ಸನಾತನ ಧರ್ಮದ ಬಂಧುಗಳೇ,
ದೇಶದ ಉತ್ಕೃಷ್ಟ ಸಂಸ್ಕೃತಿ, ಆಚಾರ ವಿಚಾರಗಳ ಉತ್ತುಂಗದ ಶಿಖರವಾಗಿ, ಹಿಂದೂ ಅಪಧಮನಿ, ಅಭಿಧಮನಿಗಳಲ್ಲಿ ಹರಿಯುವ ಸನಾತನ ಧರ್ಮದ ಕೆನ್ನೆತ್ತರಿನ ಕಣಕಣದಲ್ಲೂ ಸಾರ್ಥಕಭಾವ ಮೂಡಿಸುತ್ತಿರುವ ಪ್ರಪಂಚದ ಒಡೆದ ಪ್ರಭು ಶ್ರೀರಾಮಚಂದ್ರನ ಅಯೋಧ್ಯೆಯ ದೇಗುಲ ಮರುನಿರ್ಮಾಣವಾಗುತ್ತಿರುವ ಮಹೋನ್ನತ ಭಾವದ ತೀವ್ರತೆಯನ್ನು ಅನುಭವಿಸುತ್ತಿದ್ದೇವೆ. ನಾವೆಲ್ಲಾ ಸನಾತನಿಗಳು ಎಂಬುದನ್ನು ಹೇಳುವುದಕ್ಕೆ ಮೈರೋಮಾಂಚನವಾಗುತ್ತಿದೆ. ಭಾರತದ ಸತ್ವವನ್ನು ಅರ್ಥಮಾಡಿಕೊಂಡು ಪ್ರಾಪಂಚಿಕವಾಗಿ ಹಿಂದೂ ಧರ್ಮಕ್ಕೆ ಗೌರವ ಪ್ರಾಪ್ತವಾಗಲು ಆರಂಭವಾಗಿದೆ. ಶುದ್ಧ ಮುಸ್ಲಿಂ ದೇಶಗಳಲ್ಲೂ ಅಲ್ಲಿನ ಸರ್ಕಾರಗಳೇ ಹಿಂದೂ ದೇಗುಲವನ್ನು ನಿರ್ಮಾಣ ಮಾಡಿಕೊಟ್ಟು ನಮ್ಮ ಸನಾತನ ಧರ್ಮಕ್ಕೆ ಗೌರವ ಸಲ್ಲಿಸುತ್ತಿದ್ದಾರೆ. ನಾವಿಂದು ಪ್ರಾಪಂಚಿಕ ಮನ್ನಣೆಗೆ ಪ್ರಾಪ್ತರಾಗುತ್ತಿರುವುದು ಕೇವಲ ಭಾರತೀಯರು ಅಂತಷ್ಟೇ ಅಲ್ಲ, ಜಗತ್ತಿಗೇ ಗುರುವಾಗಬಲ್ಲ ಸನಾತನಿಗಳು, ಸನ್ಮಾರ್ಗ ತೋರುವ ಹಿಂದೂ ಧರ್ಮದ ಕುಡಿಗಳು ಎಂಬ ನೆಲೆಯಿಂದ.
ಇಷ್ಟೆಲ್ಲ ಅಗಾಧ ವರ್ಚಸ್ಸು ನಮ್ಮಲ್ಲಡಗಿದ್ದರೂ ನಾವಿನ್ನೂ ಏಸುವಿನ ಸ್ತುತಿಯಲ್ಲಿದ್ದೇವೆ! ಇಂದು ದಿನಾಲು ಏಸುಕ್ರಿಸ್ತನ ಜನನದ ಸ್ತುತಿ ಮಾಡುವ ಮೂಲಕ ಸ್ವಾಭಿಮಾನದ ನರ ಸತ್ತ ಪ್ರೇತಾತ್ಮಗಳಂತಾಗುತ್ತಿದ್ದೇವೆ. ಯುಗದ ಕಲ್ಪನೆ ಕೊಟ್ಟು ಕೃತಯುಗ, ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗವೆಂದು ಅವನ್ನು ವಿಭಾಗಿಸಿ, ಇದೀಗ ಕಲಿಯುಗದಲ್ಲೂ 5125 ಸಂವತ್ಸರಗಳನ್ನು ಕಳೆದಿರುವ ಅಗಾಧ ಹಿಂದೂ ಧರ್ಮದ ಅನುಸರಣೆ ಬಿಟ್ಟು ಏಸು ಸತ್ತ ದಿನದಿಂದ ದಿನ, ತಿಂಗಳು, ವರ್ಷಾಚರಣೆ ನಡೆಸುತ್ತಿದ್ದೇವೆ! ಸ್ವಾಭಿಮಾನ ಉಳ್ಳ, ದೇಶದ ಪಾವಿತ್ರ್ಯತೆಯ ಅರಿವಿರುವ, ಧರ್ಮದ ಉತ್ತುಂಗ ಕಲ್ಪನೆಯನ್ನು ಹೊಂದಿದ ಯಾವೊಬ್ಬ ಜೀವಿಯೂ ಮಾಡಲಾರದ ಮತ್ತು ಮಾಡಬಾರದ ಆಚರಣೆಯುಲ್ಲಿ ನಾವಿಂದು ಶತಮೂರ್ಖರಂತೆ ತೊಡಗಿಕೊಳ್ಳುತ್ತಿದ್ದೇವೆ.
ಯಾವಾಗ ಸ್ವಾಮೀ ನಮ್ಮಲ್ಲಿ ಮಾನ ಮರ್ಯಾದೆ ಸ್ವಾಭಿಮಾನಗಳ ಕಲ್ಪನೆ ಮೂಡುವುದು? ಯಾವಾಗ ಸ್ವಾಮಿ ಮೈಯಲ್ಲಿ ಹರಿಯುವ ರಕ್ತದ ಪರಂಪರೆಗೆ ಗೌರವ ಸಲ್ಲಿಸುವ ದಿನ ಬರುವುದು? ಕ್ಷಾತ್ರ ತೇಜಸ್ಸಿನ ವೀರ ದುಂದುಭಿಗಳಾದ ಹಿಂದೂಗಳು ನಾವು ಅಂತ ಯಾವಾಗ ಸ್ವಾಮೀ ಅರ್ಥವಾಗುತ್ತದೆ? ನಮ್ಮತನವನ್ನು ಕಡೆಯ ಉಸಿರಿರುವ ತನಕ ಬಿಡದೆ ಬದುಕುವ ಛಲ ಮೂಡುವುದು ಎಂದು ಸ್ವಾಮೀ? ಬೆಕ್ಕು ಸತ್ತರೂ ವಾಸನೆ ಹೋಗಲಿಲ್ಲ ಎಂಬ ಗಾದೆಯಂತೆ, ಬ್ರಿಟಿಷರು ನಮ್ಮನ್ನು ಬಿಟ್ಟು 75 ವರುಷಗಳಾದರೂ ಏಸು ಕ್ರಿಸ್ತನ ಸ್ತುತಿ ಇನ್ನೂ ಮುಗಿದಿಲ್ಲ.
ನಾಚಿಕೆಯಾಗುವುದಿಲ್ಲವೇ? ಹೀಗೆ ಪಾಶ್ಚಾತ್ಯರ ಶ್ರಾದ್ಧದಿಂದ ನಮ್ಮ ದಿನ ಲೆಕ್ಕಾಚಾರ ಹಾಕುವುದಕ್ಕಿಂತ ಹಾಳುಬಾವಿಗೆ ಹಾರುವುದು ಲೇಸು ಎನಿಸುವುದಿಲ್ಲವೇ? ಇನ್ನೂ ಎಚ್ಚರವಾಗದಿದ್ದರೆ ನಾವಿಂದು ಪ್ರತಿಷ್ಟಾಪಿಸಲು ಹೊರಟಿರುವ ಪ್ರಭು ಶ್ರೀರಾಮಚಂದ್ರ ಮೆಚ್ಚಿಯಾನೇ? ನಮ್ಮ ಭಗವಂತ ಐದುನೂರು ವರ್ಷಗಳ ನಂತರ ಮತ್ತೆ ಅಯೋಧ್ಯೆಯಲ್ಲಿ ವಿರಾಜಮಾನನಾಗುತ್ತಿದ್ದಾನೆ. ಎಲ್ಲೆಲ್ಲೂ ದೀಪಾವಳಿಯ ಸಂಭ್ರಮ ಮನೆ ಮಾಡುತ್ತಿದೆ. ಈಗಲಾದರೂ ನಾವು ಬದಲಾಗೋಣ. ನಮ್ಮ ಮುಂದಿನ ಪರಂಪರೆಗೂ ಅನ್ಯರ ಶ್ರಾದ್ಧವನ್ನೇ ವೈಭವೀಕರಿಸಿ ಕಾಣಿಸುವುದು ಬೇಡ. ಈಗ ನಾವು ಪ್ರಯತ್ನಿಸಿದರೆ ನಮ್ಮ ನಂತರದ ತಲೆಮಾರಾದರೂ ಸ್ವಾಭಿಮಾನದಿಂದ ತಲೆ ಎತ್ತಿ ಬದುಕುವಂತಾದೀತು. ದಯವಿಟ್ಟು ಸನಾತನ ಧರ್ಮದ ಮಾನ ತೆಗೆಯಬೇಡಿ. ಮಕ್ಕಳಲ್ಲಿ ಸ್ವಾಭಿಮಾನ ಮೂಡಿಸಿ. ನಾಳೆಯ ಭಾರತವಾದರೂ ಕ್ಷಾತ್ರವರ್ಚಸ್ಸಿನಿಂದ ಮಿನುಗುವಂತಾಗಲಿ.
