- ಪ್ರೊ. ಜಯಶ್ರೀ ಹಿರೇಮಠ
ಶ್ರೀ ರಾಮ ಪಿತೃ ವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೊರಟಾಗ ಜೊತೆಗೆ ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣ ಕೂಡ ವನವಾಸಕ್ಕೆ ಹೊರಡುತ್ತಾರೆ. ವನವಾಸ ಕಾಲದಲ್ಲಿ ರಾಮ- ಸೀತೆ- ಲಕ್ಷ್ಮಣ. ಪಂಚವಟಿಯಲ್ಲಿ ಪರ್ಣ ಕುಟೀರ ಕಟ್ಟಿಕೊಂಡು ವಾಸವಾಗಿದ್ದರು. ಪಂಚವಟಿಯಲ್ಲಿ ಹಲವಾರು ರೀತಿಯ ವಿವಿಧ ಸಸ್ಯ ವರ್ಗ ಇತ್ತು ಅದರಲ್ಲಿ ಐದು ಬಹಳ ಪ್ರಮುಖವಾದವು.
ಆ ಐದು ಪ್ರಮುಖ ಔಷಧೀಯ ಗುಣವುಳ್ಳ ವೃಕ್ಷಗಳು ಯಾವುವು ಎಂದರೆ.
1) ಅಶ್ವತ್ಥ ವೃಕ್ಷ ಅಥವಾ ಅರಳೀ ಮರ.
2) ವಟ ವೃಕ್ಷ ಅಥವಾ ಆಲದ ಮರ.
3) ಬಿಲ್ವ ವೃಕ್ಷ.
4) ಆಮಲಕ ಅಥವಾ ನೆಲ್ಲೀ ಮರ.
5) ಅಶೋಕ ವೃಕ್ಷ.
ಈ ಐದೂ ಮರಗಳಿಗೆ ಪೂಜನೀಯ ಸ್ಥಾನವಿದೆ. "ವೃಕ್ಷಗಳ ಪೈಕಿ ನಾನು ಅಶ್ವತ್ಥ" ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದಾನೆ. ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೆ ಅಗ್ರತಃ ಶಿವ ರೂಪಾಯ ಅಶ್ವತ್ತ್ಹಾಯ ನಮೋ ನಮಃ.
ಸತ್ಯವಾನ ಸಾವಿತ್ರಿ ಕಥೆಯಿಂದ "ವಟ ವೃಕ್ಷಕ್ಕೆ" ಮಹತ್ವ. ತ್ರಿದಳ ತ್ರಿಗುಣಾಕಾರವಾದ ಬಿಲ್ವವು ಶಿವನಿಗೆ ಅತ್ಯಂತ ಪ್ರಿಯವಾದುದು. ಉತ್ಥಾನ ದ್ವಾದಶಿಯಂದು ತುಳಸಿ ಪೂಜೆಯ ದಿನ ತುಳಸಿಯ ವಿವಾಹವನ್ನು ನೆಲ್ಲಿಯ ಮರದೊಡನೆ ಮಾಡುವ ಕ್ರಮವಿದೆ.
ಅಶೋಕ ವೃಕ್ಷದ ಹೂವು ಮನ್ಮಥನ ಹೂಬಾಣಗಳ ಐದು ಹೂವುಗಳಲ್ಲಿ ಒಂದು. ಹೀಗೆ ಪ್ರತಿಯೊಂದು ಔಷಧೀಯ ವೃಕ್ಷಕ್ಕೂ ಒಂದು ಪೌರಾಣಿಕ ಮಹತ್ವವಿದೆ.
