ಮಂಗಳೂರು: ವೆನ್‍ಲಾಕ್‍ನಲ್ಲಿ ಕ್ಯಾಥ್ ಲ್ಯಾಬ್ ಸ್ಥಾಪನೆಗೆ ನಿರ್ಧಾರ

Upayuktha
0


ಮಂಗಳೂರು: ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ಹೃದಯ ರೋಗಿಗಳಿಗೆ ಸಂಬಂಧಿಸಿದಂತೆ ಉನ್ನತ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲು ಕ್ಯಾಥ್ ಲ್ಯಾಬ್ ವ್ಯವಸ್ಥೆಯನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್.ಎಂ.ಪಿ ತಿಳಿಸಿದ್ದಾರೆ.


ಅವರು ಸೋಮವಾರ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೆನ್‍ಲಾಕ್ ಆಸ್ಪತ್ರೆಗೆ ಸಾಕಷ್ಟು ಸಂಖ್ಯೆಯಲ್ಲಿ ಹೃದಯ ಸಂಬಂಧಿ ಕಾಯಿಲೆಯ ರೋಗಿಗಳು ಬರುತ್ತಿದ್ದು, ಅವರಿಗೆ ಉನ್ನತ ದರ್ಜೆಯ ಚಿಕಿತ್ಸೆಯನ್ನು ನೀಡುವುದು ಅವಶ್ಯಕವಾಗಿರುತ್ತದೆ. ರೋಗಿಗಳಿಗೆ ಸ್ಟಂಟ್ ಅಳವಡಿಸಲು ಸೇರಿದಂತೆ ಪ್ರಮುಖ ಚಿಕಿತ್ಸೆಗಳಿಗೆ ಕ್ಯಾಥ್ ಲ್ಯಾಗ್ ಅವಶ್ಯವಾಗಿದೆ. ಆಸ್ಪತ್ರೆ ಆವರಣದಲ್ಲಿ ಇದಕ್ಕಾಗಿ ಸ್ಥಳ ಲಭ್ಯವಿದ್ದು, ಅದಕ್ಕೆ ಸಾಕಷ್ಟು ಮೂಲಸೌಲಭ್ಯ ಅಗತ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವರು ಕೂಡಾ  ವೆನ್ ಲಾಕ್‍ನಲ್ಲಿ ಕ್ಯಾಥ್ ಲ್ಯಾಬ್ ಸ್ಥಾಪಿಸಲು  ಉತ್ಸುಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.


ಪ್ರಸ್ತುತ ವೆನ್‍ಲಾಕ್‍ನಲ್ಲಿ ಕ್ಲಿನಿಕಲ್ ಸೇವೆ ಮಾಡುತ್ತಿರುವ ಕೆ.ಎಂ.ಸಿ ಸಂಸ್ಥೆಯು ಕ್ಯಾಥ್ ಲ್ಯಾಬ್ ಸ್ಥಾಪಿಸುವ ಬಗ್ಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಕೆಎಂಸಿ ತಿಳಿಸಿದೆ.


ವೆನ್‍ಲಾಕ್ ಆಸ್ಪತ್ರೆಗೆ ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿ ಹೊಸ ವೈದ್ಯರು ಸೇವೆಗೆ ಬಂದಿದ್ದಾರೆ. ನ್ಯೂರೋಸರ್ಜನ್, ಕಾರ್ಡಿಯಾಕ್ (ಸಿಟಿವಿಎಸ್),  ಪ್ಲಾಸ್ಟಿಕ್ ಸರ್ಜರಿ, ಕ್ಯಾನ್ಸರ್ ಸರ್ಜರಿ, ಮೂತ್ರಪಿಂಡ ಸರ್ಜರಿ ಸೇರಿದಂತೆ ಉನ್ನತ ತಜ್ಞ ವೈದ್ಯರು ಆಸ್ಪತ್ರೆಯ ಸೇವೆಯಲ್ಲಿದ್ದಾರೆ ಎಂದು ವೆನ್‍ಲಾಕ್ ಅಧೀಕ್ಷಕಿ ಡಾ. ಜೆಸಿಂತಾ ತಿಳಿಸಿದರು.


ನೂತನವಾಗಿ ನಿರ್ಮಿಸಲಾದ ವೆನ್‍ಲಾಕ್ ಹೊಸ ಸರ್ಜಿಕಲ್ ಬ್ಲಾಕ್‍ನ ಸಂಪೂರ್ಣ ಬಳಕೆಗೆ  ಅಗತ್ಯವಾಗಿ ಬೇಕಾದ ಎಲ್ಲ ಕಾಮಗಾರಿ ಮತ್ತು ಉಪಕರಣಗಳ ಖರೀದಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಅತಿ ಶೀಘ್ರದಲ್ಲಿ ಬಳಕೆಗೆ ಲಭ್ಯಗೊಳಿಸುವಂತೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು. ಹೊಸ ಸರ್ಜಿಕಲ್ ಬ್ಲಾಕ್‍ಗೆ  ವೈದ್ಯಕೀಯ ಸಲಕರಣೆ ಮತ್ತು ಯಂತ್ರೋಪಕರಣಗಳನ್ನು ಹೊಸದಾಗಿ ಖರೀದಿಸಿ ಅಳವಡಿಸಲು ಆರೋಗ್ಯ ಸಚಿವರು ಸೂಚಿಸಿರುತ್ತಾರೆ. ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ರೂ.6.97 ಕೋಟಿ ಮತ್ತು ಆರೋಗ್ಯ ರಕ್ಷಾ ಸಮಿತಿಯಿಂದ ರೂ. 2 ಕೋಟಿ ವೆಚ್ಚದಲ್ಲಿ ಖರೀದಿಸಲು ಸಭೆ ತೀರ್ಮಾನಿಸಿತ್ತು. ಅಲ್ಲದೆ ಹೊಸ ಬ್ಲಾಕ್‍ಗೆ ರೂ.5 ಕೋಟಿ ವೆಚ್ಚದಲ್ಲಿ ಅಗತ್ಯ ವೈದ್ಯಕೀಯ ಸಲಕರಣೆ ನೀಡುವುದಾಗಿ ಕೆಎಂಸಿ ತಿಳಿಸಿತು.


ವೆನ್‍ಲಾಕ್ ಆಸ್ಪತ್ರೆಯ ಹೊರರೋಗಿ ವಿಭಾಗ ಕಟ್ಟಡದ ಸ್ವಚ್ಛತೆ ಸೇರಿದಂತೆ ಸಂಪೂರ್ಣ ನಿರ್ವಹಣೆಯನ್ನು ಮಾಡಲು  ಹಾಗೂ ಆಸ್ಪತ್ರೆಯಲ್ಲಿ ನರ್ಸ್‍ಗಳ ಸಂಖ್ಯೆಯು ಹಂತ ಹಂತವಾಗಿ ಹೆಚ್ಚಿಸಲು ಕೆಎಂಸಿ ಒಪ್ಪಿದೆ.


ವೆನ್‍ಲಾಕ್ ಆವರಣದಲ್ಲಿ ಹಾದು ಹೋಗಿರುವ ರೈಲ್ವೆ ಸ್ಟೇಷನ್ ರಸ್ತೆಯನ್ನು ಸಂಚಾರಕ್ಕೆ ನಿರ್ಬಂಧಿಸಿ,  ಪರ್ಯಾಯ ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿಗಳು ಸ್ಮಾಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ಕೆ, ಆರೋಗ್ಯ ಇಲಾಖೆ ಅಧಿಕಾರಿ ಡಾ. ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top