ದಯವಿಟ್ಟು ನಿಜಾರ್ಥದಲ್ಲಿ ಸನಾತನಿಗಳಾಗಿ. ನಮ್ಮ ಖುಷಿ ನಾಳೆಯ ಜನವರಿ 1ರಲ್ಲಿಲ್ಲ, ಜನವರಿ 22ರಲ್ಲಿದೆ. ಆ ದಿನ ನಮ್ಮೊಡೆಯ ಶ್ರೀರಾಮ ಬರುತ್ತಿದ್ದಾನೆ. ನಮ್ಮ ಸಂಭ್ರಮ ಕುಡಿದು ಅರೆಬರೆ ಬಟ್ಟೆಯಲ್ಲಿ ರಸ್ತೆಬದಿ ಬೀಳುವುದರಲ್ಲಿಲ್ಲ, ದೀಪ ಬೆಳಗಿ ಬದುಕನ್ನು ಬೆಳಗಿಸುವ ಭಾವನೆಯಲ್ಲಿದೆ. ನಮ್ಮ ಹೊಸ ವರ್ಷ ಜನವರಿ 1 ಅಲ್ಲ, ಯುಗಾದಿ. ಅದು ಪ್ರಕೃತಿಯೇ ಹೊಸದಾಗಿ ಕಾಣುವ ದಿನ. ಪಂಚಭೂತಗಳೇ ನಾವೀನ್ಯವನ್ನು ಹೊರಸೂಸುವ ಅಮೃತ ಘಳಿಗೆ. ನಾಳೆ ಹ್ಯಾಪಿ ನ್ಯೂ ಇಯರ್ ಹೇಳುತ್ತಾ ದೇಶದ, ಸಂಸ್ಕೃತಿಯ ಮಾನಕಳೆಯಬೇಡಿ.
ಭಾರತೀಯ ಕಾಲಮಾನದ (ಜನವರಿಯಿಂದ ಡಿಸೆಂಬರ್ ತಿಂಗಳ ಕ್ಯಾಲೆಂಡರ್ ಗೆ ಬದಲಾಗಿ) ಅನುಷ್ಠಾನ ಮತ್ತು ಚಿಂತನೆಯ ಬಗ್ಗೆ ಮೆಖಾಲೆ ಶಿಷ್ಯರಿಗೆ ನಗೆಪಾಟಲು ಅಥವಾ ಅನುಮಾನ ಬರಬಹುದು. ಆದರೆ ನಾವಿಂದು ಹಾಕಿದ ಈ ಬೀಜವನ್ನು ಮುಂದೊಂದು ದಿನ (50ವರುಷ ಸಂದರೂ) ನಮ್ಮ ಮುಂದಿನ ತಲೆಮಾರು ಮರವನ್ನಾಗಿ ಬೆಳೆಸುವಂತೆ ಮಾಡುವುದು ನಮ್ಮೆಲರ ಜವಾಬ್ದಾರಿ.
ನಮಗೆಲ್ಲಾ ಯಾವಾಗ ಜ್ಞಾನೋದಯವಾಗುತ್ತದೋ, ಆ ಮೂಲಕ ಸ್ವಾಭಿಮಾನಿ ಭಾರತವನ್ನು ಯಾವಾಗ ನಿರ್ಮಾಣ ಮಾಡುತ್ತೇವೋ ಆ ಪರಮಾತ್ಮನೇ ಬಲ್ಲ...!!!
- ಸನಾತನಿ ಹಿಂದೂ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