ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸತತ ಐದನೇ ಬಾರಿಗೆ ರೆಪೊ ದರವನ್ನು ಬದಲಾಯಿಸದಿರಲು ನಿರ್ಧರಿಸಿದೆ. ಮೂರು ದಿನಗಳ ಚರ್ಚೆಯ ನಂತರ ನಿರ್ಧಾರವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿ (ಎಂಪಿಸಿ) ಶುಕ್ರವಾರ, ಡಿಸೆಂಬರ್ 8, 2023 ರಂದು ಐದನೇ ಬಾರಿಗೆ ರೆಪೊ ದರವನ್ನು ಶೇಕಡಾ 6.5 ಕ್ಕೆ ಬದಲಾಯಿಸದೆ ಇರಿಸಿದೆ.
ರೆಪೊ ದರ ಯಥಾಸ್ಥಿತಿ
ಮೇ 2022 ರಿಂದ ಆರ್ ಬಿ ಐ 250 ಬೇಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದ ನಂತರ ಬದಲಾಗದ ರೆಪೋ ದರವು ಸಾಲ ಮಂಜೂರಾತಿಯಲ್ಲಿ ವೇಗ ಕಾಯ್ದುಕೊಳ್ಳುತ್ತದೆ. ಇದು ಭವಿಷ್ಯದಲ್ಲಿ ಸ್ಥಿರತೆ ಮತ್ತು ಭದ್ರತೆ ಒದಗಿಸಲು ಸಹಾಯ ಮಾಡಲಿದೆ.
ಆರ್‌ಬಿಐ ರೆಪೊ ದರವನ್ನು ಯಥಾಸ್ಥಿತಿಯಲ್ಲಿಟ್ಟಿರುವುದು ಹಣಕಾಸಿನ ಸ್ಥಿರತೆಗೆ ಧಕ್ಕೆಯಾಗದಂತೆ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವ ತನ್ನ ನಿಲುವನ್ನು ಸೂಚಿಸುತ್ತದೆ. ದೀರ್ಘಕಾಲೀನ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯನ್ನು ಖಚಿತಪಡಿಸುವ ನಿರ್ಧಾರಗಳ ಸ್ವಾಗತಾರ್ಹ.
ಇದು ಬಡ್ಡಿದರಗಳನ್ನು ಸ್ಥಿರಗೊಳಿಸುತ್ತದೆ ಮತ್ತು ಸಾಲದ ಬೇಡಿಕೆಗಳನ್ನು ಉತ್ತೇಜಿಸುತ್ತದೆ. ಗೃಹ ಸಾಲದ ಬಡ್ಡಿ ದರಗಳು ಸ್ಥಿರವಾಗಿ ಉಳಿಯುವುದರಿಂದ ರಿಯಲ್ ಎಸ್ಟೇಟ್ ವಲಯವೂ ಈ ನಿರ್ಧಾರದಿಂದ ಪ್ರಯೋಜನ ಪಡೆಯಲಿದೆ. ಹಣದುಬ್ಬರ, ಬೆಳವಣಿಗೆ ಅಥವಾ ಜಾಗತಿಕ ಚಂಚಲತೆಯಲ್ಲಿ ಗಮನಾರ್ಹ ಬದಲಾವಣೆಗಳಿಲ್ಲದಿದ್ದರೆ, ದರಗಳು ವಿಸ್ತೃತ ಅವಧಿಯವರೆಗೆ ಸ್ಥಿರವಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ.
ರೆಪೊ ದರವನ್ನು ಬದಲಾಗದೆ ಇರಿಸುವ ನಿರ್ಧಾರವು ಮನೆ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಧನಾತ್ಮಕ ಬೆಳವಣಿಗೆಯಾಗಿದೆ, ಏಕೆಂದರೆ ಇದು ಅವರಿಗೆ ಕೆಲವು ಸ್ಥಿರತೆಯನ್ನು ಒದಗಿಸುತ್ತದೆ ಮತ್ತು ಬಡ್ಡಿದರದ ಏರಿಳಿತಗಳಿಗೆ ಸಂಬಂಧಿಸಿದ ಅನಿಶ್ಚಿತತೆ ಮತ್ತು ಚಂಚಲತೆಯನ್ನು ಕಡಿಮೆ ಮಾಡುತ್ತದೆ.
ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟುಕೊಂಡು ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಕೇಂದ್ರೀಯ ಬ್ಯಾಂಕು ತನ್ನ ಗಮನವನ್ನು ಮುಂದುವರೆಸಿದೆ. ಆರ್‌ಬಿಐ ಅನುಸರಿಸುವ ಸ್ಥಿರ ಹಣಕಾಸು ನೀತಿಯು ಉದ್ಯಮಕ್ಕೆ ಉತ್ತೇಜನವನ್ನು ನೀಡುವುದರಲ್ಲಿ ಸಂದೇಹ ಇಲ್ಲ.
ರೆಪೊ ದರ ಎಂದರೇನು?
ರೆಪೊ ದರವು ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಹಣದ ಕೊರತೆಯ ಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ಹಣವನ್ನು ಸಾಲವಾಗಿ ನೀಡುವ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.
ಮಾರುಕಟ್ಟೆಯ ಬಡ್ಡಿ ದರವು ನೇರವಾಗಿ ರೆಪೋ ದರವನ್ನು ಅವಲಂಬಿಸುತ್ತದೆ. ರೆಪೊ ದರ ಹೆಚ್ಚಾದಾಗ, ವಾಣಿಜ್ಯ ಬ್ಯಾಂಕ್‌ಗಳು ಕೇಂದ್ರೀಯ ಬ್ಯಾಂಕ್‌ನಿಂದ ಪಡೆಯುವ ಸಾಲವು ದುಬಾರಿಯಾಗುತ್ತದೆ. ಪ್ರತಿಯಾಗಿ, ವಾಣಿಜ್ಯ ಬ್ಯಾಂಕುಗಳು ತಮ್ಮ ಸಾಲದ ದರಗಳನ್ನು ಹೆಚ್ಚಿಸುತ್ತವೆ. ಹೀಗಾಗಿ, ಸಾಮಾನ್ಯ ಜನರು ವಾಣಿಜ್ಯ ಬ್ಯಾಂಕ್‌ಗಳಿಂದ ಸಾಲವನ್ನು ಪಡೆದಾಗ, ಪರಿಣಾಮಕಾರಿ ಬಡ್ಡಿ ದರವು ಹೆಚ್ಚಾಗುತ್ತದೆ ಮತ್ತು ಅವರು ಪಡೆದ ಸಾಲಕ್ಕೆ ಹೆಚ್ಚಿನ ಬಡ್ಡಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರೀಯ ಬ್ಯಾಂಕ್ ರೆಪೊ ದರವನ್ನು ಹೆಚ್ಚಿಸುವ ಮೂಲಕ ಬ್ಯಾಂಕ್‌ಗಳು ಕೇಂದ್ರೀಯ ಬ್ಯಾಂಕ್‌ನಿಂದ ಸಾಲ ಪಡೆಯಲು ಹಿಂಜರಿಯುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ ಆರ್ಥಿಕತೆಯಲ್ಲಿ ಹಣದ ಪೂರೈಕೆಯು ಕಡಿಮೆಯಾಗಿ ಹಣದುಬ್ಬರವನ್ನು ತಡೆಯಲು ಸಹಾಯ ಮಾಡುತ್ತದೆ.
ಹಣದುಬ್ಬರದ ಒತ್ತಡದ ಕುಸಿತದ ಸಂದರ್ಭದಲ್ಲಿ ಕೇಂದ್ರ ಬ್ಯಾಂಕ್ ರೆಪೊ ದರವನ್ನು ತಗ್ಗಿಸಿ ಬ್ಯಾಂಕುಗಳು ಸಾಲತೆಗೆದುಕೊಳ್ಳಲು ಪ್ರೋತ್ಸಾಹಿಸುತ್ತದೆ. ಪರಿಣಾಮವಾಗಿ ದ್ರವ್ಯತೆಯ ಪ್ರಮಾಣ ಹೆಚ್ಚಿ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳುತ್ತವೆ.
