ಮೀನುಗಾರಿಕೆ ಬಂದರುಗಳಲ್ಲಿ ಶುಚಿತ್ವ, ಸುರಕ್ಷತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Upayuktha
0

ಉಡುಪಿ: ಜಿಲ್ಲೆಯ ಮೀನುಗಾರಿಕಾ ಚಟುವಟಿಕೆ ನಡೆಯುವ ಬಂದರುಗಳಲ್ಲಿ ಶುಚಿತ್ವಕ್ಕೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡುವುದರೊಂದಿಗೆ, ಯಾವುದೇ ಅವಘಡಗಳು ನಡೆಯದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಅವರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿರುವ ಬಂದರುಗಳಲ್ಲಿ ಶುಚಿತ್ವ ಹಾಗೂ ಸುರಕ್ಷತೆ ಕ್ರಮಗಳನ್ನು ಪಾಲಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 


ಮೀನುಗಾರಿಕಾ ಜಟ್ಟಿಗಳ ನಿರ್ವಹಣೆಗೆ ಈಗಾಗಲೇ ಗುತ್ತಿಗೆಯನ್ನು 2019 ರಿಂದ 2020 ರ ವರೆಗೆ ನೀಡಲಾಗಿದ್ದು, ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುವುದರೊಂದಿಗೆ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು ಹಾಗೂ ಅಗ್ನಿ ಅವಘಡಗಳು ಆಗದಂತೆ ಅಗತ್ಯವಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ತಿಳಿಸಿದರು.


ಮೀನುಗಾರಿಕಾ ಚಟುವಟಿಕೆಗಳಿಗೆ ಪೂರಕವಾಗಿ ಬರುವಂತಹ ವಾಹನಗಳಿಂದ ಮಾತ್ರ ಪಾರ್ಕಿಂಗ್ ಶುಲ್ಕವನ್ನು ಪಡೆಯಬೇಕು. ಇತರೆ ಸಾರ್ವಜನಿಕ ಸಂಚಾರಿ ವಾಹನಗಳಿಂದ ಯಾವುದೇ ರೀತಿಯ ಶುಲ್ಕವನ್ನು ಪಡೆಯಬಾರದೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.


ಇತ್ತೀಚೆಗೆ ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ ಆಕಸ್ಮಿಕವಾಗಿ ಅಗ್ನಿ ದುರಂತದಿAದ ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು. ಇಂತಹ ಪ್ರಕರಣಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಅಗ್ನಿ ನಂದಿಸಲು ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳು ಬಂದರಿನಲ್ಲಿ ವ್ಯವಸ್ಥೆ ಹೊಂದಿರುವಂತೆ ನೋಡಿಕೊಳ್ಳಬೇಕು ಎಂದರು.


ಮರದ ಬೋಟುಗಳನ್ನು ನಿರ್ಮಾಣ ಮಾಡಲು ಅನುಮತಿಯನ್ನು ನೀಡಲಾಗಿದೆ. ಆದರೆ, ಕೆಲವರು ರಾಸಾಯನಿಕಗಳ ಬಳಕೆಯೊಂದಿಗೆ ಯಾಂತ್ರೀಕೃತ ದೋಣಿಗಳು ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕೆಂದು ಸೂಚನೆ ನೀಡಿದರು.


ಗಂಗೊಳ್ಳಿ ಬಂದರಿನಲ್ಲಿ ಅಗ್ನಿ ಶಾಮಕ ಉಪಠಾಣೆ ತೆರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಿದ ಅವರು, ಅಗ್ನಿ ನಂದಿಸಲು ಅಗತ್ಯವಿರುವ ಆಧುನಿಕ ವಾಹನದ ಖರೀದಿಗೆ ಕ್ರಿಯಾಯೋಜನೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.


ಪ್ರಕೃತಿ ವಿಕೋಪದಿಂದ ಅನಾಹುತಗಳು ಸಂಭವಿಸುವುದು ಅನಿರೀಕ್ಷಿತ. ಆದರೆ ಮಾನವ ನಿರ್ಮಿತ ತಪ್ಪಿನಿಂದಾಗಿ ಅವಘಡಗಳು ಸಂಭವಿಸಿದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ಅವರ ಮೇಲೆ, ಪ್ರಾಕೃತಿಕ ವಿಕೋಪ ನಿರ್ವಹಣಾ ಕಾಯ್ದೆಯನ್ವಯ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದರು.


ಬಂದರು ಇಲಾಖೆಯ ಅಧಿಕಾರಿಗಳು ಬಂದರಿನ ನಿರ್ವಹಣೆಯ ಕುರಿತು ಅಗತ್ಯವಿರುವ ಕ್ರಿಯಾ ಯೋಜನೆಯನ್ನು ತಯಾರಿಸುವುದರೊಂದಿಗೆ ನಿಗಧಿತ ಕಾಲಾವಧಿಯೊಳಗೆ ಸುರಕ್ಷತೆ ಸೇರಿದಂತೆ ಮತ್ತಿತರ ಕಾರ್ಯಚಟುವಟಿಕೆಗಳ ಬಗ್ಗೆ ಕ್ರಮ ವಹಿಸಬೇಕೆಂದು ಅಭಿಯಂತರುಗಳಿಗೆ ಸೂಚನೆ ನೀಡಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಬಂದರು ಇಲಾಖೆಯ ಅಭಿಯಂತರರುಗಳು ಹಾಗೂ ಮತ್ತಿತರ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top