ಪುಸ್ತಕಗಳು ಕಲಿತವರಿಗೆ ಕಾಮಧೇನು, ಕಲಿಯದವರಿಗೆ ಕಲ್ಪವೃಕ್ಷ: ಹೇಮಾವತಿ ವೀ. ಹೆಗ್ಗಡೆ

Upayuktha
0

 



ಚಿತ್ರ: ಖ್ಯಾತ ಸಾಹಿತಿ ಕಬ್ಬಿನಾಲೆ ವಸಂತ ಭಾರದ್ವಾಜ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಹೇಮಾವತಿ ವೀ. ಹೆಗ್ಗಡೆ ಅಧ್ಯಕ್ಷತೆ ವಹಿಸಿದರು.


ಉಜಿರೆ: ಹಿರಿಯರು ಓದುವ, ಬರೆಯುವ ಹವ್ಯಾಸ ಬೆಳೆಸಿಕೊಂಡರೆ, ಮಕ್ಕಳೂ ಅವರನ್ನು ಅನುಕರಿಸುತ್ತಾರೆ. ಇದಕ್ಕಾಗಿ ಪ್ರತಿಯೊಂದು ಮನೆಯಲ್ಲಿಯೂ ದೇವರಕೋಣೆ ಇದ್ದಂತೆ ಒಂದು ಪುಟ್ಟ ಗ್ರಂಥಾಲಯವಿರಬೇಕು. ಪುಸ್ತಕಗಳು ಕಲಿತವರಿಗೆ ಕಾಮಧೇನು, ಕಲಿಯದವರಿಗೆ ಕಲ್ಪವೃಕ್ಷವಾಗಿದೆ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಹೇಳಿದರು.


ಅವರು ಶನಿವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜ್ಞಾನ ಅಂದರೆ ಬೆಳಕು. ಬೆಳಕಿನ ಅಭಾವವೇ ಕತ್ತಲೆ. ಕತ್ತಲೆಗೆ ಅಸ್ತಿತ್ವವೇ ಇಲ್ಲ. ಜ್ಞಾನದ ಬೆಳಕು ಇದ್ದಲ್ಲಿ ಅಜ್ಞಾನದ ಅಂಧಕಾರ ತನ್ನಷ್ಟಕ್ಕೆ ದೂರವಾಗುತ್ತದೆ. ಓದುವ ಮತ್ತು ಬರೆಯುವ ಹವ್ಯಾಸದಿಂದ ನಮ್ಮ ಯೋಚನಾಲಹರಿ, ಚಿಂತನ-ಮಂಥನ ಸಾಮರ್ಥ್ಯ ಉದ್ದೀಪನಗೊಂಡು ಉತ್ತಮ ಸಂಸ್ಕಾರ ಮೂಡಿ ಬರುತ್ತದೆ. ಕಥೆ ಹೇಳುವುದರಿಂದ, ಕೇಳುವುದರಿಂದ ನೈತಿಕತೆಯೊಂದಿಗೆ ಸಾಮಾಜಿಕಪ್ರಜ್ಞೆ, ಸತ್ಸಂಗ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಯೆ ಅರಿವು, ಜಾಗೃತಿ, ಆತ್ಮಗೌರವ, ದೇಶಪ್ರೇಮ, ಸ್ವಚ್ಛತೆ, ಸೇವೆ, ಪರೋಪಕಾರ, ಪರಸ್ಪರ ಪ್ರೀತಿ-ವಿಶ್ವಾಸ ಮೊದಲಾದ ಮಾನವೀಯ ಮೌಲ್ಯಗಳೊಂದಿಗೆ ಸುಖ-ಶಾಂತಿ, ನೆಮ್ಮದಿಯ ಸಾಮಾಜಿಕ ಜೀವನಕ್ಕೆ ಭದ್ರ ಬುನಾದಿ ಸಿಗುತ್ತದೆ ಎಂದು ಹೇಮಾವತಿ ವೀ. ಹೆಗ್ಗಡೆಯವರು ಅಭಿಪ್ರಾಯಪಟ್ಟರು.


ಖ್ಯಾತ ಸಾಹಿತಿ ಕಬ್ಬಿನಾಲೆ ವಸಂತ ಭಾರಧ್ವಾಜ ಶುಭಾಶಂಸನೆ ಮಾಡಿ, ಶಿಕ್ಷಣವು ಜ್ಞಾನ ಮತ್ತು ಕೌಶಲ ಮಾತ್ರ ಕೊಡುತ್ತದೆ. ಆದರೆ ನಮ್ಮ ಆಸಕ್ತಿ, ಹವ್ಯಾಸ, ಬುದ್ಧಮತ್ತೆಯನ್ನು ಹೊಂದಿಕೊಂಡು ನಿರ್ಧಿಷ್ಟ ಗುರಿಯೊಂದಿಗೆ ದೃಢಸಂಕಲ್ಪದಿಂದ ಉನ್ನತ ಸಾಧನೆ ಮಾಡಬೇಕು. ನೂರು ಪುಸ್ತಕಗಳನ್ನು ಓದುವುದಕ್ಕಿಂತ ಪ್ರಕೃತಿ-ಪರಿಸರ ಮತ್ತು ನಮ್ಮ ಸುತ್ತಮುತ್ತಲಿನ ಘಟನೆಗಳಿಂದ ನಾವು ಅಪಾರ ಜ್ಞಾನ ಪಡೆಯಬಹುದು. ಶಿವರಾಮ ಕಾರಂತರಂತಹ ಮೇಧಾವಿಗಳು ಪ್ರಕೃತಿಯಲ್ಲೆ ಜ್ಞಾನಸಂಪಾದನೆ ಮಾಡಿದ್ದಾರೆ. ಪ್ರಪಂಚವೇ ತರಗತಿ ಕೋಣೆ, ಪ್ರಕೃತಿಯೇ ಪಾಠಶಾಲೆಯಾಗಬೇಕು. ಅದರಂತೆ ನಾವು ಮಾನಸಿಕ ಪಠ್ಯವನ್ನು ರೂಪಿಸಿಕೊಳ್ಳಬೇಕು.


ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಶಾಂತಿವನಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಿದ ಜ್ಞಾನದಾಸೋಹ  ಭವ್ಯ ಭಾರತದ ಬಗ್ಯೆ ಹೊಸ ಬೆಳಕನ್ನು ಮೂಡಿಸಿದೆ. ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಾಗಿ, ಸಭ್ಯ, ಸುಸಂಸ್ಕೃತ ನಾಗರಿಕರಾಗಿ ರಾಮರಾಜ್ಯದ ಕನಸು ನನಸಾಗಲೆಂದು ಅವರು ಹಾರೈಸಿದರು.


ಬದುಕುವ ಸ್ವಾತಂತ್ಯ್ರ ಎಲ್ಲರಿಗಿದೆ. ಆದರೆ ಸ್ವಾತಂ ಎಂದೂ ಸ್ವೇಚ್ಛೆ ಆಗಬಾರದು. ವೈವಿಧ್ಯಮಯವಾದ, ವಿಭಿನ್ನ ಹಾಗೂ ವಿಚಿತ್ರವಾದ ಪ್ರಪಂಚದಲ್ಲಿ ಹೊಂದಾಣಿಕೆ ಇಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಅವರು ಕಿವಿಮಾತು ಹೇಳಿದರು.


ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top