ಹಣದುಬ್ಬರ ಮತ್ತು ರೆಪೊ ದರ
ಭಾರತೀಯ ಮಾರುಕಟ್ಟೆಯಲ್ಲಿ ಹಣದ ಪೂರೈಕೆಯನ್ನು ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಬಳಸುತ್ತದೆ. ಹೆಚ್ಚಿನ ರೆಪೊ ದರವು ವಾಣಿಜ್ಯ ಬ್ಯಾಂಕುಗಳ ಎರವಲು ಶಕ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಮಾರುಕಟ್ಟೆಯಲ್ಲಿ ನಗದು ಹರಿವನ್ನು ಕಡಿಮೆ ಮಾಡುತ್ತದೆ. ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾದಂತೆ ಬೇಡಿಕೆಯು ಇಳಿಮುಖವಾಗಿ ಬೆಲೆಗಳ ಮಟ್ಟವೂ ಇಳಿಮುಖವಾಗುತ್ತದೆ. ಹೀಗೆ ಹಣದುಬ್ಬರವನ್ನು ನಿಯಂತ್ರಿಸಲು ರೆಪೊ ದರವನ್ನು ಹೆಚ್ಚಿಸಲಾಗುತ್ತದೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರ ಏರಿಸಿದ (ಫೆಬ್ರವರಿ 2023 ರಲ್ಲಿ ಶೇ.6.25 ರಿಂದ ಶೇ.6.5) ಬಳಿಕ ಐದು ಬಾರಿ ಹಣಕಾಸು ಸಮಿತಿ ಸಭೆ ಸೇರಿದೆ. ಹಣದುಬ್ಬರ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ದರೂ ಈ ಬಾರಿ ಕೂಡಾ ರೆಪೋ ದರವನ್ನು ಇಳಿಸುವ ಮನಸ್ಸು ಮಾಡಿಲ್ಲ.
ರೆಪೊ ದರ ಇಳಿಕೆಯಾದರೆ ಬಡ್ಡಿದರವೂ ಇಳಿಕೆಯಾಗುತ್ತದೆ. ಬ್ಯಾಂಕುಗಳಿಂದ ಪಡೆದಿರುವ ವಾಹನ್. ಗೃಹ ಸಾಲಗಳ ಮಾಸಿಕ ಕಂತು ಇಳಿಕೆಯಾಗಿ ಆರ್ಥಿಕತೆಯಲ್ಲಿ ಹಣದ ಪ್ರಮಾಣ ಜಾಸ್ತಿಯಾಗುತ್ತದೆ. ಅಂದರೆ ಜನರ ಕೈಯಲ್ಲಿ ಹಣ ಓಡಾಡುತ್ತದೆ, ಮಾರುಕಟ್ಟೆಯಲ್ಲಿ ಖರೀದಿಯೂ ಹೆಚ್ಚುತ್ತದೆ. ಇದರ ಪರಿಣಾಮವಾಗ ಆರ್ಥಿಕ ಚಟುವಟಿಕೆಗಳಿಗೆ ಹುಮ್ಮಸ್ಸು ಬರುತ್ತದೆ.
ಸ್ಥಿರ ರೆಪೊ ದರದ ಆಶಯ
ಆರ್‌ಬಿಐ ತನ್ನ ಪ್ರಮುಖ ಸಾಲದ ದರಗಳನ್ನು ನಿರೀಕ್ಷಿತವಾಗಿ ಸತತ ಐದನೇ ಬಾರಿಗೆ ಬದಲಾಗದೆ ಬಿಟ್ಟಿದೆ ಮತ್ತು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ವೇಗದ ಬೆಳವಣಿಗೆಯನ್ನು ಊಹಿಸಿದೆ.
2023-24 ರ ಹಣದುಬ್ಬರ ಮುನ್ಸೂಚನೆಯು ಶೇ.5.4 ರಲ್ಲಿ ಸ್ಥಿರವಾಗಿದೆ. ಪ್ರಮುಖ ಹಣದುಬ್ಬರವು ವಿಶಾಲವಾಗಿ ಕುಸಿಯುತ್ತಿರುವಾಗ, ಆಹಾರ ಹಣದುಬ್ಬರದ ಅಪಾಯಗಳು ಮುಂದುವರಿಯುವ ಸಾಧ್ಯತೆಗಳಿವೆ. ಆಹಾರ ಹಣದುಬ್ಬರವು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಹಣದುಬ್ಬರ ಅಂಕಿಅಂಶಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು ಎಂಬ ಬೆದರಿಕೆ ಇದ್ದೇ ಇದೆ.
