ಅಪ್ರತಿಮ ಚಿತ್ರ ವರ್ಣ ಕಲಾಕಾರ, ವಿದ್ಯಾಕ್ಷೇತ್ರದ ಮಾದರಿ ಗುರು ಸುರೇಶ್ ವೆಂಕಟೇಶ ಕುಲಕರ್ಣಿ

Upayuktha
0


 


ಶೈಕ್ಷಣಿಕ ವಲಯದಲ್ಲಿ ಆದರ್ಶ ಗುರುವಾಗಿ ಅಮೂಲ್ಯ ಸೇವೆ ಸಲ್ಲಿಸುತ್ತಾ, ಜನಪ್ರಿಯ ಅಧ್ಯಾಪಕರಾಗಿ ಉತ್ತರ ಕರ್ನಾಟಕದ ನೆಲದ ಕಲಾ ಪ್ರಪಂಚಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಶ್ರೀ ಸುರೇಶ್  ವೆಂಕಟೇಶ ಕುಲಕರ್ಣಿ ಅವರು  ಕವಿ ಕುಮಾರವ್ಯಾಸನ ಆರಾಧ್ಯ ದೈವ ವೀರನಾರಾಯಣನು ನೆಲೆಗೊಂಡ ಗದಗ ಕ್ಷೇತ್ರದ ವೈಭವ ಇತಿಹಾಸದ ಭಾವೈಕ್ಯತೆಯ ನೆಲೆವೀಡಾದ ಶರಹಪೂರ ಎಂದೇ ಖ್ಯಾತವಾದ ತಿರುಳ್ಗನ್ನಡ ನಾಡು ಶಿರಹಟ್ಟಿಯ ಬನ್ನಿಕೊಪ್ಪದಲ್ಲಿ ಭಾರತೀಯತೆಯೇ ಮೂರ್ತೀಭವಿಸಿದ ಸುಸಂಸ್ಕೃತ ಕುಲಕರ್ಣಿ ಕುಟುಂಬದ ಶ್ರೀ ವೆಂಕಟೇಶ ಕುಲಕರ್ಣಿ ಮತ್ತು ಶ್ರೀಮತಿ ಸೋನುಬಾಯಿ(ಪದ್ಮಾವತಿ) ಸುಪುತ್ರರಾಗಿ 25.05.1948ರಂದು ಜನಿಸಿದರು. ಉತ್ತರ ಕರ್ನಾಟಕದ ಮಣ್ಣಿನ ಸೊಗಡನ್ನು ಸಹಜವಾಗಿಯೇ ಮೈಯ ಕಣ ಕಣದಲ್ಲೂ ತುಂಬಿಕೊಂಡ ಅಪರೂಪ ವ್ಯಕ್ತಿತ್ವ . 


ಪ್ರಾಥಮಿಕ- ಪ್ರೌಢ ಶಿಕ್ಷಣವನ್ನು ಶಿರಹಟ್ಟಿಯಲ್ಲಿಯೇ ಪೂರ್ಣಗೊಳಿಸಿ ಉನ್ನತ ಶಿಕ್ಷಣ, ಸ್ನಾತಕೋತ್ತರ ಪದವಿಗ್ರಹಿತರಾದ ನಂತರ ರಾಜ್ಯ ಸರ್ಕಾರದ ಕಲೆ ಮತ್ತು ಮಾಡೆಲಿಂಗ್‌ಗಳಲ್ಲಿ ವಿಶೇಷ ಪದವಿಗಳನ್ನು ಪಡೆದು ಚಿತ್ರಕಲಾ ಶಿಕ್ಷಕರ ಕೋರ್ಸ್ನಲ್ಲಿ ರಾಜ್ಯಕ್ಕೆ ಪ್ರಥಮರಾಗಿ ಸಾಧನೆ ಮಾಡಿದ ಹೆಮ್ಮೆ ಇವರದು. 

ಶಾಲಾ ದಿನಗಳಿಂದಲೂ ಚಿತ್ರಕಲೆ ಮತ್ತು ವರ್ಣಕಲೆಯತ್ತ ಒಲುಮೆಯನ್ನು ಬೆಳೆಸಿಕೊಂಡು ವಿಶ್ವವಿದ್ಯಾನಿಲಯ ಮಟ್ಟದ, ರಾಜ್ಯ ಮಟ್ಟದ ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಯಾರಿಗೂ ಬಿಟ್ಟುಕೊಡದ ಪ್ರತಿಭಾಶಾಲಿ ಆಗಿದ್ದಾರೆ. ಬಿ.ಎಡ್ ಪದವಿ ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್, ಜಿಡಿ ಕಲೆ ಮತ್ತು ಜಿಡಿ ಮಾಡೆಲಿಂಗ್‌ಗಳಲ್ಲಿ ರಾಜ್ಯಕ್ಕೆ ಮೊದಲಿಗರಾಗಿ 'ಕಲಾನಿಪುಣ' ಎನಿಸಿಕೊಂಡು ನಾಡಿನ ಕಲೋಪಾಸಕರ ಸಾಲಿನಲ್ಲಿ ಪ್ರಥಮರಾಗಿದ್ದಾರೆ. 