ಪಂಚವಟಿಯ ಐದು ವೃಕ್ಷಗಳು ಪಂಚಭೂತಗಳನ್ನು ಅಂದರೆ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶವನ್ನು ಪ್ರತಿನಿಧಿಸುತ್ತವೆ. ಇದು ಆಧ್ಯಾತ್ಮ ಎನ್ನಿಸಬಹುದು ಆದರೆ ಭೌತಿಕವಾಗಿಯೂ ಈ ಮರಗಳಿಂದಾಗುವ ಪ್ರಯೋಜನಗಳು ಅನುಭವಕ್ಕೆ ಬರುತ್ತದೆ. ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಹೂವು ಹಣ್ಣು ಬಿಡುವುದರಿಂದ ಪಕ್ಷಿಗಳನ್ನು ಆಕರ್ಷಿಸುತ್ತವೆ.
ರಾಮಾಯಣದಲ್ಲಿನ ದಂಡಕಾರಣ್ಯವನ್ನು ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿ ಗೋದಾವರಿ ತೀರದಲ್ಲಿ ಇರುವ ನಾಸಿಕ ಪಟ್ಟಣ ಎಂದು ಹೇಳಲಾಗುತ್ತದೆ. ನಾಸಿಕ ಎನ್ನುವ ಹೆಸರು ಬಂದಿದ್ದು ಹೇಗೆಂದರೆ ರಾವಣನ ಸೋದರಿ ಶೂರ್ಪನಖಿ ಸೀತೆಯನ್ನು ಕೊಲ್ಲಲು ಹೋದಾಗ ಲಕ್ಷ್ಮಣನು ಅವಳ ಮೂಗನ್ನು ಕತ್ತರಿಸುತ್ತಾನೆ. ಶೂರ್ಪನಖಿ ತನ್ನ ಅಣ್ಣ ರಾವಣನಿಗೆ ಸೀತೆಯ ವಿಚಾರ ತಿಳಿಸಿ ತನ್ನ ಕತ್ತರಿಸಿದ ಮೂಗು, ಮುಂದಲೆ ತೋರಿಸಿದಾಗ ವ್ಯಗ್ರನಾದ ರಾವಣ ಮಾರೀಚನನ್ನು ಬಂಗಾರದ ಮಾಯಾ ಜಿಂಕೆಯಾಗಿ ಪರಿವರ್ತಿಸಿ ಸೀತೆಯ ಗಮನ ಸೆಳೆಯಲು ಹೇಳುತ್ತಾನೆ. ಅದರಂತೆಯೇ ಸೀತೆಯ ಕೋರಿಕೆ ಮೇರೆಗೆ ರಾಮ ಮಾಯಾ ಜಿಂಕೆಯನ್ನು ಬೆನ್ನಟ್ಟುತ್ತಾನೆ. ಕೈಗೆ ಸಿಗದ ಜಿಂಕೆಗೆ ರಾಮ ಬಾಣ ಪ್ರಯೋಗ ಮಾಡುತ್ತಾನೆ ಆಗ ಆ ಜಿಂಕೆ ತನ್ನ ನಿಜ ರೂಪ ಪಡೆದು ಹಾ...ಸೀತೆ. ಹಾ..ಲಕ್ಷ್ಮಣ ... ಎಂದು ಕೂಗಿ ಸಾವನ್ನಪ್ಪುತ್ತದೆ. ಇತ್ತ ಸೀತೆ ಗಾಬರಿಯಾಗಿ ಲಕ್ಷ್ಮಣನಿಗೆ ರಾಮನನ್ನು ಕರೆ ತರಲು ಹೇಳುತ್ತಾಳೆ. ಆಗ ಲಕ್ಷ್ಮಣ ಪರ್ಣ ಕುಟೀರದ ಬಾಗಿಲ ಮುಂದೆ ತನ್ನ ಬಾಣದಿಂದ 'ರಕ್ಷಾ ಗಡಿ' ಎಳೆದು ಸೀತೆಗೆ ಅದನ್ನು ದಾಟಬಾರದು ಎಂದು ಮನವಿ ಮಾಡಿ ಅಣ್ಣನನ್ನು ಕರೆ ತರಲು ಹೋಗುತ್ತಾನೆ.