ಜಾಗತಿಕ ಆರ್ಥಿಕತೆಯು ಅಸ್ಥಿರವಾಗಿದ್ದರೂ, ಭಾರತದ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಇದು ಪ್ರಸಕ್ತ ಹಣಕಾಸು ವರ್ಷ (FY24) CPI ಅಂದಾಜನ್ನು ಇಟ್ಟುಕೊಂಡಿದೆ ಆದರೆ ಅದರ ನೈಜ GDP ಪ್ರಕ್ಷೇಪಗಳನ್ನು ಹೆಚ್ಚಿಸಿದೆ.
ಕಳೆದ ಕೆಲವು ತಿಂಗಳುಗಳಿಂದ ಹಣದುಬ್ಬರವು ಇಳಿಮುಖವಾಗಿದ್ದರೂ, ಆರ್‌ಬಿಐ ತನ್ನ ಗುರಿಯನ್ನು ಶೇಕಡಾ ನಾಲ್ಕಕ್ಕೆ ಕಟ್ಟಿಹಾಕುವ ಗುರಿಯಲ್ಲಿ ದೃಢನಿಶ್ಚಯವನ್ನು ತೋರುತ್ತಿದೆ. ಕ್ರೆಡಿಟ್ ನೀತಿಯ ಗಮನವು ಬೆಲೆ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಉಳಿದಿರುವ ಕಾರಣ ಹೂಡಿಕೆದಾರರು, ಸಾಲಗಾರರು ಮತ್ತು ಗ್ರಾಹಕರಿಗೆ ಹೆಚ್ಚಿನ ವಿಶ್ವಾಸವನ್ನು ತರುವಂತಹ ನಿಲುವುಗಾಗಿ ಜಾಗತಿಕ ಮತ್ತು ದೇಶೀಯ ಘಟನೆಗಳ ಮೇಲೆ ಇದುವರೆಗೆ ಜಾಗರೂಕ ಕಣ್ಣಿಟ್ಟಿದೆ.
ಸ್ಥಿರವಾದ ಸಾಲದ ದರವು ಹೂಡಿಕೆಗಳನ್ನು ಉತ್ತೇಜಿಸುತ್ತದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ತಮ್ಮ ಸಮಾನ ಮಾಸಿಕ ಕಂತುಗಳು (EMI) ಗಳ ಮೇಲೆ ತಕ್ಷಣ ಪರಿಣಾಮ ಬೀರುವುದಿಲ್ಲ ಎಂದು ಅಸ್ತಿತ್ವದಲ್ಲಿರುವ ಸಾಲಗಾರರು ಕುಶಿ ಪಟ್ಟರೆ, ನಿರೀಕ್ಷಿತ ಮನೆ ಖರೀದಿದಾರರು ಸ್ಥಿರವಾದ ರೆಪೋ ದರದಲ್ಲಿ ತಕ್ಷಣಕ್ಕೆ ದರ ಏರಿಕೆಯ ಬೆದರಿಕೆಯಿಲ್ಲದೆ ತಮ್ಮ ಹೂಡಿಕೆಗಳನ್ನು ಯೋಜಿಸಲು ಅವಕಾಶ ನೀಡುತ್ತದೆ.
ದೂರದೃಷ್ಟಿಯ ನಿರ್ಧಾರ
ರಷ್ಯಾ-ಉಕ್ರೇನ್ ಹಾಗೂ ಹಮಾಸ್-ಇಸ್ರೇಲ್ ಯುದ್ಧ ನಡೆಯುತ್ತಿರುವುದರಿಂದ ಜಾಗತಿಕ ಮಾರುಕಟ್ಟೆ ಮತ್ತು ಪೂರೈಕೆ ಜಾಲ ಅನಿಶ್ಚಿತತೆಯನ್ನು ಎದುರಿಸುತ್ತಿದೆ. ಇದರೊಂದಿಗೆ ಕಚ್ಚಾತೈಲ ಮಾರುಕಟ್ಟಯಲ್ಲೂ ಅತಂತ್ರ ಸ್ಥಿತಿ ಇದೆ. ಜಾಗತಿಕವಾಗಿ ಬಹುತೇಕ ರಾಷ್ಟ್ರಗಳು ಆರ್ಥಿಕ ಹಿಂಜರಿತದಂದ ನಲುಗಿ ಹೊರಬರಲು ಹರಸಾಹಸ ಪಡುತ್ತಿವೆ. ಇವೆಲ್ಲವನ್ನು ಗಮನಿಸಿಯೇ ಆರ್ ಬಿ ಐ ರೆಪೊ ದರವನ್ನು ಇನ್ನೆರಡು ತಿಂಗಳ ಮಟ್ಟಿಗೆ ಯಥಾಸ್ಥಿತಿಯಲ್ಲಿರುಸುವ ನಿರ್ಧಾರಕ್ಕೆ ಬಂದಿದೆ.
