ಯಕ್ಷಗಾನ ಕರ್ನಾಟಕದ ಒಂದು ಸಾಂಪ್ರದಾಯಿಕ ಅನನ್ಯ ಕಲೆ. ಸಾಹಿತ್ಯ, ಸಂಗೀತ, ಅಭಿನಯ, ನೃತ್ಯ, ಸಂಭಾಷಣೆ ಇತ್ಯಾದಿ ಎಲ್ಲ ಕಲೆಗಳನ್ನು ಒಳಗೊಂಡಿರುವ ‘ಸಮಗ್ರ ರಂಗಭೂಮಿ’ ಎಂದು ಪರಿಗಣಿಸಲ್ಪಟ್ಟಿದೆ. ಮೂಲತಃ ಮಂಗಳೂರು, ಕರಾವಳಿ, ಉಡುಪಿ ನೆಲೆಯಲ್ಲಿ ಸೀಮಿತವಾಗಿ ಪ್ರದರ್ಶನಗೊಳ್ಳುತ್ತಿದ್ದ ಈ ಪ್ರಾದೇಶಿಕ ಕಲೆ ಕಾಲಕ್ರಮೇಣ ರಾಜ್ಯದ ಹಲವಾರು ಜಿಲ್ಲೆಗಳಲ್ಲೂ ವ್ಯಾಪಿಸಿ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡು ಇಂದು ಜಾಗತಿಕ ಮಟ್ಟದವರೆಗೂ ಬೆಳವಣಿಗೆ ಕಂಡಿದೆ. ಈ ಶ್ರೀಮಂತ ಕಲೆಯಲ್ಲಿ ಇಂದು ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡುತ್ತಿರುವ ಕಲಾವಿದರು ಗೋಪಾಲಕೃಷ್ಣ ಭಟ್.
ಶ್ರೀಮತಿ ವಿಜಯಲಕ್ಷ್ಮಿ ಹಾಗೂ ಶ್ರೀಯುತ ತಿರುಮಲೇಶ್ವರ ಭಟ್ ಇವರ ಪುತ್ರ. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದಿರುತ್ತಾರೆ. ಮೋಹನ ಶೆಟ್ಟಿ ಬಾಯಾರು ಹಾಗೂ ರಮೇಶ ಶೆಟ್ಟಿ ಬಾಯಾರು ಇವರ ಯಕ್ಷಗಾನ ಗುರುಗಳು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಮಾಹಿತಿಯನ್ನು ಪ್ರಸಂಗ ಪುಸ್ತಕದಿಂದ, ಹಿರಿಯ ಕಲಾವಿದರಿಂದ, ಅಣ್ಣ ನಿಡುವಜೆ ಶಂಕರ ಭಟ್ ರಿಂದ, ಬಣ್ಣಗಾರಿಕೆಯ ಬಗ್ಗೆ ವಿಶ್ವಣ್ಣರಿಂದ ಕೇಳಿ ತಿಳಿದು ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಭಟ್.
ದೇವಿ ಮಹಾತ್ಮೆ, ನಳದಮಯಂತಿ, ಹಿರಣ್ಯಾಕ್ಷ ವಧೆ, ಮಹಿಷ ವಧೆ, ದುಶ್ಯಾಸನ ವಧೆ, ಇಂದ್ರಜಿತು ಕಾಳಗ ನೆಚ್ಚಿನ ಪ್ರಸಂಗಗಳು. ಮಹಿಷಾಸುರ, ಋತುಪರ್ಣ, ಹಿರಣ್ಯಾಕ್ಷ, ವರಾಹ, ಭೀಮ, ದುಶ್ಯಾಸನ, ರಾವಣ, ತಾಟಕಿ, ಯಮ ನೆಚ್ಚಿನ ವೇಷಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಬಾಲ್ಯದ ಯಕ್ಷಗಾನಕ್ಕೂ ಹಾಗೂ ಈಗಿನ ಯಕ್ಷಗಾನಕ್ಕೂ ಬಹಳ ಸುಧಾರಣೆ (ಸಂಭಾವನೆ, ಮರ್ಯಾದೆ, ಅನುಕೂಲ ಇತ್ಯಾದಿ) ಆಗಿದೆ. ಮೊದಲು ರಾತ್ರಿ ಇಡೀ ಯಕ್ಷಗಾನ ನಡೆಯುತಿತ್ತು. ಈಗ ಕಾಲಮಿತಿ ಯಕ್ಷಗಾನಗಳು ಬಹಳ ನಡೆಯುತ್ತದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ:-
ಪ್ರೋತ್ಸಾಹ ಮಾತುಗಳು, ಒಳ್ಳೆಯ ಪ್ರಸ್ತುತಿಯನ್ನು ಒಪ್ಪುವ ಬಹಳ ಒಳ್ಳೆಯ ಪ್ರೇಕ್ಷಕ ವರ್ಗ, ಯಕ್ಷಗಾನ ರಂಗಕ್ಕೆ ಇದ್ದೆ. ಯಕ್ಷಗಾನ ರಂಗದಲ್ಲಿ ಒಂದು ಒಳ್ಳೆಯ ತಂಡ ಕಟ್ಟಿ ಹೊಸ ಪೀಳಿಗೆಯ ಜನರಿಗೆ ಯಕ್ಷಗಾನದ ಹವ್ಯಾಸ, ಸದಭಿರುಚಿ ಹುಟ್ಟುಹಾಕಬೇಕು ಎಂಬ ಯೋಜನೆ ಇದೆ ಎಂದು ಹೇಳುತ್ತಾರೆ ಭಟ್.
ಹವ್ಯಾಸಿ ಬಾಲ ಕಲಾವಿದನಾಗಿ ಮಲ್ಲ ಹಾಗೂ ಮಧೂರು ಮೇಳಗಳಲ್ಲಿ ಶಾಲಾ ರಜಾ ದಿನಗಳಲ್ಲಿ ವೇಷ ಮಾಡಿದ ಅನುಭವ. ಪ್ರಸುತ್ತ ಹವ್ಯಾಸಿ ಕಲಾವಿದರಾಗಿ ತಿರುಗಾಟ ಮಾಡುತ್ತಿದ್ದಾರೆ. ವಾಲಿಬಾಲ್ ತರಬೇತಿ (1995 ರಿಂದ 2000 ರಾಷ್ಟ್ರೀಯ ವಾಲಿಬಾಲ್ ಆಟಗಾರ) ಹಾಗೂ ಯಕ್ಷಗಾನ ಬಣ್ಣಗಾರಿಕೆ (ಅರ್ಜುನ ಕೊರ್ಡೆಲ್ ಅವರ ಜೊತೆಯಲ್ಲಿ) ಇವರ ಹವ್ಯಾಸಗಳು. ಗೋಪಾಲಕೃಷ್ಣ ಭಟ್ ಅವರು ವೀಣಾ ಇವರನ್ನು ಮದುವೆಯಾಗಿ ಮಗಳು ಧನ್ಯ ಲಕ್ಷ್ಮಿ ಹಾಗೂ ಮಗ ದ್ಯಾನ್ ಜಿ ಭಟ್ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.
ತಂದೆ, ತಾಯಿ, ಅಣ್ಣ ನಿಡುವಜೆ ಶಂಕರ ಭಟ್, ಭಾವ ಹರ್ಷಶಾಸ್ತ್ರಿ ಮಣಿಲ ಇವರ ಪ್ರೋತ್ಸಾಹ ಹಾಗೂ ಪ್ರೇರಣೆ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಗೋಪಾಲಕೃಷ್ಣ ಭಟ್. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
- ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