ಮಂಗಳೂರು: 2025ರ ವೇಳೆಗೆ ದೇಶ ಸಂಪೂರ್ಣವಾಗಿ ಕ್ಷಯರೋಗ ಮುಕ್ತವಾಗಬೇಕು ಎಂಬ ಗುರಿ ಸರ್ಕಾರಕ್ಕಿದೆ. ಈ ನಿಟ್ಟಿನಲ್ಲಿ ಸರ್ವರೂ ಸಹಕರಿಸಿದರೆ ನಿಗದಿತ ಅವಧಿಯೊಳಗೆ ನಮ್ಮ ದೇಶ ಕ್ಷಯ ಮುಕ್ತವಾಗಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಪ್ರಭಾರ) ಡಾ. ರಾಜೇಶ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್, ದ. ಕ. ಜಿಲ್ಲಾ ಕ್ಷಯ ರೋಗ ನಿಯಂತ್ರಣ ಘಟಕ ಮತ್ತು ಭಾರತೀಯ ರೆಡ್ ಕ್ರಾಸ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ "ಕ್ಷಯ ಮುಕ್ತ ಭಾರತ: ಅರಿವು" ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಷಯ ಬ್ಯಾಕ್ಟೀರಿಯಾದಿಂದ ಬರುವ ರೋಗ. ಈ ಕಾಯಿಲೆಯಿಂದ ಸಂಪೂರ್ಣ ಗುಣಮುಖರಾಗುವುದಕ್ಕೆ ಸಾಧ್ಯವಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೂ ಹೋಗಬೇಕೆಂದಿಲ್ಲ. ಮನೆಯೊಳಗಿದ್ದುಕೊಂಡೇ ಚಿಕಿತ್ಸೆ ಪಡೆಯುವ ಸೌಲಭ್ಯವನ್ನು ಸರಕಾರ ಕಲ್ಪಿಸಿದೆ. ಈಗಾಗಲೇ ಸರ್ಕಾರದ ವತಿಯಿಂದ ಕ್ಷಯ ರೋಗಕ್ಕೆ ಉಚಿತ ಔಷಧ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ ಕ್ಷಯ ರೋಗ ಪೀಡಿತರಿಗೆ ಪ್ರತಿ ತಿಂಗಳಿಗೆ 500 ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಹಾಗಾಗಿ ಕ್ಷಯ ರೋಗದ ಬಗ್ಗೆ ಅನಾವಶ್ಯಕ ಭಯ ಬೇಡ. ಆದರೆ, ಇದರ ನಿಯಂತ್ರಣಕ್ಕೆ ಶ್ರಮಿಸಬೇಕಾಗಿರುವುದು ಅತ್ಯಾವಶ್ಯಕ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲೆ ಪ್ರೊ. ಲತಾ ಎ. ಪಂಡಿತ್, ದೇಶದಲ್ಲಿ ಅತಿ ಹೆಚ್ಚು ಕ್ಷಯರೋಗದ ವರದಿಯಾಗುತ್ತಿದೆ. ಕ್ಷಯರೋಗಕ್ಕೆ ಸಂಬಂಧಿಸಿದಂತೆ, ಕೊರೋನಾ ನಂತರ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ. ಜನರಲ್ಲಿರುವ ತಪ್ಪು ಕಲ್ಪನೆ, ಸಂಕೋಚ ಇತ್ಯಾದಿಗಳಿಂದಾಗಿ ಸಾಕಷ್ಟು ಜನ ಚಿಕಿತ್ಸೆ ಪಡೆಯಲು ಮುಂದಾಗುತ್ತಿಲ್ಲ. ಒಂದು ವೇಳೆ ಚಿಕಿತ್ಸೆ ಪಡೆದವರು ಕೂಡ ಔಷಧಗಳನ್ನು ಸಂಪೂರ್ಣವಾಗಿ ಸೇವಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಹಾಗಾಗಿ ಯುವ ಜನತೆ ಈ ಕುರಿತು ಹೆಚ್ಚು ಜಾಗೃತರಾಗಿರಬೇಕು ಎಂದು ತಿಳಿ ಹೇಳಿದರು.
"ಕ್ಷಯ ಮುಕ್ತ ಭಾರತ" ಎಂಬ ವಿಷಯದ ಕುರಿತು ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾ. ಜಿತಿನ್ ಸುರೇಂದ್ರನ್, ಯಾವುದೇ ಕಾಯಿಲೆಯಾದರೂ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯಬೇಕು. ಕೊನೆ ಹಂತದಲ್ಲಿ ಕೆಲವೊಮ್ಮೆ ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೇ ರೋಗಲಕ್ಷಣ ಕಂಡುಬಂದ ಕೂಡಲೇ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ರೆಡ್ ಕ್ರಾಸ್ನ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್., ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೂ ಮುನ್ನಾ ನಗರದ ಅಂಬೇಡ್ಕರ್ ವೃತ್ತದಿಂದ ವಿಶ್ವವಿದ್ಯಾನಿಲಯ ಕಾಲೇಜಿನವರೆಗೂ ಕ್ಷಯ ಮುಕ್ತ ಭಾರತ ಜಾಗೃತಿ ಜಾಥಾ ನಡೆಸಲಾಯಿತು. ದ. ಕ. ಜಿಲ್ಲಾ ರೆಡ್ ಕ್ರಾಸ್ ನಿರ್ದೇಶಕ ಸಿ. ಎ. ಶಾಂತಾರಾಂ ಶೆಟ್ಟಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾದಲ್ಲಿ ನಗರದ ಒಟ್ಟು 17 ಕಾಲೇಜುಗಳಿಂದ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ. ಬದ್ರುದ್ದೀನ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