ರಾವಣ ಇದೇ ಸಮಯಕ್ಕಾಗಿ ಕಾಯುತ್ತಿದ್ದ. ಪುಷ್ಪಕ ವಿಮಾನದಲ್ಲಿ ಬಂದಿದ್ದ ರಾವಣ ಸನ್ಯಾಸಿ ವೇಷ ಧರಿಸಿ ಸೀತೆಗೆ ಭಿಕ್ಷೆ ನೀಡಲು ಕೇಳುತ್ತಾನೆ. 'ರಕ್ಷಾ ಗಡಿ' ಒಳಗಿನಿಂದಲೇ ಭಿಕ್ಷೆ ನೀಡಲು ಬಂದ ಸೀತೆಯನ್ನು ಗೆರೆ ದಾಟಿ ಹೊರ ಬಂದು ಭಿಕ್ಷೆ ನೀಡಲು ಹೇಳುತ್ತಾನೆ. ಹೊರ ಬಂದ ಸೀತೆಯ ಅಪಹರಣ ಮಾಡುತ್ತಾನೆ ರಾವಣ.
ಸೀತೆಯನ್ನು ಅಪಹರಿಸಿಕೊಂಡು ಹೋದ ರಾವಣ ಆಕೆಯನ್ನು ಅಶೋಕ ವನದಲ್ಲಿ ಇರಿಸುತ್ತಾನೆ. ಹೆಸರೇ ಸೂಚಿಸುವಂತೆ ಅಶೋಕ ಎಂದರೆ..... ಶೋಕವನ್ನು ದೂರ ಮಾಡುವಂಥದ್ದು ಎಂದು ಅರ್ಥ.
ಅಶೋಕ ಹೂಗಳು ಅರಳುವ ಪರಿ ಅತಿ ಮೋಹಕ. ಮರದ ತುಂಬಾ ಗೊಂಚಲುಗಳೇ. ಗೊಂಚಲಿನಲ್ಲಿ ಅನೇಕ ಪುಟ್ಟ ಪುಟ್ಟ ಹೂಗಳಿರುತ್ತವೆ. ಈ ಹೂಗಳಿಗೆ ನಾಲ್ಕು ದಳಗಳು. ಹೂವಿನ ಮಧ್ಯೆ ನೀಳವಾದ ಕೇಸರಗಳಿರುತ್ತವೆ. ಹೂಗಳು ಅರಳಿದ ಸಮಯದಲ್ಲಿ ಕಿತ್ತಳೆ ಹಳದಿ ಬಣ್ಣದಲ್ಲಿದ್ದು, ಮಾರನೆಯ ದಿನದಂದು ಕೆಂಪು ಬಣ್ಣಕ್ಕೆ ತಿರುಗುತ್ತವೆ. ನೋಡುಗರಿಗೆ ಒಂದೇ ಗೊಂಚಲಿನಲ್ಲಿ ಗೋಚರಿಸುವ ಎರಡು ಬಣ್ಣಗಳ ವೈವಿಧ್ಯತೆ ಅಚ್ಚರಿ ಮೂಡಿಸುತ್ತದೆ. ಹೂಗಳಲ್ಲಿ ಸುಗಂಧದ ನಸು ಲೇಪವಿರುವಂತೆ ಭಾಸವಾಗುತ್ತದೆ. ಸಂಜೆಯ ವೇಳೆಗೆ ಅದರ ಪರಿಮಳ ಗಾಢವಾಗುತ್ತಾ ಹೋಗುತ್ತದೆ.
ಗೌತಮ ಬುದ್ಧನು ಅಶೋಕ ವನದಲ್ಲಿ ಜನಿಸಿದನೆಂಬ ಪ್ರತೀತಿ ಇದೆ. ಹಾಗಾಗಿ ಬೌದ್ಧ ವಿಹಾರಗಳಲ್ಲಿ ಈ ಮರಕ್ಕೆ ವಿಶೇಷ ಪ್ರಾಮುಖ್ಯತೆ. ಕಾಮದೇವನಿಗೂ ಈ ಮರವನ್ನು ಕಂಡರೆ ಪ್ರಾಣ.
