ಲೀಲಾವತಿ- ನೆನಪಿನ ಬೀಜವ ಬಿತ್ತಿ ತೆರಳಿದರು

Upayuktha
0


ರದೆಯ ಮೇಲೆ ಕಾಣಿಸಿಕೊಂಡು ಜನರ ಮನ ಗೆಲ್ಲುವ ಕಲೆ ಎಲ್ಲರಿಗೂ ಒದಗಿ ಬರುವಂತದಲ್ಲ. ಕಠಿಣ ಪರಿಶ್ರಮ ಹಾಗೂ ಅವಿರತ ಪ್ರಯತ್ನವಿದ್ದರೆ ಮಾತ್ರ ಸಾಧ್ಯ. ಎಲ್ಲರೂ ಹುಟ್ಟುತ್ತಲೆ ನಟರಾಗುವುದಿಲ್ಲ. ತಾವು ಬೆಳೆಯುತ್ತಾ ಹೋದಂತೆ ತಮ್ಮಲ್ಲಿನ ನಟನಾಸಕ್ತಿಯು ಬೆಳೆಯುತ್ತ ಸಾಗುತ್ತದೆ. ತಮ್ಮ ಬಾಲ್ಯದಲ್ಲಿ ಅನೇಕ ತೊಂದರೆ, ಸಮಸ್ಯೆಗಳನ್ನು ಎದುರಿಸಿ ಹಲವು ಜನರ ಮನಗೆದ್ದ ಅನೇಕ ಕಲಾವಿದರನ್ನು ನಾವು ನೋಡಿದ್ದೇವೆ. ಇತ್ತೀಚೆಗೆ ನಮ್ಮೆಲ್ಲರನ್ನು ಅಗಲಿದ ಕನ್ನಡ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ಕೂಡ ಈ ಸಾಲಿನಲ್ಲಿ ಸೇರಿದವರು. ತಮ್ಮ ಅಧ್ಭುತ ನಟನೆಯಿಂದ ಅನೇಕ ಸಿನಿರಸಿಕರ ಮನಕದ್ದವರು.


ಲೀಲಾ ಕಿರಣ್ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸೋಲದೇವನಹಳ್ಳಿಯವರು‌. ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಲೀಲಾ ಅವರು ವೃತ್ತಿಜೀವನ ಆರಂಭಿಸಿದ್ದು ಮೈಸೂರಿನಲ್ಲಿ. ವೃತ್ತಿರಂಗಭೂಮಿಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಮುನ್ನ ಕೆಲವೆಡೆ ಮನೆ ಕೆಲಸವನ್ನೂ ಅವರು ನಿರ್ವಹಿಸಿದ್ದರು.


ಲೀಲಾವತಿ ಅವರ ಮಗ ವಿನೋದ್ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟ. ಪ್ರಸ್ತುತ ತಾಯಿ-ಮಗ ಇಬ್ಬರೂ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ.


ಮಹಾಲಿಂಗ ಭಾಗವತರ ಶ್ರೀ ಸತ್ಯ ಸಾಮ್ರಾಜ್ಯ ನಾಟಕದ ಕಂಪನಿಯನ್ನು ಅವರು ಚಿಕ್ಕ ವಯಸ್ಸಿನಲ್ಲೇ ಸೇರಿಕೊಂಡಿದ್ದರು. ಶಂಕರ್‌ಸಿಂಗ್ ನಿರ್ಮಾಣದ 'ನಾಗಕನ್ನಿಕಾ' ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ 1949ರಲ್ಲಿ ನಟಿಸಿದ್ದ ಅವರು, 1958ರಲ್ಲಿ ಸುಬ್ಬಯ್ಯನಾಯ್ಡು ಅವರ 'ಭಕ್ತ ಪ್ರಹ್ಲಾದ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ರಾಣಿ ಹೊನ್ನಮ್ಮ'ಚಿತ್ರವು ಪೂರ್ಣಪ್ರಮಾಣದ ನಾಯಕಿಯಾಗಿ ಅವರು ಗಮನಸೆಳೆದ ಮೊದಲ ಸಿನೆಮಾ. 'ರಣಧೀರ ಕಂಠೀರವ' ಅವರಿಗೆ ಹೆಸರು ತಂದುಕೊಟ್ಟ ಚಿತ್ರ. 'ಕಣ್ತೆರೆದು ನೋಡು”, 'ಗಾಳಿಗೋಪುರ', 'ಕನ್ಯಾರತ್ನ', 'ಕುಲವಧು' ಎಲ್ಲ ಸಿನಿಮಾಗಳಲ್ಲೂ ಅವರ ನಟನೆಯ ಕೌಶಲ ಕಣ್ಣಿಗೆ ಕಟ್ಟಿದೆ.


ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್. 1958 ರಲ್ಲಿ ತೆರೆಕಂಡಿದ್ದ ಭಕ್ತ 'ಪ್ರಹ್ಲಾದ' ಅವರ ಮೊದಲ ಚಿತ್ರ. 2009ರಲ್ಲಿ ಬಿಡುಗಡೆಯಾಗಿದ್ದ 'ಯಾರದು?' ಅವರ ಕೊನೆಯ ಚಿತ್ರ.


