|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶ್ರೀರಾಮ ಕಥಾ ಲೇಖನ ಅಭಿಯಾನ-15: ಹರಿದಾಸರು ಕಂಡ ಶ್ರೀರಾಮ

ಶ್ರೀರಾಮ ಕಥಾ ಲೇಖನ ಅಭಿಯಾನ-15: ಹರಿದಾಸರು ಕಂಡ ಶ್ರೀರಾಮ



- ಡಾ|| ಸುಮನ ಬದರೀನಾಥ್ 


ರಿದಾಸ ಸಾಹಿತ್ಯ ಹರಿಭಕ್ತಿಯ ಆಗರವಾಗಿದೆ. ಸಾಗರವಾಗಿದೆ, ಹರಿದಾಸರ ಅಚ್ಚುಮೆಚ್ಚಿನ ಹಿರಿದೈವಗಳು ಶ್ರೀರಾಮ, ಶ್ರೀಕೃಷ್ಣರು. ಅವರನ್ನು ಸ್ತುತಿಸದ ಹರಿದಾಸರೇ ಇಲ್ಲವೆನ್ನಬಹುದು. ಶ್ರೀಪಾದರಾಜರು, ವಾದಿರಾಜರು, ಪುರಂದರದಾಸರು, ವಿಜಯದಾಸರೇ ಆದಿಯಾಗಿ ಹರಿದಾಸವರೇಣ್ಯರ ಕೃತಿಗಳಲ್ಲಿ ಶ್ರೀರಾಮ ಮಹಿಮೆ, ಕರ್ಣಾನಂದಕರವಾಗಿ, ಮನಮೋಹಕವಾಗಿ ಝೇಂಕರಿಸಿದೆ. ಅದರದೊಂದು ಕಿರುನೋಟ ಈ ಲೇಖನದಲ್ಲಿದೆ.


ಹರಿದಾಸ ಸಾಹಿತ್ಯದ ಹರಿಕಾರರೆಂದು ಪ್ರವರ್ತಕರೆಂದು ಪ್ರಖ್ಯಾತರಾಗಿರುವ ಶ್ರೀಪಾದರಾಯರು ಅನೇಕ ವಿಶೇಷ ರಾಮಪರಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಮನದುಂಬುವ ನಾವೀನ್ಯತೆಯಿದೆ. ಸುಂದರಬಂಧುರವಾದ ಭಾವವಿಲಾಸಗಳಿವೆ, ಶ್ರೀಪಾದರಾಯರು ಶ್ರೀರಾಮನನ್ನು ಎಳೆಯನೆಂದು ಭಾವಿಸಿ "ಪೋಪು ಹೋಗೋಣ ಬಾರೋ" ಎಂದು ಕರೆಯುತ್ತಾ ಜಾಹ್ನವಿಯ ತೀರವಂತೆ, ಜನಕರಾಮನ ಕುವರಿಯಂತೆ, ಜಾನಕಿಯ ವಿವಾಹವಂತೆ, ಜಾಣ ನೀನು ಬರಬೇಕಂತೆ" ಎಂದು ಆಹ್ವಾನಿಸಿದ್ದಾರೆ. ಲಾಲಿ ಗೋವಿಂದ ಲಾಲಿ ಕೌಸಲ್ಯಾಬಾಲ ಶ್ರೀರಾಮಲಾಲಿ, ಜಾನಕೀರಮಣ ಶ್ರೀರಾಮಲಾಲಿ" ಎಂಬ ಲಾಲಿ ಹಾಡು ಅಧ್ಬುತ ರಮ್ಯವಾಗಿದೆ. ನಿನ್ನ ಪೂಜೆಯೊರಾಮ ನಿನ್ನ ಹೊರತಿಲ್ಲ ಎನ್ನ ವ್ಯಾಪಾರವೆಲ್ಲ" ಎಂದು ಅನನ್ಯ ಭಕ್ತಿಯಿಂದ ಶರಣಾಗಿದ್ದಾರೆ. ಶ್ರೀರಾಮ ಮಹಿಮೆಗಳನ್ನು ಲೀಲೆಗಳನ್ನು ಚಿತ್ರವಿಚಿತ್ರವಾಗಿ ವರ್ಣಿಸಿದ್ದಾರೆ. "ಶ್ರೀರಾಮ ನಿನ್ನ ಪಾದವ ತೋರೋ ಮೋಹನ ಗುಣಧಾಮ ನಿನ್ನ ಮೋಹನ್ನ ಪಾದವ" ಎಂದು ಮನದುಂಬಿ ಪ್ರಾರ್ಥಿಸಿದ್ದಾರೆ. ಈ ಹಾಡುಗಳೆಲ್ಲಾ ದಾಸ ಸಾಹಿತ್ಯದ ಅಣಿಮುತ್ತುಳಂತಿವೆ.


