ಬಾಳೆಕಾಯಿ ತುಂಬಿದ ಗೂಡ್ಸ್ ರೈಲಿನ ಕತ್ತಲೆಯ ಬೋಗಿಯಲ್ಲಿ ನಾವು ಅಯೋಧ್ಯೆಗೆ ಮುಖ ಮಾಡಿದ್ದೆವು

Upayuktha
1

 ಅಯೋಧ್ಯೆ ಕರಸೇವಕ ವೀರಣ್ಣ ಗೌಡ ಮೆಲುಕು



1990 ರಲ್ಲಿ ಅಯೋಧ್ಯೆ ಕಾರಸೇವೆಗೆ ಜನರನ್ನು ಒಗ್ಗೂಡಿಸುವ ದೊಡ್ಡ ಆಂದೋಲನ ದೇಶಾದ್ಯಂತ ನಡೆಯಿತು. 'ರಾಮಜ್ಯೋತಿ ಯಾತ್ರೆ' ಎಂದು ದೇಶವ್ಯಾಪಿ ರಥಯಾತ್ರೆಗೆ ಚಾಲನೆ ಕೊಡಲಾಯಿತು. ಯೋಜಿತ 'ರಾಮಜ್ಯೋತಿ' ರಥಯಾತ್ರೆಗೆ ಕರ್ನಾಟಕದಲ್ಲಿ ಆಗ ಇದ್ದ ಸರಕಾರ (ಬಂಗಾರಪ್ಪನವರು ಮುಖ್ಯಮಂತ್ರಿ) ನಿಷೇಧ ಹೇರಿತು. "ಧಾರ್ಮಿಕ ಹಕ್ಕನ್ನು ಕಿತ್ತುಕೊಳ್ಳಲಾಗಿದೆ" ಅಂತ ಜನ ಬೀದಿಗಿಳಿದರು. ದಾವಣಗೆರೆಯಲ್ಲಿ 15 ದಿನಗಳ ಕರ್ಫ್ಯೂ ವಿಧಿಸಲಾಯಿತು!!. ರಾಜ್ಯಾದ್ಯಂತ ಅನೇಕ ಕಾರಸೇವಕರ ಮೇಲೆ ಕೇಸ್‌ಗಳು ದಾಖಲಾದವು. ಇವತ್ತಿಗೂ ಸಂಘ ಪರಿವಾರದಲ್ಲಿ ಅಂತಹ ಕೇಸ್‌ಗಳನ್ನು 'ರಾಮಜ್ಯೋತಿ ಕೇಸ್' ಅಂತಲೇ ಕರೆಯಲಾಗುತ್ತದೆ.  


ಕೇಸ್, ಲಾಠಿಚಾರ್ಜ್, ಸರಕಾರದ ರಕ್ಷಣಾ ಇಲಾಖೆಯ ಬೆದರಿಕೆಗಳು ನಡೆಯುತ್ತಿದ್ದರೂ, ಅಂತರ್‌ ಗಾಮಿನಿಯಾಗಿ ಕರಸೇವೆಗೆ ಒಗ್ಗೂಡಿಸುವ ಆಂದೋಲನ ನಡೆಯುತ್ತಲೇ ಇತ್ತು.


1990 ರ ಅಕ್ಟೋಬರ್ 30ರ ಮೊದಲ ಕಾರಸೇವೆಗೆ ಕರ್ನಾಟಕದಿಂದ 3,000 ಕರಸೇವಕರು ಅನೇಕ ತಂಡಗಳನ್ನು ಮಾಡಿಕೊಂಡು ಹೊರಟಿದ್ದರು.    


ಕಾರಸೇವೆಗೆ ಅಯೋಧ್ಯೆಗೆ ಹೊರಟವರನ್ನು ತಡೆಯಲು ಅನೇಕ ಕಡೆ ರೈಲುಗಳನ್ನು ನಿಲ್ಲಿಸಲಾಯಿತು!!.  ಚಿತ್ರದುರ್ಗದ ಹಿರಿಯೂರಿನಿಂದ ಹೊರಟ ಒಂದು ತಂಡ ಯಾವ ಯಾವದೋ ವಾಹನ ಹಿಡಿದು ಬಳ್ಳಾರಿ ತಲುಪಿತು. ಅಲ್ಲಿಂದ ರೈಲ್‌ನಲ್ಲಿ ಹೋಗುವ ಯೋಚನೆ ಆ ಕಾರಸೇವಕರ ತಂಡದ್ದು.