ವಿಶ್ವದ ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಆಶಾದಾಯಕವಾಗಿಯೇ ಇದೆ. ವಿಶ್ವಬ್ಯಾಂಕ್, ಐಎಂಎಫ್ ಸೇರಿದಂತೆ ಜಾಗತಿಕ ಸಂಸ್ಥೆಗಳು ಭಾರತದ ಆರ್ಥಿಕತೆ ಆಶಾದಾಯಕವಾಗಿದೆ ಎಂದೇ ಮುನ್ನೋಟವನ್ನು ನೀಡಿವೆ. ಹಣದುಬ್ಬರದ ಸೂಕ್ತ ನಿಯಂತ್ರಣ, ವಿಶ್ವಾಸಾರ್ಹ ಹಣಕಾಸು ನೀತಿಯ ಕ್ರಮಗಳಿಂದ ಬೇಡಿಕೆಯನ್ನು ಖಚಿತಪಡಿಸಿಕೊಳ್ಳಲು ಹಣದ ಹರಿವು, ವ್ಯಾಪಾರ ನೀತಿ ಮತ್ತು ಸೂಕ್ತ ಆಡಳಿತ ಕ್ರಮಗಳನ್ನು ಅಳವಡಿಸಿಕೊಳ್ಳ ಬೇಕಾಗಿದೆ. ಈ ನಿಟ್ಟಿನಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ಕೇಂದ್ರೀಯ ಬ್ಯಾಂಕು ತನ್ನ ಗಮನವನ್ನು ಮುಂದುವರೆಸಿದೆ. ಆರ್‌ಬಿಐ ಅನುಸರಿಸುವ ಸ್ಥಿರ ಹಣಕಾಸು ನೀತಿಯು ಉದ್ಯಮಕ್ಕೆ ಉತ್ತೇಜನವನ್ನು ನೀಡುವುದರಲ್ಲಿ ಸಂದೇಹ ಇಲ್ಲ.
ಆರ್ಥಿಕವಾಗಿ ಸದೃಢ ರಾಷ್ಟ್ರವಾಗಿ ಮುಂದುವರಿಯುತ್ತಿರುವ ಭಾರತ ಯಾವುದೇ ಒಂದು ಪ್ರತಿಗಾಮಿ ನಿರ್ಧಾರ ತೆಗೆದುಕೊಂಡರೂ ಅದು ಆರ್ಥಿಕತೆಗೆ ನೇರ ಹೊಡೆತ ನೀಡುವ ಸಾಧ್ಯತೆ ಇದೆ. ಆದುದರಿಂದ ಬೆಳವಣಿಗೆಗೆ ಅಡ್ಡಿಯಾಗದಂತೆ ಹಣದುಬ್ಬರದ ನಿಯಂತ್ರಣ ಮಾಡುವ ಕೇಂದ್ರೀಯ ಬ್ಯಾಂಕಿನ ಹೊಣೆಯರಿತ ಹೆಜ್ಜೆಗಳು ಹಣಕಾಸು ಮಾರುಕಟ್ಟೆಯ ಸ್ಥಿರತೆಗೂ ಪೂರಕವಾಗಿದೆ.
- ಡಾ.ಎ.ಜಯ ಕುಮಾರ ಶೆಟ್ಟಿ
ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಪ್ರಾದ್ಯಾಪಕರು
ಶ್ರೀ.ಧ.ಮಂ.ಕಾಲೇಜು (ಸ್ವಾಯತ್ತ), ಉಜಿರೆ
9448154001
ajkshetty@sdmcujire.in
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