ವಿದ್ಯಾಗಿರಿ (ಮೂಡುಬಿದಿರೆ): ಶಿಶುವಿನಹಾಳದ ಸಂತ ಶಿಶುನಾಳ ಷರೀಫರು ಹಾಡಿದಂತೆ ‘ನಿನ್ನೊಳಗಾ ನೀನು ತಿಳಿದು ನೋಡಣ್ಣ’... ಎಂಬ ಮಾತಿನ ಸಾಕ್ಷಾತ್ಕಾರ ಆಗಬೇಕಾದರೆ, ನೀವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 29ನೇ ಆಳ್ವಾಸ್ ವಿರಾಸತ್‌ಗೆ ಬರಬೇಕು.
ಅಬ್ಬಬ್ಬಾ...! ಇಲ್ಲಿ ನೋಡುಗರನ್ನು ವಿಶೇಷವಾಗಿ ಸೆಳೆಯುತ್ತಿರುವುದು ಹಳೇ ಕಾಲದ ನೆನಪನ್ನು ಮತ್ತೆ ಮತ್ತೆ ಮರುಕಳಿಸುವಂತೆ ಮಾಡುತ್ತಿರುವ ಕರಕುಶಲ ವಸ್ತುಗಳ ಮಾರಾಟ ಮತ್ತು ಪ್ರದರ್ಶನ. ನಮ್ಮನ್ನೇ ನಾವು ಮತ್ತೊಮ್ಮೆ ತಿಳಿದುಕೊಳ್ಳುವಂತೆ ಮಾಡುತ್ತದೆ.
ಸೋಲಾರ್ ಕಮ್ಮಾರಿಕೆ:
ಕಬ್ಬಿಣದ ಕೆಲಸ ಮಾಡುವ ಕಮ್ಮಾರರನ್ನು ನೋಡಿದ್ದೇವೆ. ಕೃಷಿ ಸಲಕರಣೆಗಳಿಗೆ ಅವರೇ ಆಧಾರ. ಆದರೆ, ಅವರ ಕೆಲಸದ ‘ಕೊಟ್ಯ’ದಲ್ಲಿ ಶ್ರಮ ವಹಿಸಿ ಬೆಂಕಿ ಹಾಕಿ ಕಬ್ಬಿಣ ಕಾಯಿಸುವ ಕಷ್ಟ ಹೇಳ ತೀರದು. ಅದಕ್ಕಾಗಿ ಸೌರಶಕ್ತಿ ಬಳಸಿ ಬೆಂಕಿ ಉರಿಸುವ ಯಂತ್ರವನ್ನು ಸೆಲ್ಕೊ ಕಂಪನಿಯು ಅಭಿವೃದ್ಧಿ ಪಡಿಸಿ ನೀಡಿದೆ. ಕಾರ್ಕಳ ಬೈಲೂರು ವಲಯ ಯರ್ಲಪಾಡಿ ಕಾಂತರಗೋಳಿಯ ವೈ ದಾಮೋದರ ಆಚಾರ್ಯ ಮತ್ತು ಪುಷ್ಪಾವತಿ ದಂಪತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದಲ್ಲಿ ಇದನ್ನು ಅನುಷ್ಠಾನ ಮಾಡಿಕೊಂಡಿದ್ದು, ಮೇಳದಲ್ಲಿ ಪ್ರಾತ್ಯಕ್ಷಿಕೆ ನೀಡುತ್ತಿದ್ದಾರೆ. ಕೇವಲ ಪ್ರಾತ್ಯಕ್ಷಿಕೆ ಮಾತ್ರವಲ್ಲ, ಸ್ಥಳದಲ್ಲೇ ನಿಮಗೆ ಅನುಕೂಲಕರವಾದ ಕತ್ತಿಯನ್ನು ಉತ್ತಮ ಕಬ್ಬಿಣ ಬಳಸಿ ಮಾಡಿಕೊಡುತ್ತಿದ್ದಾರೆ.
ಇನ್ನು ಕೃಷಿ ಯಂತ್ರೋಪಕರಣಗಳು, ಧಾನ್ಯಗಳು, ಸಸ್ಯಗಳು, ವಿದೇಶಿ ಹಣ್ಣುಗಳು ಕೈಯಲ್ಲೇ ತಯಾರಿಸಿದ ಆಟದ ವಸ್ತುಗಳು ಮಾತ್ರ ವಲ್ಲದೆ, ವಿಶೇಷವಾಗಿ ಗಮನ ಸೆಳೆಯುವ ಕರಕುಶಲ ವಸ್ತುಗಳೂ ಇವೆ. ಪ್ಲಾಸ್ಟಿಕ್ ವಸ್ತುಗಳಿಗೆ ಹೆಚ್ಚಿನ ಒತ್ತು ನೀಡುವ ಕಾಲದಲ್ಲಿಯೂ, ಕಚ್ಚಾ ವಸ್ತುಗಳಿಂದ ತಯಾರಿಸುವ ಕರಕುಶಲ ವಸ್ತುಗಳೆಡೆಗೆ ಜನರು ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಅದರಲ್ಲೂ ತೆಂಗಿನ ಗೆರಟೆಯಿಂದ ವಿವಿಧ ಬಗೆಯ ಕರಕುಶಲ ವಸ್ತುಗಳ ತಯಾರಿಕೆ ಮತ್ತು ತೆಂಗಿನ ನಾರುವಿನಿದ ಮಾಡಿದ ಹೂ ಕುಂಡವು ವಿಭಿನ್ನ ಮತ್ತು ವೈಶಿಷ್ಟ್ಯವುಳ್ಳದ್ದಾಗಿದೆ.