ಕುಪ್ಪಳ್ಳಿಯ ಕವಿಶೈಲದ ಹಿಂಭಾಗದಲ್ಲಿ "ನರ್ಜಿ" ಎಂಬ ಕಾಡಿನಲ್ಲಿ ಅಶೋಕ ಮರಗಳು ವ್ಯವಸ್ಥಿತವಾಗಿ ಬೆಳೆಸಲ್ಪಟ್ಟಿವೆ. ಕಾಳಿದಾಸನ ಮಾಳವಿಕಾಗ್ನಿ ಮಿತ್ರದಲ್ಲಿ, ಅಲ್ಲದೇ ಕವಿ ಪಂಪನೂ ಸಹ ಅಶೋಕ ವೃಕ್ಷವನ್ನು ವರ್ಣಿಸಿದ್ದಾನೆ.
ಅಶೋಕ ವೃಕ್ಷವು ಔಷಧೀಯ ಗಿಡಗಳು. ಈ ಮರದ ತೊಗಟೆಯನ್ನು ಪುಡಿ ಮಾಡಿ ಬಳಸುತ್ತಾರೆ. ಅಶೋಕಾರಿಷ್ಟ, ಅಶೋಕ ಘೃತ ಎಂಬ ಔಷಧಿ ಮಾಡುತ್ತಾರೆ. ಬಂಗಾಲದ ಹೆಣ್ಣು ಮಕ್ಕಳು, ಅಶೋಕ ವೃಕ್ಷದ ಹೂವಿನ ಮೊಗ್ಗುಗಳನ್ನು ಸೇವಿಸುತ್ತಾರೆ. ಇದರ ತೊಗಟೆಯಲ್ಲಿ " ಟ್ಯಾನಿನ್", ಅಂಶ. ತೊಗಟೆಯ ಪುಡಿಯನ್ನು ಸ್ವಲ್ಪ ಸೇರಿಸುವುದರಿಂದ ಚಹದ ರುಚಿ ಮತ್ತು ಬಣ್ಣದಲ್ಲಿ ಹೆಚ್ಚುವರಿ ಬರುತ್ತದೆ.
ಅಶೋಕ ವೃಕ್ಷವು ದ್ವಿದಳ ಧಾನ್ಯದ ಕುಟುಂಬದ ಡೆಟಾರಿಯೊಡೆ ಉಪಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಅಶೋಕ ಮರದ ಹೂವು ಭಾರತದ ಒಡಿಶಾ ರಾಜ್ಯದ ರಾಜ್ಯ ಪುಷ್ಪವಾಗಿದೆ.
ರಾಮನು ವಾನರು, ಜಂಬವಂತ, ಸುಗ್ರೀವ ಹನುಮಂತರ ಸಹಾಯದಿಂದ ಲಂಕೆಗೆ ಬಂದು ಯುದ್ಧ ಮಾಡುತ್ತಾನೆ. ಲಕ್ಷ್ಮಣನು ರಾವಣನ ಮಗ ಮೇಘನಾಥ ಅಥವಾ ಇಂದ್ರಜಿತು ಹೊಡೆದ ಬಾಣಕ್ಕೆ ಮೂರ್ಛಿತನಾಗುತ್ತಾನೆ. ಆಗ ಹನುಮಂತನನ್ನು ಸಂಜೀವಿನಿ ಗಿಡ ಮೂಲಿಕೆ ತರಲು ಸಂಜೀವಿನಿ ಪರ್ವತಕ್ಕೆ ಕಳಿಸುತ್ತಾರೆ. ಅದು ಹಿಮಾಲಯದ ದ್ರೋಣಗಿರಿ ಶ್ರೇಣಿಯಲ್ಲಿರುವ ಪರ್ವತವಾಗಿದೆ. ಈ ಪರ್ವತದಲ್ಲಿ ಹಲವಾರು ಕಾಯಿಲೆ ಮತ್ತು ಗಾಯಗಳನ್ನು ಗುಣಪಡಿಸುವ ವೈದ್ಯೇಕೀಯ ಮತ್ತು ಪವಿತ್ರ ಸಸ್ಯಗಳು ದೊರೆಯುತ್ತವೆ.