ಹರಿದಾಸ ಸಾಹಿತ್ಯ ವಲಯದಲ್ಲಿ ವ್ಯಾಸರಾಯರ ಸ್ಥಾನ ಅತ್ಯುನ್ನತವಾದುದು. ಶ್ರೀರಾಮ ಅವರ ಮೆಚ್ಚಿನ ದೇವತಾ ಸ್ವರೂಪ, ರಾಮಾವತಾರದ, ರಾಮನಾಮದ ಮಹಿಮೆಗಳನ್ನು ಅನುಪಮವಾಗಿ ಬಣ್ಣಿಸಿದ್ದಾರೆ. "ಸೋಮಶೇಖರನೊಬ್ಬ ತಾನೆ ಬಲ್ಲ ಶ್ರೀರಾಮಮೃತದ ಸವಿಯನೆಲ್ಲ" ಎಂದು ಹೇಳುತ್ತಾ ಈಶ್ವರ ರಾಮನಾಮಜಪಿಸುತ ಸುಖಸಾಗರದೊಳು ತಾನೇಳುತ ಮುಳುಗುತ ಆನಂದವಾರಿಧಿಯಲ್ಲಿ ನಿಮಗ್ನನಾಗಿರುವ ಮನೋಹರ ಚಿತ್ರಣವನ್ನು ಕೊಟ್ಟಿದ್ದಾರೆ. "ತಡವ್ಯಾಕೆ ಶ್ರೀರಾಮ ನಾಮ ನುಡಿನುಡಿ ಅನ್ಯ ದೇವತೆಗಳ ಇನ್ನು ಭಜಿಸದಿರು" ಎಂಬ ದಿವ್ಯ ಸಂದೇಶ ನೀಡಿದ್ದಾರೆ. "ರಾಮ ನಾಡಿದನುಯ್ಯಾಲೆ, ರಾಜೀವನೇತ್ರನಾಡಿದ ನುಯ್ಯಾಲೆ" ಎಂದು ಸೀತಾರಾಮರು ಉಯ್ಯಾಲೆಯಾಡಿದ ರಮ್ಯ ಚಿತ್ರವನ್ನು ನಾನಾ ಬಗೆಯಲ್ಲಿ ವರ್ಣಿಸುತ್ತಾ ಆನಂದಿಸಿದ್ದಾರೆ. ರಾಮಭಕ್ತರಿಗೂ ಆನಂದ ಉಣಿಸಿದ್ದಾರೆ.


ಯತಿಶ್ರೇಷ್ಠರೂ, ಹರಿದಾಸವರೇಣ್ಯರೂ ಆದ ವಾದಿರಾಜರು ಚೆಲುವಾದ ಕೃತಿ ಕುಸುಮಗಳಿಂದ ಶ್ರೀರಾಮನನ್ನು ಅರ್ಚಿಸಿದ್ದಾರೆ. "ವೃಂದಾರಕವಂದ್ಯ ಸೇತು ಬಂಧದಿ ದಶಕಂಧರನ ಕೊಂದ ರಾಮಚಂದ್ರ ಬಾರೋ ಹರಿಯೇ" ಎಂದು ಮನಮಂದಿರಕ್ಕೆ ಹೃದಯ ದೇಗುಲಕ್ಕೆ ಶ್ರೀರಾಮನನ್ನು ಆದರದಿಂದ ಕರೆದಿದ್ದಾರೆ. ಒಂದು ಕೃತಿಯಲ್ಲಿ ನಿಂತ ನಿಲುವಿನ ಕೋದಂಡರಾಮನ ಸುಂದರ ಸ್ವರೂಪ ಚಿತ್ರಣ ನೀಡಿದ್ದಾರೆ.


