ಶ್ರೀರಾಮ ಕಥಾ ಲೇಖನ ಅಭಿಯಾನ-10: ರಾಮಾಯಣದಲ್ಲಿನ ನೈತಿಕ ಮೌಲ್ಯಗಳು

Upayuktha
0


- ಧೀರೇಂದ್ರ ನಾಗರಹಳ್ಳಿ



ರಾಮಾಯಣವನ್ನು ಬೇರೆ-ಬೇರೆ ಕೋನಗಳಿಂದ ನೋಡುತ್ತಲೆ ಪ್ರತಿ ಪಾತ್ರವನ್ನು (ಮತ್ತೊಮ್ಮೆ–ಮೊಗದೊಮ್ಮೆ) ವಿಶ್ಲೇಷಿಸಿ ವಿವಿಧ ಆಯಾಮಗಳಿಂದ ಅರ್ಥೈಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಚರಿತ್ರೆ ಪರಂಪರೆಯೊಂದಿಗಿನ ಸಂಬಂಧ ಮತ್ತು ಪ್ರಸ್ತುತ ಸಂದರ್ಭ ಮುಖಾಮುಖಿಯಾಗುವ ಕಾವ್ಯಗಳಲ್ಲಿ ಮಹಾಭಾರತ ಮತ್ತು ರಾಮಾಯಣವು ಪ್ರಮುಖ ಸ್ಥಾನವನ್ನು ಪಡೆದಿವೆ. ಯಾವ ಅನುಮಾನವೇ ಇಲ್ಲ ಜಾಗತಿಕ ಮಹಾಕಾವ್ಯಗಳನ್ನು ಪಟ್ಟಿಮಾಡಿದರೆ ಅದರಲ್ಲಿ ರಾಮಾಯಣ ಮತ್ತು ಮಹಾಭಾರತಗಳು ಮೊದಲಿನ ಸಾಲಿನಲ್ಲಿಯೇ ಇರುತ್ತವೆ. ರಾಮಾಯಣದಲ್ಲಿರುವ ಶ್ರೀರಾಮನ ಪಾತ್ರವೇ ಒಂದು ಆದರ್ಶದ ಗಣಿ, ಮೌಲ್ಯಗಳ ಅಪರಿಮಿತ ಧಾರೆ. ಹಾಗಾಗಿ ರಾಮಾಯಣವು ಕೇವಲ ಒಂದು ಕಥೆಯಲ್ಲ, ಭಾರತವಷ್ಟೇ ಅಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ನೈತಿಕ ಮೌಲ್ಯಗಳನ್ನು ತಿಳಿಸುವ ಶಿಕ್ಷಣದ ಮಾಧ್ಯಮವಾಗಿದೆ. ನಾವು ಕೂಡು ಕುಟುಂಬದ ವ್ಯವಸ್ಥೆಯಲ್ಲಿರುವಾಗ- ಕುಟುಂಬದ ಸದಸ್ಯರಲ್ಲಿ ತೋರಬೇಕಾದ ಪ್ರೀತಿ-ವಿಶ್ವಾಸ, ಸಹನೆ, ಭಾಷೆ/ವಚನಗಳನ್ನು ನಿಭಾಯಿಸುವ ಪರಿ ಹಾಗೂ ಬಲಹೀನರನ್ನು ರಕ್ಷಿಸುವ ನೀತಿ-ನಿಯಮಗಳು ಏನು ಎನ್ನುವುದನ್ನು ವಿವರಿಸಿದೆ. ಇದೀಷ್ಟೆ ಅಲ್ಲದೆ ಒಬ್ಬ ಆದರ್ಶ ತಂದೆ, ಆದರ್ಶ ಮಗ, ಆದರ್ಶ ಸಹೋದರ, ಆದರ್ಶ ಮಡದಿ, ಹಾಗೂ ಆದರ್ಶ ಪತಿ ಎಂದರೆ ಹೇಗಿರಬೇಕು ಎನ್ನುವುದನ್ನು ತೋರಿಸಿಕೊಡುತ್ತದೆ.


