- ಮೃದುಲ
ಆಧ್ಯಾತ್ಮ ಚಿಂತಕಿ, ಮೌಲ್ಯ ಶಿಕ್ಷಣ ತಜ್ಞೆ
===================================
ಹೀಗೆಯೇ ರಾಮಾಯಣವನ್ನು ನನ್ನ ಶಿಷ್ಯರಿಗೆ ಹೇಳುತ್ತಿದ್ದೆ . ಅದು ಕೈಕೇಯಿ ರಾಮನನ್ನು ವನವಾಸಕ್ಕೆ ಹೋಗು ಎಂದು ಹೇಳುವ ಪ್ರಸಂಗ. ದಶರಥನು ಅವಳಿಗೆ ಹಿಂದೆ ವರ ಕೊಟ್ಟು, ಈಗ ಅವನ ಸತ್ಯವಾಕ್ಯ ಪರಿಪಾಲನೆ ಮಾಡುವಂತಹ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿರುತ್ತಾನೆ, ಪರಿಪರಿಯಾಗಿ ಕೈಕೇಯಿಯನ್ನು ಬೇಡಿಕೊಂಡರೂ, ಅವಳೇನೂ ಅವಳ ಪಟ್ಟನ್ನು ಬಿಡುವುದೇ ಇಲ್ಲ. ಕೊನೆಗೆ ದೀನನಾಗಿ ಅವಳ ಕಾಲಿಗೆ ಬಿದ್ದುಬಿಟ್ಟ ದಶರಥ! ಆದರೂ ಅವಳ ಹಟ ಬದಲಾಗಲೇ ಇಲ್ಲ. ಅವಳ ಹೃದಯ ಮೃದುವಾಗಲೇ ಇಲ್ಲ. ಸರಿ, ಸುಮಂತ್ರ ಎಂಬ ಮಂತ್ರಿಗೆ ಹೇಳಿ, ಶ್ರೀರಾಮನನ್ನು ದಶರಥನು ಕೈಕೇಯಿಯ ಅರಮನೆಗೇ ಕರೆಸಿಕೊಂಡ. ರಾಮನೇನೋ ಬಂದ. ಆದರೆ ದಶರಥನಿಗೆ, ರಾಮನಿಗೆ ಕಾಡಿಗೆ ಹೋಗು ಎನ್ನಲು ಆಗಲೇ ಇಲ್ಲ. ಅದನ್ನು ಕೈಕೇಯಿಯೇ ಹೇಳಬೇಕಾಯಿತು. ಎರಡು ವರಗಳ ವಿಷಯ ಹೇಳಿದ ಅವಳು, ಮೊದಲನೆಯ ವರವಾಗಿ ಭರತನಿಗೆ ಪಟ್ಟಾಭಿಷೇಕ ಮತ್ತು ಎರಡನೆಯ ವರವಾಗಿ ರಾಮನಿಗೆ ವನವಾಸದ ಬಗ್ಗೆ ಹೇಳಿದಳು. ಬೇರೆ ಇನ್ಯಾರಾದರೂ ಇದ್ದರೆ ಒಂದು ಕ್ಷಣವಾದರೂ ದುಃಖಪಟ್ಟುಕೊಳ್ಳುತ್ತಿದ್ದರೇನೋ ಅಥವಾ ಆಶ್ಚರ್ಯವನ್ನಾದರೂ ಮುಖದಲ್ಲಿ ತೋರುತ್ತಿದ್ದರೇನೋ! ಆದರೆ ಶ್ರೀರಾಮನು ಮೊದಲು ಮಾಡಿದ ಕೆಲಸವೆಂದರೆ ದುಃಖದಿಂದ ಕುಸಿದು ಹೋಗಿ ಕೆಳಗೆ ಬಿದ್ದಿದ್ದ ದಶರಥನ ಆರೋಗ್ಯವನ್ನು ವಿಚಾರಿಸಿದ್ದು! ಎಂತಹ ಪರಿಸ್ಥಿತಿಯಲ್ಲಿಯೂ ಧೈರ್ಯಗೆಡದ ಶೌರ್ಯ ವೀರ್ಯಕ್ಕೆ ಹೆಸರಾದ, ಸತ್ಯನಿಷ್ಠೆಗೆ ಹೆಸರಾದ ತಂದೆಯ ಆರೋಗ್ಯದ ಬಗ್ಗೆ ಅವನು ಮೊದಲು ಕಾಳಜಿಯನ್ನು ತೋರುತ್ತಾನೆ. ಇದೇ ರಾಮನನ್ನು ಬೇರೆ ಸಾಮಾನ್ಯ ಮಕ್ಕಳಿಗಿಂತ ಉತ್ತಮನನ್ನಾಗಿ , ಆದರ್ಶ ಪುರುಷನನ್ನಾಗಿ ಮಾಡಿತೇನೋ ಅಲ್ಲವೇ?