ಈ ಮುದ್ದು ಮುಖವೋ ಮತ್ತೆ ತನುವಿನ ಕಾಂತಿ

ಈ ಬಿಲ್ಲು ಈ ಬಾಣ ಈ ನಿಂತ ಭಾವ

ಈ ತನು ಈ ರಾಣಿ ಈ ಬಂಟ ಈ ಭಾಗ್ಯ

ಆವದೇವರಿಗುಂಟು ಮೂಲೋಕದೊಳಗೆ,


ಎಂದು ಅಚ್ಚರಿಯಿಂದ ಉದ್ಗಾರವೆತ್ತಿದ್ದಾರೆ. ರಾಮಾಯಣದ ಕತೆಯನ್ನು ಸಂಗ್ರಹವಾಗಿ ನಿರೂಪಿಸಿದ್ದಾರೆ. "ಎಣಿಸಲೆನ್ನಳವೆ ನಿನ್ನ ಮಹಿಮೆಗಳ ಗುಣಗಣನುತ ನಾಮಕೋದಂಡರಾಮ" ಎಂದು ಕೊಂಡಾಡಿದ್ದಾರೆ. ವಾದಿರಾಜರಿಗೆ ಅತಿಪ್ರಿಯವಾದ ದಶಾವತಾರಗಳ ಸ್ತುತಿಗಳಲ್ಲೂ ರಾಮಾವತಾರದ ವೈವಿಧ್ಯಮಯ ವರ್ಣನೆಗಳಿವೆ. ಹಾಗೆಯೇ ಅಯೋಧ್ಯೇ, ಸೇತುಬಂಧನ ಕ್ಷೇತ್ರ, ಚುಂಚನಕಟ್ಟೆ ಮುಂತಾದ ರಾಮಕ್ಷೇತ್ರಗಳನ್ನು ಸಂದರ್ಶಿಸಿ ಶ್ರೀರಾಮ ಸನ್ನಿದಿಯಲ್ಲಿ ಕೃತಿ ದೀಪಗಳನ್ನು ಬೆಳಗಿಸಿದ್ದಾರೆ.


