation ಕನಿಷ್ಠ ಐದಾರು ಅಂಕಗಳನ್ನು ತಂದುಕೊಡಬಲ್ಲುದು. ಅದಕ್ಕೇ "ಪರೀಕ್ಷೆಯಲ್ಲಿ ಬರೆಯುವುದೂ ಒಂದು ಕಲೆ" ಎಂದು ಹೇಳುವುದು. ಆ ಕಲೆ-ಕುಶಲತೆಗಳು ನಮ್ಮದಾದರೆ "ಪರೀಕ್ಷಾ ಭಯ" ಇಲ್ಲ!
ಇವೆಲ್ಲಾ ಆದ ಬಳಿಕ, ಎಲ್ಲವೂ ಬರೆದಾದ ಬಳಿಕ ಉತ್ತರ ಪತ್ರಿಕೆಯ ಮುಖಪುಟದಲ್ಲಿ ನಾವು ಬರೆದ ಪುಟಗಳ ಸಂಖ್ಯೆಯನ್ನು (ಮುಖ್ಯ ಉತ್ತರ ಪುಸ್ತಕದ ಪುಟಗಳು+ ಹೆಚ್ಚುವರಿ ಹಾಳೆಗಳಲ್ಲಿ ಬಳಸಿರುವ ಪುಟಗಳು)
ಅತ್ಯವಶ್ಯವಾಗಿ ಬರೆದು ಗಟ್ಟಿಯಾಗಿ ಕಟ್ಟಿಡಬೇಕು.
•ಇನ್ನೂ ಸಮಯವುಳಿದಾಗ ಕಟ್ಟಕಡೆಗೆ ಇತರ ಪುಟ/Rough pageದ ಮೇಲೆ ಮೂಲೆಯಿಂದ ಮೂಲೆಗೆ ಒಂದು ಗೆರೆಯೆಳೆಯ ಬೇಕು.ಕೆಲವು ಸಲ ಇಲ್ಲಿ ಬರೆದಿಟ್ಟ ಉತ್ತರಗಳೂ ಒಂದೆರಡು ಕೃಪಾಂಕಗಳಿಗೆ ಸಹಾಯಕವಾಗುತ್ತವೆ.ಅವೆಲ್ಲ ಒಳಗುಟ್ಟುಗಳು.ಬಾಯಿಯಲ್ಲಿ ಹೇಳಬಹುದು,ಬರಹದಲ್ಲಿ ಅಷ್ಟು ಒಳ್ಳೆಯದಲ್ಲ.
ಬರೆಯುತ್ತಿರುವಾಗ ನೆನಪಲ್ಲಿಡಬೇಕಾದ ಅಂಶಗಳು-
•ಉತ್ತರಿಸಬೇಕಾದ ಎಲ್ಲಾ ಪ್ರಶ್ನೆಗಳಿಗೂ ಬಿಟ್ಟುಬಿಡದೆ ಉತ್ತರಿಸಬೇಕು
•ಪ್ರಶ್ನೆಗಳು ತಪ್ಪಾಗಿದ್ದರೂ ಪ್ರಶ್ನೆಸಂಖ್ಯೆಯನ್ನು ಬರೆದು ಉತ್ತರಿಸುವ ಪ್ರಯತ್ನ ಮಾಡಬೇಕು
•ಉತ್ತರ ಗೊತ್ತಿಲ್ಲದಿದ್ದರೆ ಕನಿಷ್ಠ ಯಾವ ಪಾಠ/ಅಧ್ಯಾಯಕ್ಕೆ ಸಂಬಂಧಪಟ್ಟ ಪ್ರಶ್ನೆಯೆಂಬುದನ್ನಾದರೂ ಬರೆಯುವುದೊಳಿತು.ಇದು ಒಂದೆರಡು ಅಂಕಗಳನ್ನು ತರಬಲ್ಲುದು.
•ಸರಿಯಾಗಿ ಪ್ರಶ್ನೆಪತ್ರಿಕೆಯನ್ನು ಅಧ್ಯಯನ ಮಾಡಿದರೆ ಅದರಲ್ಲೇ ಕೆಲವು ಉತ್ತರಗಳನ್ನು/ಸುಳಿವುಗಳನ್ನು ಕಾಣಬಹುದು
•ಮೌಲ್ಯಮಾಪಕರನ್ನು ಮೋಸಗೊಳಿಸುವ ರೀತಿಯಲ್ಲಿ(ಮತ್ತೆ ಮತ್ತೆ ಅದೇ ಉತ್ತರವನ್ನು ಬರೆಯುವುದು..)
ಉತ್ತರಿಸುವುದು ಋಣಾತ್ಮಕ ಮೌಲ್ಯಮಾಪನಕ್ಕೆ ಕಾರಣವಾದೀತು
•ಕೊಠಡಿ ಮೇಲ್ವಿಚಾರಕರು ನಮ್ಮ ಪ್ರವೇಶಪತ್ರದಲ್ಲಿ ಅಂದಿನ ದಿನಾಂಕಕ್ಕೆ ಸರಿಯಾಗಿ ಸಹಿ ಮಾಡಿದ್ದಾರೆಯೇ ಎಂಬುದನ್ನು ಖಚಿತಪಡಿಸಬೇಕು.
