ವಾಲ್ಮೀಕಿಯಿಂದ ರಚಿತವಾದ ರಾಮಾಯಣ ಮಹಾಕಾವ್ಯ ಸೂರ್ಯ ಚಂದ್ರರಂತೆ ಶಾಶ್ವತವಾದದ್ದು. ಇಂತಹ ಮಹಾ ಕಾವ್ಯ ಪ್ರಪಂಚದಲ್ಲಿ ಮತ್ತೊಂದಿಲ್ಲ ಎಂದರೆ ತಪ್ಪಾಗಲಾರದು. ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳೂ ಆದರ್ಶನೀಯ ಹಾಗೂ ನಮ್ಮ ಮೇಲೆ ಪ್ರಭಾವ ಬೀರುವಂತದ್ದು. ಇಂತಹ ಮಹಾ ಕಾವ್ಯವನ್ನು ಭಾರತೀಯರಿಗೆ ಕೊಟ್ಟ ವಾಲ್ಮೀಕಿಯ ಜೀವನ ವೃತ್ತಾಂತವೂ ರೋಚಕವಾದದ್ದು. ಬೇಡನಾಗಿದ್ದವರು ಋಷಿಯಾಗಿ ಕೊನೆಗೆ ಮಹಾಕಾವ್ಯವನ್ನು ಬರೆದು ಆದಿಕವಿಯಾದದ್ದು ದೈವಾನುಗ್ರಹವೇ ಸರಿ. ಆದರ್ಶ ಶ್ರೀರಾಮನನ್ನು ಲೋಕಕ್ಕೆ ಪರಿಚಯಿಸಿದ ವಾಲ್ಮೀಕಿ ಮಹರ್ಷಿಯ ಧ್ಯೇಯಾದರ್ಶಗಳು ಕೂಡ ಇಂದಿಗೂ ಪ್ರಸ್ತುತ. ಸ್ವತಃ ವಾಲ್ಮೀಕಿಯೇ ರಾಮಾಯಣ ಕಾವ್ಯವನ್ನು ರಚಿಸಿದವರಾದರೂ ಉತ್ತರಾಕಾಂಡದಲ್ಲಿ ವಾಲ್ಮೀಕಿಯ ಪ್ರವೇಶವಾಗುತ್ತದೆ, ಆ ಮೂಲಕ ರಾಮಾಯಣದಲ್ಲಿ ಅವರು ಒಂದು ಪಾತ್ರವೂ ಆಗಿ ನಮ್ಮ ಕಣ್ಣ ಮುಂದೆ ನಿಲ್ಲುತ್ತಾರೆ. ವಾಲ್ಮೀಕಿ ಮಹರ್ಷಿಗಳು ರಾಮಾಯಣ ಕಾಲದಲ್ಲಿದ್ದುಕೊಂಡೆ ರಾಮಾಯಣ ಮಹಾಕಾವ್ಯವನ್ನು ಬರೆದರು ಎಂಬುದು ವಿಶೇಷ.
ಭರತ ಖಂಡದ ನೀತಿ ಸಂಸ್ಕöÈತಿಗಳು ರಾಮಾಯಣ ಮಹಾಕಾವ್ಯದಲ್ಲಿ ಮಡುಗಟ್ಟಿ ಹರಿದಿವೆ. ಇಲ್ಲಿ ಕವಿಯ ಕಲ್ಪನೆಗಿನ್ನ ಸಹಜತೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಕಥಾನಾಯಕನಾದ ಶ್ರೀರಾಮನನ್ನು ಎಲ್ಲೀಯೂ ದೇವರೆಂದು ಹೇಳಿಲ್ಲ, ಆದರೆ ನರನಾದ ಶ್ರೀರಾಮನನ್ನು ಆ ಪದವಿಗೆ ಮುಟ್ಟಿಸಿದ್ದಾರೆ. ರಾಮಾಯಣದಲ್ಲಿ ಬರುವ ಪಾತ್ರಗಳು ಎಲ್ಲಾ ಕಾಲದಲ್ಲೂ ಇರುವ ಸಜೀವ ಪಾತ್ರಗಳಾಗಿವೆ. ರಾಮಾಯಣ ವಾಲ್ಮೀಕಿ ಬರೆದದ್ದು ಮೂಲವೇ ಆದರೂ ಅದರಿಂದ ಪ್ರಭಾವಿತರಾಗಿ ನೂರಾರು ಕೃತಿಗಳು ಜಗತ್ತಿನಲ್ಲಿ ರಚನೆಯಾಗಿದೆ. 24 ಸಾವಿರ ಶ್ಲೋಕಗಳಿಂದ ಕೂಡಿದ ಏಳು ಕಾಂಡಗಳಿಂದ ಕೂಡಿದ ರಾಮಾಯಣವೆಂಬ ಮಾಹಾಕಾವ್ಯವನ್ನು ಲೋಕಕ್ಕೆ ನೀಡಿದ ಮಹಾನುಭಾವರಾದ ವಾಲ್ಮೀಕಿ ಮಹರ್ಷಿಗಳನ್ನು ಭಕ್ತಿಭಾವದಿಂದ ಸ್ಮರಿಸೋಣ.