ಹರಿದಾಸ ಸಾಹಿತ್ಯದ ಸುವರ್ಣಯುಗದ ಅತ್ಯುನ್ನತ ಪ್ರತಿನಿಧಿಯಾದ ಪುರಂದರದಾಸರದು ನವನವೋನ್ಮೇಷಶಾಲಿನಿಯಾದ ನಿತ್ಯತಾಪ್ರತಿಭೆ ಅದು ಅವರ ಶ್ರೀರಾಮಾವತಾರವನ್ನು ಕುರಿತಾದ ಹಲವಾರು ಕೃತಿಗಳಲ್ಲಿ ಭಾವಪೂರ್ಣವಾಗಿ ಹೊರಸೂಸಿದೆ. ಅಂತಹ ಮಂತ್ರತುಲ್ಯವಾದ ಉತ್ತಮಗೀತೆ "ರಾಮಮಂತ್ರವ ಜಪಿಸೋ ಏ ಮನುಜ ಆ ಮಂತ್ರ ಈ ಮಂತ್ರ ನೆಚ್ಚಿ ನೀ ಕೆಡಬೇಡ" ಎಂಬುದು. ಅದು ಸೋಮಶೇಖರ ತನ್ನ ಸತಿಗೆ ಪೇಳಿದ ಮಂತ್ರ, ಸುಲಭದಿಂದಲಿ ಮೋಕ್ಷ ಸೂರೆಗೊಂಬುವ ಮಂತ್ರ ಸಕಲ ವೇದಂಗಳಿಗೆ ಸಾರವೆನಿಪ ಮಂತ್ರ ಪುರಂದರವಿಠಲನ ಮಂತ್ರ ಎಂದು ಶ್ರೀರಾಮನಾಮವನ್ನು ಜಪಿಸುವವರಿಗೆ ಮಾರ್ಗದರ್ಶನ ಮಾಡಿದ್ದಾರೆ. ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ಬೆರಸಿ ಸವಿದಿದ್ದಾರೆ. ನರಜನ್ಮ ಸ್ಥಿರವಲ್ಲ ರಾಮರಾಮ ಎಂದು ಸ್ಮರಿಸಿರಿ ಎಂದು ಸಾರಿದ್ದಾರೆ. ರಾಮನಾಮ ಜಪದ ಮಹಿಮೆಯನ್ನು ಸಾರಿ ಸಾರಿ ಹೇಳುವ ಹಾಡು "ರಾಮ ಎಂಬೆರಡಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ" ಎಂಬುದು 'ರಾ' ಎಂಬಕ್ಷರ ಉಚ್ಚರಿಸಿದರೆ ಆಗುವ ಪರಿಣಾಮವನ್ನು ವಾಲ್ಮೀಕಿ ಮುನಿರಾಯ ಬಲ್ಲ. 'ಮ' ಎಂಬ ಅಕ್ಷರೋಚ್ಛಾರದ ಮಹಿಮೆಯನ್ನು ಭಕ್ತವರ ಹನುಮಂತ ಬಲ್ಲ ಧರೆಯೊಳಗೀ ನಾಮಕ್ಕೆ ಸರಿ ಮಿಗಿಲು ಇಲ್ಲೆಂದು ಸಿರಿಕಾಶಿಯೊಳಗಿಪ್ಪ ಶಿವನು ತಾ ಬಲ್ಲ ಎಂದು ಕೊಂಡಾಡಿದ್ದಾರೆ. ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರಲ್ಲಿ ರಾಮರೂಪವನ್ನು ಕಂಡು ಬೆರಗಾಗಿದ್ದಾರೆ. ರಾಮನಾಮ ರತ್ನದ್ಹಾರ ದೊರಕಿತೆನಗೆ ಪೂರ್ವಪುಣ್ಯದ ಫಲಕೆ ಎಂದು ಮನದುಂಬಿ ಹೃದಯದುಂಬಿ ಹಿಗ್ಗಿದ್ದಾರೆ. ಸುಮ್ಮನೇ ದೊರಕುವುದೇ ಶ್ರೀರಾಮನ ದಿವ್ಯನಾಮವು ಜನ್ಮ ಜನ್ಮಾಂತರದ ದುಷ್ಕರ್ಮ ಹೋದವಗಲ್ಲದೆ ಎಂದು ಪ್ರಶ್ನಿಸಿದ್ದಾರೆ. ಇಂತು ನಾನಾ ಬಗೆಯಲ್ಲಿ ಪುರಂದರದಾಸರ ಕೃತಿಗಳಲ್ಲಿ ರಾಮನಾಮ ಮಹಿಮೆ ಮೈವೆತ್ತಿದೆ.


ಹರಿದಾಸ ಸಾಹಿತ್ಯದಲ್ಲಿ ಶ್ರೀರಾಮನ ಮಹಿಮೆಯನ್ನು ವರ್ಣಿಸುವ ನೂರಾರು ಕೃತಿಗಳಿದ್ದರೂ ಅವನ ಬಾಲಲೀಲೆೆಗಳನ್ನು ಬಣ್ಣಿಸುವ ಹಾಡುಗಳು ಅತಿವಿರಳ, ಅಂತಹುದೊಂದು ಅಪೂರ್ವ ಕೃತಿಯನ್ನು ಕನಕದಾಸರು ರಚಿಸಿದ್ದಾರೆ. ''ಅಂಗಳದೊಳು ರಾಮನಾಡಿದ ಚಂದ್ರಬೇಕೆಂದು ತಾ ಹಠಮಾಡಿದ" ಎಂಬ ಈ ಹಾಡು ಅತ್ಯಂತ ಜನಪ್ರಿಯವೂ ಪ್ರಸಿದ್ಧವೂ ಆಗಿದೆ. ಮಗುವಿನ ಮುಗ್ಧ ಮನಸ್ಸಿನ ಭಾವನೆಗಳನ್ನು ಕನಕದಾಸರು ಬಹು ರಮ್ಯವಾಗಿ ಚಿತ್ರಿಸಿದ್ದಾರೆ. ಹಾಡು ಆಲಿಸಿಯೇ ಅರಿಯಬೇಕು ಇದರ ಸೌಂದರ್ಯವನ್ನು.