ನಾವು ಪರೀಕ್ಷೆಗೆ ಹಾಜರಾಗಿದ್ದೇವೆಯೆನ್ನುವುದಕ್ಕೆ ನಮ್ಮ ಬಳಿಯಿರುವ ದಾಖಲೆ ಇದೊಂದೇ! ಫಲಿತಾಂಶ ಬರುವ ತನಕ ನಾವಿದನ್ನು ಇಟ್ಟುಕೊಳ್ಳಬೇಕು.
•ಉತ್ತರ ಪತ್ರಿಕೆಯ ಮುಖಪುಟದಲ್ಲಿ ಅವರ ಸಹಿಯೂ ಅತ್ಯಗತ್ಯ.
ಪರೀಕ್ಷೆಯ ಕೊನೆಯಲ್ಲಿ ಅವರು ಈ ಕೆಲಸವನ್ನು ಮಾಡುತ್ತಾರೆ.ಅಲ್ಲಿ ತುಂಬಿದುದು ಸರಿಯಿದೆಯೆಂಬುದನ್ನು ದೃಢೀಕರಿಸುತ್ತಾ ಅವರು ಸಹಿ ಮಾಡುತ್ತಾರೆ.
•ನಾವು ಪಡಕೊಂಡ ಮುಖ್ಯ ಉತ್ತರ ಪುಸ್ತಕ(Main answerbook), ಪೂರಕ(additional papers/sheets)ಹಾಳೆಗಳ ಸಂಖ್ಯೆಗಳನ್ನು ಬರೆದು ಅವರು ಕೊಡುವ ನಮೂನೆ(form)ಯಲ್ಲಿ ನಾವು ಸಹಿಹಾಕಬೇಕು.
•ಎಲ್ಲವೂ ಸರಿಯಿದೆಯೆಂದಾದರೆ ಗಂಟೆಯಾದ ಬಳಿಕ ಕೊಠಡಿಯಿಂದ ಹೊರಗೆ ಬರಬೇಕು.
•ಕಳೆದ ಪರೀಕ್ಷೆಯ ಕುರಿತು ಹಿತಮಿತ ವಿಮರ್ಶೆಯನ್ನು ಸಹಪಾಠಿಗಳೊಂದಿಗೆ ಮಾಡಬಹುದು.
•ತಪ್ಪಾಗಿದ್ದರೆ ಮಂಡೆಬಿಸಿ ಮಾಡದೆ,ಚಿಂತಿಸದೆ ಆದ ತಪ್ಪು ಮರುಕಳಿಸದಂತೆ ಜಾಗ್ರತೆವಹಿಸುತ್ತಾ ಮುಂದಿನ ಪರೀಕ್ಷೆಗೆ ಸಿದ್ಧರಾಗಬೇಕು.
"ಪರೀಕ್ಷೆಯೆಂದರೆ ಹೂವಿನ ಚೆಂಡೇ?
ಚಿಂತಿಸಬಾರದು ದುರ್ಗತಿಗೆ!"
ಇದು "ಮೈಸೂರು ಮಲ್ಲಿಗೆ" ಖ್ಯಾತಿಯ ಕೆ.ಎಸ್.ನ.ರವರ "ಹಿಂದಿನ ಸಾಲಿನ ಹುಡುಗರು" ಕವಿತೆಯ ಸಾಲುಗಳು.ಪರೀಕ್ಷೆಗೆ ತಯಾರುಮಾಡುವುದೆಂದರೆ ಹೂವಿನ ಕೃಷಿಯಂತೆ.ಎಲ್ಲವೂ ಚೆನ್ನಾಗಿದ್ದರೆ- ಪರೀಕ್ಷೆಯೆಂಬುದು ಹೂವಿನ ಚೆಂಡು!
ಅವಕಾಶವಿದ್ದಲ್ಲಿ ಪೂರ್ವಸಿದ್ಧತಾ ಪರೀಕ್ಷೆಯಿಂದಲೇ ಈ ಪ್ರಯತ್ನ ಮಾಡಿ. ಪರೀಕ್ಷಾರ್ಥಿಗಳಿಗೆಲ್ಲರಿಗೂ
ಹೃತ್ಪೂರ್ವಕ ಶುಭಾಶಯಗಳು.
(ಈ ಬರಹದ ಕುರಿತು ಯಾವುದೇ ವಿಸ್ತೃತ ವಿವರಣೆ,ಸ್ಪಷ್ಟೀಕರಣ ಬೇಕಿದ್ದಲ್ಲಿ ಅಳುಕಿಲ್ಲದೆ 9449282939 ಕ್ಕೆ ಕರೆಮಾಡಿ ಅಥವಾ ವಾಟ್ಸಾಪ್ ಸಂದೇಶ ಕಳುಹಿಸಿ.ಗೊತ್ತಿರುವುದನ್ನು ಕೂಡಲೇ,ಗೊತ್ತಿಲ್ಲದಿರುವುದನ್ನು ತಿಳಿದು ಹೇಳುವೆ).
ಹರೇರಾಮ
-ಯು.ಎಸ್. ವಿಶ್ವೇಶ್ವರ ಭಟ್ಟ
ಬೆಳ್ತಂಗಡಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

