ನಿಮ್ಮ ಯಾರದೇ ಮನೆಯ ಮಗ– ಮಗಳು ಇಂಜಿನಿಯರಿಂಗ್ ಮಾಡುತ್ತಿದ್ದಾರೆ ಎಂದರೆ, ಸಂಶಯವೇ ಬೇಡ, ಬಹುತೇಕರು ಕಂಪ್ಯೂಟರ್ ಸೈನ್ಸ್ ಓದುತ್ತಿದ್ದಾರೆ. ಅಥವಾ ಅದರ ಅಕ್ಕಪಕ್ಕದ ಐ.ಎಸ್.ಇ., ಎ.ಐ.ಎಮ್.ಎಲ್., ಡೆಟಾ ಸೈನ್ಸ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ಮುಂತಾದ ವಿಭಾಗಗಳು. 50,000 ಕ್ಕಿಂತ ಹೆಚ್ಚು ರ್ಯಾಂಕ್ ಬಂದು, ದಾನಪ್ಪ-ಬಸಪ್ಪ ಕಾಲೇಜಿನಲ್ಲೂ ಕಂಪ್ಯೂಟರ್ ಸಿಗಲಿಲ್ಲವೆಂದರೆ ಮಾತ್ರ ಮನಸ್ಸಿಲ್ಲದೇ ಮೆಕ್ಯಾನಿಕಲ್, ಸಿವಿಲ್ ಇತ್ಯಾದಿ. ಏಕೆ ಹೀಗೆ? ಕಂಪ್ಯೂಟರ್ ಓದಿದರೆ ನೌಕರಿ ಗ್ಯಾರಂಟಿ, ಹೆಚ್ಚು ಸಂಬಳ, ದೈಹಿಕ ಶ್ರಮವಿಲ್ಲದ ಕೆಲಸ ಇತ್ಯಾದಿ. ಆಗ ದೇಶಕ್ಕೆ ಸಿವಿಲ್ – ಮೆಕ್ಯಾನಿಕಲ್ ಇಂಜಿನಿಯರುಗಳ ಕೊರತೆಯಾಗುತ್ತದೆಂದು ನಾನು ಉಪದೇಶ ಮಾಡಿದರೆ ನಿಮ್ಮನೆ ಮಕ್ಕಳನ್ನು ಕಳಿಸುತ್ತೀರಾ? ಇಲ್ಲಾ ತಾನೆ? ಎಲ್ಲರೂ ಅದನ್ನೇ ಓದಿ ಕಂಪ್ಯೂಟರ್ ಇಂಜಿನಿಯರುಗಳು ಹೆಚ್ಚಾಗಿ ಬಿಡುತ್ತಾರೆ ಎಂದರೆ – ಆದಾಗ ನೋಡೋಣ ಎಂಬ ಉತ್ತರ ಬರುತ್ತದೆ. ಎಲ್ಲರಿಗೂ ಆದಷ್ಟು ಸುಲಭವಾಗಿ, ಬೇಗ, ಹೆಚ್ಚಿನ ಹಣ ಬರಬೇಕು. ತಪ್ಪು ಎನ್ನಲಾಗದು. ಅಡಿಕೆಯ ಕಥೆಯೂ ಇದೇನೆ.
ಸುಲಭದ ಬೆಳೆ: ಹೋಲಿಕೆಯಲ್ಲಿ ಅಡಿಕೆ ಅತ್ಯಂತ ಸುಲಭದ ಹಣದ ಬೆಳೆ. ಪ್ರತಿ ಅಡಿಕೆ ಕಾಯಿಗೆ ಕನಿಷ್ಠ 3 ರೂಪಾಯಿ ಬೆಲೆ. ಇದುವರೆಗೂ ಅಂಥ ದೊಡ್ಡ ರೋಗ-ಕೀಟಗಳಿರಲಿಲ್ಲ. ನೀರು-ಗೊಬ್ಬರ ಕೊಟ್ಟರೆ ಎಂಥ ಮಣ್ಣು – ವಾತಾವರಣದಲ್ಲೂ ಹುಚ್ಚೆದ್ದು ಬೆಳೆಯುತ್ತದೆ. ತೋಟ ನಿರ್ವಹಣೆ ಸುಲಭ. ಆಲಸಿಗಳಿಗೆ, ಗೈರು ಹಾಜರಿ ರೈತರಿಗೆ ಹೇಳಿಮಾಡಿಸಿದ ಬೆಳೆ. 4-5 ವರ್ಷ ಕಾದರೆ ಮುಂದೆ ನಿಶ್ಚಿಂತೆ. ಮರದ ಮೇಲಿರುವ ಫಸಲನ್ನೇ ಗುತ್ತಿಗೆ – ಚೇಣಿ ಕೊಡುವೆನೆಂದರೂ ಖರೀದಿದಾರರ ಪೈಪೋಟಿಯಿದೆ. ರಾಜ್ಯದ ಬೀದರಿನಿಂದ ಚಾಮರಾಜನಗರದವರೆಗೆ ಎಲ್ಲೆಂದರಲ್ಲಿ ಅಡಿಕೆ ನಾಟಿಯಾಗಿದೆ. ನೀರಿಲ್ಲದೇ 2016-17 ರಲ್ಲಿ ಲಕ್ಷಾಂತರ ಎಕರೆ ಅಡಿಕೆ ತೋಟ ಒಣಗಿದರೂ 2019-20 ರಿಂದ ಎಲ್ಲ ನೀರಾವರಿ ಪ್ರದೇಶಗಳಲ್ಲೂ ಅಡಿಕೆ ನೆಲೆಯೂರಿದೆ. ಅಡಿಕೆಗೆ ಬಂದ ಬಂಗಾರದ ಬೆಲೆ ಇದಕ್ಕೆ ಕಾರಣ. ದಾವಣಗೆರೆ ಜಿಲ್ಲೆಯೊಂದರಲ್ಲೇ 2.5 ಲಕ್ಷ ಎಕರೆ ಬಂದಿದೆ. ಉತ್ತರ ಕರ್ನಾಟಕದಲ್ಲೂ ಕಳೆದ 2-3 ವರ್ಷಗಳಿಂದ ಅಡಿಕೆಯ ಹುಚ್ಚು ಹೆಚ್ಚಿದೆ. ಕರ್ನಾಟಕವಲ್ಲದೆ ಕೇರಳ, ತಮಿಳು ನಾಡು, ಆಂಧ್ರ – ತೆಲಂಗಾಣ, ಮಹಾರಾಷ್ಟ್ರ, ಗುಜರಾತ, ಈಶಾನ್ಯ ರಾಜ್ಯಗಳಲ್ಲೂ ಅಡಿಕೆ ಎಲ್ಲ ಜಮೀನು ಆವರಿಸಿಕೊಳ್ಳುತ್ತಿದೆ. ಅಡಿಕೆ ನಾಟಿ ಹೆಚ್ಚಿನವರಿಗೆ ಒಂದು ಕನಸು ಮತ್ತು ಹೆಮ್ಮೆಯ ವಿಷಯ! ಒಂದು ಅಂದಾಜಿನ ಪ್ರಕಾರ ಅಡಿಕೆ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಕರ್ನಾಟಕದಲ್ಲೇ ಸುಮಾರು 18 ಲಕ್ಷ ಎಕರೆ ಅಡಿಕೆ ಇದೆ. ನಾವು ಕೋಕೋ ಬೆಳೆ ಅಧ್ಯಯನಕ್ಕೆ ಓಡಿಸ್ಸಾ ಗಡಿಯ ಆಂಧ್ರದ ಜಿಲ್ಲೆಗೆ ಹೋದಾಗ ನಮಗೆ ಅಚ್ಚರಿ ಕಾದಿತ್ತು. ಒಂದೇ ಬಯಲಿನಲ್ಲಿ 4x4 ಅಡಿ ಅಂತರದಲ್ಲಿ 50 ಸಾವಿರ ಅಡಿಕೆ ಸಸಿ ನೆಟ್ಟಿದ್ದರು. ಭಾರೀ ದುಡ್ಡಾಗುತ್ತದೆ ಎಂಬುದೊಂದು ಬಿಟ್ಟು ಆ ರೈತರಿಗೆ ಅಡಿಕೆ ಕುರಿತು ಹೆಚ್ಚೇನೂ ತಿಳಿದಿರಲಿಲ್ಲ! ನಮ್ಮ ಶಿವಮೊಗ್ಗದ ಸಾಗರದಿಂದಲೇ ಒಯ್ದ ಗಿಡಗಳು. ಯಾರಿಗೆ ಬೇಡ ಅಂತೀರಿ? ಭಾರತದಂತ ಪ್ರಜಾಪ್ರಭುತ್ವದಲ್ಲಿ ಹೇಗೆ ತಡೆಯುತ್ತೀರಿ? ನಾವು ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಬೇರೆಲ್ಲ ಬೆಳೆ-ಉಪಬೆಳೆ-ಅಂತರ ಬೆಳೆ ಕೈಬಿಟ್ಟು, ಕೇವಲ ಅಡಿಕೆ ಬೆಳೆದು ಹಣ ಮಾಡುತ್ತಿರುವಾಗ ಉಳಿದವರಿಗೆ ಬೇಡ ಹೇಳುವ ನೈತಿಕತೆ ಇದೆಯೇ? ಯಾವ ಬಾಯಲ್ಲಿ ಹೇಳುತ್ತೀರಿ?