ಹನುಮಂತ ಹಿಮಾಲಯಕ್ಕೆ ಬಂದು ನೋಡುತ್ತಾನೆ ಅವನಿಗೆ ಗಿಡ ಮೂಲಿಕೆಗಳ ಬಗ್ಗೆ ತಿಳಿಯುವುದಿಲ್ಲ. ಗೊಂದಲಕ್ಕೊಳಗಾದ ಹನುಮಂತ ಸಂಜೀವಿನಿ ಪರ್ವತವನ್ನೇ ಹೊತ್ತು ತರುತ್ತಾನೆ. ಹೀಗಾಗಿ ಲಕ್ಷ್ಮಣನನ್ನು ಬದುಕಿಸಲು ಸಾಧ್ಯವಾಯಿತು ಮತ್ತು ಸಂಜೀವಿನಿ ಪರ್ವತವು ಲಂಕೆಗೆ ಬಂತು. ಹನುಮಂತ ಸಂಜೀವಿನಿ ಪರ್ವತವನ್ನು ಹೊತ್ತು ತರುವಾಗ ಎಲ್ಲೆಲ್ಲಿ ಬೆಟ್ಟದ ತುಣುಕು ಬಿದ್ದಿದೆಯೋ ಅಲ್ಲೆಲ್ಲಾ ಅಂದರೆ ಆ ಅರಣ್ಯಗಳಲ್ಲೂ ಗಿಡಮೂಲಿಕೆಯು ಹೇರಳವಾಗಿ ದೊರೆಯುತ್ತದೆ.
ತಮಿಳುನಾಡಿನ ರಾಜಪಾಳಯಂನಲ್ಲೂ ಸಂಜೀವಿನಿ ಪರ್ವತದ ತುಣುಕು ಬಿದ್ದಿದ್ದರಿಂದ ಅದೂ ಕೂಡ ನೈಸರ್ಗಿಕ ಮತ್ತು ಧಾರ್ಮಿಕ ಮಹತ್ವವನ್ನು ಪಡೆದ ತಾಣವಾಗಿದೆ.
ಗರುಡ ಸಂಜೀವಿನಿ ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ದಟ್ಟ ಕಾಡುಗಳಲ್ಲಿ ಕಂಡುಬರುವ ಅಪರೂಪದ ಗಿಡಮೂಲಿಕೆಯಾಗಿದೆ. ಇದು ಔಷಧೀಯ ಗಿಡ ಮೂಲಿಕೆಯಾಗಿದ್ದು, ಆಯುರ್ವೇದದಲ್ಲಿ ಪ್ರಧಾನವಾಗಿ ಮಾರಣಾಂತಿಕ ಹಾವು ಕಡಿತಗಳು ಮತ್ತು ಇತರ ಗಂಭೀರ ಒಳಹರಿವುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಗರುಡ ಸಂಜೀವಿನಿ ಬೇರನ್ನು ಕಂಡು ಹಿಡಿಯುವುದು ಬಹಳ ಸುಲಭ ಈ ಬೇರು ಮುರುಗಿಯಾಕಾರ ಹೊಂದಿದ್ದು ನೀರಿನ ದಿಕ್ಕಿಗೆ ವಿರುದ್ಧವಾಗಿ ಚಲಿಸುತ್ತದೆ.
ಸಂಜೀವಿನಿಯು ಗಂಭೀರ ನರಮಂಡಲ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದ್ದು, ಇದು ಮಾಯಾಶಕ್ತಿಯುಳ್ಳ ಗಿಡ ಮೂಲಿಕೆಯಾಗಿದೆ. ಈ ಮೂಲಿಕೆಯಿಂದ ತಯಾರಿಸಿದ ಔಷಧಿಗಳು ಮರಣವು ಬಹುತೇಕ ನಿಶ್ಚಿತವಾದ ಪರಿಸ್ಥಿತಿಗಳಿಂದ ಪುನಶ್ಚೇತನಗೊಳಿಸಬಲ್ಲವು.
