ನೂರಾರು ಸಮಸ್ಯೆಗಳನ್ನು ಹೇಳಿಕೊಂಡ ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರ: ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂಬ ಮಾತಿಗೆ ಬದ್ಧವಾದ ಕರ್ನಾಟಕ ಸರ್ಕಾರ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಯು 2006 ರಲ್ಲಿ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಮಕ್ಕಳ ಗ್ರಾಮ ಸಭೆಯನ್ನು ನಡೆಸಬೇಕು ಎಂದು ಸುತ್ತೋಲೆಯನ್ನು ಹೊರಡಿಸಿದೆ. ಇದರಿಂದಾಗಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಜೊತೆಗೆ ಮಕ್ಕಳಿಗೆ ಇರುವ ಭಾಗವಹಿಸುವ ಹಕ್ಕನ್ನು ಚಲಾಯಿಸಲು ವೇದಿಕೆ ಸಿಕ್ಕಂತಾಗಿದೆ ಎಂದು ಗ್ರಾಮಾಂತರ ವ್ಯವಸ್ಥಾಪಕರಾದ ಉಷಾ ಶೆಟ್ಟಿಯವರು ಅಭಿಪ್ರಾಯ ಪಟ್ಟರು.
ಬಳಿಕ ಮಕ್ಕಳ ಜೊತೆ ಪ್ರಶ್ನೋತ್ತರ ನಡೆಸಿಕೊಟ್ಟರು. ನಾವು ಹೆಚ್ಚು ವಿಜ್ಞಾನ ಕಲಿಯಲು ವಿಜ್ಞಾನ ಪ್ರಯೋಗಾಲಯ ಮಾಡಿಕೊಡಬೇಕೆಂದು ಹಾಗೂ ಕಂಪ್ಯೂಟರ್ ಕಲಿಯಲು ಕಂಪ್ಯೂಟರ್ ನೀಡಬೇಕೆಂದು ತಾಳಹಳ್ಳಿ ಸ.ಹಿ.ಪ್ರಾ ಶಾಲೆಯ ವಿದ್ಯಾರ್ಥಿ ಶ್ರೀನಿಧಿ ಟಿ ಎಂ ತನ್ನ ಅಗತ್ಯವನ್ನು ಹೇಳಿಕೊಂಡರು. ನನ್ನ ಸ್ನೇಹಿತರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದು ನಾನು ಸಹ ಆಂಗ್ಲ ಮಾಧ್ಯಮದಲ್ಲಿ ಓದಲು ನಮ್ಮ ಶಾಲೆಯಲ್ಲಿ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಬೇಕೆಂದು ಕಡಶೀಗನಹಳ್ಳಿ ಸ.ಹಿ.ಪ್ರಾ ಶಾಲೆಯ ವಿದ್ಯಾರ್ಥಿ ನಿಶಾಂತ್ ಅಧಿಕಾರಿಗಳಿಗೆ ಹೇಳಿದರು. ನಂದ ಕಿಶೋರ್ ಎಂಬ ವಿದ್ಯಾರ್ಥಿ ನನಗೆ ಅಪ್ಪ ಅಮ್ಮ ಇಲ್ಲ, ಅಜ್ಜಿಯ ಮನೆಯಲ್ಲಿ ಇದ್ದು ಅಲ್ಲಿ ನನಗೆ ತುಂಬಾ ಕಷ್ಟವಾಗುತ್ತದೆ, ನನ್ನನ್ನು ಹಾಸ್ಟೆಲ್‌ಗೆ ಸೇರಿಸಿ ಎಂದು ತನ್ನ ಅಳಲನ್ನು ತೋಡಿಕೊಂಡರು.
ತೌಡನಹಳ್ಳಿ ಸ.ಕಿ.ಪ್ರಾ ಶಾಲೆಯ ಕಾಂಪೌಂಡ್ ಕಾಮಗಾರಿ ಕುಂಠಿತವಾಗಿದ್ದು ಪೂರ್ಣಗೊಳಿಸಬೇಕೆಂದು ಹಾಗೂ ರಾಘವ ಎಂಬ ವಿಶೇಷ ಚೇತನ ವಿದ್ಯಾರ್ಥಿ ಕಿವಿ ಕೇಳಿಸುವ ಮಿಷನ್ ಬೇಕೆಂದು ಅಧಿಕಾರಿಗಳಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡರು. ನಮ್ಮ ಶಾಲೆಯಲ್ಲಿ ಹದಿನೈದು ಜನ ವಿದ್ಯಾರ್ಥಿಗಳು ಇದ್ದೇವೆ. ಇಬ್ಬರು ಶಿಕ್ಷಕರು ಇದ್ದಾರೆ ಆದರೆ ಒಂದೇ ಕೊಠಡಿ ಇದೆ. 1-2- 3ನೇ ತರಗತಿ ಮಕ್ಕಳು ಶಾಲೆಯಲ್ಲಿ ಕುಳಿತರೆ 4- 5ನೇ ತರಗತಿ ಮಕ್ಕಳು ಪರಂಡದಲ್ಲಿ ಹೊರಗಡೆ ಕುಳಿತುಕೊಂಡು ಪಾಠ ಕೇಳುತ್ತಾರೆ. ಹಾಗಾಗಿ ಇನ್ನೊಂದು ಕೊಠಡಿಯನ್ನು ಕಟ್ಟಿಸಿಕೊಡಬೇಕೆಂದು ಬೊಮ್ಮನಹಳ್ಳಿ ಸ.ಕಿ.ಪ್ರಾ ಶಾಲೆಯ ವಿದ್ಯಾರ್ಥಿನಿ ಶಿವವಾಣಿ ಕೇಳಿದರು.