ಈ ತಂಡ ಬಳ್ಳಾರಿ ತಲುಪುವ ದಿನವೇ, ಬಳ್ಳಾರಿಯಿಂದ ಹೊರಡಬೇಕಿದ್ದ ಎಲ್ಲ ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಯಿತು!!. ಹಳಿಗಳ ಮೇಲೆ ಸಂಚರಿಸುತ್ತಿದ್ದುದ್ದು ಬರಿ ಗೂಡ್ಸ್ ರೈಲುಗಳು ಮಾತ್ರ.


ಏನಾದರು ಆಗಲಿ, ಅಯೋಧ್ಯೆಗೆ ಹೋಗಲೇ ಬೇಕು ಅಂತ ನಿರ್ಧರಿಸಿದ ಬಳ್ಳಾರಿ ರೈಲ್ವೇ ಸ್ಟೇಷನ್‌ನಲ್ಲಿದ್ದ ತಂಡ, ರಹಸ್ಯವಾಗಿ ಗೂಡ್ಸ್ ರೈಲಿನ ಬೀಗ ಜಡಿದಿದ್ದ ಒಂದು ಬೋಗಿಯ ಬೀಗ ಒಡೆದು, ಒಳ ಸೇರಿಕೊಂಡಿತು!!  ರೈಲು ಹೊರಟಿತು.  


ಗೂಡ್ಸ್ ರೈಲುಗಳಿಗೆ ಎಲ್ಲ ಸ್ಟೇಷನ್‌ನಲ್ಲೂ ಸ್ಟಾಪ್ ಇಲ್ಲ. ಒಳಗಿದ್ದವರಿಗೆ ರೈಲು ಎಲ್ಲಿಗೆ ಹೋಗುತ್ತೆ ಅನ್ನುವ ಸ್ಪಷ್ಟತೆ ಇಲ್ಲ. ಒಳಗಡೆ ಸರಿಯಾಗಿ ಬೆಳಕೂ ಇಲ್ಲ. ಬೋಗಿಯ ತುಂಬ ಕೂರಲೂ ಜಾಗವಿಲ್ಲದಷ್ಟು ಬಾಳೆಕಾಯಿ ತುಂಬಲಾಗಿದೆ!! ಬಾಳೆಕಾಯಿ ಗೋಡ್ಸ್ ಬೋಗಿಯಲ್ಲಿ 15-20 ಜನ ಕಾರಸೇವಕರು!!


ಅದರಲ್ಲಿ ಒಬ್ಬರು ಈಗ ಮೇಲುಕೊಪ್ಪ ಅಂಚೆಯ, ರಾಮಾಯಣದ ಕೊಂಡಿ ಬೆಸೆದುಕೊಂಡಿರುವ ಹಳ್ಳಿ ಕೊಳಾವರ ದ (ಈ ರಾಮಾಯಣ ಕೊಂಡಿಯ ಬಗ್ಗೆ ಬರಹದ ಕೊನೇ ಪ್ಯಾರಾಗ್ರಾಫ್ ಗಮನಿಸಿ) ನಿವಾಸಿ ಶ್ರೀ ವೀರಣ್ಣಗೌಡರು ಎಂಬ ಪ್ರಗತಿಪರ ಕೃಷಿಕರು.  


ಮೂಲತಃ ಚಿತ್ರದುರ್ಗ ತಾಲೂಕು ಹಿರಿಯೂರಿನ ವೀರಣ್ಣಗೌಡರು, ಅನೇಕ ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲೂಕಿನ, ಕೊಳಾವರ ಎಂಬ ಹಳ್ಳಿಯಲ್ಲಿ ಹೆಂಡತಿ ಕವಿತಾ ಗೌಡ ಮತ್ತು ಮಗ ಯಶವಂತ ಗೌಡರೊಂದಿಗೆ ಕೃಷಿಕರಾಗಿ ವಾಸಿಸುತ್ತಿದ್ದಾರೆ.  


