ತಿರುಮಲ ಬೆಟ್ಟ : ಕಲಿಯುಗದ ಕಲ್ಪದೃಮನಾದ ಶ್ರೀನಿವಾಸನ ಕರುಣಾ ದೃಷ್ಟಿ ಬಹಳ ದೊಡ್ಡದು. ಅದನು ಅರಿತು ಬಾಳುವ ಮೂಲಕ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಉಡುಪಿ ಭಂಡಾರ ಕೇರಿ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ಅವರು ಬುಧವಾರ ತಿರುಮಲದಲ್ಲಿ ಟಿಟಿಡಿ ಸಕಲ ಗೌರವ ಆದರದೊಂದಿಗೆ ಶ್ರೀನಿವಾಸನ ದರ್ಶನ ಪಡೆದ ನಂತರ ದೇಗುಲದ ಆವರಣದ ವಿಮಾನ ಶ್ರೀ ನಿವಾಸನ ಬಳಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಸಂದೇಶ ನೀಡಿದರು. ದೇವರ ಅನುಗ್ರಹ ದಿಂದ ಜ್ಞಾನ ಮತ್ತು ಕಾರುಣ್ಯದ ಮಳೆ ನಮ್ಮ ಮೇಲೆ ಸದಾ ಧಾರೆಯಾಗಿ ಹರಿಯಬೇಕು. ವೆಂಕಟೇಶನು ಕಲ್ಯಾಣಕಾರಕ. ಭಕ್ತಿ ಯಿಂದ ಬೇಡಿದಾಗ ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಹೆದ್ದೈವ. 'ವೇಂ' ಎಂದರೆ ಕಷ್ಟ ಗಳು. 'ಕಟ' ಎಂದರೆ ಕತ್ತರಿಸಿ ಹಾಕುವ ಲೋಕದ ಮಹಾ ದೈವ ಆಗಿದ್ದಾನೆ. ಯುಗಾಂತರದಿಂದ ಋಷಿ, ಮುನಿಗಳು, ಸಾಧು - ಸಂತರು, ದಾಸ ವರೇಣ್ಯರು ಈತನನ್ನು ಅರ್ಚಿಸಿ ಆರಾಧಿಸಿದ್ದಾರೆ. ಹಾಗಾಗಿ ನಾವೆಲ್ಲರೂ ಈ ವೆಂಕಟ ನನ್ನು ಮೊರೆ ಹೋಗಬೇಕು. ಆಗ ಬದುಕು ಮಂಗಳಕರ ವಾಗುತ್ತದೆ ಎಂದರು.
ಲೌಕಿಕ ಜೀವನದ ನಿರ್ವಹಣೆ ಮಾಡುವಾಗ ನಾವು ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅವುಗಳು ನಿರ್ಮೂಲನೆ ಆಗಲಿ ಎಂದು ಯಾರು ಯಾರನ್ನೋ ನಂಬುತ್ತೇವೆ. ಹಣ, ನೆಮ್ಮದಿ ಕಳೆದುಕೊಂಡು ಮತ್ತೆ ಮತ್ತೆ ಸಂಕಟದಲ್ಲೇ ಬೀಳುತ್ತೇವೆ. ಲೋಕದ ಸಮಸ್ಯೆಗಳನ್ನು ನಿವಾರಿಸುವ ದೈವ ನಮ್ಮ ಮನದಲ್ಲಿಯೇ ಇದ್ದರೂ ಅವನ ಸ್ಮರಣೆ ಮರೆಯುತ್ತೇವೆ. ಪುಣ್ಯ ಕ್ಷೇತ್ರಗಳ ದರ್ಶನ ನಮಗೆ ದೇವರ - ಗುರುಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುತ್ತವೆ. ಇದನ್ನು ಅರ್ಥ ಮಾಡಿಕೊಂಡು, ಜ್ಞಾನ, ಭಕ್ತಿ ಮತ್ತು ವೈರಾಗ್ಯ ದಯಪಾಲಿಸು ಎಂದು ವೆಂಕಟೇಶ ನಲ್ಲಿ ಪ್ರಾರ್ಥನೆ ಮಾಡಬೇಕು ಎಂದು ಶ್ರೀ ವಿದ್ಯೇಶ ತೀರ್ಥ ರು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅಶೋಕ್, ಉದ್ಯಮಿ ರಾಮಚಂದ್ರ, ಕೃಷ್ಣ ಕದರಿ, ಗಿರೀಶ, ವಕೀಲ ಸೂರ್ಯ ನಾರಾಯಣ ರಾವ್, ಜಯರಾಂ, ರಮೇಶ್, ಗೋಪಾಲಕೃಷ್ಣ ಇದ್ದರು.
ಸಂಸ್ಥಾನ ಪೂಜೆ:
ದರ್ಶನಕ್ಕೂ ಮುನ್ನ ಸೋಸಲೆ ಶ್ರೀ ವ್ಯಾಸರಾಜರ ಮಠದ ಲೋಕ ಪಾವನ ಭವನದಲ್ಲಿ ಶ್ರೀ ಗಳು ಸಂಸ್ಥಾನ ಪೂಜೆ ನೆರವೇರಿಸಿ ಭಕ್ತರಿಗೆ ತೀರ್ಥ, ಫಲ, ಮಂತ್ರಾಕ್ಷತೆ ಮತ್ತು ಪ್ರಸಾದ ವಿತರಣೆ ಮಾಡಿದರು. ಪ್ರಖ್ಯಾತ ವಿದುಷಿ ಶುಭಾ ಸಂತೋಷ ಮತ್ತು ತಂಡದಿಂದ ಶ್ರೀ ವಿದ್ಯೇಶ ವಿಠಲ ಅಂಕಿತ ಕೃತಿಗಳ ಗಾಯನ ಕಛೇರಿ ನಡೆಯಿತು. ಸಹ ಗಾಯನದಲ್ಲಿ ಪೂರ್ಣಿಮಾ, ಮೃದಂಗ ದಲ್ಲಿ ವಿಶ್ವಜಿತ್, ವಯಲಿನ್ ನಲ್ಲಿ ಅರ್ಚನಾ, ಸಹಕರಿಸಿದರು.
ಬೆಂಗಳೂರಿನ ಗಿರಿನಗರದ ಭಂಡಾರ ಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಬುಧವಾರ ತಿರುಪತಿ - ತಿರುಮಲ ದಲ್ಲಿ ಟಿಟಿಡಿ ಗೌರವಾದರದೊಡನೆ ಶ್ರೀ ವೆಂಕಟೇಶನ ದರ್ಶನ ಪಡೆದರು. ನಿವೃತ್ತ ಐಎಎಸ್ ಅಧಿಕಾರಿ ಅಶೋಕ್, ಉದ್ಯಮಿಗಳಾದ ರಾಮಚಂದ್ರ ಶ್ರೀ ನಿವಾಸ, ಕೃಷ್ಣ ಕದರಿ, ಗಿರೀಶ್ ಅಶ್ವತ್ಥ ನಾರಾಯಣ, ವಕೀಲ ಸೂರ್ಯನಾರಾಯಣ ರಾವ್, ಶ್ರೀ ಮಠದ ರಮೇಶ, ಜಯರಾಂ ಮತ್ತು ಗೋಪಾಲಕೃಷ್ಣ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