ಹರಿದಾಸ ವರೇಣ್ಯರಾದ ವಿಜಯದಾಸರೂ ಕೂಡ ತಮ್ಮ ದಿವ್ಯ ಪ್ರಾಸಾದಿಕ ವಾಣಿಯಲ್ಲಿ ಶ್ರೀರಾಮ ಮಹಿಮೆಯನ್ನು ಕೊಂಡಾಡಿದ್ದಾರೆ. ಒಂದು ವಿಶಿಷ್ಠವಾದ ಕೃತಿ ವಿಜಯದಾಸರ ಶ್ರೀರಾಮ ಸ್ತುತಿ ಸಂಚಯದಲ್ಲಿದೆ. ವಿಜಯದಾಸರು ತಮ್ಮ ತೀರ್ಥಯಾತ್ರಾ ಪರ್ಯಟನ ಸಮಯದಲ್ಲಿ ದಕ್ಷಿಣ ಭಾರತದ ಸಮುದ್ರದಡದಲ್ಲಿರುವ ದರ್ಭಶಯನ ಕ್ಷೇತ್ರವನ್ನು ಸಂದರ್ಶಿಸಿ ಅಲ್ಲಿ ಶಯನಭಂಗಿಯಲ್ಲಿರುವ ಶ್ರೀರಾಮಮೂರ್ತಿಯನ್ನು ಕಂಡು ಅಚ್ಚರಿಯಿಂದ ನಾನಾ ಬಗೆಯಾಗಿ "ಏನು ಕಾರಣ ಮಲಗಿದೆಯೋ ಶ್ರೀನಾಥರಘುಕುಲೋದ್ಭವ ದರ್ಭಶಯನಾ" ಎಂದು ಪ್ರಶ್ನಿಸಿದ್ದಾರೆ. ಸೀತೆ ಪೋದಳು, ಸೇತುಗಟ್ಟುವುದು ಅಸಾಧ್ಯ, ಕೋತಿಗಳ ಕೈಲಿ ರಣವಾಗದು ಎಂದು ಚಿಂತೆಯೆ ಎಂದು ಮುಂತಾಗಿ ಹತ್ತಾರು ಕಾರಣಗಳನ್ನು ಊಹಿಸಿದ್ದಾರೆ. "ತಿಳುಹುವುದು ವಿಜಯವಿಠಲ ದರ್ಭಶಯನಾ" ಎಂದು ಕೇಳಿದ್ದಾರೆ. ಇನ್ನೊಂದೆಡೆ "ಕಾಮಹರ ಒಬ್ಬ ತಾನೆ ಬಲ್ಲ ಸೀತಾರಾಮನಲ್ಲದಿಲ್ಲವೆಂದು" ಎಂದು ದೃಢವಾಗಿ ನುಡಿದಿದ್ದಾರೆ. ಇಂತು ವಿಜಯದಾಸರ ಶ್ರೀರಾಮ ವರ್ಣನೆ ವಿಶಿಷ್ಠವಾಗಿದೆ.


ಗೋಪಾಲದಾಸರು ಬಹುಭಾವ ಭರಿತವಾದ, ಮಹಿಮಾನ್ವಿತವಾದ ವಿಶೇಷಣಗಳಿಂದ ಶ್ರೀರಾಮನನ್ನು ಕೀರ್ತಿಸಿದ್ದಾರೆ. ಅವನು ತರಣಿಕುಲೋತ್ಪನ್ನ, ಪರಮಮಂಗಳಮೂರ್ತಿ, ಪಾವನಸುಕೀರ್ತಿ, ಸರಿಯಿಲ್ಲದ ದೇವ, ಪರಮಪಾವನ ನಾಮ, ಘನ್ನ ಮಹಾಮಹಿಮ, ರಾಮಗೋಪಾಲವಿಠಲ ಎಂದೆಲ್ಲಾ ಕೊಂಡಾಡಿದ್ದಾರೆ. ಅವನ ಸುಂದರ ಮನೋಹರ ರೂಪವನ್ನು ಹೃದಯಮನಗಳಲ್ಲಿ ದರ್ಶಿಸಿ ಆನಂದದಿಂದ ಚಿತ್ರಿಸಿದ್ದಾರೆ. ಅನನ್ಯ ಶರಣಾಗತಿಯಿಂದ "ಚಿತ್ತಶುದ್ಧನ ಮಾಡು ಭಕ್ತಿ ಜ್ಞಾನವನೀಡು" ಎಂದು ಬೇಡಿದ್ದಾರೆ.


ದಾಸಶ್ರೇಷ್ಠರಾದ ಜಗನ್ನಾಥದಾಸರದು ಹರಿಸ್ತುತಿಯಲ್ಲಿ ಅದ್ಭುತ ಪ್ರತಿಭೆ. ಜಗನ್ನಾಥದಾಸರ ವಿಶಿಷ್ಠತೆಯೆಂದರೆ ತಮ್ಮ ಸಮಕಾಲೀನ ಯತಿವರ್ಯರು, ಪೀಠಾಧಿಪತಿಗಳು ಪೂಜಿಸುತ್ತಿದ್ದ ರಾಮದೇವರನ್ನು ವರ್ಣಿಸಿರುವುದು. ಲೇಖನ ವಿಸ್ತಾರದ ಭಯದಿಂದ ಅವುಗಳನ್ನು ಉಲ್ಲೇಖಿಸಲಾಗುತ್ತಿಲ್ಲ. ಒಂದು ಕೃತಿಯಲ್ಲಿ ರಾಮನ ನೋಡಿರೈ ನಿಮ್ಮಯ ಕಾಮಿತ ಬೇಡಿರೈ ತಾಮರಸ ಸಖ ವಂಶಾಬ್ದಿಶರತ್ಸೋಮ ಸುಗುಣಧಾಮ ವೈಭವದಿಂದಲಯೋಧ್ಯಾನಗರದಿ ಮೆರೆದ ಎಂದು ವಿಶೇಷವಾಗಿ ವರ್ಣಿಸಿದ್ದಾರೆ. ದಯದಿ ಭಕ್ತರ ಕಾಯ್ವ ದಾಶರಥಿಗೆ ಒಂದು ಕೃತಿಯಲ್ಲಿ ಮಂಗಳಗೀತೆ ಹಾಡಿ ನಲಿದಿದ್ದಾರೆ.


ವಾದಿರಾಜರು, ಪುರಂದರದಾಸರು, ವಿಜಯದಾಸರು, ಮುಂತಾದ ಪ್ರಖ್ಯಾತ ಹರಿದಾಸವರ್ಯರು ಆ ಸೇತು ಹಿಮಾಚಲ ಪರ್ಯಂತ ಸಂಚರಿಸಿ ಅಯೋಧ್ಯೆ (ಸಾಕೇತ) ಸರಯೂ ನದಿ, ಭದ್ರಾಚಲ, ಚುಂಚನಕಟ್ಟೆ, ಧರ್ಭಶಯನ ಸೇತುಬಂಧನ ಮುಂತಾದ ರಾಮಕ್ಷೇತ್ರಗಳನ್ನು ಸಂದರ್ಶಿಸಿ ಕ್ಷೇತ್ರಾಧಿಪತಿ ರಾಮದೇವರನ್ನು ಸ್ತುತಿಸಿದ್ದಾರೆ. ಈ ಕ್ಷೇತ್ರಗಳಿಗೆ ಭೇಟಿಕೊಟ್ಟಾಗ ವಿಶೇಷವಾಗಿ ಈ ಕೃತಿಗಳನ್ನು ಸ್ಮರಿಸಬೇಕು.