ಅಡಿಕೆಯ ಭವಿಷ್ಯ: ಅಡಿಕೆ ಆಹಾರದ ವಸ್ತುವೇನಲ್ಲ. ಕೇವಲ ಜಗಿದು ಉಗುಳುವ ಚಟದ ಸರಕು. ಅದರಲ್ಲಿರುವ ಅರೆಕೊಲಿನ್ ಮತ್ತು ಅದರೊಟ್ಟಿಗೆ ಜಗಿಯುವ ತಂಬಾಕು ಕ್ಯಾನ್ಸರ್ ಕಾರಕ. ಇದು ರಫ್ತಿನ ವಸ್ತುವೂ ಅಲ್ಲ. ಹೆಚ್ಚೆಂದರೆ ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನಗಳಿಗೆ ಕಳಿಸಬೇಕು. ಅಂದರೆ ಉತ್ಪಾದನೆಯಾದಷ್ಟನ್ನೂ ನಾವೇ ಜಗಿದು ಉಗುಳಬೇಕು. ಚಟದ ಸರಕಾದ್ದರಿಂದ ’ಮುಖದ ವ್ಯಾಯಾಮಕ್ಕೆ ಅಡಿಕೆ ಅಗಿಯಿರಿ’ ಎಂದು ಪ್ರಚಾರ ಮಾಡುವುದೂ ಕಷ್ಟ. ಅಂದರೆ ಯಾವುದೇ ದೃಷ್ಟಿಕೋನದಲ್ಲೂ ಉತ್ಪಾದನೆ ಮಿತಿ ಮೀರಿ ಅಡಿಕೆ ದರ ಬೀಳಲೇ ಬೇಕು. ಯಾವಾಗ ಎಂಬುದಷ್ಟೇ ಈಗಿರುವ ಪ್ರಶ್ನೆ. ಅಡಿಕೆಯಿಂದ ಬಣ್ಣ, ಟೀ, ಚೊಗರು ಇತ್ಯಾದಿ ಏನೇ ಪರ್ಯಾಯದ ಕಥೆ ಹೇಳಿದರೂ ಅವೆಲ್ಲೂ ವಾಣಿಜ್ಯ ಮಟ್ಟಕ್ಕೇರಿಲ್ಲ. ಆದರೂ ವರ್ಷದಿಂದ ವರ್ಷಕ್ಕೆ ಧಾರಣೆ ಏರುತ್ತಲೇ ಇದೆ. ಪ್ರತಿ ವರ್ಷ 2-3 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಹಿವಾಟು ನಡೆಸುವ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ – ಎಂ.ಡಿ.ಯವರಿಗೂ ಅಡಿಕೆಯ ಬೇಡಿಕೆ – ದರ ಮುಂದೇನಾಗಬಹುದು ಎಂಬ ಅಂದಾಜು – ಮಾಹಿತಿ ಸಿಗುತ್ತಿಲ್ಲ. ಈ ನಡುವೆ ಹಲವಾರು ರೋಗ-ಕೀಟಗಳು ಬಂದು ಒಂದಿಷ್ಟು ಉತ್ಪಾದನೆ ಕಡಿಮೆಯಾಗಿದೆ. ಅಡಿಕೆ ತಾಯಿ ಬೇರಿಲ್ಲದ ಏಕದಳ ಸಸ್ಯ. ಒಣ ಪ್ರದೇಶದಲ್ಲಿ ಬೇಸಿಗೆಯಲ್ಲಿ 3 ತಿಂಗಳು ನೀರು ಕೊಡದಿದ್ದರೂ ಮರವೇ ಸತ್ತು ಹೋಗುತ್ತದೆ. ಈ ವರ್ಷದ ಬರಗಾಲದಲ್ಲಿ ಒಣ ಪ್ರದೇಶಗಳ ಒಂದಿಷ್ಟು ಅಡಿಕೆ ತೋಟ ಬತ್ತಿ ಹೋಗುವುದು ನಿಶ್ಚಿತ. ಕೇಂದ್ರ ಸರ್ಕಾರವಂತೂ ಅಡಿಕೆಗೆ ಎಲ್ಲ ರೀತಿಯ ಸಹಕಾರ ನಿಲ್ಲಿಸಿ ದಶಕ ಕಳೆದಿದೆ. ಸಮಸ್ಯೆಗಳು ಹಲವಿದ್ದರೂ ಪ್ರಸ್ತುತ ನಡೆಯುತ್ತಿರುವ ಸಂಶೋಧನೆ ಅಷ್ಟಕ್ಕಷ್ಟೇ. ಏನೇ ಆದರೂ ಅಡಿಕೆ ಬೆಳೆ ವ್ಯಾಮೋಹ ಹೆಚ್ಚುತ್ತಲೇ ಇದೆ. 22 ಕೊಳವೆ ಬಾವಿ ಕೊರೆಸಿ 3 ಎಕರೆ ಅಡಿಕೆ ಹಾಕಿದ ಮಂಡ್ಯದ ರೈತರೊಬ್ಬರು ನನಗೆ ಗೊತ್ತು. ಏನ್ಮಾಡೋಣ? ನಾವು 2021 ರಲ್ಲಿ ಫಾರ್ಮ್ ಟಿವಿ ನೇರ ಪ್ರಸಾರ ಆರಂಭಿಸಿದಾಗ ಬೆಳೆ ಯೋಜನೆಯಲ್ಲಿ ಅಡಿಕೆ ಹೇಳಲೋ – ಬೇಡವೋ ಎಂಬ ಸಂದಿಗ್ಧತೆ ಬಂತು. ನಾವು ಇದುವರೆಗೆ ಸುಮಾರು 2000 ಕ್ಕೂ ಹೆಚ್ಚು ಟಿವಿ ಕಾರ್ಯಕ್ರಮ ಮಾಡಿದರೂ, ರೋಗ-ಕೀಟ ಹೊರತಾಗಿ, ಅಡಿಕೆ ಬೇಸಾಯದ ಕುರಿತು ಒಂದೂ ಕಾರ್ಯಕ್ರಮ ಮಾಡಿಲ್ಲ. ಆದರೆ ದೈನಂದಿನ ನೇರ ಪ್ರಸಾರದಲ್ಲಿ 10 ರಲ್ಲಿ 8 ಪ್ರಶ್ನೆ ಅಡಿಕೆ ಕುರಿತೇ ಇರುತ್ತದೆ! ನಮ್ಮದು ಒಂದು ರೀತಿಯಲ್ಲಿ ಅಡಿಕೆ ಟಿವಿ.
ಫಾರ್ಮ್ ಟಿವಿ ಸಲಹೆ: ನಾನಿಲ್ಲಿ ಒಂದು ಚಿಕ್ಕ ಕಥೆ ಹೇಳುತ್ತೇನೆ. ನಾನು ಕೃಷಿ ವಿಜ್ಞಾನದ ಓದು ಮುಗಿಸಿ 1993 ರಲ್ಲಿ, ಅಂದರೆ 30 ವರ್ಷಗಳ ಹಿಂದೆ ಊರಿಗೆ ಬಂದಾಗ ಕೂಡ ’ಅಡಿಕೆ ಬೆಳೆ ವಿಸ್ತರಣೆ ಅತಿಯಾಗಿದೆ. ಅಡಿಕೆಗೆ ಭವಿಷ್ಯವಿಲ್ಲ. ಪರ್ಯಾಯವೇ ಸೂಕ್ತ’ ಎಂದು ಭಾರೀ ಚರ್ಚೆ ನಡೆದಿತ್ತು. ನಾನು ಭತ್ತದ ಗದ್ದೆಗೆ ಅಡಿಕೆ ತೋಟ ಹಾಕದೆ ಆ ಕಾಲದಲ್ಲೇ 4 ಲಕ್ಷ ರೂಪಾಯಿ ಸಾಲ ಮಾಡಿ ಗ್ಲಾಡಿಯೋಲಸ್ ಹೂವಿನ ಬೆಳೆ ಮಾಡಿದೆ. ಅದೇ ವರ್ಷ ನನ್ನಂತೆ ಅತಿ ಬುದ್ಧಿವಂತನಲ್ಲದ ನನ್ನ ದೋಸ್ತ-ಸಹಪಾಠಿ ಹೆಗಡೆಕಟ್ಟೆಯ ಸುಬ್ರಹ್ಮಣ್ಯ ಅಡಿಕೆ ತೋಟ ಮಾಡಿದ. ನಾನು ಹೂವಿನ ಬೆಳೆಯಲ್ಲಿ ನಷ್ಟ ಮಾಡಿಕೊಂಡು 2000 ನೇ ಇಸ್ವಿಯಲ್ಲಿ ನನ್ನ ಕಟ್ ಬಾಕಿ ಸಾಲ ತೀರಿಸಲು ಒಂದು ಪಾಲು ಪಿತ್ರಾರ್ಜಿತ ಜಮೀನು ಮಾರಿದೆ. ಅದೇ ವರ್ಷ ಸುಬ್ರಹ್ಮಣ್ಯ ಹೊಸ ಅಡಿಕೆ ದುಡ್ಡಿನಲ್ಲಿ ಭರ್ಜರಿ ಆರ್.ಸಿ.ಸಿ. ಮನೆ ಕಟ್ಟಿಸಿದ. ಮುಂದೆ ನಾನೂ ಉಳಿದ ಜಮೀನಿನಲ್ಲಿ ಅಡಿಕೆ ತೋಟ ಮಾಡಿದೆ, ಅದು ಬೇರೆ ಮಾತು. ಇದರಿಂದ ಬುದ್ಧಿ ಕಲಿತು ನಾನು ’ಅಡಿಕೆ ಬಿದ್ದು ಹೋಗುತ್ತದೆ, ಮಾಡಬೇಡಿ’ ಎಂದು ಯಾರಿಗೂ ಹೇಳುವುದಿಲ್ಲ. ಅಡಿಕೆ ಮುಂದೊಂದು ದಿನ ಕ್ವಿಂಟಾಲಿಗೆ 1 ಲಕ್ಷ ರೂಪಾಯಿ ಆದರೂ ಆಶ್ಚರ್ಯವಿಲ್ಲ. ಈಗ ನಾನು ಫಾರ್ಮ್ ಟಿವಿಯಲ್ಲಿ ಅಡಿಕೆ ನೆಡಬೇಡಿ ಎಂದು ಹೇಳಿ, ಆಮೇಲೆ ಲಕ್ಷ ದಾಟಿದರೆ ನಷ್ಟ ತುಂಬಿ ಕೊಡಲು ಸಾಧ್ಯವೇ? ಹಾಗಾಗಿ ನೀರು ಸಾಕಷ್ಟಿದ್ದು, ತಾಂತ್ರಿಕವಾಗಿ ಹೊಂದುವಂತಿದ್ದರೆ ಅಡಿಕೆ ಪ್ರೀತಿ ಇರುವವರು ಮಾಡಿ. ಮುಂದೆ ಎಲ್ಲರಿಗೂ ಆದದ್ದು ನಿಮಗೂ ಆಗುತ್ತದೆ. ಆದರೆ ಈಗಿಂದಲೇ ಅಡಿಕೆಯೊಂದಿಗೆ ಕಾಫಿ, ಕೋಕೋ, ಕಾಳುಮೆಣಸು, ಜಾಯಿಕಾಯಿ ಮುಂತಾದವನ್ನು ಮಾಡಲು ಯೋಜಿಸಿ ಎಂದು ಫಾರ್ಮ್ ಟಿವಿಯಲ್ಲಿ ಸಲಹೆ ಕೊಡುತ್ತೇನೆ. ಆಶ್ಚರ್ಯವೆಂಬಂತೆ ಮಲೆನಾಡಿನ (ಅತಿ) ಬುದ್ಧಿವಂತ ರೈತರನ್ನು ಬಿಟ್ಟು ಉಳಿದೆಲ್ಲ ರೈತರು ನನ್ನ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡು ಜಾರಿಗೊಳಿಸುತ್ತಿದ್ದಾರೆ.
ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಬೆಳೆಗಾರರದ್ದು ಒಂದು ಹುಂಬ ಧೈರ್ಯವಿದೆ. ಬಯಲು ಸೀಮೆಯ ಅಡಿಕೆ ತೋಟ ಬಹುಕಾಲ ಬಾಳುವುದಿಲ್ಲ; ಹಾಗಾಗಿ ಮುಂದೆ ನಾವೇ ಅಡಿಕೆಯ ರಾಜರು ಎಂದು. ಅದು ತಪ್ಪು ಕಲ್ಪನೆ. ಫಲವತ್ತಾದ ಮಣ್ಣು, ವಿಫುಲ ನೀರು-ಬೆಳಕು-ಗಾಳಿ, ವಿಶಾಲ ಬೆಳೆ ಕ್ಷೇತ್ರವಿರುವ ಬಯಲು ನಾಡಿನಲ್ಲಿ ಅಡಿಕೆ ತುಂಬ ಚೆನ್ನಾಗಿ ಬರುತ್ತಿದೆ. ನೆನಪಿಡಿ, ಅಣೆಕಟ್ಟು-ಕಾಲುವೆ ನೀರಾವರಿ ಇರುವ ಬಯಲು ಸೀಮೆಯ 1 ತಾಲೂಕಿನ ರೈತರು ಮನಸ್ಸು ಮಾಡಿದರೆ ಮಲೆನಾಡಿನ 1 ಜಿಲ್ಲೆಯ ಅಡಿಕೆ ಬೆಳೆದು ಬಿಸಾಕಬಲ್ಲರು. ಎಕರೆವಾರು ಇಳುವರಿ ಮಲೆನಾಡನ್ನು ಮೀರಿಸುತ್ತಿದೆ. ಇದು ಕಾಳುಮೆಣಸು, ಕೋಕೋ, ಕಾಫಿ, ಶುಂಠಿ ಮುಂತಾದ ಬೆಳೆಗಳಲ್ಲೂ ಸಾಬೀತಾಗಿದೆ. ಬಯಲು ಸೀಮೆಯಲ್ಲಿ ಅಡಿಕೆಯ ಸರಾಸರಿ ಉತ್ಪಾದನಾ ವೆಚ್ಚ ಮಲೆನಾಡಿನ ಅರ್ಧದಷ್ಟು. ಹಾಗಾಗಿ ಅಡಿಕೆಗೆ ಕ್ವಿಂಟಾಲಿಗೆ 20-25 ಸಾವಿರ ರೂಪಾಯಿ ಸಿಕ್ಕರೂ ಇವರಿಗೆ ನಷ್ಟವಿಲ್ಲ. ಆದರೆ ಅರ್ಧ-ಮುಕ್ಕಾಲು ಎಕರೆ ಅಡಿಕೆಯಲ್ಲಿ ಕುಟುಂಬ ನಡೆಸುತ್ತಿರುವ ಮಲೆನಾಡಿನ ಬಹುತೇಕ ಬೆಳೆಗಾರರು ಸಂಕಷ್ಟಕ್ಕೆ ಬೀಳುತ್ತಾರೆ. ಯಾವ ಸರ್ಕಾರವೂ ಅಡಿಕೆ ಬೆಳೆಗಾರರಿಗೆ ನಷ್ಟ ಪರಿಹಾರ ಕೊಡಲಾರದು. ಕೊಟ್ಟರೂ ಈ ವರ್ಷದಂತೆ ಎಕರೆಗೆ 2-3 ಸಾವಿರ. ವಿಮಲ್ ಖರ್ಚಿಗೂ ಸಾಲದು! ಇನ್ನು ಹೊರ ದೇಶಗಳಿಂದ ಕಳಪೆ ಅಡಿಕೆ ಆಮದು ವಿಚಾರ. ನನ್ನ ಲೆಕ್ಕದಲ್ಲಿ ಅದು ಅಂಥ ಮಹತ್ವದ ವಿಚಾರವೇ ಅಲ್ಲ. ಕೆಲವೇ ಸಾವಿರ ಕ್ವಿಂಟಾಲು ಕದ್ದುಮುಚ್ಚಿ ಬಂದರೂ ನಮ್ಮಲ್ಲಿರುವ ಉತ್ಪಾದನೆಗೆ ಹೋಲಿಸಿದರೆ ಸಮುದ್ರಕ್ಕೆ ಒಂದು ಚೊಂಬು ನೀರು ಹಾಕಿದಂತೆ. ಮತ್ತೆ ಈಗಾಗಲೇ ಸರ್ಕಾರಗಳು ಕೈಬಿಟ್ಟ ಚಟದ ಸರಕು ಅಡಿಕೆಗೆ ಬೆಂಬಲ ಬೆಲೆ ಕೂಡ ಸಿಗುವುದಿಲ್ಲ.