ರಾಮಾಯಣದಲ್ಲಿ ಪ್ರತಿ ಕಾಂಡಗಳಲ್ಲಿಯೂ ನೈತಿಕ ಮೌಲ್ಯಗಳನ್ನು ವ್ಯವಸ್ಥಿತವಾಗಿಯೇ ಪ್ರತಿಪಾದಿಸಲಾಗಿದೆ. ಹಾಗಾಗಿ ಕೇವಲ ಒಂದಿಷ್ಟು ಶಬ್ದಗಳು ಅಥವಾ ಒಂದಿಷ್ಟು ಪುಟಗಳಲ್ಲಿ ಅವೆಲ್ಲವನ್ನೂ ಧಾಖಲಿಸುತ್ತೇವೆ ಎನ್ನುವುದು ಮುರ್ಖತನವೇ ಸೈ! ಆದರೆ ಈ ಒಂದು ಬರಹದಲ್ಲಿ, ಅಲ್ಲಲ್ಲಿ  ಇಣುಕಿ-ಇಣುಕಿ ಕೇವಲ ಕೆಲವನ್ನು ಮಾತ್ರವೇ ಹೆಕ್ಕಿ-ಹೆಕ್ಕಿ ಇಲ್ಲಿ ತೆರೆದಿಡಲಾಗಿದೆ. ರಾಮಾಯಣದಲ್ಲಿರುವ  ನೈತಿಕ ಮೌಲ್ಯಗಳನ್ನು ನಾವು ವಿವಿಧ ನೆಲೆಗಳಲ್ಲಿ ನೋಡಬೇಕಾಗುತ್ತದೆ.


