'ವಸುಧೈವ ಕುಟುಂಬಕಂ' ಕಲ್ಪನೆ ನಮಗೆ ಯಾವ ಏಳುಬೀಳುಗಳನ್ನಾದರೂ ಸಹಿಸುವ ಶಕ್ತಿ ನೀಡಿದೆ: ಡಾ. ಎಂ.ಎಸ್. ಮೂಡಿತ್ತಾಯ

Upayuktha
0

  • ‘ಜಾಗತಿಕ ಆರ್ಥಿಕ ಪ್ರಕ್ಷುಬ್ದತೆ- ವ್ಯವಹಾರಗಳ ರೂಪಾಂತರ ಹಾಗೂ ಪುನಶ್ಚೇತನ ಪ್ರಕ್ರಿಯೆ’
  • ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ




ಬೆಂಗಳೂರು: ‘ಭಾರತದ ಸಾಂಪ್ರದಾಯಿಕ ಅರಿವು ಹಾಗೂ ಶ್ರೀಮಂತ ಸಾಂಸ್ಕೃತಿಕ ಪರಂಪರೆಗಳು ಭಾರತೀಯರು ಯೋಚಿಸುವ ಹಾಗೂ ಯೋಜಿಸುವ ದಿಕ್ಕುಗಳನ್ನು ವಿಭಿನ್ನವಾಗಿ ನಿರೂಪಿಸಿವೆ. ಇಡೀ ಜಗತ್ತನ್ನೇ ಒಂದು ಕುಟುಂಬ ಎಂದು ಸದಾ ಭಾವಿಸುವ, ಹಾಗೆಯೇ ಜೀವಿಸುವ ಪ್ರಕ್ರಿಯೆಯೂ ನಮ್ಮಲ್ಲಿ, ನಮಗೇ ಅರಿವಿಲ್ಲದಂತೆ ನೆಲೆನಿಂತಿದೆ. ಇದರಿಂದ ಎಂತದ್ದೇ ಭೌಗೋಳಿಕ ಪ್ರಕ್ಷುಬ್ದತೆ ನಮ್ಮನ್ನು ಕಂಗಾಲಾಗಿಸುವುದಿಲ್ಲ. ತತ್‍ಕ್ಷಣದಲ್ಲಿ ಏಳುಬೀಳುಗಳಾದರೂ ಚೇತರಿಕೆಯ ಹಾದಿಯಲ್ಲಿ ಸಾಗುವುದನ್ನು ನಮ್ಮ ಪರಂಪರೆ ನಮಗೆ ಕಲಿಸಿದೆ. 2023ರಲ್ಲಿ ಇಡೀ ವಿಶ್ವ, ಹವಾಮಾನ ವೈಪರೀತ್ಯ ಹಾಗೂ ರಾಜಕಾರಣಗಳ ಕಾರಣಗಳಿಗಾಗಿ ಆರ್ಥಿಕ ಹಿಂಜರಿಕೆಯನ್ನು ಕಂಡಿದೆ. ಭಾರತ ಮಾತ್ರ ತದೇಕಚಿತ್ತತೆಯಿಂದ ಶೇಕಡಾ 7ರಷ್ಟು ಜಿ.ಡಿ.ಪಿ. ಪ್ರಗತಿ ಸಾಧಿಸಿ ಇಡೀ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದೆ. ನಮ್ಮ ಪ್ರಾಚೀನ ಭಾರತದಲ್ಲಿ ಪ್ರತಿಪಾದಿತವಾದ ಸಂವಾದ, ಬದ್ಧತೆ ಹಾಗೂ ಸಮ್ಮಾನ (ಗೌರವ ಸಲ್ಲಿಕೆ) ಎಂಬ ಮೌಲ್ಯಗಳು ಇದಕ್ಕೆ ಕಾರಣ’ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ನುಡಿದರು.



ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‍ಮೆಂಟ್ ವಿಭಾಗ ಆಯೋಜಿಸಿದ್ದ, ‘ಜಾಗತಿಕ ಆರ್ಥಿಕ ಪ್ರಕ್ಷುಬ್ದತೆ- ವ್ಯವಹಾರಗಳ ರೂಪಾಂತರ ಹಾಗೂ ಪುನಶ್ಚೇತನ ಪ್ರಕ್ರಿಯೆ’, ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.