ಇಂದಿನ ಔಷಧೀಯ ಸಸ್ಯಗಳು.
- ಚಕ್ರಮುನಿ ಸೊಪ್ಪು ವಿಟಮಿನ್ ಗಳ ರಾಣಿ ಎಂದು ಕರೆಯಲ್ಪಡುತ್ತದೆ.
- ಉತ್ತರಾಣಿ ಗಿಡವನ್ನು ಭೂಲೋಕದ ಸಂಜೀವಿನಿ ಎಂದು ಕರೆಯಲಾಗುತ್ತದೆ.
- ಅರವತ್ತು ನಾಲ್ಕು ಥರದ ಕಾಮಣಿಗೆ ಅಥವಾ ಕಾಮಾಲೆಗೆ ಅಮೃತ ಬಳ್ಳಿ ಸಂಜೀವಿನಿಯ ಕೆಲಸ ಮಾಡುತ್ತದೆ.
- ಬ್ರಹ್ಮ ಕುಮಾರಿ ಅಥವಾ ಲೋಳೆ ಸರ ಹಲವಾರು ಖಾಯಿಲೆಗೆ ಉಪಯೋಗಿಸಲಾಗುತ್ತದೆ.
- ತುಳಸಿಯು- ಕೆಮ್ಮು, ದಮ್ಮು, ಜ್ವರ ಇತ್ಯಾದಿ ರೋಗಗಳಿಗೆ ರೋಗ ನಿರೋಧಕವಾಗಿ.
- ಒಂದೆಲಗ, ದೋಟಿ ಪತ್ರೆ ಅಥವಾ ಅಜವಾಯಿನ್ ಸಸ್ಯ, ದಾಸವಾಳ ಎಲೆ ಮತ್ತು ಬಿಳಿ ದಾಸವಾಳ ಹೂ.
- ಕೆಂಪು ಗುಲಾಬಿ, ಕೆಂದಾವರೆ, ಬ್ರಹ್ಮ ಕಮಲ ಬಿಳಿ ಎಕ್ಕದ ಹೂ, ಎಲೆ, ಎಲೆ ಕೋಸು.
ಸಾಂದರ್ಭಿಕವಾಗಿ ಎಲ್ಲಾ ತರದ ಹಣ್ಣುಗಳು ಕೂಡ ಔಷಧೀಯ ಗುಣ ಹೊಂದಿವೆ.
ಏನೇ ಆದರೂ ಸಂಜೀವಿನಿ ಪರ್ವತವು ಔಷಧೀಯ ಸಸ್ಯಗಳ ಆಗರವೆಂದರೆ ತಪ್ಪಾಗುವುದಿಲ್ಲ.
ಪ್ರೊ. ಜಯಶ್ರೀ ಹಿರೇಮಠ
ಆಯುರ್ವೇದ- ಜಾನಪದ ವೈದ್ಯರು ಮತ್ತು ಸಾಹಿತಿ, ಧಾರವಾಡ.