ಧಾರವಾಡದ ಸುತ್ತಲಿನ ಪ್ರದೇಶಗಳಲ್ಲಿ ಶ್ರೀಯುತರು ಜ್ಞಾನಶಿಬಿರ, ಸ್ವಕಲಿಕಾ ಶಿಬಿರ, ಪ್ರಕೃತಿ ಅಧ್ಯಯನ ಶಿಬಿರ, ಆರೋಗ್ಯ ಶಿಬಿರ, ಸೃಜನಶೀಲ ಶಿಬಿರ, ವಿಜ್ಞಾನ ಶಿಬಿರ, ವರ್ಣ ಚಿತ್ರಕಲಾ ಶಿಬಿರ, ಉಪಾಧ್ಯಾಯರಿಗಾಗಿ ಬೋಧನಾ ಕೌಶಲ್ಯ ಶಿಬಿರ ಮುಂತಾದ ಕಲೆ, ಆರೋಗ್ಯ, ಸಾಂಸ್ಕೃತಿಕ ಶಿಬಿರಗಳನ್ನು ಆಯೋಜಿಸಿ ಸಮಾಜ ಸ್ವಾಸ್ಥ್ಯದ ಹಲವು ಕಾರ್ಯಗಳ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಅದಮ್ಯ ಚೇತನ . 


ವೃತ್ತಿಪರವಾಗಿ ಧಾರವಾಡದಲ್ಲಿ ಸುಮಾರು ಮೂರು ದಶಕಗಳಿಗೂ ಮೀರಿ ಅಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ನಾಂದಿ ನುಡಿದು ರಾಜ್ಯಮಟ್ಟದ 'ಆದರ್ಶಗುರು' ಪ್ರಶಸ್ತಿಗೆ ಅರ್ಹವಾಗಿಯೇ ಭಾಜನರಾಗಿ, ಪದ್ಮವಿಭೂಷಣೆ ಗಂಗೂಬಾಯಿ ಹಾನಗಲ್ ಅವರಿಂದ 'ಶಾರದ ಶಾಲ್ಮಲಾ' ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರದಾಗಿದೆ. 


ತಮ್ಮ ಅನನ್ಯ ಸಾಮಾಜಿಕ ಕಳಕಳಿ, ಕಲಾಸೇವೆ, ಸಾಹಿತ್ಯ ಸೇವೆಗಳನ್ನು ಪುರಸ್ಕರಿಸಿ ರಾಷ್ಟ್ರೀಯ ಎನ್‌ಸಿಇಆರ್‌ಟಿ ಪ್ರಶಸ್ತಿ, ಡಾ|| ಎಸ್.ಜಿ. ನಾಗಲೋಟಿಮಠ ಪ್ರಶಸ್ತಿ, 'ಬೇಂದ್ರೆ ಕಲಾರತ್ನ' ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳು ಸರದಿಯಲ್ಲಿ ನಿಂತು ಇವರನ್ನು ಅಲಂಕರಿಸಿವೆ. 

ಕನ್ನಡ ಪುಸ್ತಕ ಪ್ರಪಂಚಕ್ಕೆ 'ಆಧುನಿಕ ಕಲಾವಿನ್ಯಾಸ', 'ಭಾವರೇಖೆಯಲ್ಲಿ ಬೇಂದ್ರ', 'ಪಕ್ಷಿ ಸಂಕುಲ', 'ರಾಜ್ಯಕೋಶ ಪಕ್ಷಿಪ್ರಾಣಿ ಸಂಪುಟ', 'ಕುಶಲಕಲೆಯ ಕುತೂಹಲ ಜೀವಿಗಳು', 'ಚೆಲುವ ಕನ್ನಡ ನಾಡು' ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿ-ಪ್ರಕಟಣೆಗಳನ್ನು ಕೊಡುಗೆಯನ್ನಾಗಿ ನೀಡುವ ಮೂಲಕ ಕನ್ನಡ ಸಾರಸ್ವತಲೋಕವನ್ನು ಶ್ರೀಮಂತಗೊಳಿಸಿದ ಹೆಮ್ಮೆ ಇವರ ಪಾಲಿಗಿದೆ. ಧಾರವಾಡದ ಬಾನುಲಿಯಲ್ಲಿ ತಮ್ಮ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳು ಬಿತ್ತರಗೊಂಡಿವೆ. 


ಅನೇಕ ಪ್ರತಿಷ್ಠಿತ ಗ್ರಂಥಗಳಿಗೆ ಸೊಗಸಾದ ಸೂಕ್ತ ಮುಖ ಪುಟಗಳನ್ನು ವಿನ್ಯಾಸಗೊಳಿಸಿರುವುದು ಇವರ ಕಲೆಯ ಕಲ್ಪನಾ ಶಕ್ತಿಗೆ ನಿದರ್ಶನವಾಗಿದೆ. 

