ಸಾಹಸ ನೃತ್ಯ ವೈಭವ ಮೆರೆದ ಆಳ್ವಾಸ್ ವಿದ್ಯಾರ್ಥಿಗಳು

Upayuktha
0

 


ವಿದ್ಯಾಗಿರಿ:  29ನೇ ಆಳ್ವಾಸ್ ವಿರಾಸತ್‌ನ ಮೂರನೇ ದಿನವಾದ ಶನಿವಾರ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಸಾಹಸ ನೃತ್ಯಗಳ ಮೂಲಕ ಮೆರುಗು ನೀಡಿತು.


ದಾಂಡಿಯಾ ಅಥವಾ ರಾಸ್ ಅಥವಾ ದಾಂಡಿಯಾ ರಾಸ್ ಭಾರತದ ಗುಜರಾತ್‌ನ ಸಾಂಪ್ರದಾಯಿಕ ಜಾನಪದ ನೃತ್ಯ ರೂಪ. ಇದು ಕೃಷ್ಣನಿಂದ ವೃಂದಾವನದಲ್ಲಿ ಹುಟ್ಟಿಕೊಂಡಿತು. ಅಲ್ಲಿ ಇದನ್ನು ಹೋಳಿ ಮತ್ತು ಕೃಷ್ಣ ಹಾಗೂ ರಾಧೆಯರ ಲೀಲೆಯನ್ನು ಚಿತ್ರಿಸಿ ಆಡಲಾಗುತ್ತದೆ. ಗರ್ಬಾದೊಂದಿಗೆ ಇದು ಪಶ್ಚಿಮ ಭಾರತದಲ್ಲಿ ನವರಾತ್ರಿ ಸಂಜೆಗಳ ವೈಶಿಷ್ಟ್ಯಪೂರ್ಣ ನೃತ್ಯವಾಗಿದೆ. ಆಳ್ವಾಸ್ ವಿದ್ಯಾರ್ಥಿಗಳು ಗುಜರಾತಿ ಸಾಂಪ್ರದಾಯಿಕ ಧಿರಿಸು ಧರಿಸಿ, ಕೋಲಾಟದ ಮೂಲಕ ಕೃಷ್ಣನ ಗುಣಗಾನದ ಸಾಲಿಗೆ ನರ್ತಿಸಿದರು.


ಗುಜರಾತಿ ಜಾನಪದ ಭತ್ರಿ, ಬಿಂದಿಗೆ, ತಾಳ, ಕೋಲಾಟದ ವೈಭವ ರಂಗೇರಿತು.

ಬಳಿಕ ಮಂಗಳೂರಿನ ವಿದೂಷಿ ಶಾರದಾ ಮಣಿಶೇಖರ್ ಆವರ ಸನಾತನ ನಾಟ್ಯಾಲಯದ ವಿದೂಷಿ ಲತಾ ನಾಗರಾಜ್ ಶಿಷ್ಯೆಯಂದಿರು 'ತೊಡಯಂ ಮಂಗಳಂ' ಪ್ರಸ್ತುತ ಪಡಿಸಿದರು. 


ಸರಸ್ವತಿ, ಲಕ್ಷ್ಮೀ ಸ್ತುತಿಯ ಭಾವಾಭಂಗಿಗಳು, ಆಕರ್ಷಕವಾಗಿ ಮೂಡಿ ಬಂದವು.

'ಡೊಳ್ಳುಕುಣಿತ'  ಉತ್ತರ ಕರ್ನಾಟಕದ ಬಹುಪಾಲು ಜಿಲ್ಲೆಗಳು ಹಾಗೂ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪ್ರಚಲಿತ. ಇದನ್ನು 2013 ರಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ 10 ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದು, 10 ವರ್ಷದಲ್ಲೇ ಈ ವೇದಿಕೆಯಲ್ಲಿ  130 ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.


ಡೊಳ್ಳು ಕುಣಿತ ತನ್ನ ವಿಶಿಷ್ಟವಾದ ನೃತ್ಯ ಶೈಲಿಗಳಿಂದ ಉಳಿದುಕೊಂಡು ಬಂದ ಜನಪದ ಪ್ರಕಾರ. ಮೂಲತಃ ಕುರುಬ  ಸಮುದಾಯದ ಈ ಕುಣಿತವು ಕರಿ ಕಂಬಳಿ ಹೊದ್ದುಕೊಂಡು ಬೀರೇಶ್ವರ ದೇವರನ್ನು ಆರಾಧಿಸುವ ನರ್ತನ.


ಆಳ್ವಾಸ್ ವಿದ್ಯಾರ್ಥಿಗಳು ಕುಣಿತಕ್ಕೆ ಹುಮ್ಮಸ್ಸು ತುಂಬಿದ್ದು, ಒಬ್ಬರ ಮೇಲೊಬ್ಬರು ಏರುವ ಮೂಲಕ ಪ್ರೇಕ್ಷಕರಿಗೆ ಸ್ಫೂರ್ತಿ ನೀಡಿದರು. ಗಂಡು ಕಲೆ ಎನಿಸಿಕೊಂಡಿದ್ದ ಡೊಳ್ಳಿನಲ್ಲಿ ಹುಡುಗಿಯರೂ ಪಾಲ್ಗೊಂಡರು. ಹುಡುಗ - ಹುಡುಗಿಯರ ಜುಗಲ್ ಬಂಧಿ ಯುವ ಮನಸ್ಸುಗಳಿಗೆ ರೋಮಾಂಚನ ಮೂಡಿಸಿತು.