ಅವು ಯಾವುವು ಎನ್ನುವುದನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

ಧರ್ಮ ಪರಿಪಾಲನೆ

ಕ್ಷಮಾಗುಣ ಮತ್ತು ಸಹಾನಭೂತಿ

ಶ್ರೀರಾಮನ ಪ್ರಾಮಣಿಕತೆ ಮತ್ತು ಪರಿಪೂರ್ಣ ವ್ಯಕಿತ್ವ

ಗುರುಭಕ್ತಿ ಮತ್ತು ಅತಿಥಿ ಸತ್ಕಾರ

ಕಾಡು ಮತ್ತು ಕಾಡಿನ ಪ್ರಾಣಿಗಳ ಪ್ರೀತಿ

ತ್ಯಾಗದ ಪರಿಕಲ್ಪನೆ


1. ಧರ್ಮ ಪೆರಿಪಾಲನೆ:- ರಾಮಾಯಣದ ಸಂಪೂರ್ಣ ಕಥೆಯಲ್ಲಿ ಶ್ರೀರಾಮನ ಪಾತ್ರದಿಂದ ನಮಗೊದಗಿ ಬರುವ ಬಹುದೊಡ್ಡ ಒಂದು ಪಾಠವೆಂದರೆ ʼಧರ್ಮ ಪಾಲನೆʼ. ತಂದೆ ದಶರಥನ ವಚನವನ್ನು ನಿಭಾಯಿಸಲು ವನವಾಸಕ್ಕೆ  ಹೋಗುವುದು ಸಹಾ ತಂದೆಯನ್ನು ಧರ್ಮ ಸಂಕಟದಿಂದ ಪಾರುಮಾಡುವ ದೊಡ್ಡದೊಂದು ಧರ್ಮಪಾಲನೆಯೇ ಆಗಿದೆ. ನಂತರ ವನವಾಸದಲ್ಲಿ ಎದುರಾದ ಸಂದಿಗ್ಧ ಮತ್ತು ಕಠಿಣ ಪರಿಸ್ಥಿತಿಯಲ್ಲಿಯೂ ಧರ್ಮವೇ ಮುಖ್ಯವೆಂದು ಕೇವಲ ಶ್ರೀರಾಮನ ಪಾತ್ರವಲ್ಲ ಲಕ್ಷ್ಮಣ ಮತ್ತು ಸೀತೆಯ ಪಾತ್ರಗಳು ಸಹಾ ಸಾರಿ-ಸಾರಿ ಹೇಳಿವೆ. ವನವಾಸದ ಕಠಿಣ ಪರಿಸ್ಥಿತಿಯಲ್ಲಿ ಸೀತಾಪಹರಣವಾಗಿ ರಾವಣನೊಂದಿಗೆ ಘನ-ಘೋರ ಯುಧ್ದಕ್ಕೆ ಕಾರಣವಾಯಿತು. ರಾವಣ, ಸೀತೆಯನ್ನು ಅಪಹರಣ ಮಾಡಿ ಕೊಡಬಾರದ ಕಷ್ಟಗಳನ್ನು ಕೊಟ್ಟಿದ್ದರೂ ಅವನ ಕೊನೆಯಲ್ಲಿ ಅಂದರೆ ಅಂತ್ಯಸಂಸ್ಕಾರವನ್ನು ಒಬ್ಬ ರಾಜನ ಗೌರವಕ್ಕೆ ಯಾವುದೇ ಧಕ್ಕೆ ಬಾರದಂತೆ ನೆರವೇರಿಸಿ ಶ್ರೀರಾಮನು ಧರ್ಮವನ್ನು ಎತ್ತಿ ಹಿಡಿದನು. ಸರಿಯಾಗಿ 14 ವರ್ಷಗಳ ಶ್ರೀರಾಮನ ವನವಾಸದ ಸಮಯದಲ್ಲಿ ಭರತ ಹೆಸರಿಗಷ್ಟೆ ರಾಜನಾಗಿದ್ದರೂ ಶ್ರೀರಾಮನ ಪಾದುಕೆಯನ್ನೆ ವಾಸ್ತವವಾಗಿ ಸಿಂಹಾಸನದಲ್ಲಿ ಕುಳ್ಳಿರಿಸಿ ಶ್ರೀರಾಮನ ಹೆಸರಿನಲ್ಲೇ ರಾಜ್ಯಭಾರ ಮಾಡಿ ಧರ್ಮವನ್ನು ಮೆರೆದಿದ್ದನು. ಶ್ರೀರಾಮನ ತಾಯಿ ಕೌಶಲ್ಯ ರಾಜನಾಗಿ ಮರೆಯಬೇಕಾಗಿರುವ ಶ್ರೀರಾಮನು ವನವಾಸಕ್ಕೆ ಹೋಗುವುದು ನೋಡಿಯೂ ಯಾವ ತಕರಾರು ಇಲ್ಲದೇಯೇ ಮಗನನ್ನು ಕಳುಹಿಸಿ ಔದಾರ್ಯವನ್ನು ಮರೆಯುತ್ತಾಳೆ. ಇದಷ್ಟೇ ಅಲ್ಲ ಭರತನೂ ಸಹಾ ಶ್ರೀರಾಮ ಮರಳಿ ಬರುವವರೆಗೂ ರಾಜ ಪೋಷಾಕು ಧರಿಸಿದೆ ಅರಮನೆಯಲ್ಲಿದ್ದರೂ ವನವಾಸ ಜೀವನದಂತೆ ಬದುಕು ಸವೆಸುತ್ತಿರುತ್ತಾನೆ.


ಇವಿಷ್ಟು ಕೆಲವು ಉದಾಹರಣೆಗಳು. ಹೀಗೆ ರಾಮಾಯಣವೆ ಒಂದು ಮೌಲ್ಯಗಳ ಗಣಿ!!!