ಬಾಳೆಕಾಯಿ ತುಂಬಿದ ಟ್ರೈನ್ ಬಳ್ಳಾರಿಯಿಂದ ಮಹಾರಾಷ್ಟ್ರ ತಲುಪಿತು. ಅಲ್ಲಿಂದ ಇನ್ನೊಂದು ಟ್ರೈನ್.  ಮತ್ಯಾವುದೋ ಸ್ಟೇಷನ್.  ಯಾವುದೋ ಕಂಡು ಕೇಳದ ದಾರಿಯಲ್ಲಿ, ಅಲ್ಲಿಯ RSS, VHP ಸೇವಕರ ಸಹಾಯ ಪಡೆದು, ಕೆಲವೊಮ್ಮೆ ದಿನಕ್ಕೆ 15-25 ಕಿಮೀ ನೆಡೆದು ಅಯೋಧ್ಯೆ ಕಡೆಗೆ ಪ್ರಯಾಣ. ನೆಡೆದಿದ್ದು ಅಂದಾಜು ಲೆಕ್ಕದಲ್ಲಿ 400 ಕಿಮೀ ಗಿಂತ ಅಧಿಕ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಅಲ್ಲಿಲ್ಲಿ ಸಿಕ್ಕಿದ 

ಗುರುಕುಲ ಮಾದರಿಯ ಆಶ್ರಮ ಶಾಲೆಗಳಲ್ಲಿ, ಯಾರದೋ ಮನೆಯ ಜಗಲಿಯಲ್ಲಿ 2-3 ಗಂಟೆ ವಿಶ್ರಾಂತಿ,  ಬಹುತೇಕ ಕಡೆಗಳಲ್ಲಿ ಪ್ರಮುಖ ಆಹಾರವೇ ಅವಲಕ್ಕಿ.  20ಜನರ ಬ್ಯಾಚ್ ಚಿತ್ರಕೂಟ ತಲುಪಿತು.  ಅದು ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳ ಬಾರ್ಡರ್. 


ಆ ಚಿತ್ರಕೂಟದಲ್ಲಿ ತಂಡದ ಎಲ್ಲ 20 ಜನರನ್ನೂ ಬಂಧಿಸಿ ಒಂದು ಸರಕಾರಿ ಶಾಲೆ ಕೊಠಡಿಯಲ್ಲಿ ತುಂಬಲಾಯಿತು!! ಅದೇ ದಿನ ಕಾರಸೇವಕರಾಗಿ ಹೊರಟಿದ್ದ ಯಡಯೂರಪ್ಪನವರನ್ನೂ ತಡೆದು ಬಂಧಿಸಿದ ಸುದ್ದಿಯೂ ಈ ತಂಡವನ್ನು ತಲುಪಿತು.


ಒಂದು ದಿನ ಜೈಲು, ಅಷ್ಟೆ!!. ರೈಲಿನ ಬಾಳೆಕಾಯಿ ಬೋಗಿಯ ಬೀಗ ಮುರಿದು ಬೋಗಿಯ ಒಳ ಸೇರಿದ ಕಾರಸೇವಕರ ತಂಡಕ್ಕೆ, ಸರಕಾರಿ ಶಾಲೆಯಿಂದ ತಪ್ಪಿಸಿಕೊಂಡು ಹೊರ ಹೋಗುವುದು ಅಂತಹ ಕಷ್ಟ ಏನಾಗಲಿಲ್ಲ!! 


ಒಂದು ದಿನ ಕೃಷ್ಣ ಜನ್ಮ ಸ್ಥಳದ ಅನುಭವ ಪಡೆದು, ಮರು ದಿನ ರಾಮ ಜನ್ಮ ಭೂಮಿಯ ಕಡೆ ತಪ್ಪಿಸಿಕೊಂಡು ತಂಡ ಹೆಜ್ಜೆ ಹಾಕಿತು!!


ಕೈಯಲ್ಲಿದ್ದ ಕಾರಸೇವಕ ಐಡಿ ಕಾರ್ಡ್ ಒಂದೇ ಬಲ!!. ರಾಮನ ಹೆಸರು ಮತ್ತು ರಾಮನ ಚಿತ್ರ ಇದ್ದ ಈ ಕಾರ್ಡ್ ಈ ತಂಡವನ್ನು ಅಯೋಧ್ಯೆ ವಾಲ್ಮೀಕಿ ಭವನದವರೆಗೂ ಕರೆದುಕೊಂಡು ಹೋಯ್ತು!! ದಾರಿ ಮಧ್ಯೆ ಹಸಿವಿಗೆ, ಬಾಯಾರಿಕೆಗೆ, ಕೆಲವು ಕ್ಷಣ ವಿಶ್ರಾಂತಿಗೆ RSS, VHP, ರಾಮ ಭಕ್ತ ಹಿಂದುಗಳ ಮೂಲಕ ವ್ಯವಸ್ಥೆ ಮಾಡಿಸಿದ್ದೂ ಈ ರಾಮ ನಾಮ ಮತ್ತು ರಾಮ ಕಾರಸೇವಕ ಕಾರ್ಡ್!!