ಚಕ್ರದ ಮೇಲೆ ಏಣಿ ಇರಿಸಿ ಅದನ್ನು ಏರಿ ಕನ್ನಡ ಬಾವುಟ ಹಾರಾಡಿಸಿದಾಗ ವಿದ್ಯಾರ್ಥಿಗಳ ಕನ್ನಡಾಭಿಮಾನ ಮೂಡಿಬಂತು.

ಬಿದಿರಿನ ಕಡ್ಡಿ ನೃತ್ಯವು ಅನೇಕ ಸಂಸ್ಕೃತಿಗಳಿಗೆ ಸಾಂಪ್ರದಾಯಿಕವಾಗಿದೆ. ಇವುಗಳಲ್ಲಿ ಫಿಲಿಪೈನ್ಸ್, ಚೀನಾ, ಹವಾಯಿ, ತೈವಾನ್ ಮತ್ತು ವಿಯೆಟ್ನಾಂ ದೇಶಗಳ ಸಂಸ್ಕೃತಿಗಳು ಸೇರಿವೆ. ಈಶಾನ್ಯ ಭಾರತದ ಮಣಿಪುರದ ಸ್ಟಿಕ್ ಡ್ಯಾನ್ಸ್ ಏಕಾಗ್ರತೆ ಸಮತೋಲನದ ನೃತ್ಯ. ಈಶಾನ್ಯ ಬೆಟ್ಟದ ನಿನಾದಕ್ಕೆ ಸಮತೋಲನದಿಂದ ಮಾಡುವ ನೃತ್ಯ. ಮೂಲತಃ ಏಕ ವ್ಯಕ್ತಿ ನೃತ್ಯವನ್ನು ಸಮೂಹ ನೃತ್ಯವಾಗಿ ಡಾ.ಎಂ ಮೋಹನ ಆಳ್ವ ರೂಪು ನೀಡಿದ್ದು, ಸಾಹಸ ಪ್ರಯೋಗಗಳ ಮೂಲಕ ವೇದಿಕೆಯಲ್ಲಿ ಪ್ರಸ್ತುತಗೊಂಡಿತು. ಮಣಿಪುರ ವಿದ್ಯಾರ್ಥಿಗಳ ಸಾಹಸ- ಏಕಾಗ್ರತೆಗೆ ಪ್ರೇಕ್ಷಕರು ತಲೆದೂಗಿದರು. ಮೈ ನವಿರೇಳಿಸುವ ಪ್ರದರ್ಶನ ಪುಳಕಗೊಳಿಸಿತು. ಆಳ್ವಾಸ್ ಜೊತೆಗಿನ ಮಣಿಪುರ ನಂಟು ಜನರಿಗೂ ಬಾಂಧವ್ಯ ಮೂಡಿಸಿತು.


ಸಾಹಸ ನೃತ್ಯದ  ಬೆನ್ನಲ್ಲೇ ಜನರನ್ನು ಮಂತ್ರ ಮುಗ್ಧಗೊಳಿಸಿದ್ದು, ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ. ತುಳುನಾಡಿನ ದೈವಾರಾಧನೆ ನೆನಪಿಸುವ ವೇಷಭೂಷಣ, ತೂಟೆ ಬೆಂಕಿ, ತಿರುಗುವ ಚಕ್ರ, ಹೆಜ್ಜೆಗಳು ಆಕರ್ಷಕ ವಾಗಿ ಮೂಡಿ ಬಂದವು.


ಶ್ರೀಲಂಕಾದ ಧಾರ್ಮಿಕ ನೃತ್ಯಗಳು ತಮ್ಮ ವಿಭಿನ್ನ ಅತೀಂದ್ರಿಯ ಸೌಂದರ್ಯಕ್ಕಾಗಿ ವಿಶ್ವ ಖ್ಯಾತಿಯನ್ನು ಗಳಿಸಿವೆ. ಭಾರತದಿಂದ ಹೆಚ್ಚು ಪ್ರಭಾವಿತವಾಗಿರುವ ಶ್ರೀಲಂಕಾದ ಕ್ಯಾಂಡಿಯನ್ ನೃತ್ಯ ಮತ್ತು ಕೋಲಂ ನಾಟಕಗಳು ದಕ್ಷಿಣ ಭಾರತದ ಮೂಲವನ್ನು ಹೊಂದಿವೆ.


ಬಳಿಕ ಖುಷಿ ನೀಡಿದ್ದು ರೋಪ್ ಜಂಪ್. ಸರ್ಕಸ್ ಗಳಲ್ಲಿ ಪ್ರಯೋಗಿಸುತ್ತಿದ್ದ ಸಾಹಸ ಹಾಗೂ ಕ್ರೀಡೆಗೆ ಡಾ.ಎಂ. ಮೋಹನ ಆಳ್ವ ಅವರ ಪರಿಕಲ್ಪನೆಯಂತೆ  ಕಲಾ ರೂಪ ನೀಡಿದ ನೃತ್ಯ. ಜಂಪ್, ರಿಂಗ್, ರೋಪ್, ಸ್ಟಿಕ್, ಚೆಂಡು ಪ್ರದರ್ಶನದ ಆಕರವಾಯಿತು. ಸರ್ಕಸ್ ನೆನಪು ಮರುಕಳಿಸಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter    

Post a Comment

0 Comments
Post a Comment (0)
Advt Slider:
To Top