ಹರಿದಾಸರು ಶ್ರೀರಾಮನನ್ನು ಸ್ತುತಿಸಿರುವ, ವರ್ಣಿಸಿರುವ, ಸ್ಮರಿಸಿರುವ ಬಗೆ ಅನನ್ಯ, ಅನ್ಯಾದ್ಯಶ. ಶ್ರೀರಾಮ ಭಕ್ತರಿಗೆ ಆರಾಧಿಸಲು, ಉಪಾಸಿಸಲು ಮಾರ್ಗತೋರುವ ದಾರಿದೀವಿಗೆ. ಶ್ರೀರಾಮಚಂದ್ರನ ಅಡಿದಾವರೆಗಳಲ್ಲಿ ಅರ್ಪಿತಗೊಂಡ ಭಕ್ತಿ ಪರಿಮಳಭರಿತ ಚಿರನೂತನ ಕುಸುಮ ಸಂಚಯ.


ಡಾ || ಸುಮನ ಬದರೀನಾಥ್

ಇಂದು ವಿಠಲದಾಸಿನಿ,

52/1 (71/1) ಗಾಂಧಿಬಜಾರ್ ಮುಖ್ಯರಸ್ತೆ,

ಬಸವನಗುಡಿ, ಬೆಂಗಳೂರು- 560 004.

ಮೊಬೈಲ್ ನಂ. : 9482094855


ಲೇಖಕರ ಸಂಕ್ಷಿಪ್ತ ಪರಿಚಯ:

ಡಾ|| ಶ್ರೀಮತಿ ಸುಮನ ಬದರಿನಾಥ್‌ರವರು ಸುಮಾರು 25 ವರ್ಷಗಳಿಂದ ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಸಾರಸ್ವತ ಸೇವೆ ಸಲ್ಲಿಸುತ್ತಿದ್ದಾರೆ. ಹರಿದಾಸ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ಇಂದು ವಿಠಲದಾಸಿನಿ ಎಂಬ ಅಂಕಿತನಾಮವನ್ನು ಸ್ವೀಕರಿಸಿ ವಾದಿರಾಜ ಕೃತಿ ಸಂಪದದಾಸ ಸಾಹಿತ್ಯದಲ್ಲಿ ಕ್ಷೇತ್ರದರ್ಶನ, ದಾಸ ಸಾಹಿತ್ಯದಲ್ಲಿ ಲಕ್ಷೀತತ್ವ, ಹರಿದಾಸರು ಕಂಡ ಗುರುರಾಯರು, ಪುರಂದರ ಸಾಹಿತ್ಯದಲ್ಲಿ ಕೃಷ್ಣದರ್ಶನ ಮುಂತಾದ 15 ಪುಸ್ತಕಗಳನ್ನು ರಚಿಸಿದ್ದಾರೆ. ಹರಿದಾಸ ವಾಹಿನಿ ಮಾಸ ಪತ್ರಿಕೆಯ ಪ್ರಾರಂಭದ ಸಂಚಿಕೆಯಿಂದ ಪ್ರತಿ ತಿಂಗಳು ಲೇಖನಗಳನ್ನು ಬರೆದು ದಾಖಲೆ ಸೃಷ್ಟಿಸಿದ್ದಾರೆ. ಹರಿದಾಸ ವಾಹಿನಿ, ಪರಿಮಳ, ರಂಗವಿಠಲ, ತತ್ವಚಂದ್ರಿಕಾ, ಶ್ರೀಮುಖ್ಯಪ್ರಾಣ, ಶ್ರೀಸುಧಾ, ಸಪ್ತಗಿರಿ ಮುಂತಾದ ಧಾರ್ಮಿಕ ಪತ್ರಿಕೆಗಳಲ್ಲಿ ಸುಮಾರು 800ಕ್ಕೂ ಲೇಖನಗಳು ಪ್ರಕಟಗೊಂಡಿವೆ. ಇವರ ಸಾಹಿತ್ಯ ಸೇವೆಗೆ ಅನೇಕ ಪ್ರಶಸ್ತಿಗಳೂ, ಸನ್ಮಾನಗಳೂ ಸಂದಿವೆ. ಗೌರವ ಡಾಕ್ಟರೇಟ್ ಪಧವಿಯೂ ಲಭಿಸಿದೆ. ಹರಿದಾಸ ಸಾಹಿತ್ಯ ಸೇವೆ ಸಲ್ಲಿಸಬೇಕೆಂಬುದೇ ಇವರ ಜೀವನದ ಹಂಬಲ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

0 Comments

Post a Comment

Post a Comment (0)

Previous Post Next Post