ನಮ್ಮ ಊರಿನಲ್ಲಿ ಸೈಟಿಗೆ ಹೋಗುವ ದಾರಿ ತುಂಬಾ ಹದಗೆಟ್ಟಿದ್ದು ಮಳೆ ಬಂದಾಗ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಸೈಟ್ ದಾರಿಗೆ ಟಾರ್ ರೋಡ್ ಹಾಕಿಸಿ ಕೊಡಬೇಕೆಂದು ಕೊಂಡೇನಹಳ್ಳಿ ಸ. ಹಿ. ಪ್ರಾ ಶಾಲೆಯ ವಿದ್ಯಾರ್ಥಿನಿ ಸಂಜನಾಶ್ರೀ ಟಿ.ಎಂ ಅಧಿಕಾರಿಗಳಿಗೆ ತಿಳಿಸಿದರು. ನಮ್ಮ ಶಾಲೆಯಲ್ಲಿ ಮೈದಾನವಿದ್ದು ಪಾರ್ಕ್ ಮಾಡಬೇಕಾಗಿ ಪ್ರಾರ್ಥಿಸಿಕೊಂಡರು.
ನಮ್ಮ ಶಾಲೆಯು ಮುಖ್ಯರಸ್ತೆ ಬದಿಯಲ್ಲಿ ಇದ್ದು ಕಾಂಪೌಂಡ್ ಇಲ್ಲ, ಆಟವಾಡಲು ಮೈದಾನವಿಲ್ಲ ಹಾಗೂ ಕಸವನ್ನು ಹಾಕುವುದಕ್ಕೆ ಜಾಗನು ಇಲ್ಲ ಒಂದು ಕಣಿತಹಳ್ಳಿ ಸ.ಕಿ. ಪ್ರಾ ಶಾಲೆಯ ವಿದ್ಯಾರ್ಥಿ ಸಮಸ್ಯೆಯನ್ನು ತೋಡಿಕೊಂಡರು.
ನಮ್ಮ ಶಾಲೆಯಲ್ಲಿ ಕೈ ತೊಳೆದ ನೀರು ತಟ್ಟೆ ತೊಳದ ನೀರು ಹಾಗೂ ಅಡುಗೆ ಮಾಡುವ ನೀರನ್ನು ಭೂಮಿಯಲ್ಲಿ ಇಂಗಿಸಲು ಇಂಗು ಗುಂಡಿಯನ್ನು ಮಾಡಿಸಿಕೊಡಬೇಕೆಂದು ತಿಮ್ಮನಹಳ್ಳಿ ಶಾಲೆಯ ವಿದ್ಯಾರ್ಥಿನಿ ಕೇಳಿಕೊಂಡರು. ನಮ್ಮ ಗ್ರಾಮದಲ್ಲಿ ನೀರಿನ ಫಿಲ್ಟರ್ ಹಾಳಾಗಿದ್ದು ರಿಪೇರಿ ಮಾಡಿಸಬೇಕೆಂದು ಕಣಿತಹಳ್ಳಿಯ ಶ್ರೀ ವಿನಾಯಕ ವಿದ್ಯಾ ಕೇಂದ್ರ ಶಾಲೆಯ ವಿದ್ಯಾರ್ಥಿನಿ ಮಾನ್ಯಶ್ರೀ ಹೇಳಿದರು.
ಎಂಟು ಶಾಲೆಗಳು 130 ಮಕ್ಕಳು 90 ಪ್ರಶ್ನೆಗಳನ್ನು ಕೇಳಿದರು. ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ದನಿ ಪೆಟ್ಟಿಗೆ ಆಧಾರಿತ ಸಮಸ್ಯೆಗಳನ್ನು ತೋಡಿಕೊಂಡರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಕೆ.ಎಸ್ ಮಕ್ಕಳ ಎಲ್ಲಾ ಪ್ರಶ್ನೆಗಳಿಗೂ ಸಕಾರಾತ್ಮಕ ಉತ್ತರಗಳನ್ನು ನೀಡಿದರು. ಮಕ್ಕಳ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು. ಇನ್ನುಳಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕಬಳ್ಳಾಪುರ ಎನ್ ವೆಂಕಟಪ್ಪರವರು ಮಕ್ಕಳ ಹಕ್ಕುಗಳು ಕುರಿತು ಮಾತಾಡಿದರು. ಪೊಲೀಸ್ ಇಲಾಖೆಯ ಎಎಸ್ಐ ಕೆ ರಮೇಶ್ ರವರು ಮಕ್ಕಳ ಸಹಾಯವಾಣಿ 112 ಹಾಗೂ ಪೊಲೀಸ್ ವಾಹನ ಕುರಿತು ತಿಳಿಸಿದರು. ರಕ್ಷಣಾಧಿಕಾರಿಗಳು ಜಿಲ್ಲಾ ಮಕ್ಕಳ ರಕ್ಷಣೆ ಘಟಕ ಚಿಪುರ ಗಾಯಿತ್ರಿ ಎನ್.ಕೆ ರವರು ಮಕ್ಕಳ ಗ್ರಾಮ ಸಭೆ, 1098, ಬಾಲ್ಯ ವಿವಾಹ, ಬಾಲ ಕಾರ್ಮಿಕತೆ ಹಾಗೂ ಮಕ್ಕಳಿಗಿರುವ ಸೌಲಭ್ಯಗಳನ್ನು ಯೋಜನೆಗಳನ್ನು ಮಕ್ಕಳಿಗೆ ತಿಳಿಸಿದರು. ಸಮಾಜಸೇವಾ ಕಾರ್ಯಕರ್ತೆ ಸಖಿ ಒನ್ ಸ್ಟಾಪ್ ಸೆಂಟರ್ ಚಿಪುರ ರಾಧಾ ಎಂ ಎಚ್ ರವರು ಮಕ್ಕಳ ಆರೋಗ್ಯ ಕುರಿತು ಮಾತನಾಡಿದರು. ಪಂಚಾಯತಿ ಅಧ್ಯಕ್ಷರು ವೆಂಕಟೇಶ್ ಟಿಎಂ ರವರು ಮಕ್ಕಳ ಕುರಿತು ಮಾತಾಡಿದರು.
ಕೊಂಡೇನಹಳ್ಳಿ ಸ.ಹಿ.ಪ್ರಾ ಶಾಲೆಯ ಶಿಕ್ಷಕಿ ಚೈತನ್ಯ ರವರು ಪಂಚಾಯತಿ ವ್ಯಾಪ್ತಿಯ ಮಕ್ಕಳ ಸ್ನೇಹಿತೆಯಾಗಿ ಮಕ್ಕಳ ಸಮಸ್ಯೆಗಳನ್ನು ಆಲಿಸಲು “ಬಾಲ ಮಿತ್ರ” ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಸಭೆಯಲ್ಲಿ ತಾಲೂಕು ಯೋಜನೆ ಅಧಿಕಾರಿ ತಾಲೂಕು ಪಂಚಾಯಿತಿ ಮುನಿ ವೆಂಕಟಪ್ಪ ಎಂ, ಸಿ.ಆರ್.ಪಿ ಕೊಂಡೇನಹಳ್ಳಿ ಕ್ಲಸ್ಟರ್ ರಮೇಶ್, ಇಸಿಓ ಆನಂದ್, ಎಂ ಆರ್ ಡಬ್ಲ್ಯೂ ಸುರೇಶ್, ಪಿಎಚ್‌ಸಿ ಡಾಕ್ಟರ್ ಕೃಷ್ಣ, ಗ್ರಾ.ಪಂ ಸದಸ್ಯರುಗಳು, ಸರ್ಕಾರಿ ಹಾಗೂ ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಾಂತರ ಟ್ರಸ್ಟ್ ಸಂಯೋಜಕರು ಅನಂತಲಕ್ಷ್ಮಿ ಸ್ವಯಂಸೇವಕರು ಮುನಿರಾಜು ಹಾಗೂ ಗ್ರಾಮಾಂತರ ಟ್ರಸ್ಟ್ ಸ್ವಯಂಸೇವಕ ಭಾವಕ್ಕೆ ಯುವಜನ ಸಂಘದ ಅಧ್ಯಕ್ಷ ಪ್ರಜ್ವಲ್ ಕೆ ವಿ ಹಾಜರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