2) ಕ್ಷಮಾಗುಣ ಮತ್ತು ಸಹಾನಭೂತಿ:- ರಾಮಾಯಣದ ಸಂಪೂರ್ಣ ಕಥೆಯಲ್ಲಿ ಕಾಣಿಸುವ ಮತ್ತೊಂದು ಘನಮೌಲ್ಯವೆಂದರೆ ʼಕ್ಷಮಾಗುಣ ಮತ್ತು ಸಹಾನಭೂತಿʼ. ಶ್ರೀರಾಮನ ಮಲತಾಯಿಯಾದ ಕೈಕೆಯ ದಶರಥನ ಮೂಲಕ  ಶ್ರೀರಾಮನನ್ನು ೧೪ ವರ್ಷಗಳ ಕಾಲ ವನವಾಸಕ್ಕೆ ಕಳುಹಿಸುವ ಪ್ರಯತ್ನವನ್ನು ಮಾಡಿದ್ದರೂ ಶ್ರೀರಾಮ ಕೇವಲ ಕೈಕೆಯನ್ನಷ್ಟೆ ಅಲ್ಲದೆ ಕೈಕೆಯ ಕಿವಿ ಕಚ್ಚಿದ್ದ ಮಂಡೋದರಿಯನ್ನು ಪ್ರಾಂಜಲವಾಗಿಯೇ ಮನಸ್ಸಿಂದ ಕ್ಷಮಿಸಿದ್ದನು. ಮಾತೆ ಸೀತೆಯು ಅಷ್ಟೆ ತಾನು ಲಂಕೆಯಲ್ಲಿರುವಷ್ಟು ಸಮಯದವರೆಗೂ ಅಸುರ ಕುಲದವರು ತನಗೆ ಕೊಟ್ಟಿದ್ದ ಆ ಎಲ್ಲಾ ಕಷ್ಟಗಳನ್ನು ಮರೆತು ಅಕ್ಷರಶಃ ಕ್ಷಮಯಾ ಧರಿತ್ರಿಯಾಗಿದ್ದಳು.


ಇನ್ನೂ ಸಹಾನಭೂತಿಯ ವಿಷಯವಂತೂ ರಾಮಾಯಣದ ಅಂಗುಲ– ಅಂಗುಲದಲ್ಲಿ ಕಾಣಿಸುತ್ತುದೆ. ಶ್ರೀರಾಮ ಶಬರಿಯ ಮೂಢ ಭಕ್ತಿಗೆ ಒಲಿದಿದ್ದು, ವಿಭಿಷಣನಿಗೆ ಶ್ರೀರಾಮ ನೀಡಿದ್ದ ಅಭಯವೆಲ್ಲವೂ  ಸಹಾನುಭೂತಿಗೆ ಕೆಲವು ಉದಹಾರಣೆಗಳು, ಅಷ್ಟೆ !!!


3) ಶ್ರೀರಾಮನ ಪ್ರಾಮಾಣಿಕತೆ ಮತ್ತು ಪರಿಪೂರ್ಣ ವ್ಯಕಿತ್ವ:- ಶ್ರೀರಾಮನನ್ನು ನಾವೆಲ್ಲರೂ ಮರ್ಯಾದ ಪುರಷೋತ್ತಮ ಎಂದೇ ಸಂಬೋಧಿಸುತ್ತೇವೆ. ಬಹು ಪತ್ನಿತ್ವದ ಪರಿಸರ ಮತ್ತು ಏನೇ ಮಾಡಿದರೂ ಪ್ರಶ್ನಾತೀತ ಎನ್ನುವಂತಹ ಸ್ಥಿತಿ-ಗತಿಯಲ್ಲಿದ್ದ ಶ್ರೀರಾಮನು ಏಕಪತ್ನಿ ವ್ರತಸ್ಥನಾಗಿದ್ದದು ಈಗ ಒಂದು ಮಾದರಿ ಎನ್ನುವಂತೆಯೇ ಆಗಿದೆ. ಎಂತಹದ್ದೇ ಕಠಿಣ ಪರಿಸ್ಥಿತಿ ಎದುರಾಗಿದ್ದರೂ ಶ್ರೀರಾಮ ಮತ್ತು ಅವನ ಸಹೋದರರು ಪ್ರಾಮಾಣಿಕತೆಯನ್ನು ಎತ್ತಿ ಹಿಡಿದರು. ಶ್ರೀರಾಮನ ವ್ಯಕ್ತಿತ್ವ ಪರಿಪೂರ್ಣವೆಂದು ಹೇಳುವುದಕ್ಕೆ ಉದಾಹರಣೆಗಳು ಒಂದೆ-ಎರಡೇ? ರಾಮಾಯಣದಲ್ಲಿ ಪ್ರತಿ ಕಾಂಡದಲ್ಲೂ ಸಾಲು-ಸಲು  ಉದಾಹರಣೆಗಳು ದೊರೆಯುತ್ತವೆ. ತಂದೆ-ತಾಯಿಯರನ್ನು, ಸಹೋದರರನ್ನು, ಧರ್ಮಪತ್ನಿಯನ್ನು, ಸೇವಕರನ್ನು, ವಾನರ ಸೈನ್ಯವನ್ನು, ಪ್ರಜೆಗಳನ್ನು ಅಷ್ಟೇ ಏಕೆ ಕೊನೆಯಲ್ಲಿ ವೈರಿಯನ್ನು ನಡೆಸಿಕೊಂಡ ರೀತಿಯೇ ಹೇಳುತ್ತದೆ ರಾಮ ವ್ಯಕ್ತಿತ್ವ ಅದೆಷ್ಟು ಪರಿಪೂರ್ಣವೆಂದು.