ಸಾಮಾನ್ಯರಾದ, ಒಳ್ಳೆಯವರೇ ಆದ, ಬೇರೆ ಮಕ್ಕಳಾದರೆ ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಿರಬಹುದು? ಒಂದೋ ವನವಾಸದ ಸುದ್ದಿಯನ್ನು ಕೇಳುತ್ತಲೇ ರಾಜ್ಯಾಭಿಷೇಕವು ಕೈತಪ್ಪಿ ಹೋಯಿತು ಎಂಬ ನಿರಾಸೆಯು ಸೇರಿ ಹೋಗಿ ಕೈಕೇಯಿಯನ್ನು ದೂಷಿಸಬಹುದು. ಅಥವಾ ಅವಳಿಗೆ ಅಂಕುಶ ಹಾಕದೆ, ಅವಳ ಮಾತಿಗೆ ಇಲ್ಲ ಎನ್ನಲೂ ಆಗದೆ, ಕುಸಿದು ಕುಳಿತಿರುವ ತಂದೆಯನ್ನು ನೋಡಿ ಅವನನ್ನು ಹೇಡಿ ಎಂದು ಜರಿಯಬಹುದೇನೊ! ಅಥವಾ ನಿನ್ನ ಸತ್ಯನಿಷ್ಠೆ, ಪ್ರತಿಜ್ಞೆ ಮುಂತಾದವನ್ನೆಲ್ಲ ಬಿಸಾಕಿ ನನ್ನ ಕಡೆ ನೋಡು, ನಾನು ಅಂತಹದ್ದೇನು ತಪ್ಪು ಮಾಡಿದೆ ಎಂದು ದೀನನಾಗಿ ಬೇಡಬಹುದು! ಇದ್ಯಾವುದನ್ನೂ ಶ್ರೀ ರಾಮ ಮಾಡಲಿಲ್ಲವಲ್ಲ! ಹಾಗಾದರೆ ಅವನಿಗೆ ತನ್ನ ಹಿತವನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಇರಲಿಲ್ಲವೇ? ಹಾಗೇನು ಇಲ್ಲ ಎಂದು ಮುಂದೆ ನಿಮಗೆಲ್ಲ ತಿಳಿದೇ ಇದೆ. ಹಾಗಾದರೆ ಅವನು ಯಾಕೆ ತನ್ನ ಪರವಾಗಿ ವಾದ ಮಾಡಲಿಲ್ಲ? ತನ್ನ ಹಿತವನ್ನು ಏಕೆ ಕಾಯ್ದುಕೊಳ್ಳಲಿಲ್ಲ? ಎಂಬ ಸಂಶಯ ಬಂದೇ ಬರುತ್ತದೆ ಅಲ್ಲವೇ ? ಹೌದು . ಹಾಗೆಲ್ಲ ರಾಮ ಮಾಡಬಹುದಿತ್ತು. ಆದರೆ ಆಗ ಅವನಿಗೂ ಬೇರೆ ಸಾಮಾನ್ಯ ಮಕ್ಕಳಿಗೂ ವ್ಯತ್ಯಾಸವೇ ಉಳಿಯುತ್ತಿರಲಿಲ್ಲ.
ಅವನೇನಾದರೂ ತಂದೆಯನ್ನು ದೀನನಾಗಿ ಬೇಡಿಕೊಂಡಿದ್ದರೆ, ದಶರಥನು ಇಕ್ಕಟ್ಟಿಗೆ ಸಿಲುಕುತ್ತಿದ್ದ. ಅತ್ತ ಸತ್ಯಪ್ರತಿಜ್ಞೆ ಮುರಿಯುವ ಹಾಗೂ ಇಲ್ಲ, ಇತ್ತ ಮಗನನ್ನು ಬಿಡುವ ಹಾಗೂ ಇಲ್ಲ, ಎಂಬ ಆ ದಶರಥನ ಪರಿಸ್ಥಿತಿಯನ್ನು ರಾಮ ಅರ್ಥ ಮಾಡಿಕೊಂಡಿದ್ದ. ಅದೇ ಅಲ್ಲವೇ ಒಳ್ಳೆಯ ಮಕ್ಕಳ ಸ್ವಭಾವ.