‘ಇಂದಿನ ಔದ್ಯಮಿಕ ಜಗತ್ತಿನಲ್ಲಿ ಸ್ವತಂತ್ರವಾಗಿ ಸಾಧನೆ ಮಾಡುತ್ತೇವೆ ಎಂಬ ಪರಿಸ್ಥಿತಿ ಇಲ್ಲ. ನಾವು ಪರಸ್ಪರ ಕೊಡು-ಕೊಳೆ ಹಾಗೂ ವಿನಿಮಯಗಳಿಂದ ಇಡೀ ಜಗತ್ತನ್ನು ಸಮರ್ಪಕವಾಗಿ ಸಂಪರ್ಕಿಸಬೇಕು. ಡಿಜಿಟಲ್ ಯುಗದಲ್ಲಿ ನಮ್ಮ ವಿದ್ಯಾರ್ಥಿಗಳು ಕಲಿಕೆ, ಹಳತನ್ನು ಮರೆಯುವ ಪ್ರಕ್ರಿಯೆ ಹಾಗೂ ಹೊಸದನ್ನು ಕಲಿಯುವ ವಿಧಾನಗಳನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಯುವ ಜನಾಂಗ ಯಾವುದೇ ರೀತಿಯ ಪ್ರಕ್ಷುಬ್ದತೆಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ. ಭಾರತವೇ ಇರಲಿ, ಬೇರೆ ರಾಷ್ಟ್ರಗಳೇ ಇರಲಿ, ದಿನ ನಿತ್ಯ ಹೊಸ ಹೊಸ ಅನ್ವೇಷಣೆಗಳಿಂದ ನವ ನವೀನ ರೂಪ ಪಡೆದುಕೊಳ್ಳುವ ತಂತ್ರಜ್ಞಾನವನ್ನು ಬೋಧಿಸುವ ಶ್ರೇಷ್ಠ ವಿದ್ಯಾಲಯಗಳನ್ನು ಸ್ಥಾಪಿಸಬೇಕು, ಹಾಗೂ ಬಹುಪಾಲು ಬಂಡವಾಳವನ್ನು ಹೂಡಬೇಕು. ಆಗ ಮಾತ್ರ ಈ ವಿದ್ಯಾಸಂಸ್ಥೆಗಳು ಮುಂದಿನ ತಲೆಮಾರಿನ ಸಾಮಥ್ರ್ಯವನ್ನು ಅಧಿಕಗೊಳಿಸಲು ಸಾಧ್ಯವಾಗುತ್ತದೆ. ಕೇವಲ ದಶಕಗಳ ಹಿಂದೆ ಭಾರತವನ್ನು ಭಿಕ್ಷಾಪಾತ್ರೆಯೊಂದಿಗೆ ಪರಿಚಯಿಸಲಾಗುತ್ತಿತ್ತು. ಆದರೆ ಇದೀಗ ಇಡೀ ವಿಶ್ವದಲ್ಲಿಯೇ ಆರ್ಥಿಕ ಸುಸ್ಥಿರತೆಯ ಸೂಚ್ಯಂಕದಲ್ಲಿ ಐದನೇ ಸ್ಥಾನದಲ್ಲಿದೆ. ಇನ್ನು ಒಂದೆರಡು ವರ್ಷಗಳಲ್ಲಿಯೇ ವಿಶ್ವದ ಸೂಚ್ಯಂಕದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಇದಕ್ಕೆ ಕಾರಣ- ಸ್ವಾತಂತ್ರೋತ್ತರ ಭಾರತದಲ್ಲಿ ಹಗಲಿರುಳು ಉತ್ತಮ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಂಡು ಬಂದ ನಮ್ಮ ಉನ್ನತ ಶಿಕ್ಷಣದ ವಿದ್ಯಾಸಂಸ್ಥೆಗಳು’ ಎಂದು ಅವರು ವಿಶ್ಲೇಷಿಸಿದರು.