ಬಾಲ ಕಾಂಡ:-
ಹತ್ತು ಇಂದ್ರಿಯಗಳೆಂಬ ಕುದುರೆಗಳಿರುವ ದೇಹದಲ್ಲಿ ವಾಸಿಸುವ ನಾವೂ ದಶರಥ, ಸದ್ಬುದ್ಧಿ, ಭಕ್ತಿ , ವಿರಕ್ತಿ ಎಂಬ ಮೂವರು ಪತ್ನಿಯರ ಸಹಯೋಗ ದೊರೆತರೆ ನಮ್ಮ ಹೃದಯದ ಅಯೋಧ್ಯೆಯಲ್ಲಿ ರಾಮ ಲಕ್ಷ್ಮಣ ಭರತ ಶತ್ರುಘ್ನರ ಅವತಾರವಾಗುತ್ತದೆ. ಎಷ್ಟೇ ತಿಳಿದರೂ ಗುರುಗಳನ್ನು ವಿನಯದಿಂದ ಹಿಂಬಾಲಿಸಬೇಕು. ತನಗೆ ತಿಳಿದಿದ್ದನ್ನೇ ಗುರುಗಳು ಹೇಳಿದರೂ ವಿನೀತನಾಗಿ ಸ್ವೀಕರಿಸಬೇಕು. ವಿಶ್ವಾಮಿತ್ರರನ್ನು ಹಿಂಬಾಲಿಸಿದ ರಾಮ ಸೀತಾಪತಿಯಾಗಿ ಬಂದ. ಗುರುಗಳಲ್ಲಿ ಬಾಗಿ ನಡೆದುಸೀತೆಯಂತೆ ವೇದವಿದ್ಯೆ ಒಲಿಯುತ್ತದೆ.
ಅಯೋಧ್ಯಾ ಕಾಂಡ :
ಪಟ್ಟಾಭಿಷೇಕದ ಸಿದ್ಧತೆಯಲ್ಲಿದ್ದ ಶೀರಾಮಚಂದ್ರ ಕೈಕೇಯಿ ಕೇಳಿದ ವರದ ಪ್ರಭಾವದಿಂದ ಕಾಡಿಗೆ ಹೋಗಬೇಕಾದ ಪ್ರಸಂಗ ಬಂದರೂ ಸಂತಾಪಪಡಲಿಲ್ಲ. ಧೃತಿಗೆಡಲಿಲ್ಲ. ಇದೇ ದ್ವಂದ್ವಾತೀತತೆ. ಸುಖದುಃಖಗಳೆರಡನ್ನೂ ಎದುರಿಸುವುದನ್ನು ಕಲಿತ ಮನುಷ್ಯನಿಗೆ ಸೋಲುಬರುವುದಿಲ್ಲ, ಉದ್ವೇಗವಿರುವುದಿಲ್ಲ ಮಂಥರೆಯಂತಹ ಕೆಟ್ಟ ಹೆಣ್ಣಿನ ಸಹವಾಸ ಯಾವ ಹೆಣ್ಣಿಗೂ ಒಳ್ಳೆಯದಲ್ಲ. ಹೆಣ್ಣು ದುಷ್ಟರ ಚಾಡಿ ಮಾತು ಕೇಳಿ ಹಠ ಹಿಡಿದರೆ ಗಂಡು ಮಕ್ಕಳಿಂದ ದೂರ ವಾಗಬೇಕಾಗುತ್ತದೆ. ರಾಮನನ್ನು ಹೊರ ಹಾಕಿದ ದಶರಥ ಮರಣವನ್ನು ಹೊಂದಿದ. ಹೆಣ್ಣಿನ ಮೋಹದಿಂದ ಇಕ್ಕಟ್ಟಿಗೆ ಸಿಲುಕಿ ಪುರುಷ ದೇವರನ್ನೇ ದೂರಮಾಡಿದರೆದೇಹದಿಂದಲೇ ದೂರರಾಗಬೇಕಾಗುತ್ತದೆ. ಭರತ ಶತ್ರುಘ್ನರಿಗೆ ಗೊತ್ತಿಲ್ಲದಂತೆ ರಾಮನಿಗೆ ಪಟ್ಟಾಭಿಷೇಕದ ಸಿದ್ಧತೆ ಮಾಡಿದರೂ ಭರತನಿಗೆ ರಾಜ್ಯ ಸಿಗಲೆಂದು ಕೈಕೇಯಿ ರಾಮನನ್ನು ಕಾಡಿಗಟ್ಟಿದರೂ ರಾಮ ಭರತರಲ್ಲಿ ವೈರ ವೈಮನಸ್ಯಗಳು ತಲೆದೋರಲಿಲ್ಲ. ರಾಮನಿಗೆ ಭರತನ ಬಗ್ಗೆ ಭರತನಿಗೆ ರಾಮನ ಬಗ್ಗೆ ಗೌರವ ಪ್ರೀತಿ ನಂಬಿಕೆಗಳಿದ್ದದ್ದು ಕಾರಣ. ಅಣ್ಣ ತಮ್ಮಂದಿರಲ್ಲಿ ಈ ಗೌರವ ಪ್ರೀತಿ ನಂಬಿಕೆ ಪ್ರಾಮಾಣಿಕತೆಗಳಿರಬೇಕು. ಆಗ ಬಾಂಧವ್ಯ ಕೆಡುವುದಿಲ್ಲ.
ಅರಣ್ಯಕಾಂಡ:
ಪ್ರಜಾಸೇವೆ ಮಾಡಲು ರಾಜಕೀಯದ ಅಧಿಕಾರ ಬೇಕಿಲ್ಲ. ಸೇವೆ ಮಾಡುವ ಮನೋಧರ್ಮ ಇರಬೇಕು. ಎಲ್ಲೇ ಇದ್ದರೂ ಆರ್ತರ ದುಃಖಪರಿಹಾರಕ್ಕೆ ಪ್ರಯತ್ನಿಸುವುದು, ಸಂದಿಸುವುದು ಮಾನವೀಯತೆ. ಶ್ರೀರಾಮಚಂದ್ರ ಕಾಡಿನಲ್ಲಿದ್ದರೂ ಋಷಿಮುನಿಗಳನ್ನು ಉಪಚರಿಸಿದನು. ಅವರ ಕಷ್ಟಗಳನ್ನೂ ಪರಿಹರಿಸಿದನು, ಅವರವರ ಸಾಧನೆಗೆ ಫಲವನ್ನೂಕೊಟ್ಟುಅನುಗ್ರಹಿಸಿದನು. ನಮ್ಮ ಸಾಧನೆ ದೇವರು ಒಪ್ಪುವಂತಿರಬೇಕು. ಸಾಧನೆಸಾತ್ವಿಕವಾಗಿದ್ದರೆ ದೇವರೆ ಬಂದು ಸ್ವೀಕರಿಸಿ ಅನುಗ್ರಹಿಸುತ್ತಾನೆ.
