ಯಕ್ಷಗಾನ ಅಂದಕೂಡಲೇ ನೆನಪಾಗುವುದು ಚೆಂಡೆಯ ಶಬ್ದ, ಕಲಾವಿದನ ಮಾತಿನ ಝೇಂಕಾರ, ಕಾಲ್ಗೆಜ್ಜೆಯ ಸ್ವಚ್ಛವಾದ ನಡೆ - ನಾಟ್ಯ. ಯಕ್ಷಗಾನ ರಂಗದಲ್ಲಿ ತಮ್ಮ ವೇಷ ಹಾಗೂ ನಾಟ್ಯದಿಂದ ರಂಗಸ್ಥಳ ರಂಗೇರಿಸುತ್ತಿರುವ ಕಲಾವಿದ ಪ್ರವೀಣ್ ಗಾಣಿಗ ಕೆಮ್ಮಣ್ಣು.
ಈತ ಆನಂದ ಗಾಣಿಗ ಹಾಗೂ ಹೆಚ್. ಪಾರ್ವತಿ ಇವರ ಮಗನಾಗಿದ್ದು, ಮಾವ ಹಾರಾಡಿ ಸರ್ವೋತ್ತಮ ಗಾಣಿಗ ಅವರ ಪ್ರೇರಣೆಯಿಂದ ಪ್ರವೀಣ್ ಅವರು ಯಕ್ಷಗಾನ ರಂಗಕ್ಕೆ ಬಂದರು. ತೋನ್ಸೆ ಜಯಂತ್ ಕುಮಾರ್ ಹಾಗೂ ಬಡಾನಿಡಿಯೂರು ಕೇಶವ ರಾವ್ ಇವರ ಯಕ್ಷಗಾನ ಗುರುಗಳು.
ಭಾಗವತರೊಡನೆ ಮಾತುಕತೆ, ಸಹಕಲಾವಿದರೊಡನೆ ಚರ್ಚೆ, ಮುಖವರ್ಣಿಕೆಯ ಸಮಯದಲ್ಲಿ ನನ್ನ ಪಾತ್ರದ ಬಗ್ಗೆ ಅವಲೋಕನ ಮಾಡಿ ರಂಗಕ್ಕೆ ಹೋಗುವ ಮೊದಲು ಪ್ರಸಂಗದ ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರವೀಣ್ ಗಾಣಿಗ ಕೆಮ್ಮಣ್ಣು. ಅಭಿಮನ್ಯು ಕಾಳಗ, ಸುಧನ್ವ ಕಾಳಗ, ಶ್ರೀ ರಾಮ ಪಟ್ಟಾಭಿಷೇಕ, ಭೀಷ್ಮ ಪ್ರತಿಜ್ಞೆ, ಲವ ಕುಶ, ರಂಗನಾಯಕಿ, ಹಿರಿಯಡ್ಕ ಕ್ಷೇತ್ರ ಮಹಾತ್ಮೆ, ಮಂದಾರ್ತಿ ಕ್ಷೇತ್ರ ಮಹಾತ್ಮೆ, ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಇತ್ಯಾದಿ ನೆಚ್ಚಿನ ಪ್ರಸಂಗಗಳು. ಅಭಿಮನ್ಯು, ರಾಮ, ಕೃಷ್ಣ, ಲವ ಕುಶ, ದೇವವೃತ, ಬರ್ಬರೀಕ ಹಾಗೂ ಪೌರಾಣಿಕ ಪ್ರಸಂಗದ ಎಲ್ಲಾ ವೇಷಗಳೂ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಕಾಲಕ್ಕೆ ತಕ್ಕಂತೆ ಬದಲಾಗುವುದು ಪ್ರಪಂಚದ ನಿಯಮ. ಅದಕ್ಕೆ ಯಕ್ಷಗಾನವು ಹೊರತಾದದ್ದಲ್ಲ. ಆದರೆ ನಮ್ಮ ಹಿಂದಿನ ತಲೆಮಾರಿನ ಕಲಾವಿದರು ಪೌರಾಣಿಕ ಪ್ರಸಂಗಗಳಿಗೆ ತಮ್ಮದೇ ಆದ ಚೌಕಟ್ಟು, ಶಿಸ್ತು, ಪರಂಪರೆ, ವೇಷಧಾರಿಕೆ, ಕುಣಿತ, ಮಾತುಗಾರಿಕೆಯನ್ನು ಕಟ್ಟಿ ಕೊಟ್ಟಿದ್ದಾರೆ, ಅದನ್ನು ಯಾರೂ ಮೀರದಿರಿ. ಪೌರಾಣಿಕ ಪ್ರಸಂಗಗಳಿಗೆ ತನ್ನದೇ ಆದ ಮೌಲ್ಯಗಳಿವೆ. ಮುಂದಿನ ತಲೆಮಾರಿನವರಿಗೆ ರಾಮ, ಕೃಷ್ಣ, ಭೀಷ್ಮ, ಕರ್ಣರಂತವರ ವ್ಯಕ್ತಿಗಳ ಬಗ್ಗೆ ತಿಳಿಯಬೇಕಾದರೆ, ಅವರ ಜೀವನ ಮೌಲ್ಯಗಳು ಅರ್ಥವಾಗಬೇಕಾದರೆ ಯಕ್ಷಗಾನವು ಒಂದು ಒಳ್ಳೆಯ ಮಾಧ್ಯಮ ಎಂದು ಭಾವಿಸಿದ್ದೇನೆ.