4) ಗುರುಭಕ್ತಿ ಮತ್ತು ಅತಿಥಿ ಸತ್ಕಾರ:- ರಮಾಯಣದ ಪ್ರತಿ ಹಂತದಲ್ಲಿಯೂ ನಾವು ಗುರುಭಕ್ತಿ ಮತ್ತು ಅತಿಥಿಸತ್ಕಾರವನ್ನು ಕಾಣುತ್ತೇವೆ. ಋಷಿಯಾದಿ ಮುನಿವರ್ಯರಿಗೆ ತೋರಿದ ಗುರುಭಕ್ತಿ ಮತ್ತು ಅತಿಥಿ ಸತ್ಕಾರಕ್ಕೆ ರಾಮಾಯಣದಲ್ಲಿ ವಿಫುಲ ಉದಾಹರಣೆಗಳು ದೊರೆಯುತ್ತವೆ. ಮೊದಲಿಗೆ ಗುರುಭಕ್ತಿಯನ್ನು ನೋಡುವ: ವಿಶ್ವಾಮಿತ್ರನ ಆಜ್ಞೆಯ ಮೇರೆಗೆ ದಶರಥನು ಶ್ರೀರಾಮ ಮತ್ತು ಲಕ್ಷ್ಮಣರನ್ನು ಅಸುರರಿಂದ ರಕ್ಷಣೆ ಪಡೆಯಲು  ಮತ್ತು ಮೆಲುಸ್ತುವಾರಿಗಾಗಿ ಕಳುಹಿಸಿ ಕೊಡುತ್ತಾನೆ. ಆದರೆ ರಾಕ್ಷಸಿ ತಾಟಕಿಯನ್ನು ಕೊಲ್ಲುವ ಪ್ರಸಂಗದಲ್ಲಿ ಸ್ತ್ರೀ ಹತ್ಯಾ ದೋಷವೆನ್ನುವ ಜಿಜ್ಞಾಸೆಯಿದ್ದರೂ ಗರುವಾಜ್ಞೆ ಮೇರೆಗೆ ತಾಟಕಿಯನ್ನು ಸಂಹರಿಸಲಾಗುತ್ತದೆ. ಮತ್ತೊಂದು ಉದಾಹರಣೆಯಲ್ಲಿ - ಜನಕನಾಸ್ಥನದಲ್ಲಿ ಶಿವ ಧನಸ್ಸನ್ನು ಮುರಿಯಲು ಎದ್ದು ನಿಂತಾಗ ಸಾಕ್ಷತ್ ಶ್ರೀಮನಾರಾಯಣನೇ ಆಗಿದ್ದರೂ ಶ್ರೀರಾಮ ನೆರೆದಿರುವ ಎಲ್ಲಾ ಗುರು-ಹಿರಿಯರಿಗೂ ವಂದಿಸಿ ನಮಸ್ಕರಿಸಿಯೇ ಮುಂದಿನ ಕಾರ್ಯಕ್ಕೆ ಅಣಿಯಾಗುತ್ತಾನೆ.


ಗುರುಭಕ್ತಿಯಂತೆಯೇ ಅತಿಥಿ ಸತ್ಕಾರವು ಸಹಾ ರಾಮಾಯಣದಲ್ಲಿ ಹೆಜ್ಜೆ-ಹೆಜ್ಜೆಗೂ ನಮಗೆ ಕಾಣಿಸುತ್ತದೆ. ದಶರಥನ ಅರಮನೆಗೆ ವಿಶ್ವಾಮಿತ್ರ ಆಗಮಿಸಿದಾಗ ದಶರಥ ತೋರುವ ಆದರಾತಿಥ್ಯವೇ ಅಗಿರಲಿ,  ಅಂಬಿಗನಾದ ಗುಹ್ಯನ ಅತಿಥಿ ಸತ್ಕಾರ ನಾವು ಅತಿಥಿಯರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎನ್ನುವುದನ್ನು ತೋರಿಸುತ್ತದೆ.ಆದರೆ ಶಬರಿ ತೋರಿದ ಅತಥಿ ಸತ್ಕಾರದ ತೂಕವೇ ಬೇರೆ. ಅತಿಥಿ ಸತ್ಕಾರಕ್ಕೆ ಪರ್ಯಾಯ ಶಬ್ದವೇ ಶಬರಿ ಎನ್ನುವಂತೆ ಆಗಿ ಹೋಗಿದೆ. ಶಬರಿ ಶ್ರೀರಾಮನಿಗಾಗಿ ಪರಿತಪಿಸಿ ಎಂಜಲ ಹಣ್ಣೇ ಆಗಿದ್ದರೂ ರುಚಿಯಾದ ಹಣ್ಣನ್ನು ಮಾತ್ರ ಅರ್ಪಿಸಿರುವುದು ಅತಿಥಿ ಸತ್ಕಾರ ಮತ್ತು ಭಕ್ತಿಗೆ ನಿದರ್ಶನ.


5) ಕಾಡು ಮತ್ತು ಕಾಡಿನ ಪ್ರಾಣಿಗಳ ಪ್ರೀತಿ:- ವಾಲ್ಮೀಕಿ ರಾಮಾಯಣದಲ್ಲಿ ವಿಫುಲವಾಗಿ ವರ್ಣನೆಯಾಗಿರುವುದು ಇನ್ನೊಂದು ವಿಷಯವೆಂದರೆ- ಶ್ರೀರಾಮ, ಸೀತೆ ಮತ್ತು ಲಕ್ಷಣರ ವನವಾಸದ ಸಂದರ್ಭದಲ್ಲಿನ ಕಾಡು ಹಾಗೂ ಅಲ್ಲಿರುವ ಜೀವ-ಜಂತುಗಳ ವರ್ಣನೆ. ಸೂಕ್ಷ್ಮವಾಗಿ ಗಮನಿಸಿದರೆ ಮನುಷ್ಯ ಮತ್ತು ಕಾಡಿನ ಸಂಬಂಧ ಹಾಗೂ ಮನುಷ್ಯ ಮಾತ್ತು ಪ್ರಾಣಿಗಳ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಈ ಕ್ಷಣಕ್ಕೆ ಮನುಷ್ಯನ ದುರಾಸೆಗೆ ಬಲಿಯಾಗಿ ದಿನ-ದಿನವೂ ಕರಗುತ್ತಿರುವ ಕಾಡು ಮತ್ತು ಹೆಜ್ಜೆ-ಹೆಜ್ಜೆಗೂ ಪ್ಲಾಸ್ಟಿಕ್ ಅವಲಂಬಿತ ಬದುಕಿಗೆ ಒಂದು ಪಾಠ.


ಈ ಕೆಳಗಿನ ಕೆಲವು ಅಂಶಗಳನ್ನು ಗಮನಿಸಿದರೆ ಶ್ರೀರಾಮನ ವ್ಯಕ್ತಿತ್ವದ ಪರಿಪೂರ್ಣ ಚಿತ್ರಣವೂ ನಮಗೆ ದೊರೆಯುತ್ತದೆ.

ಆಷ್ಟೇ ಅಲ್ಲದೆ  ನೇರವಾಗಿ ನೈತಿಕ ಪಾಠವನ್ನು ಹೇಳದೆ ಹೋದರೂ ನಮ್ಮ ಅಲೋಚನಾ ಪರಿ ಮತ್ತು ದೃಷ್ಟಿಕೋನವನ್ನು ಬದಲಿಸುವಂತಹದ್ದೆ. 

 ಇವಿಷ್ಟೇ ಅಲ್ಲದೆ ಶ್ರೀರಾಮನು, ಯಾವ ಭೇದ -ಭಾವವಿಲ್ಲದೆ ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಿಂದ ನೋಡಿದನು.