ಕಿಷ್ಕಿಂದಾಕಾಂಡ:
ನಾವು ಹನುಮಂತನ ಪಕ್ಷದಲ್ಲಿದ್ದರೆ ರಾಮನ ರಕ್ಷಣೆ ಸಖ್ಯಗಳೆರಡೂ ದೊರೆಯುತ್ತವೆ; ಸುಗ್ರೀವನಿಗೆ ದೊರೆತಂತೆ. ಹನುಮಂತನ ಸಹಾಯವಿಲ್ಲದಿದ್ದರೆ ವಾಲಿಯಂತೆ ನಿಗ್ರಹಕ್ಕೆ ಪಾತ್ರರಾಗುತ್ತೇವೆ. ದಕ್ಷಿಣದ ಕಪಿಗಳ ತಂಡದಲ್ಲಿ ದೇವತೆಗಳ ವೈದ್ಯರಾದ ಅಶ್ವಿನಿಗಳ ಅವತಾರದ ಕಪಿಗಳಿದ್ದರು. ದೇವಶಿಲ್ಪಿ ವಿಶ್ವಕರ್ಮನ ಅವತಾರದ ಕಪಿಯೂ ಇದ್ದ. ಆದರೂ ಸಮುದ್ರ ದಾಟಲು ಸಾಧ್ಯವಾದದ್ದು ಹನುಮಂತನಿಂದ ಮಾತ್ರ, ವೈದ್ಯಕೀಯ ವಿಜ್ಞಾನ, ತಂತ್ರಜ್ಞಾನಗಳಿಂದ ಸಂಸಾರ ಸಮುದ್ರವನ್ನು ದಾಟಲು ಸಾಧ್ಯವಿಲ್ಲ.ತತ್ವಜ್ಞಾನದಿಂದ ಮಾತ್ರ ಸಾಧ್ಯ. ಸುಗ್ರೀವ ಸೀತಾನ್ವೇಷಣೆ ಮಾಡುವೆನೆಂದು ರಾಮನಿಗೆ ಮಾತು ಕೊಟ್ಟು ಭೋಗದಲ್ಲಿ ಮುಳುಗಿ ಮರೆತಿದ್ದ ಹನುಮಂತ ಎಚ್ಚರಿಕೆ ಕೊಟ್ಟ-ರಾಮನ ಕಾರ್ಯದಲ್ಲಿ ವಿಸ್ಮೃತಿ ಸಲ್ಲದು, ಮೈಮರೆತರೆ ಬಲಪ್ರಯೋಗ ಮಾಡಿ ಯಾದರೂ ರಾಮನ ಸೇವೆ ಮಾಡಿಸುತ್ತೇನೆ. ದಕ್ಷಿಣಕ್ಕೆ ಹೋದ ಕಪಿಗಳ ತಂಡ ಅದ್ಭುತವಾದ ಬಿಲದಲ್ಲಿಕುಳಿತು, ಸುಗೀವ ಕೊಟ್ಟ ಗಡುವು ಮುಗಿದಿದೆ ಸೀತೆಯ ಸುಳಿವಿಲ್ಲ. ಹಿಂದೆ ಹೋದರೆ ಕೊಲ್ಲುತ್ತಾನೆ. ಇಲ್ಲಿಯೇ ಪ್ರತ್ಯೇಕ ರಾಜ್ಯ ಕಟ್ಟಿ ಇದ್ದುಬಿಡೋಣ, ಇಲ್ಲಿದ್ದರೆ ಶ್ರೀರಾಮನಿಗೂ ರಾಜ್ಯಕಟ್ಟಿ ಇದ್ದುಬಿಡೋಣ. ಇಲ್ಲಿದ್ದರೆ ಶ್ರೀ ರಾಮನಿಗೂ ಗೊತ್ತಾಗುವುದಿಲ್ಲ. ಅವನಿಂದ ನಮಗೇನಾಗಬೇಕು? ಎಂದ. ಅಲ್ಲಿಯೇ ಇದ್ದ ಹನುಮಂತ ಗುಡುಗಿದ ರಾಮನ ಸೇವೆ ಮಾಡದೆ ಬದುಕುವ ಆಸೆ ತಪ್ಪು. ನಮ್ಮ ಅಳಿವು ಉಳಿವು ಸುಖ ಸಂತೋಷವೆಲ್ಲವೂ ಅವನಿಂದಲೇ. ನೀವಾಗಿಯೇ ಸೇವೆಯಲ್ಲಿ ತೊಡಗಿದರೆ ಸರಿ. ಇಲ್ಲದಿದ್ದರೆ ನಾನು ಬಲಪ್ರಯೋಗದಿಂದ ಮಾಡಿಸಬೇಕಾಗುತ್ತದೆ. ಸರ್ವ ಸಮರ್ಥನಾದ ಸರ್ವಗತನಾದ ರಾಮನಿಗೆ ತಿಳಿಯುವುದಿಲ್ಲ ಎಂದು ಭಾವಿಸುವುದು ತಪ್ಪು. - ಸುಗ್ರೀವ ಹಾಗೂ ಇತರ ಕಪಿಗಳ ಸುಮಂತನ ಮಾತು ಕೇಳಿದರು ರಾಮನ ಅನುಗ್ರಹಪಾತ್ರರಾದರು. ರಾವಣನಿಗೂ ಬುದ್ಧಿ ಹೇಳಿದ ಹನುಮಂತ .ರಾವಣ ಕೂಡಲೇ ಸೀತೆಯನ್ನು ರಾಮನಿಗೆ ಒಪ್ಪಿಸಿ ಕ್ಷಮೆ ಕೇಳು ಇಲ್ಲದಿದ್ದರೆ ನಾಶವಾಗುತ್ತಿ. ಇಪ್ಪತ್ತು ಕಿವಿಯ ರಾವಣ ಹನುಮಂತನ ಮಾತು ಕೇಳದೆ, ರಾಮನಿಂದ ನಿಗ್ರಹಪಾತ್ರನಾದ, ಭೋಗದಲ್ಲಿ ಮುಳುಗಿ ದೇವರ ಸೇವೆ ಮರೆತರೆ ನಮ್ಮನ್ನು ಕ್ಷಮಿಸುವುದಿಲ್ಲ. ದಂಡಿಸುತ್ತಾನೆ. ಅವನ ಉಪದೇಶದಂತೆ ನಡೆದರೆ ರಾಮನ ಅನುಗ್ರಹಕ್ಕೆ ಪಾತ್ರರಾಗುತ್ತೇವೆ.
ಸುಂದರ ಕಾಂಡ:
ಶ್ರೀರಾಮನ ಸೇವೆ-ಸೀತಾನ್ವೇಷಣೆ ಗೆಂದು ಸಮುದ್ರ ಹಾರಿದ ಹನುಮಂತ ಮೈನಾಕನ ಪ್ರೀತಿ ಸ್ವೀಕರಿಸಿದರೂ ವಿಶ್ರಾಂತಿ ನಡೆಯದೆ ಅವನ ಅತಿಥ್ಯವನ್ನು ಸ್ವೀಕರಿಸದೆ ಮುಂದೆ ಹೋದ, ನಾಗಮಾತೆಯ ಬಾಯೊಳಗೆ ಹೋಗಿ ಹೊರಬಂದ, ಸಿಂಹಿಕೆಯ ಬಾಯೊಳಗೆ ಹೋಗಿ ಅವಳ ದೇಹವನ್ನು ಸೀಳಿ ಹೊರಬಂದ, ಕಾರ್ಯ ಮುಗಿಸಿ ಬಂದು ಮಧುವನದಲ್ಲಿ ಮಧುಪಾನ ಮಾಡಿದ ಸಾಧನೆಗೆ ದೇವರ ಪೂಜೆಗೆ ಹೊರಟವರು ಸೇವೆ ಮುಗಿಯುವ ತನಕ ಏನೂ ಆಹಾರ ಸೇವನೆ ಮಾಡಬಾರದು. ವಿಶ್ರಾಂತಿಯೂ ಪಡೆಯಬಾರದು, ಸಾಧನೆಗೆ ಹೊರಟ ನಮ್ಮನ್ನು ಕೆಲವರು ನಾಗಮಾತೆಯಿಂದ ಹೊಗಳಿಕೆಯಿಂದ ನುಂಗುತ್ತಾರೆ. ಹೊಗಳಿಕೆಗೆ ಹಿಗ್ಗದೆ ಅವರ ಬಾಯಿಗೆ ಬಿದ್ದರೂ ಉಪಾಯವಾಗಿ ಪಾರಾಗಬೇಕು. ಮತ್ತೆ ಕೆಲವರು ಸಿಂಹಿಕೆಯಂತೆ ತೆಗಳಿ ತೆಗಳಿ ನಿರುತ್ಸಾಹಗೊಳಿಸುವರು. ಅವರ ಬಾಯಿಗೆ ಬಿದ್ದರೂ ಅವರನ್ನು ತಿರಸ್ಕರಿಸಿ ಪಾರಾಗಬೇಕು, ದೇವರ ಪೂಜೆ ಮುಗಿದ ಮೇಲೆಯೇ ಆಹಾರ ಸೇವನೆ ಮಾಡಬೇಕು, ಮಾರೀಚನ ರೂಪವಾದ ಮಾಯಾಮೃಗದ ಬಯಕೆಯಿಂದ ಅಶೋಕವನದಲ್ಲಿ ಬಂಧನಕ್ಕೊಳಗಾಗಿದ್ದ ಸೀತೆಗೆ ಹನುಮಂತ ಕೊಟ್ಟ ರಾಮನ ಉಂಗುರದಿಂದ ಬಿಡುಗಡೆ ದೊರಕಿತು. ಮಹಾಲಕ್ಷ್ಮೀ ಸ್ವರೂಪಳಾದ ಸೀತೆಗೆ ಯಾವ ಯಾವ ಅಜ್ಞಾನವೂ ಇಲ್ಲ. ಸಂತ್ತಿನ ಆಸೆ ಇಲ್ಲ. ರಾಮನ ನಾಟಕಕ್ಕೆ ತಕ್ಕ ನಾಟಕ. ಆದರೂ ಹೊರ ನೋಟಕ್ಕೆ ಜಂಕೆ ಬಯಸಿ ಬಂಧಿತಳಾದಳು. ಭ್ರಷ್ಟಾಚಾರ ಮೂಲಕ ಗಳಿಸುವ ಸಂಪತ್ತು ಅಸುರಿ ಸಂಪತ್ತು. ಅದು ಮಾಯಾಮೃಗದ ಗಾತ್ರದಂತೆ ಇರಬಹುದು. ಅದು ಪಾತ್ರವಲ್ಲ. ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ ,ಭಗವಂತನಿಗೆ ಅರ್ಪಿಸಿದ ಸಂಪತ್ತು ರಾಮನ ಉಂಗುತದಂತೆ ಗಾತ್ರದಲ್ಲಿ ಚಿಕ್ಕದಾದರೂ ಪಾತ್ರದಲ್ಲಿ ಹಿರಿದು. ಸೀತೆಗೆ ನೆಮ್ಮದಿ ಕೊಟ್ಟಿತು. ಅಸುರನ ಸೆರೆಯಿಂದ ಬಿಡುಗಡೆ ಕೊಟ್ಟಿತು. ನ್ಯಾಯದ ಸಂಪಾದನೆ ಅಲ್ಲವಾದರೂ ನೆಮ್ಮದಿ ಕೊಡುತ್ತವೆ, ಅನ್ಯಾಯದ ಸಂಪತ್ತು ಹೇರಳವಾದರೂ ನೆಮ್ಮದಿ ಕೆಡಿಸುತ್ತದೆ.
ಯುದ್ಧ ಕಾಂಡ:
ಶತೃವಿನ ತಮ್ಮನಾದರೂ ಯುದ್ಧದ ಸಂದರ್ಭ ದಲ್ಲಿ ಬಂದರೂ ಶರಣಾಗತನಾದ ವಿಭೀಷಣನನ್ನು ಹನುಮಂತನ ಶಿಫಾರಸಿನಂತೆ ಎಲ್ಲರೂ ಬೇಡವೆಂದರೂ ಶ್ರೀರಾಮನು ಅತ್ಮೀಯತೆಯಿಂದ ಸ್ವೀಕರಿಸಿದ. ರಾವಣನೇ ಶರಣಾದರೂ ಕ್ಷಮಿಸುತ್ತೇನೆಂದ ಶ್ರೀರಾಮ ವಿಭೀಷಣನಂತೇ ನಾವೂ ಶ್ರೀಹರಿಯಲ್ಲಿ ಶರಣಾದರೆ ಕೈಬಿಡದೆ ಸಲಹುತ್ತಾನೆ. ರಾಜಕಾರಣಿಗಳು ನೀಡುವ ಭರವಸೆಯಂತೆ ಅಲ್ಪ ಭಗವಂತನ ಆಶ್ವಾಸನೆ, ನಂಬಿಕೆಟ್ಟವರಿಲ್ಲವೋ ಹರಿಯ. ಲಂಕೆಯ ರಣರಂಗದ ಶತ್ರುವಿನೊಂದಿಗೆ ನಡೆಸಿದ ಕಾದಾಟದ ಮಹಾಯುದ್ಧವನ್ನೂ ಹನುಮಂತ, ಶ್ರೀರಾಮನ ಸೇವೆಯೆಂದು, ಅವನು ಪಿತವಾಗಲೆಂದು ರಾಮನ ಪೂಜಾರೂಪವಾಗಿ ಮಾಡಿದನು. ದೇವರ ಪ್ರೇರಣೆಯಿಂದ ದೇವರ ಪ್ರೀತ್ಯರ್ಥವಾಗಿ ಎಂದು ಸಂಕಲ್ಪಿಸಿ ದೇವರು ಪ್ರೀತಿಯಾಗಲೆಂದು ಅವನಿಗೆ ಸಮರ್ಪಣೆ ಮಾಡಿದರೆ ಹೊಟ್ಟೆಪಾಡಿನ ಉದ್ಯೋಗವೂ, ನಮ್ಮ ಎಲ್ಲ ಕರ್ತವ್ಯವೂ ಭಗವಂತನ ಪೂಜೆಯಾಗುತ್ತದೆ. ಹನುಮಂತ. ಯುದ್ಧವನ್ನೂ ಪೂಜಾರೂಪವಾಗಿ ಮಾಡಿದರೆ ನಾವುಪೂಜೆಯನ್ನೂ ಯುದ್ಧವನ್ನಾಗಿ ಪರಿವರ್ತಿಸುತ್ತೇವೆ. ಶ್ರೀರಾಮ ಸೀತೆಗೆ ಉಂಗುರ ಕೊಟ್ಟ, ಸೀತೆ ಚೂಡಾಮಣಿಯನ್ನಿತ್ತಳು. ಶತ್ರುವಿನ ಸೆರೆಯಲ್ಲಿರುವ ಸೀತೆಗೆ ರಾಮ ಅಭಯಹಸ್ತದ ಉಂಗುರದ ಮೂಲಕ ಅಭಯದ ರಾಮಾಯಣದ ಸಂದೇಶ ನೀಡಿದರೆ ಚೂಡಾಮಣಿ ಸಮರ್ಪಣೆ ಮಾಡುವ ಮೂಲಕ ಶರಣಾಗಿ ನಮಿಸುವ ವಿನಯದ ಸಂದೇಶವನ್ನು ಸೀತೆ ಕೊಟ್ಟಿರುತ್ತಾಳೆ. ನಿತ್ಯಾವಿಯೋಗಿಗಳಾದ ಸೀತಾರಾಮರು ವಿಯೋಗ ಆದವರಂತೆ ತೋರಿಕೊಂಡಾಗ ಹನುಮಂತ ಅವರಿಬ್ಬರನ್ನು ಮತ್ತೆ ಸೇರಿಸಿ ಬೆಸುಗೆಯ ಸೇತುವೆಯಾದ. ಜೀವಾತ್ಮ-ಪರಮಾತ್ಮರು ಅವಿಯೋಗಿಗಳೇ ಆದರೂ ದೇವರನ್ನು ಮರೆತು ಜೀವ ದೇವರಿಂದ ದೂರಾದವರಂತೆ ಆದರೂ ಹನುಮಂತನಲ್ಲಿ ಶರಣಾದರೆ ಮತ್ತೆ ಜೀವಾತ್ಮ-ಪರಮಾತ್ಮನ್ನು ಸೇರುವಂತೆ ಮಾಡುತ್ತಾನೆ. ಹತ್ತು ತಲೆಯ ರಾವಣನನ್ನು ಶ್ರೀರಾಮ ಸಂಹರಿಸಿದ. ಹತ್ತಾರು ಭ್ರಷ್ಟಾಚಾರಗಳಲ್ಲಿ ತಲೆಹಾಕುವ ನಮ್ಮಲ್ಲಿರುವ ರಾವಣನ ದುಷ್ಟ ವ್ಯಕ್ತಿತ್ವವನ್ನೂ ಶ್ರೀರಾಮಚಂದ್ರನು ಸಂಹಾರ ಮಾಡುವಂತೆ ಪ್ರಾರ್ಥಿಸಬೇಕು.