ಅಂತಹ ಯಕ್ಷಗಾನದ ಮೌಲ್ಯವು ಕಡಿಮೆಯಾಗದಂತೆ ಎಚ್ಚರ ವಹಿಸಿ ಅದರ ಮೌಲ್ಯವನ್ನು ಉಳಿಸುವುದೇ ನಮ್ಮ ಧರ್ಮ ಎಂದು ಹೇಳಬಯಸುತ್ತೇನೆ. "ಯಕ್ಷಗಾನ ಈ ಹಿಂದೆ ಬೆಳಗಿನವರೆಗೆ ಪ್ರದರ್ಶನ ಕಾಣುತ್ತಿತ್ತು. ಈಗ ಅದು ಮೊಟಕುಗೊಂಡಿದೆ. ನಾವು ಕಂಡಂತೆ ಏಳು ಗಂಟೆಗಳ ಸಮಯ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವ ಕಲೆ ಇದ್ದರೆ ಅದು ಯಕ್ಷಗಾನ. ಅದು ಈಗ ಕಾಲಮಿತಿಗೆ ಸೀಮಿತಗೊಂಡಿದೆ. ಕಲಾವಿದನು ಯಾವುದೇ ಗಡಿಬಿಡಿ ಇಲ್ಲದೇ ತನ್ನ ಪಾತ್ರವನ್ನು ಮಾಡಬಹುದಿತ್ತು. ಆದರೆ ಈಗ ತನ್ನ ಪಾತ್ರವನ್ನು ಕಡಿತಗೊಳಿಸುವುದು ಅನಿವಾರ್ಯವಾಗಿದೆ. ಯಕ್ಷಗಾನದಲ್ಲಿ ಕುಣಿತವೊಂದೆ ಪ್ರಧಾನವಾಗಿದ್ದು ಅರ್ಥಗಾರಿಕೆಗೆ ಹೆಚ್ಚು ಒತ್ತನ್ನು ಕೊಡಲಾಗುತ್ತಿಲ್ಲ ಎಂದು ನನ್ನ ಭಾವನೆ".
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಪ್ರೇಕ್ಷಕರಲ್ಲಿ ಪೌರಾಣಿಕ ಪ್ರಸಂಗ ಇಷ್ಟ ಪಡುವವರು ಇದ್ದಾರೆ. ಹಾಗೆಯೇ ಸಾಮಾಜಿಕ ಪ್ರಸಂಗ ನೋಡುವವರೂ ಇದ್ದಾರೆ. ವರ್ತಮಾನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾರು ಸಕ್ರಿಯರಾಗಿದ್ದಾರೋ ಅವರಿಗೇ ಬೆಲೆ ಎಂಬಂತಾಗಿದೆ. ಮಂದಾರ್ತಿ, ಮಾರಣಕಟ್ಟೆ, ಸಾಲಿಗ್ರಾಮ, ಸೌಕೂರು, ಮಂಗಳಾದೇವಿ, ಪೆರ್ಡೂರು, ಹಿರಿಯಡ್ಕ, ಅಮೃತೇಶ್ವರಿ, ಮಡಾಮಕ್ಕಿ ಮೇಳಗಳಲ್ಲಿ ಸುಮಾರು 30 ವರ್ಷಗಳ ತಿರುಗಾಟ ಮಾಡಿದ ಅನುಭವ ಹಾಗೂ ಕಲಾ ಮಾತೆಯ ಆಶೀರ್ವಾದ ಇರುವವರೆಗೆ ಕಲಾವಿದನಾಗಿ ದುಡಿಯಬೇಕು ಎಂಬ ಬಯಕೆ ಇದೆ ಎಂದು ಹೇಳುತ್ತಾರೆ ಪ್ರವೀಣ್ ಗಾಣಿಗ ಕೆಮ್ಮಣ್ಣು.
ದೇವಸ್ಥಾನಕ್ಕೆ ಭೇಟಿ ನೀಡುವುದು, ಪ್ರಕೃತಿ ಸೌಂದರ್ಯ ವೀಕ್ಷಣೆ, ಪುರಾಣ ಕಥೆಗಳನ್ನು ಕೇಳುವುದು, ಹರಿದಾಸರ ಕೀರ್ತನೆಗಳನ್ನು ಕೇಳುವುದು ಇವರ ಹವ್ಯಾಸಗಳು. ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಗಜಾನನ ಕಲಾಸಂಘದ ಪ್ರಶಸ್ತಿ, ಸುವರ್ಣ ಶ್ರೀ ಪ್ರಶಸ್ತಿ, ವಿಷ್ಣುಮೂರ್ತಿ ಸಂಘದ ಪ್ರಶಸ್ತಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಪ್ರವೀಣ್ ಗಾಣಿಗ ಕೆಮ್ಮಣ್ಣು ಅವರಿಗೆ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಪ್ರವೀಣ್ ಗಾಣಿಗ ಕೆಮ್ಮಣ್ಣು ಯಶೋದಾ ಇವರನ್ನು ಮದುವೆಯಾಗಿ ಪಲ್ಲವಿ ಹಾಗೂ ಪ್ರಿಯಾಲಕ್ಷ್ಮೀ ಇಬ್ಬರು ಮಕ್ಕಳ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಹೆಂಡತಿಯ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಪ್ರವೀಣ್ ಗಾಣಿಗ ಕೆಮ್ಮಣ್ಣು. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