ಸಮ್ಮೇಳನದಲ್ಲಿ ಪ್ರಮುಖ ಭಾಷಣ ಮಾಡಿದವರು ಮಲೇಶಿಯಾದ ಏಶಿಯಾ ಪೆಸಿಫಿಕ್ ಯೂನಿವರ್ಸಿಟಿಯ ಉಪಕುಲಪತಿ ಡಾ. ಮುರಳಿ ರಾಮನ್. ಅವರು ತಮ್ಮ ಭಾಷಣದಲ್ಲಿ ‘ಕೋವಿಡ್ ಈಗ ಹೊಸ ರೂಪ ತಾಳಿ ಮತ್ತೆ ದಾಳಿ ಇಡುತ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ ಬರುವ ವರ್ಷಗಳಲ್ಲಿ ಕೋವಿಡ್ ಅನೇಕ ರೂಪಾಂತರಗಳಲ್ಲಿ ಸಾಕಷ್ಟು ಕಾಡುತ್ತಲೇ ಇರುತ್ತದೆ. ಇದರಿಂದ ನಮ್ಮ ವಿಶ್ವದ ಒಟ್ಟಾರೆ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಆಗಿದೆ. ಇದಕ್ಕಿಂತ ಮಿಗಿಲಾಗಿ ದೇಶ ದೇಶಗಳ ನಡುವಣ ಭೀಕರ ಯುದ್ಧಗಳು, ಆರ್ಥಿಕತೆಯನ್ನು ಮತ್ತಷ್ಟು ಕಂಗೆಡಿಸಿವೆ. ನಾಗರೀಕತೆಯ ಹೆಸರಿನಲ್ಲಿ ನಾವು ಪ್ಲಾಸ್ಟಿಕ್ ಬಳಕೆಯನ್ನು ಹೇರಳವಾಗಿ ಮಾಡಿದ್ದೇವೆ, ಇಡೀ ಭೂಮಿಯ ಪರಿಸರವನ್ನು ಮಲಿನಗೊಳಿಸಿದ್ದೇವೆ. ಇದೂ ಕೂಡ ಸುಸ್ಥಿರ ಆರ್ಥಿಕತೆಗೆ ಧಕ್ಕೆ ತಂದಿದೆ. ನಾವು ಕೃತಕ ಬುದ್ದಿಮತ್ತೆಯ ಜತೆ ಮಾನವ ಸಹಜ ಬುದ್ದಿವಂತಿಕೆಯ ಅಭಿವೃದ್ದಿಗೂ ಪ್ರಯತ್ನಿಸಬೇಕು. ಆಗ ಬೇಕು-ಬೇಡಗಳ ವಿಮರ್ಶೆ ಸಾಧ್ಯವಾಗುತ್ತದೆ ಹಾಗೂ ಅಪಾಯಗಳಿಂದ ನಮ್ಮನ್ನು ಸಂರಕ್ಷಿಸಿಕೊಳ್ಳಲು ಸುಸ್ಥಿರ ಮಾರ್ಗವನ್ನು ಕಂಡುಕೊಳ್ಳಬಹುದು’, ಎಂದರು.



ಸಮ್ಮೇಳನದಲ್ಲಿ ಅಮೆರಿಕಾದ ಕೆಟೆರಿಂಗ್ ಯೂನಿವರ್ಸಿಟಿಯ ಮ್ಯಾನೇಜ್‍ಮೆಂಟ್ ಡೀನ್ ಡಾ. ಹಸೀಬ್ ಜೆ. ಅಹಮದ್, ಮಲೇಶಿಯಾದಿಂದ ಪ್ರೊ.. ಮೊಹಮ್ಮದ್ ಫಲಾಹಟ್, ಥೈಲ್ಯಾಂಡ್‍ನ ಏಶಿಯನ್ ಇನ್ಸ್ಟಿಟ್ಯೂಟ್ ಅಫ್ ಟೆಕ್ನಾಲಜಿಯ ಕಾರ್ಯಕ್ರಮ ಅಧಿಕಾರಿ ರಣಧೀರ್ ಮಂದಡಿ, ಫಿಲಿಪೈನ್ಸ್‍ನ ಮರಿಯಾನೊ ಮಾರ್ಕೊಸ್ ಸ್ಟೇಟ್ ಯೂನಿವರ್ಸಿಟಿಯ ಅಂತರಾಷ್ಟ್ರೀಯ ಸಂಪರ್ಕ ವಿಭಾಗದ ಮುಖ್ಯಸ್ಥೆ ಡಾ. ಅರ್ಲಿನ್ ಗೊನ್ಸಾಲೆಸ್, ದುಬೈ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅನಂತ್ ರಾವ್ ಹಾಗೂ ದೇಶಾದ್ಯಂತ ಇರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪ್ರಮುಖರು ಪಾಲ್ಗೊಂಡಿದ್ದರು. ಅಲ್ಲದೆ ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡು ತಮ್ಮ ವಿಚಾರಗಳನ್ನು ಮಂಡಿಸಿದರು.



ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಮ್ಯಾನೇಜ್‍ಮೆಂಟ್ ವಿಭಾಗದ ಡೀನ್ ಡಾ. ಎಸ್. ನಾಗೇಂದ್ರ ಸಮ್ಮೇಳನದ ಪ್ರಸ್ತುತತೆಯನ್ನು ವಿವರಿಸಿದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ, ಸಂಸ್ಥೆಯ ಅಕಾಡೆಮಿಕ್ ಡೀನ್ ಡಾ. ವಿ. ಶ್ರೀಧರ್, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ಎನ್. ನಳಿನಿ, ಅಂತರಾಷ್ಟ್ರೀಯ ವ್ಯವಹಾರಗಳ ಡೀನ್ ಡಾ. ಜೆ. ಸುಧೀರ್ ರೆಡ್ಡಿ, ಮ್ಯಾನೇಜ್‍ಮೆಂಟ್ ವಿಭಾಗದ ಮುಖ್ಯಸ್ಥೆ ಡಾ. ಶಿಲ್ಪಾ ಅಜಯ್ ಹಾಗೂ ಇತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top