ಪರ್ಯಾಯ ಬಳಕೆ: ಅಡಿಕೆಯ ಚೊಗರಿನ ಪೇಂಟ್, ಚೈನಾದ ಬಿಂಗ್ ಲಾಂಗ್, ಅಡಿಕೆ ಸಿಪ್ಪೆಯ ಬಟ್ಟೆ – ಗ್ಲಾಸ್ – ವೈನ್ ಇತ್ಯಾದಿಗಳು ಸೀಮಿತ ಪ್ರಮಾಣದಲ್ಲಿ ಬರಬಹುದು. ಆದರೆ ಕಚ್ಛಾ ವಸ್ತು ಇಷ್ಟು ದುಬಾರಿಯಾದರೆ ಅವೆಲ್ಲ ಲಾಭದಾಯಕವಲ್ಲ. ಹಾಗಾಗಿ ಈ ಎಲ್ಲ ಪರ್ಯಾಯಗಳು ಲೇಖನ, ಭಾಷಣ, ಫೇಸ್ಬುಕ್, ವಾಟ್ಸಾಪ್ ಫಾರ್ವರ್ಡ್ ಗಳಿಗೆ ಸೀಮಿತ. ಅಡಿಕೆ ಮಾರಾಟದಲ್ಲಿ ಹಣ ಎಣಿಸಿದ ರೈತರು ಮತ್ತು ಮಾರಾಟ ಸಂಸ್ಥೆಗಳು ಇವ್ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಅಂದಮೇಲೆ ಯಾರಿಗಾಗಿ ಇವೆಲ್ಲ ಸಂಶೋಧನೆ ಮಾಡುತ್ತೀರಿ? ’ವ್ಯಾಪಾರ ಬುದ್ಧಿ ಹೇಳಿದರೆ ಮಾತ್ರ ಮಗ ಮನೆಗೆ ಹಿಂದಿರುಗುತ್ತಾನೆ’. ನಾವು ಹೇಳಿದರಲ್ಲ. ಅಡಿಕೆ ದರ ಬಿದ್ದರೆ ಮಾತ್ರ ಈ ಅಡಿಕೆ ವ್ಯಾಮೋಹ ಕಡಿಮೆಯಾಗುತ್ತದೆ, ಅಷ್ಟೇ.
ಹಾಗಾದರೆ ಮುಂದೇನು? ಅಡಿಕೆ ಎಲೆಚುಕ್ಕೆ ಮತ್ತು ಪರ್ಯಾಯ ಬೆಳೆ ಕುರಿತು ನಾವು ಈ ವರ್ಷ ಮಾರ್ಚಿನಲ್ಲಿ ಸಿರ್ಸಿಯಲ್ಲಿ ಕಾರ್ಯಾಗಾರ ಮಾಡಿದರೆ ಹೆಚ್ಚಿನಂಶ ರೈತರು ಅತ್ತ ತಲೆ ಹಾಕಲಿಲ್ಲ. ಅಂದರೆ ಅಡಿಕೆ ದರ ಕುಸಿಯುವವರೆಗೂ ಅವೆಲ್ಲ ಬಹುತೇಕರಿಗೆ ಬೇಕಿಲ್ಲ. ಆದರೆ ನಾವು ಚರ್ಚಿಸೋಣ. ಎಲ್ಲ ಸವಲತ್ತು ಮತ್ತು ಅಡಿಕೆ ಪ್ರೀತಿ ಇದ್ದರೆ ಅಡಿಕೆ ತೋಟ ಮಾಡಿ. ಮಲೆನಾಡಿನಲ್ಲಿ ಅಡಿಕೆಯೊಂದಿಗೆ ಉತ್ತಮ ಆದಾಯ ತರಬಲ್ಲ ಕಾಫಿ, ಕಾಳುಮೆಣಸು, ಜಾಯಿಕಾಯಿ ಸಮೃದ್ಧವಾಗಿ ಬರುತ್ತವೆ. ಬಯಲು ನಾಡಿನಲ್ಲಿ ಕೋಕೋ ಕೂಡ ಲಾಭದಾಯಕ. ಮಲೆನಾಡಿನಲ್ಲಿ ಏಲಕ್ಕಿ ಚೆನ್ನಾಗಿ ಬರುವುದಾದರೂ, ಮಂಗನ ಕಾಟ, ಇಳುವರಿ ಕಡಿಮೆ, ಕೆಲಸ ಹೆಚ್ಚು. ಹಾಗಾಗಿ ಅಂಥ ಲಾಭ ತರಲಿಕ್ಕಿಲ್ಲ. ಇಂದಿಗೆ 30-40 ವರ್ಷಗಳ ಹಿಂದಿನಂತೆ ನಿಮ್ಮ ತೋಟದಲ್ಲಿ ಕನಿಷ್ಠ 3-4 ಬೆಳೆಗಳಿದ್ದರೆ ಅಡಿಕೆ ದರ ಬಿದ್ದರೂ ಬದುಕಬಹುದು. ಈಗಿರುವ ಅಡಿಕೆ ತೋಟದಲ್ಲೇ ಒಂದೆಕರೆ ಕಾಫಿಯಲ್ಲಿ 1-1.5 ಲಕ್ಷ, ಜಾಯಿಕಾಯಿಂದ 75 ಸಾವಿರ, ಕಾಳುಮೆಣಸಿನಿಂದ 2-3 ಲಕ್ಷ ರೂಪಾಯಿ ದುಡಿಯಬಹುದು, ಮತ್ತು ಹಲವರು ದುಡಿಯುತ್ತಿದ್ದಾರೆ. ನೀವಿನ್ನೂ ಕಥೆ ಹೇಳುತ್ತ ಕುಳಿತರೆ, ನಿಮ್ಮಿಷ್ಟ. ಜೊತೆಗೆ ಸಾಧ್ಯವಿದ್ದವರು ಜೇನು ಕೃಷಿ, ನಾಟಿ ಕೋಳಿ ಸಾಕಣೆ, ಆಡು-ಕುರಿ ಸಾಕಣೆಯಂಥ ಉಪ ಉದ್ಯೋಗಗಳನ್ನು ಮಾಡಬಹುದು. ಅಡಿಕೆ ತೋಟದ ಸುತ್ತ ಉತ್ತಮ ತಳಿಯ ಕಸಿ ಹಲಸಿನ ಗಿಡ ನೆಟ್ಟರೂ ಉತ್ತಮ ಆದಾಯವಿದೆ. ಬಹು ಬೇಡಿಕೆಯ ಅಪ್ಪೆ ಮಿಡಿ ಮಾವು ಕೂಡ ತೋಟದಂಚಿನಲ್ಲಿ ಬಿಸಿಲಿದ್ದಲ್ಲಿ ಸೂಕ್ತ. ಇನ್ನು ತೆರೆದ ಬಿಸಿಲಿನ ಜಾಗವಿದ್ದರೆ ಮೊಗ್ಗಿನ ಉತ್ಪಾದನೆಗೆ ದಾಲ್ಚಿನ್ನಿ (ಚಕ್ಕೆ) ಕೂಡ ಎಕರೆಗೆ 2 ಲಕ್ಷ ರೂಪಾಯಿ ಆದಾಯ ತರಬಲ್ಲದು.
ಅಡಿಕೆಗೆ ಪರ್ಯಾಯ: ನಮಗೆಲ್ಲ ಬೇಕಿರುವುದು ಆದಾಯ – ಹಣ. ಅಡಿಕೆ – ಕಾಫಿ – ತೆಂಗು ಯಾವುದೂ ಅಲ್ಲ. ಈಗ ಅಡಿಕೆಯಲ್ಲಿ ಎಕರೆಗೆ ಸರಾಸರಿ 3 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಅದರಲ್ಲಿ ಖರ್ಚು ಕಳೆಯಬೇಕು. ಅಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೆಚ್ಚು ತಲೆಬಿಸಿಯಿಲ್ಲದೆ ಹಲವಾರು ವರ್ಷ ನಿರಂತರವಾಗಿ ಬರುವಂತಿದ್ದರೆ ನಮಗೆ ಅಡಿಕೆಯೇ ಬೇಕಿಲ್ಲ. ಈ ನಿಟ್ಟಿನಲ್ಲಿ ನಾವು ಫಾರ್ಮ್ ಟಿವಿಯಲ್ಲಿ ಸಿಲ್ವರ್ ಓಕ್ + ಕಾಳುಮೆಣಸು + ಕಾಫಿ ಸಂಯೋಜನೆ ಹೇಳುತ್ತಿದ್ದೇವೆ. ಸದ್ಯದ ದರದಲ್ಲಿ ಈ ಮಿಶ್ರ ಬೆಳೆ ಎಕರೆಗೆ ವರ್ಷಕ್ಕೆ ಏನಿಲ್ಲವೆಂದರೂ 6 ರಿಂದ 8 ಲಕ್ಷ ರೂಪಾಯಿ ದುಡಿಯುತ್ತಿದೆ. ನೀರಿಲ್ಲದೆ 21 ಎಕರೆ ಫಲ ಕೊಡುತ್ತಿರುವ ಅಡಿಕೆ ತೋಟ ಒಣಗಿದಾಗ ಹಟಕ್ಕೆ ಬಿದ್ದು ಕೇವಲ 10% ನೀರಿನಲ್ಲಿ ಇಂಥ ತೋಟ ಮಾಡಿ ಗೆದ್ದ ಒಣ ಬಯಲು ಸೀಮೆ ಚಿತ್ರದುರ್ಗದ ಡಾ. ಪ್ರಶಾಂತ್ ಇದಕ್ಕೊಂದು