ಡಿ. 30ರಿಂದ ಅಶೋಕೆಯಲ್ಲಿ ಅತಿರುದ್ರಾಭಿಷೇಕ; ಜನವರಿ 9ರಂದು ಖ್ಯಾಪನೆ

Upayuktha
0


ಗೋಕರ್ಣ: ಶಂಕರಾಚಾರ್ಯರು ಶ್ರೀರಾಮಮಚಂದ್ರಾಪುರ ಮಠವನ್ನು ಸ್ಥಾಪಿಸಿದ ಅಶೋಕೆಯ ಶ್ರೀ ಮಲ್ಲಿಕಾರ್ಜುನ ದೇವರ ಸನ್ನಿಧಿಯಲ್ಲಿ ಈ ತಿಂಗಳ 30 ರಿಂದ 2024ರ ಜನವರಿ 9ರವರೆಗೆ ಅತಿರುದ್ರ ಅಭಿಷೇಕ ಹಮ್ಮಿಕೊಳ್ಳಲಾಗಿದೆ.


30ರಂದು ಬೆಳಿಗ್ಗೆ 6 ರಿಂದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಬೆಳಿಗ್ಗೆ 8.00 ಗಂಟೆಗೆ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ಮಲ್ಲಿಕಾರ್ಜುನನಿಗೆ ಗಂಗಾಜಲ ಅಭಿಷೇಕ ಮಾಡುವ ಮೂಲಕ ಹನ್ನೊಂದು ದಿನಗಳ ಮಹೋತ್ಸವಕ್ಕೆ ಚಾಲನೆ ನೀಡುವರು ಎಂದು ಅತಿರುದ್ರಾಭಿಷೇಕ ಮಹಾಸಮಿತಿ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ತ್ತು ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಅವಿಚ್ಛಿನ್ನ ಪರಂಪರೆಯ 36ನೇ ಯತಿಶ್ರೇಷ್ಠರಾದ ಶ್ರೀರಾಘವೇಶ್ವರ ಸ್ವಾಮೀಜಿಯವರು ಮೂಲಮಠದ ಪುನರುತ್ಥಾನಕ್ಕೆ ಸಂಕಲ್ಪಿಸಿದ್ದು, ಇದಕ್ಕೆ ಪೂರ್ವಭಾವಿಯಾಗಿ ಇಡೀ ಹವ್ಯಕ ಸಮಾಜದ ಪ್ರತಿ ಮನೆಗಳಿಂದ ಆಗಮಿಸುವ ಶಿಷ್ಯರು ಸಾಮೂಹಿಕ ಗುರು ಅಷ್ಟಕ ಪಠಣ ಮತ್ತು ಖ್ಯಾಪನೆ ನಡೆಸಿಕೊಡುವರು.


ಶಂಕರಾಚಾರ್ಯರು ಮೂಲಮಠ ಸ್ಥಾಪನೆ ಮಾಡಿದ ಬಳಿಕ ಗುರುಪರಂಪರೆಯ ಹಲವು ಮಂದಿ ಯತಿಶ್ರೇಷ್ಠರು ಇಲ್ಲಿದ್ದುಕೊಂಡು ಧರ್ಮಕಾರ್ಯಗಳನ್ನು ನಡೆಸುತ್ತಾ ಬಂದಿದ್ದು, ಯಾವುದೋ ಕಾಲಘಟ್ಟದಲ್ಲಿ ಕಾರಣಾಂತರಗಳಿಂದ ಶ್ರೀಮಠ ಇಲ್ಲಿಂದ ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ಪೂರ್ವಾಚಾರ್ಯರಿಗೆ ಆಗಿರಬಹುದಾದ ಮನೋವೇದನೆ, ವ್ಯಥೆಯ ಪರಿಮಾರ್ಜನೆಗಾಗಿ ಸಮಸ್ತ ಸಮಾಜ ಬಾಂಧವರು ಅಂದು ಶ್ರೀಸಂಸ್ಥಾನದವರ ಸಮ್ಮುಖದಲ್ಲಿ ಖ್ಯಾಪನೆ ಮಾಡಲಿದ್ದಾರೆ ಎಂದು ವಿವರಿಸಿದ್ದಾರೆ.


ಖ್ಯಾಪನೆ ಎಂದರೆ, ನಮ್ಮಿಂದ ಆಗಿರಬಹುದಾದ ತಪ್ಪು- ಪ್ರಮಾದಗಳಿಗೆ ಸಮಾಜದ ಪ್ರಾಜ್ಞರ ಸಮ್ಮುಖದಲ್ಲಿ ಕ್ಷಮೆಯಾಚನೆ ಮಾಡಿ, ದೋಷ ಪರಿಮಾರ್ಜನೆಗೆ ಪ್ರಾರ್ಥಿಸುವುದು. ನಮ್ಮ ಪೂರ್ವಜರಿಂದ ಆಗಿರಬಹುದಾದ ಪ್ರಮಾದ ಪರಿಮಾರ್ಜನೆಗೆ ಇಡೀ ಹವ್ಯಕ ಸಮಾಜ ಜನವರಿ 9ರಂದು ಖ್ಯಾಪನೆಗಾಗಿ ಮೂಲಮಠದ ಆವರಣದಲ್ಲಿ ಸಮಾವೇಶಗೊಳ್ಳಲಿದೆ. ಅಂದು ಹವ್ಯಕ ಸಮಾಜದ 15 ಸಾವಿರಕ್ಕೂ ಅಧಿಕ ಶಿಷ್ಯರು ಮೂಲಮಠದ ಆವರಣದಲ್ಲಿ ಸಾಮೂಹಿಕ ಗುರುಅಷ್ಟಕ ಪಠನೆ ಮಾಡುವ ಕಾರ್ಯಕ್ರಮ ಇರುತ್ತದೆ. ಬಳಿಕ ರಾಘವೇಶ್ವರಶ್ರೀಗಳು ಶಿಷ್ಯಕೋಟಿಯನ್ನು ಉದ್ದೇಶಿಸಿ ಆಶೀರ್ವಚನ ನೀಡುವರು.


ರಾಜ್ಯದ ಮೂಲೆ ಮೂಲೆಗಳಿಂದ ಬರುವ 150ಕ್ಕೂ ಹೆಚ್ಚು ರುದ್ರಪಾಠಕರು ಪ್ರತಿದಿನ 11 ಬಾರಿ ರುದ್ರಪಠಣ ಮಾಡುವರು. ಇದಕ್ಕೂ ಮುನ್ನ ಪುಣ್ಯಾಹ, ಕಲಶ ಸ್ಥಾಪನೆ, ಮಹಾನ್ಯಾಸಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಹೇಳಿದ್ದಾರೆ.


ಭರದ ಸಿದ್ಧತೆ: ಹನ್ನೊಂದು ದಿನಗಳ ಕಾಲ ನಡೆಯುವ ಅತಿರುದ್ರ ಅಭಿಷೇಕ ಮತ್ತು ಜನವರಿ 9ರಂದು ನಡೆಯುವ ಖ್ಯಾಪನೆ ಕಾರ್ಯಕ್ರಮಕ್ಕೆ ಅಶೋಕೆಯ ಮೂಲಮಠ ಪರಿಸರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. 15 ಸಾವಿರ ಮಂದಿ ಕೂರಬಹುದಾದ ಬೃಹತ್ ಪೆಂಡಾಲ್ ಮತ್ತು ಊಟೋಪಚಾರದ ವ್ಯವಸ್ಥೆಗೆ ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ ಎಂದು ವಿವರಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top