ಬೆಂಗಳೂರು: ದೆಹಲಿಯಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಅಧಿಕಾರಿ ಬೈಕೆರೆ ನಾಗೇಶ (72) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾಗಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಸಕಲೇಶಪುರ ತಾಲೂಕಿನ ಬೈಕೆರೆಯ ತೋಟದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸಚಿವಾಲಯಗಳಲ್ಲಿ ಅತಿಹೆಚ್ಚು, ಅಂದರೆ 10 ಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ನಾಗೇಶ್, ರಾಜ್ಯದ ಬಹುತೇಕ ರಾಜಕಾರಣಿಗಳಿಗೆ ಆಪ್ತರಾಗಿದ್ದರು. ಹಲವಾರು ವರ್ಷ ರಾಜ್ಯದ ಪ್ರತಿನಿಧಿಯಾಗಿಯೂ ಆ ಸ್ಥಾನಕ್ಕೆ ನ್ಯಾಯ ಒದಗಿಸಿದ್ದರು.
ಹಿರಿಯ ಮುಖಂಡರಾದ ಎಚ್.ಡಿ ದೇವೇಗೌಡರು ಪ್ರಧಾನಿ ಆದ ಸಂದರ್ಭದಲ್ಲಿ ಅವರೊಂದಿಗೂ ಸೇವೆ ಸಲ್ಲಿಸಿದ್ದರು. ಕೇಂದ್ರ ಸಚಿವರಾಗಿದ್ದ ಜಾಫರ್ ಷರೀಫ್, ಗುರುಪಾದಸ್ವಾಮಿ, ಸಂಜಯ ಸಿಂಗ್, ರಾಮಕೃಷ್ಣ ಹೆಗ್ಡೆ, ಚಮನಲಾಲ್ ಗುಪ್ತ, ಧನಂಜಯಕುಮಾರ್, ಎಂ.ವಿ ರಾಜಶೇಖರ್, ಅನಂತಕುಮಾರ್, ಡಿ.ವಿ. ಸದಾನಂದ ಗೌಡ, ಎ. ನಾರಾಯಣಸ್ವಾಮಿ ಅವರೊಂದಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು.
ಕರ್ನಾಟಕದ ಹಲವಾರು ಅಭಿವೃದ್ಧಿ ಕಾರ್ಯಯೋಜನೆಗಳ ಅಧ್ಯಯನ ಮಾಡಿಕೊಂಡಿದ್ದ ನಾಗೇಶ್ ಇವುಗಳ ಜಾರಿಗೆ ಅನುಮತಿ ಮತ್ತು ಅನುಷ್ಠಾನಕ್ಕಾಗಿ ಶ್ರಮಿಸುತ್ತಿದ್ದರು. ಎಲ್ಲಕಿಂತ ಮಿಗಿಲಾಗಿ ನಾಗೇಶರ ಸೇವೆಯ ಆದ್ಯತೆ ಎಂದರೆ ರಾಷ್ಟç ರಾಜಧಾನಿ ದೆಹಲಿಗೆ ಮೊದಲ ಬಾರಿಗೆ ಬರುತ್ತಿದ್ದ ಅಸಹಾಯಕ ಕನ್ನಡಿಗರಿಗೆ ಅವರು ಮಾರ್ಗದರ್ಶನ ನೀಡುತ್ತಿದ್ದರು ಎಂದು ಹಲವರು ನೆನಪಿಸಿಕೊಂಡಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದವರಾಗಿರುವ ನಾಗೇಶ್ ಪತ್ನಿ ಸುಗುಣ ಮತ್ತು ಪುತ್ರಿ ಅರ್ಪಿತರನ್ನು ಅಗಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


