ಮಂಗಳೂರು: ಇತ್ತೀಚೆಗೆ ನಗರದ ವಿಠೋಬಾ ದೇವಸ್ಥಾನ ರಸ್ತೆಯಲ್ಲಿರುವ ವಿಶೇಷ ವಿಕಲಚೇತನ ವಿದ್ಯಾರ್ಥಿಗಳಿಗಾಗಿರುವ ಸೇವಾ ಭಾರತಿ (ರಿ.) ಯ ವತಿಯಿಂದ ನಡೆಸಲ್ಪಡುವ ಚೇತನಾ ಬಾಲ ವಿಕಾಸ ಕೇಂದ್ರ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಂದ ಮಂಗಳೂರಿನ ಪುರಭವನದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನವು ಪ್ರೇಕ್ಷಕರ ಮನ ಗೆದ್ದು ವಿಜೃಂಭಣೆಯಿಂದ ಜರಗಿತು.
ವಿಕಲ ಚೇತನ ಮಕ್ಕಳಾದರೂ ಪರಾವಲಂಬನೆ ಇಲ್ಲದೇ ಸ್ವತಂತ್ರರಾಗಿ ನಟಿಸಿ ಪುರಭವನದಲ್ಲಿ ತುಂಬಿ ತುಳುಕಿದ ಕಲಾಪ್ರೇಮಿಗಳನ್ನು ನಿಬ್ಬೆರಗುಗೊಳಿಸಿದರು. ನೃತ್ಯ, ಹಾಡು, ಕುಣಿತ... ಹೀಗೆ ಬೇರೆ ಬೇರೆ ಕಾರ್ಯಕ್ರಮಗಳ ಮಧ್ಯೆಯೂ ಯಕ್ಷಗಾನ ರಂಜಿಸಿತು. ನೃತ್ಯ, ಅಭಿನಯ, ಕಲಾವಿದರ ಹೊಂದಾಣಿಕೆ ಎಲ್ಲೂ ರಾಜಿ ಮಾಡಿಕೊಳ್ಳದೇ ಸಶಕ್ತರಾಗಿ, ಆತ್ಮಾಭಿಮಾನದಿಂದ ಪಾತ್ರಗಳೇ ಆಗಿ ಮೆರೆದರು. ಸಮಾಜದಲ್ಲಿ ತಮಗೆ ಯಾರದೇ ಅನುಕಂಪ ಬೇಡ; ಪ್ರೋತ್ಸಾಹ ನೀಡಿ ಸಾಕು... ಎನ್ನುವ ಹಾಗೆ ಯುಕ್ತ ಗಾನವನ್ನು ಕಳೆಗಟ್ಟಿಸಿದರು.
ಜಾಂಬವಂತನಾಗಿ- ದೇವೇಶ, ಶ್ರೀಕೃಷ್ಣನಾಗಿ- ಶೀತಲ್, ಬಲರಾಮನಾಗಿ- ಕಿರಣ್, ನಾರದನಾಗಿ- ದಿವ್ಯಜ್ಯೋತಿ, ಜಾಂಬವತಿಯಾಗಿ- ಅನುಷಾ ಪಾತ್ರ ನಿರ್ವಹಣೆ ಮಾಡಿದರು.
ಈ ಸಂಸ್ಥೆಯ ವಿಶ್ವಸ್ಥರಾದ ವಿನೋದ್ ಶೆಣೈ ಅವರು ಈ ವಿದ್ಯಾಥಿ೯ಗಳ ಬೆನ್ನುತಟ್ಟಿ ಧೈರ್ಯ ತುಂಬಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ನಿರ್ದೇಶಕರಾಗಿ ವರ್ಕಾಡಿ ರವಿ ಅಲೆವೂರಾಯರು ಇದ್ದರು. ಸಹಕಾರಿಗಳಾಗಿ ವಿಜಯಲಕ್ಷ್ಮೀ ಎಲ್. ಎನ್. ಶ್ರೀಮತಿ ವಾಣಿ, ಶ್ರೀಮತಿ ಚಂಪಾ, ನರಸಿಂಹರಾಜು ವಿದ್ಯಾರ್ಥಿಗಳನ್ನು ಮುನ್ನಡೆಸಿದ್ದರು. ಯೂಶಾನ್ ಎ೦. ಪೂಜಾರಿ ವೇಷಭೂಷಣದಲ್ಲಿ ಸಹರಿಸಿದ್ದರು.
ಹಿಮ್ಮೇಳ ಕಲಾವಿದರಾಗಿ ಲಕ್ಷೀನಾರಾಯಣ ಹೊಳ್ಳ, ಸ್ಕ೦ದ ಕೊನ್ನಾರ್, ವರ್ಕಾಡಿ ಮಧುಸೂದನ ಅಲೆವೂರಾಯ ಮಕ್ಕಳಿಗೆ ಸಾಥ್ ನೀಡಿದರು.
ವಿಕಲ ಚೇತನರಾದರೂ ಉಳಿದವರಿಗೆ ಬಿಟ್ಟಿಲ್ಲ; ಇವರಿಗೆ ಸಮಾಜದ ಬೆಂಬಲ ಬೇಕು ಎಂದು ಜನರು ಮಾತನಾಡುತ್ತಾ ಸಾಗುವುದು ಕಂಡುಬರುತ್ತಿತ್ತು. ಹೌದು! ಬನ್ನಿ ಬಾಂಧವರೇ 'ಅವರಿಗಾಗಿ ಮಿಡಿಯೋಣ. ಅವರೇ ಸಿದ್ಧಪಡಿಸಿದ ಗೃಹ ಬಳಕೆಗೆ, ನಿತ್ಯೋಪಯೋಗಕ್ಕಾಗಿ ಬಳಸುವ ವಸ್ತುಗಳನ್ನು ಖರೀದಿಸಿ ಅವರಿಗೆ ಆರ್ಥಿಕ ಬೆಂಬಲ ನೀಡೋಣ. ದೇವರಂತಹ ಈ ಮಕ್ಕಳಿಗೆ ದೇವರ ಅನುಗ್ರಹವಿರಲಿ ಎಂದು ಕೋರೋಣ.
- ವರ್ಕಾಡಿ ರವಿ ಅಲೆವೂರಾಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