ಹೋಗಲಿ ಕೈಕೇಯಿಯನ್ನಾದರೂ ಜರಿದನೆ? ಅವಳನ್ನಾದರೂ ತನ್ನ ತಂದೆಗೆ ಕೆಟ್ಟ ಬುದ್ಧಿಯನ್ನು ಹೇಳಿಕೊಟ್ಟದ್ದಕ್ಕೆ ಚೆನ್ನಾಗಿ ಹಳಿಯಬಹುದಿತ್ತು ಅಲ್ಲವೇ? ಆದರೆ ಅವನು ಅದನ್ನು ಮಾಡಲಿಲ್ಲ. ಹಾಗೇನಾದರೂ ಮಾಡಿದ್ದರೂ ಅವನು ಬೇರೆ ಸಾಮಾನ್ಯ ಮಕ್ಕಳಿಗಿಂತ ಭಿನ್ನವಾದ ಆದರ್ಶ ಪುರುಷನು ಆಗುತ್ತಿರಲಿಲ್ಲ. ಅವನು ಏಕೆ ಹಾಗೆ ಮಾಡಿರಬಹುದು? ಅವನೇ ಬಹಳ ಕಡೆ ಹೇಳುವ ಹಾಗೆ, ಅವಳು ಭರತ ಶತ್ರುಘ್ನರನ್ನು ತನ್ನ ತಂದೆಯ ಮನೆಯಲ್ಲಿಯೇ ಬಹಳ ಕಾಲದಿಂದ ಬಿಟ್ಟುಬಿಟ್ಟಿದ್ದಳು. ಹಾಗಾಗಿ ಶ್ರೀರಾಮನನ್ನೇ ತನ್ನ ಮಗನಿಗಿಂತ ಹೆಚ್ಚಾಗಿ ಪ್ರೀತಿಯಿಂದ ನಡೆಸಿಕೊಂಡಿದ್ದಳು. ಶ್ರೀರಾಮನೂ ಅಷ್ಟೇ, ತನ್ನ ಸ್ವಂತ ತಾಯಿಯ ಹಾಗೆ ಅವಳ ಹತ್ತಿರವೂ ಅತ್ಯಂತ ಪ್ರೀತಿಯಿಂದ ಅಷ್ಟು ದಿನ ನಡೆದುಕೊಂಡಿದ್ದ. ಹಾಗಾಗಿ ಅವಳ ಈ ನಡವಳಿಕೆಗೆ ಅವನು ಯಾವ ಕೆಟ್ಟ ಹೆಸರನ್ನೂ ಕೊಡಲು ಇಚ್ಛಿಸಲಿಲ್ಲವೇನೊ!
ತಂದೆಯನ್ನು ಒಂದು ಹೆಣ್ಣಿನ ಮಾತನ್ನು ಕೇಳುವಂತಹ ಹೇಡಿ, ಎಂದು ಕೂಡ ಶ್ರೀರಾಮ ಜರಿಯಲಿಲ್ಲ. ಏಕೆಂದರೆ ತಂದೆಯು ಪರಾಕ್ರಮಿ, ಸತ್ಯಸಂಧ ಎಂದು ಶ್ರೀರಾಮನಿಗೆ ಚೆನ್ನಾಗಿ ಗೊತ್ತಿತ್ತು. ಹಾಗೇನಾದರೂ ಅವನು ತಂದೆಯನ್ನು ಹೀಯಾಳಿಸಿದ್ದರೆ ತಂದೆಯು ಅವನ ಸತ್ಯಪ್ರತಿಜ್ಞೆಯನ್ನು ಮುರಿಯಬೇಕಾಗುತ್ತದೆ. ವಂಶಪಾರಂಪರ್ಯವಾಗಿ ಸತ್ಯವಚನಕ್ಕೆ ಹೆಸರಾಗಿದ್ದ ಕುಲದ ಗೌರವವೆಲ್ಲವೂ ನೀರು ಪಾಲಾಗುತ್ತಿತ್ತು. ಶ್ರೀರಾಮನಿಗೆ ತನ್ನ ಕುಲದ ಮರ್ಯಾದೆ, ತನ್ನ ತಂದೆಯ ಮರ್ಯಾದೆ, ತನ್ನ ಸ್ವಹಿತಕ್ಕಿಂತ ಹೆಚ್ಚು ಪ್ರಿಯವಾಗಿತ್ತು. ತನ್ನ ಸಹೋದರರ ಮೇಲಿನ ಪ್ರೀತಿಯು ಕೂಡ ಅವನಿಗೆ ತನ್ನ ಸುಖಕ್ಕಿಂತ ಹೆಚ್ಚು ಆಪ್ತವಾಗಿತ್ತು. ಇದೇ ಅಲ್ಲವೇ ಶ್ರೀ ರಾಮನನ್ನು ಬೇರೆ ಸಾಮಾನ್ಯ ಮಕ್ಕಳಿಗಿಂತ ಭಿನ್ನವಾಗಿ ಆದರ್ಶ ಪುರುಷನಾಗಿ ನಿಲ್ಲಿಸಿದ್ದು!
ಹೀಗೆಲ್ಲಾ ಶ್ರೀರಾಮನು ಮಾಡಿ ಯಾವುದೋ ಒಂದು ರೀತಿಯಿಂದ ತಂದೆಯನ್ನು ಒಪ್ಪಿಸಿ ರಾಜ್ಯವನ್ನು ಮರಳಿ ಪಡೆದಿದ್ದರೂ ತಂದೆಯ ಕಣ್ಣಿನಲ್ಲಿ, ಪ್ರಜೆಗಳ ಕಣ್ಣಿನಲ್ಲಿ, ಸಹೋದರರ ಕಣ್ಣಿನಲ್ಲಿ, ಅಷ್ಟೇ ಏಕೆ ಸೀತೆಯ ಕಣ್ಣಿನಲ್ಲೂ ಅವನು ಸಾಮಾನ್ಯ ಮನುಷ್ಯನಾಗಿ ಬಿಡುತ್ತಿದ್ದ. ಅವನೆಂದೂ ಆದರ್ಶ ಪುರುಷನು ಆಗುತ್ತಲೇ ಇರಲಿಲ್ಲ. ಇಂದು ನಾವು ಅವನ ಪೂಜೆಯನ್ನು ಮಾಡುತ್ತಲೂ ಇರಲಿಲ್ಲ.
ಆದರೂ ಕಾಡಿಗೆ ಹೋಗುವುದು ಎಂದರೆ ಸುಮ್ಮನೆಯೇ? ನಾರು ಬಟ್ಟೆಯನ್ನು, ಮರದ ಕೆಳಗೆ ಅಥವಾ ಕುಟೀರಗಳಲ್ಲಿ ಮಲಗುತ್ತಾ, ಎಲ್ಲಾ ಸುಖವನ್ನು ಬಿಟ್ಟು, ಅರಮನೆಯಲ್ಲಿ ಸಿಗುತ್ತಿದ್ದ ಮೃಷ್ಟಾನ್ನ ಭೋಜನವನ್ನು ತಿನ್ನದೇ, ಗೆಡ್ಡೆ ಗೆಣಸುಗಳನ್ನು ತಿನ್ನುತ್ತಾ ಬದುಕುವುದು ರಾಜಕುಮಾರನಾದ ರಾಮನಿಗೆ ಕಷ್ಟವಾಗಬಹುದು ತನಗೆ ಎನ್ನುವ ಯೋಚನೆಯೇ ಬರಲಿಲ್ಲವೇ? ಎನ್ನುವ ಸಂದೇಹ ಬರಬಹುದು. ಎಷ್ಟೇ ಒಳ್ಳೆಯವರಾದರೂ ಕಷ್ಟದ ಜೀವನ ಪಡಲು ಹೇಳಿದರೆ ಯಾರಿಗಾದರೂ ಅದು ಸಹ್ಯವಾಗುವುದಿಲ್ಲ ಅಲ್ಲವೇ? ಈ ಸಂದೇಹ ದಶರಥನಿಗೆ ಬರುತ್ತದೆ. ಅವನು ಕೈಕೇಯಿಯನ್ನು ಬೇಡಿಕೊಳ್ಳುತ್ತಾನೆ ಕೂಡ. ಭರತನಿಗೆ ಪಟ್ಟಾಭಿಷೇಕವನ್ನಾದರೂ ಮಾಡುತ್ತೇನೆ, ಆದರೆ ರಾಮನಿಗೆ ವನವಾಸ ಬೇಡ ಎಂದು. ಆದರೆ ಕೈಕೇಯಿಯು ಅದಕ್ಕೆ ಒಪ್ಪುವುದೇ ಇಲ್ಲ. ಅವಳಿಗೆ ಮುಂದೆ ಶ್ರೀರಾಮನು ಭರತನನ್ನು ಬಂಧಿಸಿ ರಾಜ್ಯವನ್ನು ಕಿತ್ತುಕೊಂಡರೆ ಎನ್ನುವಂತಹ ಭಯ ಇದ್ದೇ ಇತ್ತು. ಆದರೆ ರಾಮನಿಗೆ ತನ್ನ ಕಷ್ಟದ ಬಗ್ಗೆ ಚಿಂತೆ ಬರಲಿಲ್ಲವೇ? ಎಂದರೆ ಇಲ್ಲ. ಅವನೇ ಮುಂದೆ ಹೇಳುತ್ತಾನೆ. ನನಗೆ ಯಾವ ರಾಜ್ಯ, ಹಣಕಾಸು, ಅಧಿಕಾರದ ಮೋಹವಿಲ್ಲ. ನಾನು ಕಾಡಿನಲ್ಲಿ ಋಷಿಮುನಿಗಳ ಮಧ್ಯೆ ಸಂತೋಷದಿಂದ ಆನಂದದಿಂದ ಕಾಲ ಕಳೆಯಲು ಬಯಸುತ್ತೇನೆ ಅಂತ.
