ಪುತ್ತೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಆಮದು ಬಗ್ಗೆ ಸುದ್ದಿಗಳು ವಿವಿಧ ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದೆ. ಇದರ ಜೊತೆ ಅಡಿಕೆ ಮಾರುಕಟ್ಟೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಹೀಗಾಗಿ ಅಡಿಕೆ ಆಮದು ತಡೆಗೆ ಸರ್ಕಾರಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘವು ಒತ್ತಾಯಿಸಿದೆ. ಈ ಬಗ್ಗೆ ಪ್ರಧಾನಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲೆ ಸಂಸದರಿಗೆ ಪತ್ರದ ಮೂಲಕ ಒತ್ತಾಯಿಸಿದೆ.
ಅಡಿಕೆ ಬೆಳೆಗಾರರು ಈಗಾಗಲೇ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಕೆಲವು ಸಮಯಗಳಿಂದ ಉತ್ತಮ ಧಾರಣೆಯ ಕಾರಣದಿಂದ ಕೃಷಿ ಕೆಲಸಗಳು ಸರಾಗ ಸಾಗುತ್ತಿತ್ತು. ಕೃಷಿ ಬೆಳೆವಣಿಗೆಗೂ ಕಾರಣವಾಗಿತ್ತು. ಧಾರಣೆ ಏರಿಕೆಯ ಬೆನ್ನಲ್ಲೇ ಅಡಿಕೆ ಆಮದು ಸುದ್ದಿಗಳು ಕೇಳಿಬರುತ್ತಿತ್ತು. ಅಲ್ಲಲ್ಲಿ ಇಲಾಖೆಗಳು ಪತ್ತೆ ಕಾರ್ಯ ಮಾಡುತ್ತಿದ್ದರು. ಇದೀಗ ಅಡಿಕೆ ಆಮದು ಸುದ್ದಿಗಳು ಮತ್ತೆ ಅಡಿಕೆ ಬೆಳೆಗಾರರನ್ನು ಕಂಗೆಡಿಸುತ್ತಿದೆ. ಇದು ಅಡಿಕೆ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತಿದೆ. ಅಡಿಕೆ ಬೇಡಿಕೆ ಇರುವಿಕೆಯ ಬಗ್ಗೆ ಮಾಹಿತಿ ಇದ್ದರೂ ಅನಧಿಕೃತವಾಗಿ ಈಗ ಅಡಿಕೆ ಆಮದು ಸುದ್ದಿಗಳೇ ಹೆಚ್ಚಾಗಿದೆ. ಹೀಗಾಗಿ ಅಡಿಕೆ ಆಮದು ಬಗ್ಗೆ ಸೂಕ್ತವಾದ ಕ್ರಮ ಅಗತ್ಯ ಇದೆ ಎಂದು ಅಡಿಕೆ ಬೆಳೆಗಾರರ ಸಂಘವು ಮನವಿಯಲ್ಲಿ ಒತ್ತಾಯಿಸಿದೆ.
ದಕ್ಷಿಣ ಕನ್ನಡ ಸೇರಿದಂತೆ ಅಡಿಕೆ ಬೆಳೆಯುವ ನಾಡಲ್ಲಿ ಈಗ ಧಾರಣೆ ಏರಿಳಿತವು ಕೃಷಿಕರ ಮನಸ್ಸಿನಲ್ಲಿ ಅಸ್ಥಿರತೆಯನ್ನು ಉಂಟು ಮಾಡುತ್ತಿದೆ. ಹೀಗಾಗಿ ತಕ್ಷಣವೇ ಸರ್ಕಾರ , ಜನಪ್ರತಿನಿಧಿಗಳು ಅಡಿಕೆ ಆಮದು ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅಡಿಕೆ ಮಾರುಕಟ್ಟೆ ಸ್ಥಿರತೆಗೆ ಕಾರಣವಾಗಬೇಕು ಎಂದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಹಾಗೂ ಕಾರ್ಯದರ್ಶಿ ಮಹೇಶ್ ಪುಚ್ಚಪ್ಪಾಡಿ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ







