ಜೀವನಕ್ಕೆ ಶುದ್ಧತೆ, ಸಿದ್ಧತೆ, ಬದ್ಧತೆ ಅಗತ್ಯ: ರಾಘವೇಶ್ವರ ಶ್ರೀ
ಗೋಕರ್ಣ: ಜೀವನಕ್ಕೆ ಶುದ್ಧತೆ, ಸಿದ್ಧತೆ ಮತ್ತು ಬದ್ಧತೆ ಅಗತ್ಯ. ಈ ಮೂರು ಇದ್ದಲ್ಲಿ ಯಾವ ಸಾಧನೆಯನ್ನಾದರೂ ಮಾಡಬಹುದು. ಆದ್ದರಿಂದ ಮುಂದಿನ ದತ್ತಜಯಂತಿಯಂದು ಶಿಲಾಮಯ ಗರ್ಭಗುಡಿಯಲ್ಲಿ ದತ್ತಾತ್ರೇಯನ ಪ್ರತಿಷ್ಠಾಪನೆ ನಡೆಯಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.
ಯಲ್ಲಾಪುರದಲ್ಲಿ ದತ್ತಮಂದಿರದಲ್ಲಿ ದತ್ತಜಯಂತಿ ಮತ್ತು ಶಿಲಾಮಯ ದತ್ತಮಂದಿರಕ್ಕೆ ಭೂಮಿಪೂಜೆ ನೆರವೇರಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು. ದತ್ತಸೇವೆ, ದತ್ತಹವನ, ದತ್ತನ ಪೂಜೆ ದತ್ತಜಯಂತಿಯಂದು ನಡೆಸುವುದು ಶ್ರೇಯಸ್ಕರ. ಆದರೆ ಈ ವಿಶೇಷ ಸಂದರ್ಭದಲ್ಲಿ ಭವ್ಯವಾದ ದತ್ತಮಂದಿರಕ್ಕೆ ಭೂಮಿಪೂಜೆ ನಡೆದಿರುವುದು ವಿಶೇಷ ಎಂದರು.
ಒಂದು ವರ್ಷದ ಅವಧಿಯಲ್ಲಿ ಈ ಭವ್ಯ ಮಂದಿರ ನಿರ್ಮಾಣವಾಗಲಿದೆ. ಇದುವರೆಗೆ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಿದ್ದು, ಇದೀಗ ಮಂದಿರ ಪೂರ್ಣಗೊಳಿಸುವುದು ಶಿಷ್ಯರೆಲ್ಲರ ಬದ್ಧತೆ ಎಂದು ಹೇಳಿದರು.
ಸಾಮ್ರಾಜ್ಯ ಸ್ಥಾಪನೆಗೆ ಇಲ್ಲಿಗೆ ಬಂದದ್ದಲ್ಲ; ದತ್ತನ ಕರೆಗೆ ಓಗೊಟ್ಟು ಸೇವೆ ಸಲ್ಲಿಸಲು ಶ್ರೀಮಠ ಇಲ್ಲಿಗೆ ಬಂದಿದೆ. ಒಳ್ಳೆಯ ಕಾರ್ಯ ನಡೆಯಬೇಕೆಂಬ ಶುದ್ಧಮನಸ್ಸಿನಿಂದ ಮಾಡಿದ ಸೇವೆ ಸರ್ವಶ್ರೇಷ್ಠ. ಯಾವುದೇ ಕೆಲಸ ಮಾಡುವಾಗ ಶುದ್ಧ ಮನಸ್ಸಿನಿಂದ ಮಾಡಬೇಕು. ಆಗ ಮಾತ್ರ ಅದರ ಫಲ ನಮಗೆ ಸಿಗುತ್ತದೆ ಎಂದರು.