ಇನ್ನು ಇದಕ್ಕೆಲ್ಲಾ ಲಕ್ಷ್ಮಣನ ಪ್ರತಿಕ್ರಿಯೆ ಹೇಗಿತ್ತು ನೋಡೋಣ.
ಶ್ರೀ ರಾಮನ ಸಂವಾದ ದಶರಥ ಕೈಕೇಯಿಯ ಜೊತೆಗೆ ನಡೆದಾಗ ಲಕ್ಷ್ಮಣನು ಅಷ್ಟೂ ಹೊತ್ತು ಶ್ರೀರಾಮನ ಜೊತೆಗೇ ಇರುತ್ತಾನೆ. ಅವನಿಗೆ ದುಃಖ, ಕೋಪ ಎಲ್ಲವೂ ಒಟ್ಟಾಗಿ ಉಕ್ಕಿ ಬರುತ್ತಿರುತ್ತದೆ. ಆದರೂ ಅವನು ಅಲ್ಲಿ ಒಂದು ಮಾತೂ ಆಡದೆ, ಶ್ರೀರಾಮನ ಹಿಂದೆ ಕೌಸಲ್ಯೆಯ ಅರಮನೆಗೆ ನಡೆಯುತ್ತಾನೆ. ಅಲ್ಲಿ ವಿಷಯ ತಿಳಿದ ಕೌಸಲ್ಯೆಯ ದುಃಖವನ್ನು ನೋಡಿದ ಲಕ್ಷ್ಮಣನಿಗೆ, ದುಃಖ ಮತ್ತು ಕೋಪಗಳನ್ನು ತಡೆಯಲು ಸಾಧ್ಯವಾಗುವುದಿಲ್ಲ. ಅವನು ರಾಮನಿಗೆ ಹೇಳಿಯೇ ಬಿಡುತ್ತಾನೆ. ಕಾಮಕ್ಕೆ ಸಿಲುಕಿದ ದಶರಥ ಯಾವ ತಪ್ಪು ಮಾಡದ ನಿನ್ನನ್ನು, ಅದು ಹೇಗೆ ಕಾಡಿಗೆ ಕಳಿಸಲು ಸಾಧ್ಯ? ನೀನೊಂದು ಮಾತು ಹೇಳು, ನಾನು ಯುದ್ಧ ಮಾಡಿಯಾದರೂ, ನಿನಗೆ ರಾಜಾಭಿಷೇಕವನ್ನು ಮಾಡಿಸುತ್ತೇನೆ. ಅಥವಾ ದಶರಥನನ್ನು ಬಂಧನಕ್ಕೆ ಒಳಪಡಿಸಿಯಾದರೂ, ರಾಜ್ಯವನ್ನು ವಶಪಡಿಸಿಕೊಳ್ಳೋಣ! ನಗರದ ಜನರು ಏನಾದರೂ ವಿರೋಧಿಸಿದರೆ, ಅವರನ್ನೆಲ್ಲಾ ಕೊಂದಾದರೂ ಸರಿ, ನಿನಗೆ ರಾಜ್ಯವನ್ನು ಕೊಡಿಸುವ ಸಾಮರ್ಥ್ಯ ನಾನು ಹೊಂದಿದ್ದೇನೆ ಎನ್ನುತ್ತಾನೆ. ಇದು ಸಾಮಾನ್ಯ ಮಕ್ಕಳು ಆಡುವ ಮಾತಲ್ಲದಿರಬಹುದು. ಆದರೆ ಸಾಮಾನ್ಯವಾಗಿ ಬಲಶಾಲಿಗಳಾದ ರಾಜರು ಅಥವಾ ಕೆಟ್ಟ ರಾಜರು ಇದನ್ನು ಇತಿಹಾಸದಲ್ಲಿ ಮಾಡಿಯೇ ಇದ್ದಾರೆ.
