ಸುರತ್ಕಲ್: “ಕವಿಯ ಕವಿತೆಯನ್ನು ಸಂಗೀತದ ಮೂಲಕ ವಾಚನ ಮಾಡುವ ಕ್ರಮವೇ ಭಾವಗೀತೆ. ಅಲ್ಲಿ ವಾದ್ಯದ ಅಬ್ಬರಗಳಿರುವುದಿಲ್ಲ, ಸಾಹಿತ್ಯವೇ ಪ್ರಧಾನ. ಜನರ ಹೃದಯಕ್ಕೆ ಮುಟ್ಟುವುದೇ ಅದರ ಗುಣ. ಬಾಲ ಪ್ರತಿಭೆಗಳಾದ ವಿನಮ್ರ ಇಡ್ಕಿದು ಮತ್ತು ಅನನ್ಯ ನಾರಾಯಣ್ ಕವಿ ನಿಸಾರ್ ಅಹಮ್ಮದ ಕವಿತೆಯನ್ನು ಹೃದಯಕ್ಕೆ ಮುಟ್ಟುವ ಹಾಗೆ ಮತ್ತೆ ಹಾಡಿರುವುದು ಶ್ಲಾಘನೀಯ” ಎಂದು ಭಾವಗೀತೆಗಳ ಯುವ ಕವಿ ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು ಹೇಳಿದರು.
ಅವರು ಸುರತ್ಕಲ್ ಗೋವಿಂದ ದಾಸ ಕಾಲೇಜಿನಲ್ಲಿ ಲಲಿತ ಕಲಾಸಂಘದ ಸಹಕಾರದಲ್ಲಿ ನಡೆದ ಬಾಲ ಪ್ರತಿಭೆಗಳಾದ ಮಾ.ವಿನಮ್ರ ಇಡ್ಕಿದು ಮತ್ತು ಕು. ಅನನ್ಯ ನಾರಾಯಣ್ ಹಾಡಿದ ಪ್ರೊ. ಕೆ ಎಸ್ ನಿಸಾರ್ ಅಹಮದ್ ಅವರ "ಮತ್ತದೇ ಬೇಸರ ಅದೇ ಸಂಜೆ" ಎಂಬ ದೃಶ್ಯ ಗೀತೆಯನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ ಯವರು ಮಾತನಾಡಿ “ಬಾಲ ಪ್ರತಿಭೆಗಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ನಮ್ಮಲ್ಲಿ ಬೆಳೆದಾಗ ಮುಂದೆ ಒಳ್ಳೆಯ ಸಂಸ್ಕಾರಯುತ ಕಲಾವಿದರು ಸಂಗೀತಗಾರರು ಸಾಹಿತಿಗಳು ರೂಪುಗೊಳ್ಳಲು ಸಾಧ್ಯ. ಇಂದಿನ ಬಾಲ ಪ್ರತಿಭೆಗಳೇ ಮುಂದಿನ ಕಲಾವಿದರು. ಹಾಗಾಗಿ ಮಕ್ಕಳಲ್ಲಿ ಒಳ್ಳೆಯ ಸಾಂಸ್ಕೃತಿಕ ಪ್ರಜ್ಞೆಯನ್ನು ತುಂಬಿ ಅವರನ್ನು ಚೆನ್ನಾಗಿ ರೂಪಿಸಬೇಕಾದ ಕೆಲಸವನ್ನು ಹೆತ್ತವರು ಹಿರಿಯರು ಮಾಡಬೇಕಿದೆ” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕಥೆಗಾರ ಮಹೇಶ ಆರ್.ನಾಯಕ್, ಸಾಹಿತಿ ರಘು ಇಡ್ಕಿದು, ದೃಶ್ಯ ಗೀತೆಯ ದೃಶ್ಯ ನಿರ್ದೇಶನ, ದೃಶ್ಯ ಸಂಯೋಜನೆ ಮಾಡಿದೆ ಶ್ರೀಮತಿ ವಿದ್ಯಾ ಯು, ಅಶ್ವಥ್ ನಾರಾಯಣ್, ಶ್ರೀಮತಿ ಜ್ಯೋತ್ಸ್ನಾ ಅಶ್ವತ್ಥ್, ಮಾ. ವಿನಮ್ರ ಇಡ್ಕಿದು, ಕು. ಅನನ್ಯ ನಾರಾಯಣ್, ಕಾಲೇಜಿನ ಸಾಂಸ್ಕೃತಿಕ ಕೇಂದ್ರದ ವಿನೋದ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಘು ಇಡ್ಕಿದು ನಿರ್ವಹಿಸಿ ಧನ್ಯವಾದ ಸಮರ್ಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