ಅಯೋಧ್ಯೆ ಊರೊಳಗಿನ ಮುಖ್ಯ ರಸ್ತೆಯ ಜನ್ಮ ಭೂಮಿಯ ಕಡೆಗಿದ್ದ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ಪ್ರವೇಶ ನಿಶೇಧಿಸಲಾಗಿತ್ತು.  


ದೇಶದ ಬೇರೆ ಬೇರೆ ಸ್ಥಳಗಳಿಂದ ಜಮಾಯಿಸಿದ್ದ ಜನಸ್ತೋಮ ಅಯೋಧ್ಯೆಯಲ್ಲಿ.  ಬ್ಯಾರಿಕೇಡ್ ತೆಗೆಯುವ ಪ್ರಯತ್ನ ಮಾಡಿ ಮುನ್ನುಗ್ಗುವಾಗ, ಫೈರಿಂಗ್ ಆದೇಶ ಆಯ್ತು. ಪರಿಸ್ಥಿತಿಯನ್ನು ನಿಭಾಯಿಸಲು ಪರಿವಾರದ ಮುಖಂಡರು ಎಲ್ಲ ಕಾರಸೇವಕರು ಊರುಗಳಿಗೆ ಹಿಂತಿರುಗುವಂತೆ ಆದೇಶ ನೀಡಿದರು. ಸರಕಾರವೂ ಎಲ್ಲ ಕಡೆಗೂ ಉಚಿತ ರೈಲಿನ ವ್ಯವಸ್ಥೆ ಮಾಡಿತು.


ಕಾರಸೇವೆ ಅವತ್ತು ಆಗಲಿಲ್ಲ.


1990 ರ ಆ ಯೋಜಿತ ಕಾರಸೇವೆ ನೆಡೆಯಲಿಲ್ಲ.  ಆದರೆ, 1992 ರ ಮತ್ತೊಂದು ಕಾರಸೇವೆ ಆಂದೋಲನಕ್ಕೆ 1990 ಹೋರಾಟ ಮೊದಲ ಮೆಟ್ಟಿಲಾಯಿತು, ಸೋಪಾನವಾಯ್ತು.


ತಂಡದ ಎಲ್ಲರ ಮನೆಯಲ್ಲೂ ದೇವರ ಮುಂದೆ ದೀಪ ಹಚ್ಚಿಟ್ಟು ಹೊರಡಲಾಗಿತ್ತು. ಹಿರಿಯೂರಿನ ಕಾರಸೇವಕರ ತಂಡ ಹಿಂದಿರುಗಿ ಬರುವವರೆಗೂ ದೀಪ ಉರಿಯುತ್ತಿದ್ದು ಮನೆಯವರಿಗೆ ಕ್ಷೇಮದ ಸೂಚನೆ ಕೊಡುತ್ತಿತ್ತು. ಅದು ರಾಮ ಜ್ಯೋತಿ ಶಕ್ತಿ ಅಂತ ನಂಬಿಕೆ.


ಇವತ್ತು ರಾಮ ಮಂದಿರ ನಿರ್ಮಾಣವಾಗಿ, ಲೋಕಾರ್ಪಣೆ ಆಗುತ್ತಿರುವ  ಸಂದರ್ಭದಲ್ಲಿ ಎಲ್ಲರಿಗಿಂತ ಕಾರಸೇವಕರ ಕಣ್ಣಿನಲ್ಲಿ ಒಂದು ಹನಿ ಆನಂದಬಾಷ್ಪ ಹೆಚ್ಚಿರುತ್ತದೆ.


ಅನುಭವದ ಮಾತುಗಳನ್ನು ಮುಗಿಸುವಾಗ ವೀರಣ್ಣಗೌಡರ ಪತ್ನಿ ಕವಿತಾ ಗೌಡರು ಸಂಕ್ರಾಂತಿಯ ಎಳ್ಳು ಬೆಲ್ಲ ತಂದಿಟ್ಟರು.


ಟೇಬಲ್ ಮೇಲೆ ಮನೆ ಮನೆ ಮಂತ್ರಾಕ್ಷತೆ ಜೊತೆಗೆ ಕೊಟ್ಟ ಅಯೋಧ್ಯೆ ರಾಮ ಮಂದಿರದ ಫೋಟೋ ಹೊಳೆಯುತ್ತಿತ್ತು.


