ಜನರೇಟಿವ್ ಎ.ಐ ಚಾಲ್ತಿಯಲ್ಲಿರುವ ಕೃತಕ ಬುದ್ಧಿಮತ್ತೆಗಿಂತ ಭಿನ್ನ: ಡಾ. ಮಹೇಶ್ ಭಟ್

Upayuktha
0

ಬೆಂಗಳೂರಿನ ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಮಾನವ ಸಂಪನ್ಮೂಲ ಕುರಿತ ಶೃಂಗಸಭೆ



ಬೆಂಗಳೂರು: 'ಉತ್ಪಾದಕ ಕೃತಕ ಬುದ್ದಿಮತ್ತೆ ತಂತ್ರಜ್ಞಾನ (ಜನರೇಟಿವ್ ಎ.ಐ), ಹಾಲಿ ಜಾರಿಯಲ್ಲಿರುವ ಕೃತಕ ಬುದ್ದಿಮತ್ತೆಗಿಂತ ಭಿನ್ನ. ಇದು ಕೇವಲ ತಾಂತ್ರಿಕ ಮಾಹಿತಿ ಸಂಗ್ರಹ ಮಾಡದೆ, ಮಾಹಿತಿಯ ಔಚಿತ್ಯಗಳನ್ನು ಹಾಗೂ ವಿಶೇಷಗಳನ್ನು ಸಾದರಪಡಿಸುತ್ತದೆ. ಈ ಉತ್ಪಾದಕ ಕೃತಕ ಬುದ್ದಿಮತ್ತೆ, ಉದ್ಯಮ ಕ್ಷೇತ್ರಗಳ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಫಾರ್ನಾಕ್ಸ್ ಕಾರ್ಪೊರೇಟ್ ಸರ್ವಿಸಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ್ ಭಟ್ ನುಡಿದರು.


ಅವರು ಬೆಂಗಳೂರಿನ ನಿಟ್ಟೆ ಸ್ಕೂಲ್ ಆಫ್‌ ಮ್ಯಾನೇಜ್‌ಮೆಂಟ್ ಹಾಗೂ ಹೆಚ್.ಆರ್. ಶೇಪರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಮಾನವ ಸಂಪನ್ಮೂಲ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಕರಾರುವಾಕ್ಕಾದ ಮಾಹಿತಿ ತತ್‌ಕ್ಷಣ ಲಭ್ಯವಾಗುವುದರಿಂದ ಹಾಗೂ ಮುಂದೆ ಸಾಗಬೇಕಾದ ರೀತಿರಿವಾಜುಗಳು  ದೊರಕುವುದರಿಂದ, ಮಾನವ ಸಂಪನ್ಮೂಲವನ್ನು ನಿರ್ವಹಿಸುವವರ ಮೇಲಣ ಒತ್ತಡ ಕಡಿಮೆಯಾಗುತ್ತದೆ ಮತ್ತು ಸಮಯದ ಉಳಿತಾಯವಾಗುತ್ತದೆ. ಹೀಗೆ ತಂತ್ರಜ್ಞಾನಕ್ಕೆ ರೆಹೋಗುವುದರಿಂದ ಮನುಷ್ಯರಿಗೆ ಸಿಗುತ್ತಿದ್ದ, ಸಿಗಬಹುದಾದ ಉದ್ಯೋಗಗಳು ಕಡಿತಗೊಳ್ಳಬಹುದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. 


ಆದರೆ ಮಾನವ ಸಂಪನ್ಮೂಲ ನಿರ್ವಹಣೆಯ ಕ್ಷೇತ್ರದಲ್ಲಿ ಹೀಗಾಗುವುದಿಲ್ಲ. ಇಲ್ಲಿ ಕೆಲವು ಪಾರಂಪಾರಿಕ ಸಹಾಯಕ ಹುದ್ದೆಗಳು ಮಾಯವಾಗಬಹುದು. ಆದರೆ ಹೊಸ ಹೊಸ ಕೌಶಲ್ಯಗಳನ್ನು ರೂಢಿಸಿಕೊಳ್ಳುವುದರಿಂದ ಮುಂದೆ ಸೃಷ್ಟಿಯಾಗುವ ಅಸಂಖ್ಯಾತ ಹುದ್ದೆಗಳಿಗೆ ಅರ್ಹತೆ ಪಡೆಯಬಹುದು', ಎಂದು ಅವರು ಹೇಳಿದರು. 



