- ಮಲ್ಲಿಕಾರ್ಜುನ ಇಡೀ ಸಮಾಜದ ಶ್ರೇಯಸ್ಸಿನ ಮೂಲ: ರಾಘವೇಶ್ವರ ಶ್ರೀ
- 150 ರುದ್ರಪಾಠಕರಿಂದ ಪ್ರತಿದಿನ ಸೇವೆ
ಗೋಕರ್ಣ: ಬದುಕಿನ ಎಲ್ಲ ಶ್ರೇಯಸ್ಸಿಗೆ ಗುರು ಮೂಲ. ಶ್ರೀರಾಮಚಂದ್ರಾಪುರ ಮಠಕ್ಕೆ ಅಶೋಕೆ ಮೂಲ. ಇಲ್ಲಿ ಸಾನ್ನಿಧ್ಯ ಕರುಣಿಸಿದ ಮಲ್ಲಿಕಾರ್ಜುನ ಸರ್ವಮೂಲ. ಮಲ್ಲಿಕಾರ್ಜುನ ನಮ್ಮೆಲ್ಲರ ಶ್ರೇಯಸ್ಸಿನ ಮೂಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ನುಡಿದರು.
ಅಶೋಕೆಯ ಮಲ್ಲಿಕಾರ್ಜುನ ಸನ್ನಿಧಿಯಲ್ಲಿ ಶನಿವಾರದಿಂದ ಹನ್ನೊಂದು ದಿನಗಳ ಕಾಲ ನಡೆಯುವ ಅತಿರುದ್ರ ಅಭಿಷೇಕ ಕಾರ್ಯಕ್ರಮವನ್ನು ಮಲ್ಲಿಕಾರ್ಜುನನಿಗೆ ಗಂಗಾಜಲ ಅಭಿಷೇಕ ಮಾಡುವ ಮೂಲಕ ಉದ್ಘಾಟಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಈ ಭಾಗದ ಅತ್ಯಂತ ಪ್ರಾಚೀನವಾದ ಮಲ್ಲಿಕಾರ್ಜುನ ದೇಗುಲ ನಮ್ಮ ಇಡೀ ವ್ಯವಸ್ಥೆಯ ತಾಯಿ ಬೇರು ಇದ್ದಂತೆ; ಮರದ ಮೂಲಕ್ಕೆ ನೀರುಣಿಸಿದರೆ ಅದು ಸಮೃದ್ಧ ಫಲ-ಪುಷ್ಪ ನೀಡುವಂತೆ ಮಲ್ಲಿಕಾರ್ಜುನನಿಗೆ ಸಲ್ಲುವ ಈ ಮಹಾಸೇವೆಯ ಫಲ ಇಡೀ ಸಮಾಜಕ್ಕೆ ಲಭಿಸಲಿದೆ ಎಂದು ಬಣ್ಣಿಸಿದರು.
ಪವಿತ್ರ ಗಂಗಾಜಲದಿಂದ ಅತಿರುದ್ರ ಸಂಖ್ಯೆಯ ಅಭಿಷೇಕವನ್ನು ಮಾಡುವ ಮೂಲಕ ಮಲ್ಲಿಕಾರ್ಜುನನನ್ನು ಸಂಪ್ರೀತಗೊಳಿಸಿ, ಮೂಲ ಮಠವನ್ನು ಮರಳಿ ಕಟ್ಟುವ ಕಾರ್ಯಕ್ಕೆ ಸಮಾಜ ಮುಂದಾಗುತ್ತಿದೆ. ಇದರ ಶುಭ ಫಲ ಇಡೀ ಸಮಾಜಕ್ಕೆ ದೊರಕಲಿ. ಈ ಮಹಾಮಂಗಲದಲ್ಲಿ ಇಡೀ ಸಮಾಜದ ಜನತೆ ರುದ್ರಪಠಣ ಮಾಡುವ ಮೂಲಕ ಸೇವೆ ಸಲ್ಲಿಸಬೇಕು. ಸಾಧ್ಯವಾಗದವರು ಇದಕ್ಕೆ ಸಾಕ್ಷಿಗಳಾಗಿ ಈ ಸ್ವರ್ಣಮಯ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸೂಚಿಸಿದರು.
ಅಭಿಷೇಕ ಮಾಡಿದ ಗಂಗಾಜಲವನ್ನು ಪ್ರಸಾದ ರೂಪದಲ್ಲಿ ಎಲ್ಲ ಸೇವಾರ್ಥಿಗಳಿಗೆ ನೀಡಲಾಗುತ್ತದೆ. ಮಲ್ಲಿಕಾರ್ಜುನನ ಈ ಶಾಶ್ವತ ರಕ್ಷೆ ನಮ್ಮೆಲ್ಲರನ್ನು ರಕ್ಷಿಸಲಿ ಎಂದು ಆಶಿಸಿದರು. ಕೊನೆಯ ದಿನ ಅಂದರೆ ಜನವರಿ 9ರಂದು ನಡೆಯುವ ಖ್ಯಾಪನಾ ಕಾರ್ಯಕ್ರಮದಲ್ಲಿ ಇಡೀ ಹವ್ಯಕ ಸಮಾಜ ಮೂಲ ಮಠ ಪರಿಸರದಲ್ಲಿ ಸೇರಿ, ಸಾಮೂಹಿಕ ಗುರು ಅಷ್ಟಕ ಪಠಿಸುವ ಮೂಲಕ ಗುರುಪರಂಪರೆಯ ಶಾಶ್ವತ ಅನುಗ್ರಹ ಪಡೆಯಬೇಕು ಎಂದು ಹೇಳಿದರು.
ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಸಿಎಫ್‍ಓ ಗಣೇಶ್ ಜೆ.ಎಲ್, ಮಹಾಮಂಡಲ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಭಾರತ ಪ್ರಾಂತ ಉಪಾಧ್ಯಕ್ಷ ರಮಣ ಭಟ್ ಮುಂಬೈ, ವಿವಿವಿ ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ್ ಸುವರ್ಣಗದ್ದೆ, ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಆಡಳಿತಾಧಿಕಾರಿ ಡಾ.ಟಿ.ಜೆ.ಪ್ರಸನ್ನ ಕುಮಾರ್, ಸತ್ಯನಾರಾಯಣ ಶರ್ಮ, ಶಿಕ್ಷಣ ಸಂಯೋಜಕಿ ಅಶ್ವಿನಿ ಹಕ್ರೆ, ಶ್ರೀಮಠದ ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ವಿವಿವಿ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಸಿದ್ದಾಪುರ ಮಂಡಲಾಧ್ಯಕ್ಷ ಮಹೇಶ್ ಚಟ್ನಳ್ಳಿ, ಉತ್ಸವ ಖಂಡದ ಶ್ರೀಸಂಯೋಜಕ ರಾಘವೇಂದ್ರ ಮಧ್ಯಸ್ಥ, ಅತಿರುದ್ರ ಮಹಾಸಮಿತಿ ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ, ಸಹ ಕಾರ್ಯದರ್ಶಿ ರಾಮಚಂದ್ರ ಅಜ್ಜಕಾನ, ಸ್ವಾತಿ ಭಾಗವತ್, ಮುಖ್ಯ ಅರ್ಚಕ ಜನಾರ್ದನ ಭಟ್ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ಮಂಡಲದಿಂದ ಆಗಮಿಸಿದ್ದ 150ಕ್ಕೂ ಅಧಿಕ ರುದ್ರಪಾಠಕರು ಮೊದಲ ದಿನ ರುದ್ರಸೇವೆ ಸಲ್ಲಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