ಮೋ. 9449819425. jayaih09@gmail.com
********
ಲೇಖಕರ ಸಂಕ್ಷಿಪ್ತ ಪರಿಚಯ:
ಬಹುಮುಖ ಪ್ರತಿಭೆಯ ಪ್ರೊ ಜಯಶ್ರೀ ಹಿರೇಮಠ: ಆಯುರ್ವೇದ ಮತ್ತು ಜಾನಪದ ವೈದ್ಯರು ಮತ್ತು ಸಾಹಿತಿ
ಡಾ ಜಯಶ್ರೀ ಹಿರೇಮಠ ಆಯುರ್ವೇದ ಮತ್ತು ಜಾನಪದ ವೈದ್ಯರು ಮತ್ತು ಸಾಹಿತಿ. ವೃತ್ತಿಯಲ್ಲಿ ವೈದ್ಯರು ಮತ್ತು ಉಪನ್ಯಾಸಕರು. ಪ್ರವೃತ್ತಿಯಲ್ಲಿ ಸಾಹಿತ್ಯ, ಸಂಗೀತ, ಯೋಗ ಇತ್ಯಾದಿಗಳಲ್ಲಿ ಆಸಕ್ತರು. ತಂದೆ ಡಾ. ಬಸಲಿಂಗಯ್ಯ ಹಿರೇಮಠ ಮತ್ತು ತಾಯಿ ಶಾರದಾ ಹಿರೇಮಠ. ಜಯಶ್ರೀ ಅವರ ತಂದೆ ಮೊದಲು ಪುಟ್ಟರಾಜ ಅಜ್ಜನವರ ಪ್ರಿಯ ಶಿಷ್ಯರಲ್ಲಿ ಒಬ್ಬರಾಗಿದ್ದರು. ಡಾ. ರಾಜಕುಮಾರ್, ಕಲ್ಪನಾ ಅವರ ಜೊತೆ ಕಾರ್ಯ ನಿರ್ವಹಿಸಿದ್ದಾರೆ. ಅವರು ಮೊದಲು ಕುಮಾರೇಶ್ವರ ನಾಟ್ಯ ಸಂಘ, ದುತ್ತರಗಿ ಕಂಪನಿಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ನಂತರ ತಮ್ಮ ವೈದ್ಯಕೀಯ ವೃತ್ತಿಯನ್ನು ಮುಂದುವರೆಸುತ್ತಾರೆ. ಅಂತಹ ಹಿನ್ನೆಲೆ ಜಯಶ್ರೀ ಅವರದು.
ಡಾ ಜಯಶ್ರೀ ಹಿರೇಮಠ ಚಾಮರಾಜ ನಗರದ ಆಲೂರಿನಲ್ಲಿ ಪ್ರಾಥಮಿಕ ಶಿಕ್ಷಣ ಮಾಡಿದರು. ಮಾಧ್ಯಮಿಕ, ಹೈಸ್ಕೂಲ್, ಡಿಗ್ರಿಯವರೆಗೂ ಬೆಂಗಳೂರಿನಲ್ಲಿ ಮುಗಿದಿದೆ. ಬೆಂಗಳೂರಿನಲ್ಲಿ ಬಿ ಎಡ್ ಓದಿದ್ದಾರೆ. ಓದಿನ ಜೊತೆ ಸಂಗೀತ, ಯೋಗ, ಟೈಪಿಂಗ್ ಮತ್ತು ತಂದೆಯವರಿಂದ ವೈದ್ಯಕೀಯ ಕಲಿತರು. ಮದುವೆಯ ನಂತರ ಧಾರವಾಡದಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರ ಶಾಲಾ, ಕಾಲೇಜಿನಲ್ಲಿ ಯೋಗ ಶಿಕ್ಷಕಿ ಮತ್ತು ಹಿಂದಿ ಉಪನ್ಯಾಸಕಿಯಾಗಿ ಕೆಲಸ ನಿರ್ವಹಿಸಿದರು. ಪ್ರಸ್ತುತ ವೈದ್ಯಕೀಯ ವೃತ್ತಿಯಲ್ಲಿ ತೊಡಗಿರುವರು. ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆ ಮತ್ತು "ಸಮರ್ಥನಮ್" ನ ವಿಕಲ ಚೇತನ ಮಕ್ಕಳಿಗೆ ಸಂಗೀತ ಪಾಠ ಹೇಳಿ ಕೊಡುತ್ತಿದ್ದಾರೆ. 2021 ಮತ್ತು 2022 ರಲ್ಲಿ ಅವರಿಗೆ ಸಾಹಿತ್ಯ, ಸಂಗೀತ, ಸಮಾಜ ಸೇವೆಗಾಗಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಹಲವಾರು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಬಂದಿವೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