ಮಾದರಿ. ಇನ್ನು ತೆಂಗು + ಕಾಳುಮೆಣಸು + ಜಾಯಿಕಾಯಿ + ಕೋಕೋ/ಕಾಫಿ – ಮಿಶ್ರ ಬೆಳೆಯಲ್ಲೂ ಎಕರೆಗೆ ಕನಿಷ್ಠ 4-5 ಲಕ್ಷ ರೂಪಾಯಿ ಆದಾಯ ಸಾಧ್ಯ. ಮಾಡಲು ಮನಸ್ಸಿಲ್ಲದವರ ಕಾಳುಮೆಣಸಿಗೆ ಕೊಳೆ ರೋಗ, ಕಾಫಿಗೆ ಬೋರರ್, ತೆಂಗಿಗೆ ನುಸಿ ಇತ್ಯಾದಿ ಇತ್ಯಾದಿ. ಮನಸ್ಸಿದ್ದರೆ, ಅನಿವಾರ್ಯವಿದ್ದರೆ ಇವೆಲ್ಲದಕ್ಕೂ ಪರಿಹಾರವಿದೆ. ಸಾವಿರಾರು ರೈತರು ಲಕ್ಷಾಂತರ ಎಕರೆಯಲ್ಲಿ ಇವೆಲ್ಲವನ್ನೂ ಮಾಡುತ್ತಿದ್ದಾರೆ. ತೆರೆದ ಹೊಲ, ಕಡಿಮೆ ಮಳೆ, ಸಾಕಷ್ಟು ನೀರು ಇದ್ದರೆ ತೆರೆದ ಏಕಬೆಳೆ ಕೋಕೋದಿಂದಲೂ ಎಕರೆಗೆ ವರ್ಷಕ್ಕೆ 2.5-3 ಲಕ್ಷ ರೂಪಾಯಿ ಆದಾಯವಿದೆ. ಖಾಲಿ ಹೊಲವಿದ್ದು ನೀರು ಕಡಿಮೆಯಿದ್ದರೆ ಮಳೆಯಾಶ್ರಿತ ಬೆಳೆಯಾದ ಹಲಸಿನಲ್ಲಿ ಎಕರೆಗೆ ವರ್ಷಕ್ಕೆ 2-3 ಲಕ್ಷ ರೂಪಾಯಿ ದುಡಿಯಬಹುದು. ನೀರೇ ಇಲ್ಲವೆಂದಾದರೆ ಕೆಂಪು ಮಣ್ಣಿನ ಹೊಲದಲ್ಲಿ ಗೋಡಂಬಿಯಿಂದ ಎಕರೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಸಂಪಾದಿಸಬಹುದು.
ಪರ್ಯಾಯಗಳಿವೆ. ನೋಡುವ – ಮಾಡುವ ಮನಸ್ಸು ಬೇಕು. ನೆನಪಿಡಿ, ಅಡಿಕೆ ದರ ಬಿದ್ದರೆ ಸಿದ್ಧರಾಮಯ್ಯ, ಮೋದಿ ಖಂಡಿತ ನಿಮ್ಮ ನೆರವಿಗೆ ಬರಲಾರರು. ಈಗಲೇ ಚುರುಕಾಗಿ ಪರ್ಯಾಯ ಬೆಳೆ, ಮಿಶ್ರಬೆಳೆ, ಉಪಬೆಳೆ, ಉಪ ಉದ್ಯೋಗ ಆರಂಭಿಸಿ ಬದುಕುವ ದಾರಿ ಸುರಕ್ಷಿತ ಮಾಡಿಕೊಳ್ಳುವುದು ಜಾಣತನ. ಬೆಂಕಿ ಬಿದ್ದ ಮೇಲೆ ಬಾವಿ ತೋಡುವ ಚಾಳಿ ಬಿಟ್ಟರೆ ಒಳ್ಳೆಯದು. ಅಡಿಕೆ ರೋಗದಿಂದ ನಾಶವಾದರೆ ಅಥವಾ ಬೆಲೆ ಪಾತಾಳಕ್ಕಿಳಿದರೆ ಅದೊಂದನ್ನೇ ನಂಬಿಕೊಂಡವರ ಬದುಕು ದುಸ್ತರವಾಗಬಹುದು, ಹುಶ್ಶಾರ್.
ಒಟ್ಟಾಗಿ ಬೆಳೆಯೋಣ. ನಮಸ್ಕಾರ.
- ಡಾ. ವೆಂಕಟರಮಣ ಹೆಗಡೆ,
ಸಂಪಾದಕರು, ಶ್ರಮಜೀವಿ ಕೃಷಿ ಮಾಸಪತ್ರಿಕೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