ಉಡುಪಿ: ಕಳೆದ ಮೂರು ದಶಕಗಳಿಂದ ಆಸ್ಟ್ರೇಲಿಯಾದಲ್ಲಿ ವಾಸುದೇವ ಕ್ರಿಯಾ ಯೋಗ ಗುರುವಾಗಿ ಅಸಂಖ್ಯ ಜನರಿಗೆ ಭಾರತೀಯ ಯೋಗವನ್ನು ಕಲಿಸುತ್ತಾ ಯೋಗ ರಾಯಭಾರಿಯಂತೆ ಕರ್ತವ್ಯ ನಿರತರಾಗಿರುವ ಮೂಲತಃ ದ.ಕ ಜಿಲ್ಲೆ ಪುತ್ತೂರಿನವರಾದ ರಾಜೇಂದ್ರ ಎಂಕಮೂಲೆಯವರಿಗೆ ಶುಕ್ರವಾರ ಪೇಜಾವರ ಮಠದ ಅಧೀನ ಸಂಸ್ಥೆ ಉಡುಪಿಯ ವಿದ್ಯೋದಯ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶ್ರೀ ರಾಮಕೃಷ್ಣ ವಿಠಲಾನುಗ್ರಹ ಪ್ರಶಸ್ತಿ ನೀಡಿ ಸಂಮಾನಿಸಿದರು.
ಶಾಲೆಯಲ್ಲಿ ಶುಕ್ರವಾರ ವಿದ್ಯಾರ್ಥಿಗಳಿಗೆ ರಾಜೇಂದ್ರ ಅವರು ಯೋಗ ಪ್ರಾತ್ಯಕ್ಷಿಕೆ ನಡೆಸಿ ಕೆಲವು ನಿತ್ಯೋಪಯೋಗಿ ಯೋಗಸೂತ್ರಗಳನ್ನು ತಿಳಿಸಿಕೊಟ್ಟರು. ನಿನ್ನೆಯೇ ರಾಜೇಂದ್ರ ಅವರಿಗೆ ಅಮೇರಿಕಾದ ಫ್ರೋರಿಡಾ ಯೋಗ ವಿಶ್ವವಿದ್ಯಾನಿಲಯವು ಯೋಗ ಕ್ಷೇತ್ರದಲ್ಲಿ ಮಾಡಿದ ಅಸಾಮಾನ್ಯ ಸಾಧನೆಗಾಗಿ ಡಾಕ್ಟರೇಟ್ ಪದವಿಯನ್ನು ಘೋಷಿಸಿತ್ತು.
ಮೆಲ್ಬೋರ್ನ್ ನಲ್ಲಿರುವ ರಾಜೇಂದ್ರ ಅವರು ಸಾವಿರಾರು ಯೋಗ ತರಗತಿ, ಪ್ರಾತ್ಯಕ್ಷಿಕೆ, ಶಿಬಿರಗಳನ್ನು ಆಯೋಜಿಸುತ್ತಾ ಅಸಂಖ್ಯ ಶಿಷ್ಯರು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕೇವಲ ಯೋಗ ಮಾತ್ರವಲ್ಲದೆ ಅಲ್ಲಿನ ಅನಿವಾಸಿ ಭಾರತೀಯರ ತಂಡವೊಂದನ್ನು ಕಟ್ಟಿಕೊಂಡು ತಮ್ಮ ಹಾಗೂ ಅವರ ಆದಾಯದ ದೊಡ್ಡ ಪಾಲನ್ನು ಭಾರತದಲ್ಲಿ ಗುರುಕುಲ ಪದ್ಧತಿಯ ಶಿಕ್ಷಣ ಸಂಸ್ಥೆಗಳು, ಪೇಜಾವರ ಮಠದ ಗೋಶಾಲೆಗಳೂ ಸೇರಿದಂತೆ ದೇಶದ ಅನೇಕಗೋಶಾಲೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮ ಮೊದಲಾದ ಸಮಾಜಮುಖಿ ಕಾರ್ಯ ನಿರತಾಗಿರುವ ಸಂಘ ಸಂಸ್ಥ, ಮಠ ಮಾನ್ಯಗಳಿಗೆ ಬಹುದೊಡ್ಡ ಮೊತ್ತದ ದೇಣಿಗೆಯನ್ನೂ ನೀಡುತ್ತಾ ರಾಷ್ಟ್ರೋನ್ನತಿಯ ಸತ್ಕಾರ್ಯಗಳನ್ನೂ ಮಾಡುತ್ತಿದ್ದಾರೆ.
ರಾಜೇಂದ್ರ ಅವರಿಗೆ ಪೇಜಾವರ ಮಠದ ವತಿಯಿಂದ ಪ್ರಶಸ್ತಿ ಮತ್ತು ಅವರೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಾಗೇಂದ್ರ ಅವರನ್ನು ಸಂಮಾನಿಸಿ ಆಶೀರ್ವಚನ ನೀಡುತ್ತಾ ರಾಜೇಂದ್ರ ಮತ್ತವರ ತಂಡ ವಿದೇಶದಲ್ಲಿದ್ದುಕೊಂಡು ಭಾರತೀಯ ಯೋಗದ ಮಹಿಮೆಯನ್ನು ಜಗತ್ತಿಗೆ ತಿಳಿಸುವ ಅಮೂಲ್ಯ ಕೆಲಸ ಮತ್ತು ಅದರ ಜೊತೆಗೆ ನಿರಂತರವಾಗಿ ತಮ್ಮ ಆದಾಯದ ದೊಡ್ಡ ಪಾಲನ್ನು ಜನ್ಮಭೂಮಿ ಭಾರತದ ಏಳಿಗೆಗಾಗಿ ವ್ಯಯಿಸುತ್ತಿರುವುದು ಯುವಕರಿಗೆ ವಿದ್ಯಾರ್ಥಿಗಳಿಗೆ ಒಂದು ಉತ್ತಮ ಮಾದರಿಯಾಗಿದೆ. ಯಾವುದೇ ದೇಶದಲ್ಲಿದ್ದರೂ ಜನ್ಮಕೊಟ್ಟ ಮಾತೃಭೂಮಿಗಾಗಿ ಮಿಡಿಯುವುದು ಮತ್ತು ಕರ್ತವ್ಯ ನಿರ್ವಹಿಸುವುದು ಶ್ರೇಷ್ಠ ಕಾರ್ಯವಾಗಿದೆ ಎಂದರು.
ವಿದ್ಯೋದಯ ಟ್ರಸ್ಟ್ ವಿಶ್ವಸ್ತರಾದ ಪದ್ಮರಾಜ್, ವಿದ್ಯೋದಯ ಪ್ರೌಢ ಶಾಲೆಯ ಪ್ರಿನ್ಸಿಪಾಲ್ ಅನಿತಾ ಪಿ ರಾಜ್, ಮತ್ತು ಶ್ರೀ ಅನಂತೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಕಾರ್ನಾಡ್ ಉಪಸ್ಥಿತರಿದ್ದು ಶ್ರೀಗಳಿಗೆ ಭಕ್ತಿಗೌರವ ಸಮರ್ಪಿಸಿದರು. ವಾಸುದೇವ ಭಟ್ ಪೆರಂಪಳ್ಳಿ ಸ್ವಾಗತಿಸಿ, ನಿರೂಪಣೆಗೈದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