ದತ್ತಾತ್ರೇಯ ಎಂದರೆ ಬ್ರಹ್ಮ, ವಿಷ್ಣು, ಮಹೇಶ್ವರರ ಶಕ್ತಿಸ್ವರೂಪ. ದತ್ತನ ಭಕ್ತರು ಕೂಡಾ ಶುದ್ಧತೆ, ಸಿದ್ಧತೆ ಮತ್ತು ಬದ್ಧತೆಯ ಮೂಲಕ ಸೇವೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ದತ್ತಭಿಕ್ಷೆ ಆರಂಭಿಸಲಾಗುತ್ತಿದೆ. ತಮ್ಮ ಹೃದಯವನ್ನು ಭಿಕ್ಷೆಯಾಗಿ ದತ್ತನಿಗೆ ನೀಡಿದವರಿಗೆ, ದತ್ತ ತನ್ನನ್ನು ತಾನೇ ಸಮರ್ಪಿಸಿಕೊಳ್ಳುತ್ತಾನೆ ಎಂದು ಹೇಳಿದರು.
ದತ್ತ ಮತ್ತು ಭಕ್ತರ ನಡುವಿನ ಬಾಂಧವ್ಯದ ಪ್ರತೀಕ ದತ್ತಭಿಕ್ಷೆ. ಸಮಾಜದ ಎಲ್ಲರೂ ಈ ಸೇವೆ ಸಲ್ಲಿಸಲು ಅವಕಾಶ ಇರುತ್ತದೆ. ಮನಃಪೂರ್ವಕವಾಗಿ ನೀಡುವ ಯಾವುದು ಕೂಡಾ ದೇವರಿಗೆ ಪ್ರಿಯವಾಗುತ್ತದೆ. ದತ್ತಮಂದಿರದ ಉದ್ಧಾರಕ್ಕಾಗಿ ಅಲ್ಲ; ನಮ್ಮ ಆತ್ಮೋದ್ಧಾರದ ಸಲುವಾಗಿ ದತ್ತಭಿಕ್ಷೆ ನೀಡಿ ಎಂದು ಸಲಹೆ ನೀಡಿದರು.
ಸಂಕಲ್ಪ ಟ್ರಸ್ಟ್‍ನ ಪ್ರಮೋದ್ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಡಿನ ಭವಿಷ್ಯದ ಪ್ರಜೆಗಳನ್ನು ಸೃಷ್ಟಿಮಾಡುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ಬಾನ್ಕುಳಿ ಮಠದಲ್ಲಿ ಗೋಸ್ವರ್ಗ, ರಾಮಾಯಣ ಮಹಾಸತ್ರ, ವಿಶ್ವ ಗೋ ಸಮ್ಮೇಳನ, ರಾಜ್ಯದ ಉದ್ದಗಲಕ್ಕೂ ಗೋಶಾಲೆಗಳ ನಿರ್ಮಾಣದ ಮೂಲಕ ಗೋಜಾಗೃತಿ ಕಾರ್ಯವನ್ನು ಮಾಡುತ್ತಿರುವ ರಾಘವೇಶ್ವರ ಶ್ರೀಗಳು ನಮ್ಮ ಕಾಲದಲ್ಲಿ ಪವಾಡಗಳನ್ನೇ ಸೃಷ್ಟಿಸುತ್ತಿದ್ದಾರೆ ಎಂದು ಬಣ್ಣಿಸಿದರು.
ಕೊಳಗೀಬೀಸ್ ಸ್ವಾಮೀಜಿಯವರು, ಶಿವಾನಂದ ಯೋಗಿಗಳು ತಪಸ್ಸು ಕೈಗೊಂಡ ಈ ಪುಣ್ಯಕ್ಷೇತ್ರ ಮುಂದಿನ ದಿನಗಳಲ್ಲಿ ಉಚ್ಛ್ರಾಯಸ್ಥಿತಿಗೆ ಏರಿ ಭವ್ಯ ಮಂದಿರವಾಗಿ ಹೊರಹೊಮ್ಮಲಿದೆ ಎಂದರು.
ಸಂಕಲ್ಪ ಟ್ರಸ್ಟ್‌ನ ಪ್ರಶಾಂತ್ ಹೆಗಡೆ, ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ಮುಖ್ಯ ಹಣಕಾಸು ಅಧಿಕಾರಿ ಜೆ.ಎಲ್.ಗಣೇಶ್, ಆಡಳಿತ ಖಂಡದ ಶ್ರೀಸಂಯೋಜಕ ಪ್ರಮೋದ್ ಪಂಡಿತ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