ಧಾರವಾಡದ ಕಲಾವೃಂದ, ಚೈತನ್ಯ ಮಂಡಲ, ಮಕ್ಕಳ ಅಕಾಡೆಮಿಯ ಸಂಸ್ಥಾಪಕರಾಗಿ, ಕಲೋದ್ಧಾರಕ ಸಂಘ, ಅಂಬಿಕಾತನಯದತ್ತ ವೇದಿಕೆಗಳ ಸದಸ್ಯರಾಗಿ, ಅನ್ವೇಷಕ ಕೂಟ, ಬಾಲರಂಗಗಳ ನೇತಾರರಾಗಿ, ಶಿಕ್ಷಣ ವಿಕಾಸ ಪರಿಷತ್ತು, ಶ್ರೀ ರಾಮಕೃಷ್ಣ ಆಶ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬಹುರೂಪಿ ಪ್ರತಿಭೆಯಾಗಿ ಸಮುದಾಯ ಸೇವೆಯಲ್ಲಿ ಸದಾ ನಿರತರಾಗಿರುವ ಚೈತನ್ಯಶೀಲ ವ್ಯಕ್ತಿತ್ವ ಇವರದು. 


ಜಿಲ್ಲಾ ಪ್ರಾಥಮಿಕ ಶಿಕ್ಷಣ, ಸರ್ವ ಶಿಕ್ಷಾ ಅಭಿಯಾನ, ದೂರ ಶಿಕ್ಷಣ ಯೋಜನೆ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ, ಆಕಾಶವಾಣಿಯ ರಾಜ್ಯಮಟ್ಟದ 'ಕೇಳಿ-ಕಲಿ' ಕಾರ್ಯಕ್ರಮದ ಸಹಭಾಗಿಗಳಾಗಿ ರಾಜ್ಯ ಶಿಕ್ಷಣ ವಲಯದಲ್ಲಿ ಪ್ರತ್ಯೇಕ ಸ್ಥಾನವನ್ನು ಪಡೆದಿರುವ ಹಿರಿಮೆಗೆ ಪಾತ್ರರಾಗಿದಿದ್ದಾರೆ.

 ಇವೆರ ಎಲ್ಲ್ಲ ಸಮಾಜಮುಖೀ ಚಟುವಟಿಕೆಗಳಿಗೆ ಜೀವತುಂಬುವ ಪತ್ನಿ ತಾರಾ, ಮಕ್ಕಳಾದ ವರ್ಷಾ, ಹರ್ಷಾ ಮತ್ತು  ರಶ್ಮಿ , ಅಳಿಯಂದಿರಾದ  ಸಚಿನ ಮೆಳ್ಳಿಮಟ್ಟಿ  ಮತ್ತು ಪ್ರವೀಣ ದೊಡ್ಡವಾಡ , ಮೊಮ್ಮಗಳು ವಾಗ್ಮಯಿ ಇದು ಸಗ್ಗಕ್ಕೆ ಕಿಚ್ಚು ಹಚ್ಚಬಹುದಾದ ಇವರ  ಚಿಕ್ಕ ಚೊಕ್ಕ ಕುಟುಂಬದ ಸಂತೃಪ್ತ ಬದುಕು. 

ಆಧ್ಯಾತ್ಮಿಕ ತಳಹದಿಯ ಮೇಲೆ ಗ್ರಾಮೀಣ ಪ್ರದೇಶದಲ್ಲಿ  ಅಕ್ಷರ, ಆರೋಗ್ಯಗಳ ಏಳಿಗೆಯನ್ನೇ ಗುರಿಯನ್ನಾಗಿಸಿಕೊಂಡು ಶ್ರಮಿಸುತ್ತಿರುವ ಲಾಭರಹಿತ ಸಂಸ್ಥೆಯಾದ ಪಾಂಚಜನ್ಯ ಪ್ರತಿಷ್ಠಾನದ ವಾರ್ಷಿಕ ಉತ್ಸವದ ಸಂಭ್ರಮದಲ್ಲಿ ಬೆಂಗಳೂರು ಜಯನಗರ 4ನೇ ಬಡಾವಣೆಯ ಯುವಪಥ ವಿವೇಕ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಾಡಿನ ಶಿಕ್ಷಣ ಹಾಗೂ ಕಲಾ ವಲಯಗಳಿಗೆ ಅವಿರಾಮವಾಗಿ ಅನುಪಮ ಸೇವೆ ಸಲ್ಲಿಸುತ್ತಿರುವ ಶ್ರೀಯುತರಿಗೆ ಪಾಂಚಜನ್ಯ ಪುರಸ್ಕಾರ – 2023 ಅನ್ನು ಪ್ರದಾನವಾಗಲಿದೆ. 


-ಜಿ.ಪಿ. ನಾಗರಾಜನ್  

 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top