ಹೀಗೆ ಹೇಳಿದ ಲಕ್ಷ್ಮಣನಿಗೆ ರಾಮನು ಧರ್ಮದ ಬೋಧನೆಯನ್ನು ಮಾಡುತ್ತಾನೆ. ತಂದೆ ಕೇವಲ ತಮ್ಮ ತಂದೆ ಅಲ್ಲದೆ, ಗುರುವಾಗಿಯೂ, ಪ್ರಜೆಗಳ ಪಾಲಕನಾಗಿಯೂ ಇದ್ದಾನೆ. ಅಂತಹವನನ್ನು ಎದುರಿಸುವ ಕೆಲಸ ಬೇಡ. ಅವನ ಆಜ್ಞೆಯ ಪರಿಪಾಲನೆ ಮಾಡುವುದು ತನ್ನ ಕರ್ತವ್ಯ ಎಂದು ಶ್ರೀ ರಾಮನು ಲಕ್ಷ್ಮಣನಿಗೆ ಬುದ್ಧಿ ಹೇಳುತ್ತಾನೆ. ಅಷ್ಟೇ ಅಲ್ಲ, ಕೌಸಲ್ಯ ದೇವಿಗೂ ಕೂಡ ಶ್ರೀರಾಮನು ಪತಿಯ ಎಲ್ಲಾ ಧರ್ಮ, ಅರ್ಥ, ಕಾಮಗಳ ಸಂಬಂಧಿತ ಕೆಲಸಗಳಲ್ಲಿ ಪತ್ನಿಯು ಅವನಿಗೆ ಜೊತೆಯಾಗಿ ಇರಬೇಕಾಗುತ್ತದೆ. ಹಾಗಾಗಿ ಅವಳ ಸ್ಥಳ ಅವಳ ಪತಿಯ ಜೊತೆಗೆ ಇದೆಯೇ ಹೊರತು, ವಿಧವಾ ಸ್ತ್ರಿಯಂತೆ ತನ್ನ ಜೊತೆ ಅವಳು ಬರಬಾರದು ಎಂದು ತಿಳುವಳಿಕೆಯನ್ನು ಹೇಳುತ್ತಾನೆ.