ಜನ ಪ್ಲಾಸ್ಟಿಕ್ ಅವಲಂಬಿಯಾಗುತ್ತಿರುವ ಸಂದರ್ಭದಲ್ಲಿ ನೈಸರ್ಗಿಕವಾಗಿ ತಯಾರು ಮಾಡುವ ಕರಕುಶಲ ವಸ್ತುಗಳ ಬಳಕೆಯ ಅಗತ್ಯತೆಯನ್ನು ಸಂದೇಶವನ್ನಾಗಿ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.
ತೆಂಗಿನ ಗೆರಟೆಯ ಪೆನ್ ಸ್ಟ್ಯಾಂಡ್, ಕಲಶ, ಹಕ್ಕಿಗೂಡು, ಚಮಚ, ಚಾ ಕಪ್, ಸ್ಮರಣಿಕೆ ಹೀಗೆ ಇನ್ನಿತರ ವಸ್ತುಗಳು ನೋಡುಗರ ಮನಮುಟ್ಟುವಂತೆ ತೋರುತಿತ್ತು.
ಗೆರಟೆ, ಹೂ ಕುಂಡ ತುಂಡಾಗಿ ಬಿಸಾಡಿದರೂ ಪರಿಸರಕ್ಕೆ ಯಾವ ಹಾನಿಯೂ ಉಂಟಾಗುವುದಿಲ್ಲ . ಭೂಮಿಗೆ ಬಿದ್ದಾಕ್ಷಣ ಮಣ್ಣಿನಲ್ಲಿ ಬೆರೆತು ಫಲವತ್ತತೆಯನ್ನು ಹೆಚ್ಚಿಸುತ್ತದೆ. ಹೂ ಕುಂಡವೂ ಹೆಚ್ಚುವರಿ ನೀರನ್ನು ಹೊರಸೂಸಿ, ಮಣ್ಣಿನ ತೇವಾಂಶತೆ ಯನ್ನು ಕಾಪಾಡುತ್ತದೆ. ಇದರಿಂದ ಗಿಡಗಳಿಗೆ ಪೂರಕವಾಗುವ ಅಂಶಗಳು ಈ ಕುಂಡದ ಮೂಲಕ ದೊರೆಯುತ್ತದೆ ಎನ್ನುತ್ತಾರೆ ಮಾರಾಟಗಾರರು.
ಕೃಷಿ ಬದುಕು ಎಂದರೆ ಕೇವಲ ದುಡಿಮೆ ಮಾತ್ರವಲ್ಲ, ಕೃಷಿ ಜೊತೆಗಿನ ಆಚರಣೆ, ಆಟೋಟ ಸಂಸ್ಕೃತಿಗಳೂ ಸೇರಿವೆ. ಕೃಷಿ ಸಂಸ್ಕೃತಿಯ ಆಟಗಳೇ ಸೊಗಸು. ಅಳಗುಳಿ ಮಣೆ, ಚೆನ್ನೆ ಮಣೆಯಾಟವನ್ನು ಮನೆಯಲ್ಲಿ ಒಟ್ಟಿಗೆ ಕೂತು ಆಡುವುದೊಂದು ಸ್ವರ್ಗ. ಈ ಆಟವನ್ನು ಮಕ್ಕಳು ಮತ್ತೊಮ್ಮೆ ಆಡಲಿ ಎಂಬ ಉದ್ದೇಶದಿಂದ ಮಂಗಳೂರಿನ ವ್ಯಾಪಾರಸ್ಥರೊಬ್ಬರು ಸ್ವತಃ ತಯಾರಿಸಿದ ಆಟದ ಮಣೆಯನ್ನು ಪ್ರದರ್ಶನ ಮತ್ತು ಮಾರಾಟಕ್ಕಿಟಿದ್ದಾರೆ. ಟೋನ್ ಕಿನ್, ಸುರಕರ್ತ, ಹನ್ನೊಂದು ಗೋಲಿ ಇಂತಹ ವಿಶೇಷ ಆಟಗಳನ್ನು ಡಾಡ್ಸ್ ಮತ್ತು ಬಾಕ್ಸ್ ಕಾಯಿಗಳ ಮೂಲಕ ಆಡಲಾಗುತ್ತದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