ಜೀವರಕ್ಷಕರಿಂದ ಕಡಲತೀರದಲ್ಲಿ ಸಂಭವಿಸುವ ಅಹಿತಕರ ಘಟನೆ ತಡೆಯಲು ಸಾಧ್ಯ: ಶಾಸಕ ಯಶ್‌ಪಾಲ್ ಎ ಸುವರ್ಣ

Upayuktha
0


ಉಡುಪಿ: ಕಡಲ ತೀರದ ವಲಯಗಳಲ್ಲಿ ಪ್ರವಾಸಿಗರ ಸುರಕ್ಷತೆಯ ಕಾರ್ಯವನ್ನು ಜೀವರಕ್ಷಕ ತಂಡದವರು ಮಾಡಲಿದ್ದು, ಇದರಿಂದ ಭವಿಷ್ಯದಲ್ಲಾಗುವ ಅಹಿತಕರ ಘಟನೆಯನ್ನು ತಡೆಯಲು ಸಾಧ್ಯವಾಗಲಿದೆ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು.


ಅವರು ಇಂದು ಮಲ್ಪೆಯ ಕಡಲತೀರದಲ್ಲಿ ಜೀವ ರಕ್ಷಕ ಸಿಬ್ಬಂದಿಗಳಿಗೆ ತರಬೇತಿ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು.


ಕಡಲ ಸೊಬಗನ್ನು ಸವಿಯಲು ಹೊರಗಿನಿಂದ ಬರುವ ಜನರಿಗೆ ಸಮುದ್ರ ಪ್ರದೇಶದ ಆಳ, ಅಲೆಗಳ ಹೊಡೆತಗಳನ್ನು ತಪ್ಪಿಸಿಕೊಳ್ಳುವ ಬಗ್ಗೆ ಅರಿವಿಲ್ಲದೇ ಅನಾಹುತಗಳು ಆಗುವ ಸಾಧ್ಯತೆಗಳಿದ್ದು, ಇವುಗಳನ್ನು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ನುರಿತ ಹಾಗೂ ಪರಿಣಿತ ಜೀವ ರಕ್ಷಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಿರುವುದು ಒಂದು ಅಭಿನಂದನೀಯ ಕಾರ್ಯ ಎಂದರು.


ದೇಶದಲ್ಲಿಯೇ ಮಲ್ಪೆ ಬೀಚ್ ಅತ್ಯಾಕರ್ಷಣೀಯವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಿನೇ ದಿನೇ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನೊಳಗೊಂಡ ಬೀಚ್‌ನ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.


ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಪ್ರವಾಸಿಗರ ಸುರಕ್ಷತೆಯ ಹಿತದೃಷ್ಠಿಯಿಂದ ಜೀವರಕ್ಷಕರನ್ನು ಮಲ್ಪೆ, ಮರವಂತೆ, ಕಾಪು, ತ್ರಾಸಿ, ಬೀಚ್‌ಗಳಲ್ಲಿ ನೇಮಿಸಲಾಗುತ್ತಿದೆ ಎಂದ ಅವರು, ಈಗಾಗಲೇ ಮೊದಲ ಹಂತದಲ್ಲಿ 17 ಜನ ಜೀವರಕ್ಷಕರಿಗೆ ತರಬೇತಿಯನ್ನು ನೀಡಲಾಗಿದ್ದು, ತಮ್ಮ ಕಾರ್ಯಕ್ಕೆ ಶೀಘ್ರದಲ್ಲಿಯೇ ನಿಯೋಜನೆಗೊಳ್ಳಲಿದ್ದಾರೆ ಎಂದರು.


ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದ ಅವರು, ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ನಗರಸಭೆ ಪೌರಾಯುಕ್ತ ರಾಯಪ್ಪ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ರಾಷ್ಟ್ರೀಯ ಲೈಫ್ ಸೇವಿಂಗ್ಸ್ ಸೊಸೈಟಿಯಿಂದ ಮಾನ್ಯತೆ ಪಡೆದ ಪುತ್ತೂರಿನ ವಾರಾಣಾಸಿ ಡೆವಲಪ್‌ಮೆಂಟ್ ಅಂಡ್ ರಿಸರ್ಚ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಜೀವ ರಕ್ಷಕ ತಂಡದವರಿಗೆ ಉತ್ತಮ ಈಜುಗಾರಿಕೆ, ಕೃತಕ ಉಸಿರಾಟ ನೀಡುವುದು, ಪ್ರಥಮಚಿಕಿತ್ಸೆ ನೀಡುವುದು, ಪ್ರಜ್ಞಾಹೀನರಿಗೆ ಸಾಗಿಸುವುದು ಸೇರಿದಂತೆ ಮತ್ತಿತರ ತರಬೇತಿಯನ್ನು ನೀಡುವುದರೊಂದಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top