ಹೀಗೆ ಅವನು ಹೇಳದೆ, ಲಕ್ಷ್ಮಣನು ಹೇಳಿದ ಹಾಗೆ, ತಂದೆಯನ್ನು ಬಂಧನದಲ್ಲಿ ಇಡಿಸಿಯೋ ಅಥವಾ ಯುದ್ಧ ಮಾಡಿ ಭರತನನ್ನು ಅಥವಾ ನಗರದ ಜನರನ್ನು ಕೊಂದೊ ರಾಜ್ಯವನ್ನು ವಶಪಡಿಸಿಕೊಂಡಿದ್ದರೆ, ಆಗ ಶ್ರೀರಾಮನು, ತನ್ನ ಅಣ್ಣಂದಿರನ್ನು ಕೊಂದಂತಹ ಅಶೋಕ ಚಕ್ರವರ್ತಿಗೂ ಅಥವಾ ತನ್ನ ತಂದೆಯನ್ನೇ ಸೆರೆಮನೆಯಲ್ಲಿ ಇಟ್ಟ ಕಂಸನಿಗೂ ಅಥವಾ ಕೆಲವು ಮುಸ್ಲಿಂ ರಾಜರಿಗೂ ಭಿನ್ನವಾಗಿ ಏನೂ ಕಾಣುತ್ತಿರಲಿಲ್ಲ. ಆಗ ಶ್ರೀರಾಮನು ಆದರ್ಶ ಪುರುಷನು ಎಂದೂ ಆಗುತ್ತಿರಲಿಲ್ಲ. ಆದರೆ ಅವನು ಹೀಗೆಲ್ಲಾ ಮಾಡಿದ್ದರೆ ಭಯಂಕರ ರಕ್ತಪಾತ ಆಗುತ್ತಿತ್ತು. ಅನೇಕ ಜನ ಪ್ರಜೆಗಳು, ಸೈನಿಕರು ಸಾಯುತ್ತಿದ್ದರು. ಭರತ ಕೂಡ ಸಾಯುತ್ತಿದ್ದನೇನೊ. ಹಾಗೆ ಎಲ್ಲರ ರಕ್ತದ ಒಕುಳಿಯ ಮೇಲೆ ಕಟ್ಟಿದ ಸಾಮ್ರಾಜ್ಯಕ್ಕೆ ರಾಜರಾದವರು, ಬಹಳ ಜನ ನಮ್ಮ ಇತಿಹಾಸದಲ್ಲಿ ಆಗಿ ಹೋಗಿದ್ದಾರೆ. ಅವರೆಂದೂ ನಮಗೆಲ್ಲ ಆದರ್ಶರಾಗಲೇ ಇಲ್ಲ. ಈಗ ತಿಳಿಯಿತಲ್ಲವೇ, ರಾಮ ಆದರ್ಶಪುರುಷ ಎಂದು ನಾವು ಪೂಜೆ ಮಾಡಲು ಕಾರಣ ಏನು ಅಂತ.
ಒಬ್ಬ ಮನುಷ್ಯನ ಶಕ್ತಿ ಸಾಮರ್ಥ್ಯಗಳು ಇರುವುದು, ಅವನು ತನ್ನ ಸಾಮರ್ಥ್ಯವನ್ನು ತನಗಿಂತ ಕಡಿಮೆ ಸಾಮರ್ಥ್ಯವಿರುವವರ ಮೇಲೆ ತೋರಿಸಿ ಅವರನ್ನು ಸೋಲಿಸಿದಾಗ ಅಲ್ಲ. ಅಥವಾ ತನ್ನ ಪ್ರೀತಿಪಾತ್ರರ ಮೇಲೆ ತೋರಿಸಿದಾಗ ಅಲ್ಲ. ಅವನ ಶಕ್ತಿ ಸಾಮರ್ಥ್ಯಗಳು ಅವನನ್ನು ಶಕ್ತಿವಂತ ಎಂದು ಸಾಬೀತು ಮಾಡುವುದು, ಅವನು ಅವರನ್ನು ಕ್ಷಮಿಸಿ, ಧರ್ಮಕ್ಕೆ ತಲೆಬಾಗಿದಾಗ ಮಾತ್ರ. ರಾಮನ ಶಕ್ತಿ ಸಾಮರ್ಥ್ಯಗಳನ್ನು ಅವನು ತೋರಿದ್ದು, ಕೆಟ್ಟವನಾದ ರಾವಣನ ಮೇಲೆ ಹೊರತು ತನ್ನವರೇ ಆದ ತನ್ನ ತಂದೆ, ತಾಯಿ, ಸಹೋದರರು, ಪ್ರಜೆಗಳ ಮೇಲೆ ಅಲ್ಲ. ಎಲ್ಲಿ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಬೇಕು, ಎಲ್ಲಿ ಮರ್ಯಾದೆಗೆ ತಲೆಬಾಗಬೇಕು, ಎಲ್ಲಿ ಧರ್ಮ ಪ್ರಜ್ಞೆಯನ್ನು ತೋರಿಸಬೇಕು, ಎನ್ನುವುದನ್ನು ತೋರಿಸಿಕೊಟ್ಟಿದ್ದೆ , ಶ್ರೀರಾಮನು ಆದರ್ಶ ಪುರುಷನಾಗಲು ಕಾರಣ ಅಲ್ಲವೇ?! ಇಲ್ಲಿ ಧರ್ಮ ಪಿತೃವಾಕ್ಯ ಪರಿಪಾಲನೆ ಮಾಡುವಲ್ಲಿ ಇತ್ತು. ಅದನ್ನು ಮೀರುವಲ್ಲಿ ಇರಲಿಲ್ಲ . ಆದ್ದರಿಂದ ಶ್ರೀರಾಮ ಧರ್ಮಕ್ಕೆ ಸಹಕಾರ ಕೊಟ್ಟ.