ಉತ್ತರಕಾಂಡ:
ಎಲ್ಲರ ಸೇವೆಗೆ ಮೋಕ್ಷ ಕೊಟ್ಟ ಶ್ರೀರಾಮಚಂದ್ರ ಹನುಮಂತನಿಗೆ ಭಾವಿಬ್ರಹ್ಮ ಪದವಿ, ಸಹಭೋಗ ಕೊಟ್ಟರೂ ಸಾಲದೆ ತನ್ನನ್ನೇ ಕೊಟ್ಟ, ಯಾವ ಪದವಿ ಭೋಗಚಭಾಗ್ಯಗಳೂ ಬೇಡ. ಪ್ರತಿ ಕ್ಷಣದಲ್ಲಿ ಅಭಿವೃದ್ಧಿ ಹೊಂದುವ ಸರ್ವೋತ್ತಮ ಭಕ್ತಿ ಸಾಕೆನಗೆ ಎಂದ ಹನುಮಂತ. ಪದವಿ ಪುರಸ್ಕಾರ ಸ್ವಾರ್ಥಕ್ಕಾಗಿ ದೇವರ ಸೇವೆ ಮಾಡಬಾರದು, ಆ ಚರಣಗಳಲ್ಲಿ ಭಕ್ತಿಗೋಸ್ಕರ ನಾವು ಕರ್ಮ ಮಾಡಬೇಕು. ಅದೇ ನಿಷ್ಕಾಮಕರ್ಮ. ಅದರಿಂದ ದೇವರೇ ಸಿಗುತ್ತಾನೆ.
(ಸಂಗ್ರಹ: * ರಾಮಾಯಣದ ಸಂದೇಶ ಮತ್ತು ಸ್ತೋತ್ರಗಳು. ಸದ್ವಿಚಾರ ಸೇವಾ ಟ್ರಸ್ಟ್ ಬೆಂಗಳೂರು. ೭೧. ಸಂದರ್ಭ: ರಾಮಾಯಣ ಪ್ರವಚನ ಮಾಲಿಕೆ. 2011.)
- ಟಿ.ಎಸ್. ಪ್ರಭಾವತಿ
16, 2nd Main, Basavanagudi,
Bangalore 560 004.
99010 51519
Email Id : tsprabhavathi22@gmail.com
ಲೇಖಕರ ಪರಿಚಯ:
ಟಿ.ಎಸ್. ಪ್ರಭಾವತಿ ಹುಟ್ಟಿದ ಸ್ಥಳ ಮಂಡ್ಯ. ಬೆಳೆದದ್ದು ಬೆಂಗಳೂರು. ವಯಸ್ಸು 75 ವರ್ಷ. ಹರಿತಸ ಗೋತ್ರದ ಮಾಧ್ವ ಪರಂಪರೆಯಲ್ಲಿ ಬಂದ ಕಾಕೋಳು ಮತ್ತು ಬ್ಯಾತ ಹಿರಿಯರ ಸ್ಥಳ. 37 ವರ್ಷ ವೈಜ್ಞಾನಿಕ ವಿಮಾನ ಸಂಸ್ಥೆ, ವಿಜ್ಞಾನ ಮತ್ತು ತಂತ್ರ ಜ್ಞಾನದ ಗ್ರಂಥಾಲಯದಲ್ಲಿ Scientific Officer ಆಗಿ ಕಾರ್ಯ ನಿರ್ವಹಣೆ. ನಿವೃತ್ತಿ ಜೀವನದಲ್ಲಿ: ಹವ್ಯಾಸವಾಗಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರವಚನ ದಾಸ ಸಾಹಿತ್ಯದ ಬಗ್ಗೆ ಹೆಚ್ಚಿನ ಒಲವು. ಜಗನ್ನಾಥದಾಸರ ಮೇರು ಕೃತಿ ಹರಿಕಥಾಮೃತಸಾರದ 32 ಸಂಧಿಗಳ ಪರೀಕ್ಷೆಯಲ್ಲಿ ಉನ್ನತ ಮಟ್ಟದ ತೇರ್ಗಡೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