ಉಡುಪಿ: ಶುಕ್ರವಾರ ಮಧ್ವನವಮೀ ಪರ್ವದಿನ ಜಗದ್ಗುರು ಶ್ರೀ ಮಧ್ವಾಚಾರ್ಯರು ಸಶರೀರ ಅದೃಶ್ಯರಾಗಿ ಉಡುಪಿಯಿಂದ ಬದರಿಗೆ ತೆರಳಿದ ದಿನ. ನಾಡಿನ ಅನೇಕ ಕಡೆಗಳಲ್ಲಿ ಇದರ ಆಚರಣೆ ನಡೆಯುತ್ತದೆ. ಆಚಾರ್ಯ ಮಧ್ವರ ಅಪೂರ್ವ ಕೃತಿ ವಿಷ್ಣುತತ್ತ್ವ ನಿರ್ಣಯಕ್ಕೆ ಬಹುಶ್ರುತ ವಿದ್ವಾಂಸ ಡಾ ಬನ್ನಂಜೆ ಗೋವಿಂದಾಚಾರ್ಯರು ಬರೆದ ವ್ಯಖ್ಯಾನ ಕೃತಿಯು ಶುಕ್ರವಾರ ಮಧ್ವನವಮೀ ದಿನದಂದು ಲೋಕಾರ್ಪಣೆಗೊಂಡಿತು.
ಅಂಬಲಪಾಡಿಯ ಈಶಾವಾಸ್ಯಂನಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಚಿತ್ರಾಪುರ ಶ್ರೀ ವಿದ್ಯೇಂದ್ರತೀರ್ಥ ಶ್ರಿಪಾದರು ಕೃತಿಯನ್ನು ಬಿಡುಗಡೆಗೊಳಿಸಿದರು. ಈ ಮೂಲಕ ಮಾಧ್ವ ಜಿಜ್ಞಾಸುಗಳು ಮತ್ತು ಭಕ್ತರಿಗೆ ಮಧ್ವಗುರುಗಳ ಪ್ರಸಾದರೂಪದಲ್ಲಿ ಈ ಕೃತಿಕುಸುಮ ದೊರೆತು ಮಧ್ವನವಮೀ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಆಚಾರ್ಯ ಮಧ್ವರ ಹತ್ತಾರು ಕೃತಿಗಳನ್ನು ಹೊಸ ಬಾಷ್ಯ ಹೊಸ ಹೊಳಪಿನೊಂದಿಗೆ ಜಗತ್ತಿಗೆ ನೀಡಲು ಬನ್ನಂಜೆಯವರು ತಮ್ಮ ಬದುಕನ್ನೇ ಅರ್ಪಿಸಿಕೊಂಡ ಮಹಾನುಭಾವರು ಎಂದು ಉಭಯಯತಿಗಳೂ ಬಣ್ಣಿಸಿದರು.
ಈಶಾವಾಸ್ಯ ಪ್ರತಿಷ್ಠಾನ ಅಂಬಲಪಾಡಿ ಇವರಿಂದ ಪ್ರಕಾಶಿತವಾದ ಈ ಕೃತಿಯ ಸಂಪಾದಕರಾದ ವಿದ್ವಾನ್ ವಿಜಯಸಿಂಹ ತೋಂಟತಿಲ್ಲಾಯ , ಡಾ ರಾಮನಾಥಾಚಾರ್ಯ ಕೃತಿಯನ್ನು ಪ್ರಕಟಿಸುವಲ್ಲಿ ಎದುರಿಸಿದ ತಾತ್ವಿಕ ಸಂಗತಿಗಳನ್ನು ವಿವರಿಸಿ ಶ್ರೀ ಪದ್ನನಾಭತೀರ್ಥರ ಮತ್ತು ನಾರಾಯಣ ಪಂಡಿತಾಚಾರ್ಯರ ವ್ಯಾಖ್ಯಾನಗಳನ್ನು ಮುಂದಿಟ್ಟುಕೊಂಡು ಬನ್ನಂಜೆಯವರು ಈ ಕೃತಿಯನ್ನು ಅಪೂರ್ವವೆಂಬಂತೆ ರಚಿಸಿದ್ದಾರೆ ಎಂದು ವಿವರಿಸಿದರು. ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಶುಭಾಶಂಸನೆಗೈದರು .
ಪ್ರತಿಷ್ಠಾನದ ಪ್ರಮುಖರಾದ. ಬಾಲಾಜಿ ರಾಘವೇಂದ್ರಾಚಾರ್ಯ ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು. ವಿನಯಭೂಷಣ ಆಚಾರ್ಯ ವಂದನಾರ್ಪಣೆಗೈದರು ಬಳಿಕ ಚಿತ್ರಾಪುರ ಶ್ರೀಗಳು ಪಟ್ಡದ ದೇವರ ಪೂಜೆ ಬೆರವೇರಿಸಿ ಭಕ್ತರಿಗೆ ತಪ್ತಮುದ್ರಾಧಾರಣೆಗೈದರು. ವಿದ್ವಾನ್ ಶ್ರೀಶ ಭಟ್ ಮುದರಂಗಡಿ ಸುದರ್ಶನ ಹೋಮ ನೆರವೇರಿಸಿದರು. ಅನೇಕ ವಿದ್ವಾಂಸರು, ಭಕ್ತರು ಆಗಮಿಸಿದ್ದರು. ರಮಾ ಆಚಾರ್ಯ, ಅಭಿರಾಮ ತಂತ್ರಿ, ರಾಹುಲ್ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