ಇಲ್ಲಿ ಬಂದು ಸಂದೇಹ ಬರಬಹುದು. ಮಹಾಭಾರತದಲ್ಲೂ ಕೂಡ, ಅರ್ಜುನನು ರಕ್ತಪಾತ ಬೇಡ ಅಂದ, ತನ್ನವರಾದ ತನ್ನ ಬಂಧು ಬಾಂಧವರೆಲ್ಲರನ್ನು ಕೊಂದು ರಾಜ್ಯಭಾರ ಮಾಡುವುದು ಬೇಡ ಎಂದು ಅವರನ್ನೆಲ್ಲ ಕ್ಷಮಿಸಲು ಸಿದ್ಧವಾದ. ಅಲ್ಲಿ ಮಾತ್ರ ಯಾಕೆ ಕೃಷ್ಣ, ಅವನನ್ನು ಯುದ್ಧ ಮಾಡು ಎಂದು ಪ್ರೇರೇಪಿಸಿದ ಅಂತ? ಅದಕ್ಕೆ ಉತ್ತರವೂ ಅದೇ. ಅಲ್ಲಿ ಧರ್ಮವು ಅರ್ಜುನನು ಯುದ್ಧ ಮಾಡುವ ಕಡೆಯೇ ಇತ್ತು. ಅಧರ್ಮವು ದುರ್ಯೋಧನನ ಕಡೆ ಇತ್ತು. ಹಾಗಾಗಿ ಅಧರ್ಮವು ನಾಶವಾಗಬೇಕಾದರೆ ಅರ್ಜುನ ಯುದ್ಧ ಮಾಡಲೇಬೇಕಾಗಿತ್ತು. ಅದು ಬಂಧು ಬಾಂಧವರೇ ಆಗಿರಲಿ, ಸಹೋದರರೇ ಆಗಿರಲಿ, ಧರ್ಮವನ್ನು ಎತ್ತಿ ಹಿಡಿಯುವುದು ಕೃಷ್ಣನ ಆದ್ಯಕರ್ತವ್ಯವಾಗಿತ್ತು. ಹಾಗಾಗಿ ಅಲ್ಲಿ ಅವನು ಅರ್ಜುನನನ್ನು ಯುದ್ಧಕ್ಕೆ ಪ್ರೇರೇಪಿಸಿದ. ಅದನ್ನೇ ಕೃಷ್ಣನು ಹೇಳುತ್ತಾನಲ್ಲವೇ,
ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುಥ್ಥಾನಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ | ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ|| ಅಂತ.
- ಮೃದುಲ
Panchavati,217, 3rd cross 4th Main ,
BDA layout, Avalahalli, Girinagar, Bangalore - 560085
mrudulaviju69@gmail.com
9590544156
ಲೇಖಕರ ಸಂಕ್ಷಿಪ್ತ ಪರಿಚಯ:
ದ್ವೈತ ವೇದಾಂತದಲ್ಲಿ ವಿದ್ವತ್ . ರಾಷ್ಟ್ರೋತ್ಥಾನದ ಭಾಗವಾದ ಸಂ ವಿತ್ ರಿಸರ್ಚ್ ಫೌಂಡೇಶನ್ ನಲ್ಲಿ ಮೌಲ್ಯ ಶಿಕ್ಷಣ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಆಧ್ಯಾತ್ಮ ಚಿಂತಕಿ, ಮೌಲ್ಯ ಶಿಕ್ಷಣ ತಜ್ಞೆ, ಕೆಲವು ಮಾಸಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿದೆ. ಆಧ್ಯಾತ್ಮದ ವಿಷಯಗಳಲ್ಲಿ ( ಸರ್ವ ದರ್ಶನ ಸಂಗ್ರಹ ಭಗವದ್ಗೀತಾ ಇತ್ಯಾದಿ) ಕೆಲವು ಕಡೆ ಮಾತನಾಡಿದ್ದಾರೆ..
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