***


ವನವಾಸದಲ್ಲಿದ್ದಾಗ, ಕನಕ ಮೃಗವನ್ನು ಬಯಸಿದ ಸೀತೆಯ ಇಚ್ಛೆಯನ್ನು ಪೂರೈಸಲು ಜಿಂಕೆಯ ಬೆನ್ನಟ್ಟಿ ರಾಮ ಹೊರಡುತ್ತಾನೆ. ನೂರಾರು ಯೋಜನೆಗಳ ದೂರ ಬೆನ್ನಟ್ಟಿಯೂ ಜಿಂಕೆ ಸಿಗದಿದ್ದಾಗ, ಮಂತ್ರವನ್ನು ಪಟಿಸಿ ರಾಮ ಬಾಣ ಪ್ರಯೋಗ ಮಾಡುತ್ತಾನೆ. ರಾಮನ ಬಾಣಕ್ಕೆ ಜಿಂಕೆ (ಮೃಗ) ಬಲಿಯಾಗುತ್ತದೆ. ರಾಮನ ಬಾಣಕ್ಕೆ ಜಿಂಕೆ ಬಲಿಯಾದ ಸ್ಥಳವೇ ಮೃಗವಧೆ (ಶಿವಮೊಗ್ಗ ಜಿಲ್ಲೆ), ಹಾಗೆ ರಾಮನ ಬಾಣಕ್ಕೆ ತುತ್ತಾದ ಜಿಂಕೆಯ ಮಂಡೆ ಒಂದು ಕಡೆ, ಕೊರಳು ಒಂದು ಕಡೆ ಹೋಗಿ ಬೀಳುತ್ತದೆ. ಜಿಂಕೆಯ ಮಂಡೆ ಬಿದ್ದ ಜಾಗವೇ ಮಂಡಗದ್ದೆ (ಶಿವಮೊಗ್ಗ ಜಿಲ್ಲೆ) ಮತ್ತು ಕೊರಳು ಬಿದ್ದ ಸ್ಥಳ ಕೊರಳುವರ ಅಂತ ಆಗಿ, ಈಗ ಕೊಳಾವರ (ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆ ಬಾರ್ಡರ್) ಎಂದು ಪ್ರಸಿದ್ದಿಯಾಗಿವೆ. ಈ ಕೊಳಾವರದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಆಂಜನೇಯ ದೇವಸ್ಥಾನಗಳಿವೆ. ಈ ದೇವಸ್ಥಾನದಲ್ಲಿ ರಾಮ ನವರಾತ್ರಿಗೆ ರಾಮೋತ್ಸವ ನಡೆಯುತ್ತದೆ. ದೇವಸ್ಥಾನದ ಹೊರಭಾಗದಲ್ಲಿ ಕೊರಳು ರೀತಿಯಲ್ಲಿ ಕಾಣುವ ಒಂದು ಕಪ್ಪು ಶಿಲೆಯ ಕಲ್ಲು ಇದ್ದು, ಅದನ್ನು ಬೇರೊಂದು ಕಲ್ಲಿನಿಂದ ತಾಗಿಸಿದರೆ, ಲೋಹ ಬಡಿದ ಶಬ್ದ ಕೇಳುವುದು ಒಂದು ವಿಸ್ಮಯ ವಿಶೇಷ.   


ಅದು ಜಿಂಕೆಯ ರೂಪದಲ್ಲಿದ್ದ ಮಾರೀಚನ ಕುತ್ತಿಗೆಯ ಭಾಗ. ಹಾಗಾಗಿಯೇ ಆ ಕಲ್ಲು ವಿಸ್ಮಯ, ವಿಚಿತ್ರ, ವಿಶೇಷ. ಕೊಳಾವರದ ಈ ದೇವಸ್ಥಾನದ ಸಮೀಪದಲ್ಲೇ ಕಾರಸೇವಕ ವೀರಣ್ಣ ಗೌಡರ ಕುಟುಂಬ ವಾಸವಾಗಿರುವುದು.  


-ಅರವಿಂದ ಸಿಗದಾಳ್, ಮೇಲುಕೊಪ್ಪ.

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

1 Comments
Post a Comment
Mandovi Motors Presents MONSOON BONANZA
Mandovi Motors Presents MONSOON BONANZA
To Top