 ತನ್ನ ನಿರ್ಧಾರಗಳಲ್ಲಿ ಸಹೋದರರು ಹಾಗು ಇನ್ನುಳಿದ ಅಧಿಕಾರ ವರ್ಗದವರ ಅಭಿಪ್ರಾಯವನ್ನು ತೆಗೆದುಕೊಳ್ಳದೆ  ಹಜ್ಜೆ ಮುಂದಿಡುತ್ತಿರಲಿಲ್ಲ.

 ಶ್ರೀರಾಮನ ಜ್ಞಾನ, ಯುಧ್ಧ ಕೌಶಲ್ಯ ಮತ್ತು ತಂತ್ರಗಾರಿಕೆ ಹಾಗೂ ಬಧ್ದತೆಯು ಜೀವನ ಪಾಠವಾಗಿದೆ

 ಶ್ರೀರಾಮನು  ಕೇವಲ ಧರ್ಮಪಾಲನೆ ಮತ್ತು ಸಹಾನುಭೂತಿಗೆ ಹೆಸರಾಗಿರದೆ- ಧೈರ್ಯ, ಶೌರ್ಯದ ಪ್ರತೀಕವೂ ಹೌದು.


ಈಗಾಗಲೆ ಮೊದಲೆ ವಿಷದ ಪಡಿಸಿದಂತೆ ರಾಮಾಯಣವೆನ್ನುವುದೇ ಒಂದು ಮೌಲ್ಯಗಳ ಗಣಿ ಮತ್ತು ಮೌಲ್ಯಗಳ ಅಪರಿಮಿತ ಧಾರೆ. ಈ ಒಂದು ಬರಹ ಕೇವಲ ಅದೆಲ್ಲದರ ಸ್ಥೂಲ ಚಿತ್ರಣವನ್ನು ಕೊಡುತ್ತದೆಯೇ ಹೊರತು ರಾಮಾಯಣದಲ್ಲಿರುವ ಸಂಪೂರ್ಣ ಮೌಲ್ಯಗಳನ್ನು ಇಲ್ಲಿ ದಾಖಲಿಸಿದ್ದೇನೆ ಎನ್ನುವ ದಾರ್ಷ್ಟ್ಯ ನನಗಿಲ್ಲ.




-ಧೀರೇಂದ್ರ ನಾಗರಹಳ್ಳಿ 

9845891228


No-7 V2 Vasudha FF-104

9th Main Srinivasa Nagara

BSK - III Stage Bengaluru -560050

n.dheerendra@gmail.com



ಲೇಖಕರ ಸಂಕ್ಷಿಪ್ತ ಪರಿಚಯ:

ಈಗಿನ ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿ (ಮೊದಲು ಬಳ್ಳಾರಿ ಜಿಲ್ಲೆ) 1977 ರ ಅಕ್ಟೋಬರ್ 9 ರಂದು ಜನನ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹುಟ್ಟಿದ ಊರಿನಲ್ಲೇ. ನಂತರ ಬಳ್ಳಾರಿಯ ವಿಜಯ ನಗರ ತಾಂತ್ರಿಕ ವಿದ್ಯಾಲಯದಿಂದ ಮೆಕಾನಿಕಲ್  ಇಂಜಿನಿಯರಿಂಗ್ ನಲ್ಲಿ ಪದವಿ. ವಿವಿಧ ಸಾಫ್ಟ್ ವೇರ್ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿ ಪ್ರಸ್ತುತ ಕಾಗ್ನಿಜೆಂಟ್ ಟೆಕ್ನಾಲಜಿ ಸಲೋಷನನ್ಸ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ. ಅಧ್ಯಯನ ಮತ್ತು ಬರಹ ಹವ್ಯಾಸಗಳು. ನಾಲ್ಕು  ಪುಸ್ತಕಗಳನ್ನು ಬರೆದಿರುವ ಇವರ ಬರಹಗಳು ನಾಡಿನ ಬಹುತೇಕ ಎಲ್ಲಾ ಪತ್ರಿಕೆ ಮತ್ತು ನಿಯತ ಕಾಲಿಕೆಗಳಲ್ಲಿ ಪ್ರಕಟವಾಗಿವೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top