ವಯಸ್ಸು ಮಾಗಿದ ಮೇಲೆ ಪೋಷಕ ಪಾತ್ರಗಳಲ್ಲೂ ಅವರು ಸತತವಾಗಿ ಅಭಿನಯಿಸಿದರು. 'ಗೆಜ್ಜೆಪೂಜೆ' ಚಿತ್ರದಿಂದ ಇಂತಹ ಪಾತ್ರಗಳು ಅವರಿಗೆ ಬರತೊಡಗಿದವು. 'ಡಾಕ್ಟರ್ ಕೃಷ್ಣ' ಸಿನಿಮಾದ ಪೋಷಕ ಪಾತ್ರಕ್ಕೆ ರಾಜ್ಯ ಪ್ರಶಸ್ತಿಯೂ ಸಂದಿತ್ತು.


ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999-2000-ನೇ ಸಾಲಿನಲ್ಲಿ ಪಡೆದ ಲೀಲಾವತಿ ಅವರು, ‘ತುಮಕೂರು ವಿಶ್ವವಿದ್ಯಾಲಯ’ದ ಗೌರವ ಡಾಕ್ಟರೇಟ್ ಪದವಿಯನ್ನು 2008ರಲ್ಲಿ ಪಡೆದರು.


ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸುಮಾರು 600 ಚಿತ್ರಗಳಲ್ಲಿ ನಟಿಸಿದ್ದಾರೆ.


ಅಪರೂಪದ ವ್ಯಕ್ತಿತ್ವದ ಮೂಲಕ ಗಮನ ಸೆಳೆದ ಕಲೆಯ ಪ್ರತಿರೂಪ.ಏಳು ಬೀಳು ಸಂಕಷ್ಟಗಳ ಸರಮಾಲೆಗಳ ನಡುವೆ ಅರಳಿ ನಿಂತ ಪ್ರತಿಭೆ ಇವರದ್ದು.70 ರ ದಶಕದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಮಿಂಚಿದ ಲೀಲಾವತಿ. ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮೂಲಕ ಚಂದನವನಕ್ಕೆ ಪರಿಚಯ.ಮನೆಯಲ್ಲಿ ಹಲ್ಲಿ ಇರುವೆಗಳಿಗೂ ಊಟ ಬಡಿಸೋ ಮಮತಾಮಹಿ. ಅಪ್ಪಟ ರಂಗಭೂಮಿ ಕಲಾವಿದೆ ಓದಿದ್ದು ಎರಡನೇ ಕ್ಲಾಸ್ ಆದ್ರೂ ಆ್ಯಕ್ಟಿಂಗ್‌ನಲ್ಲಿ ಫಸ್ಟ್ ಕ್ಲಾಸ್.


ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾಗಿದ್ದರು. ಕೆಲಚಿತ್ರಗಳಲ್ಲಿ ನಾಯಕನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು.


ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಇದಲ್ಲದೆ ಹಲವಾರು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿದರು.


'ಮದುವೆ ಮಾಡಿ ನೋಡು' ಹಾಗೂ 'ಸಂತ ತುಕಾರಾಂ' ಚಿತ್ರಗಳಲ್ಲಿನ ಅಭಿನಯಕ್ಕೆ ಲೀಲಾವತಿ ಅವರಿಗೆ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ತುಂಬಿದ ಕೊಡ, ಮಹಾತ್ಯಾಗ, ಭಕ್ತ ಕುಂಬಾರ, ಸಿಪಾಯಿ ರಾಮು ಹಾಗೂ ಗೆಜ್ಜೆ ಪೂಜೆ ಚಿತ್ರಗಳಲ್ಲಿನ ಅಭಿನಯಕ್ಕೆ ಲೀಲಾವತಿ ಅವರಿಗೆ ರಾಜ್ಯ ಪ್ರಶಸ್ತಿಗಳು ಸಂದಿವೆ.


84 ವರ್ಷದ ಲೀಲಾವತಿಯವರು ಆರೋಗ್ಯ ಸಮಸ್ಯೆಯಿಂದ  ಡಿಸೆಂಬರ್ 8ರಂದು ಕೊನೆಯುಸಿರೆಳೆ ದಿರುವುದು ಚಿತ್ರರಂಗಕ್ಕೆ ಬಹುದೊಡ್ಡ ದುಃಖವೇ ಸರಿ. ಇನ್ನೂ ಇವರ ನೆನಪು ಮಾತ್ರ ಅಜರಾಮರ ನಿಮ್ಮ ದೇಹವಿಲ್ಲದೆ ಇದ್ದರೂ ಒಂದಲ್ಲ ಒಂದು ಚಿತ್ರದ ಮೂಲಕ ಪ್ರತಿಯೊಬ್ಬರ ಕಣ್ಮನಗಳಲ್ಲಿ ಶಾಶ್ವತವಾಗಿ ಉಳಿಯುವುದಂತೂ ಸತ್ಯ.


-ಅನನ್ಯ ಎಚ್ ಸುಬ್ರಹ್ಮಣ್ಯ

ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು.

ಪತ್ರಿಕೋದ್ಯಮ ವಿದ್ಯಾರ್ಥಿನಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top