'ಬಹುಶಃ ಮನುಷ್ಯರೇ ಮಾಹಿತಿ ಸಂಗ್ರಹಿಸಿ, ಕೆಲಸಗಾರರ ಬಗೆಗಿನ ವರದಿ ಸಿದ್ಧಪಡಿಸುವಾಗ ಅರಿವಿಲ್ಲದೇ ನುಸುಳುತ್ತಿದ್ದ ಮಾನವ ಸಹಜ ಪಕ್ಷಪಾತ ಹಾಗೂ ಸಿಟ್ಟು ಸೆಡವುಗಳು ಉತ್ಪಾದಕ ಕೃತಕ ಬುದ್ದಿಮತ್ತೆಯ ಮಾಹಿತಿ ವಿಶ್ಲೇಷಣೆ ಹಾಗೂ ವಿವೇಚನೆಗಳಲ್ಲಿ ಇರುವುದಿಲ್ಲ. ಅಲ್ಲದೆ ವಿಶ್ಲೇಷಣಾ ವರದಿ ಹಾಗೂ ಮಾಹಿತಿಗಳ ಗೌಪ್ಯತೆ ಕಾಪಾಡಬೇಕೆಂಬ ಆತಂಕವೂ ಈ ತಂತ್ರಜ್ಞಾನದ ಅಳವಡಿಕೆಯಿಂದ ದೂರವಾಗುತ್ತದೆ', ಎಂದರು.


ಹೆಚ್.ಆರ್. ಶೇಪರ್ಸ್ ಸಂಸ್ಥೆಯ ಸಂಸ್ಥಾಪಕ ಆಶಿಶ್ ಗಾಕ್ರೆ ಗೌರವಾನ್ವಿತ ಅತಿಥಿಗಳಾಗಿದ್ದರು. ಮಾನವ ಸಂಪನ್ಮೂಲ ನಿರ್ವಹಣೆಯ ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಕ ಕೃತಕ ಬುದ್ದಿಮತ್ತೆಯ ಪರಿಣಾಮಕಾರಿ ಅಳವಡಿಕೆ ಕುರಿತಂತೆ, ದೇಶದ ವಿವಿಧ ಉದ್ಯಮಗಳ ಮುಖ್ಯಸ್ಥರೊಡನೆ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸುಧೀರ್ಘ ಸಂವಾದ ನಡೆಸಿದರು. 


ಪ್ರಾರಂಭದಲ್ಲಿ ನಿಟ್ಟೆ ಸ್ಕೂಲ್ ಆಫ್‌ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಎಂ. ವೇಣುಗೋಪಾಲ್ ಸಮಾವೇಶದ ಪ್ರಸ್ತುತತೆಯನ್ನು ವಿವರಿಸಿ ಸರ್ವರನ್ನೂ ಸ್ವಾಗತಿಸಿದರು.


ಉಪಯುಕ್ತ ಇ-ಪೇಪರ್ ಓದಲು ಕ್ಲಿಕ್‌ ಮಾಡಿ:


ಸಮಾರಂಭದಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಸಂಸ್ಥೆಯ ಅಕಾಡೆಮಿಕ್ ನಿರ್ದೇಶಕ ಡಾ. ಸಂದೀಪ್ ಶಾಸ್ತ್ರಿ, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ಡಾ. ನಿಟ್ಟೆ ಶಂಕರ ಅಡ್ಯಂತಾಯ ಪದವಿ ಕಾಲೇಜ್‌ನ ಪ್ರಾಂಶುಪಾಲ ಡಾ. ಆರ್. ರಾಘವೇಂದ್ರ, ನಿಟ್ಟೆ ಸ್ಕೂಲ್ ಆಫ್‌ ಆರ್ಕಿಟೆಕ್ಚರ್, ಪ್ಲಾನಿಂಗ್ ಮತ್ತು ಡಿಸೈನ್‌ನ ಸಹ ನಿರ್ದೇಶಕಿ ಪ್ರೊ. ರಜಿನಿ ಇಥಮ್ ಹಾಗೂ ಸಮಾವೇಶದ ಸಂಯೋಜಕ ಪ್ರೊ. ಎಂ.ಎಸ್ ಬಾಲಕೃಷ್ಣಾಚಾರ್ ಉಪಸ್ಥಿತರಿದ್ದರು.


ಐವತ್ತು ತಜ್ಞ ಭಾಷಣಕಾರರು, ಇನ್ನೂರಕ್ಕೂ ಅಧಿಕ ಮಾನವ ಸಂಪನ್ಮೂಲ ಪ್ರತಿನಿಧಿಗಳು ಹಾಗೂ ಐನೂರಕ್ಕೊ ಅಧಿಕ ಭವಿಷ್ಯದ ಮಾನವ ಸಂಪನ್ಮೂಲ ನಿರ್ವಹಣಾ ಕ್ಷೇತ್ರದ ಮುಖಂಡರನ್ನೊಳಗೊಂಡ ಬೃಹತ್ ಸಮಾವೇಶ ಇದಾಗಿತ್ತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top