ಶರವೇಗದಲ್ಲಿ ಬೆಳವಣಿಗೆ ಕಾಣುತ್ತಿರುವ ಸ್ಟಾರ್ಟಪ್‌ಗಳು: ಸುನಿಲ್ ಬೇಬಿ

Upayuktha
2 minute read
0

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಮೃತಕಾಲ ಉಪನ್ಯಾಸ ಮಾಲಿಕೆ




ಬೆಂಗಳೂರು: 'ಇಡೀ ಜಗತ್ತಿನಲ್ಲಿಯೇ ಅತ್ಯಂತ ಯಶಸ್ವಿಯಾಗಿ ನಮ್ಮ ದೇಶದ ಸ್ಟಾರ್ಟ್ಅಪ್‌ಗಳು ಶರವೇಗದಲ್ಲಿ ಪ್ರಗತಿ ಕಾಣುತ್ತಿವೆ. ವಿಶ್ವಾದ್ಯಂತ ಇರುವ ಹೂಡಿಕೆದಾರರು ನಮ್ಮ ಸ್ಟಾರ್ಟ್ಅಪ್‌ಗಳಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಇದರ ಕಾರಣಕ್ಕಾಗಿ ನಮ್ಮ ವ್ಯಾಪಾರ ವಹಿವಾಟುಗಳಲ್ಲಿ ಸಗಟು ಮಾರಾಟ ಜತೆಗೆ ಸರಕಿನ ಬಿಡಿ ಭಾಗದ ಮಾರಾಟವೂ ಅಧಿಕಗೊಂಡಿದೆ. ನಮ್ಮ ಸ್ಟಾರ್ಟ್ಅಪ್‌ಗಳ ಅಭೂತಪೂರ್ವ ಸಾಧನೆಗೆ ಬಹುಮುಖ್ಯ ಕಾರಣ, ನಮ್ಮ ದೇಶ ಕಾಣುತ್ತಿರುವ ಆರ್ಥಿಕ ಪ್ರಗತಿ. ನಮ್ಮ ದೇಶದ ಜಿ.ಡಿ.ಪಿ ಶೇಕಡವಾರು ಪ್ರಗತಿಯಲ್ಲಿದೆ. ಇದು ಇಡೀ ಜಗತ್ತು ನಮ್ಮತ್ತ ನೋಡುವಂತೆ ಮಾಡಿದೆ. ನಮ್ಮ ತಂತ್ರಜ್ಞರು ಸ್ಥಾಪಿಸುವ ಉದ್ಯಮಗಳಿಗೆ ಭಾರತದಲ್ಲಿ ಎರಡು ಪ್ರಮುಖ ಲಾಭಗಳಿವೆ. ಒಂದು - ನಮ್ಮ ದೇಶದ ಬೃಹತ್ ಮಾರುಕಟ್ಟೆಗೆ ಪೂರೈಕೆ ಮಾಡುವುದು ಹಾಗೂ ಅಸಂಖ್ಯಾತ ಹೊರರಾಷ್ಟ್ರಗಳಿಗೆ ರಫ್ತುಮಾಡುವುದು', ಎಂದು ಅನ್‌ಅಕಾಡೆಮಿ ಸಂಸ್ಥೆಯ ಮಾಜಿ ಮುಖ್ಯ ವಾಣಿಜ್ಯ ಅಧಿಕಾರಿ ಹಾಗೂ ಶಯೋಮಿ ಇಂಡಿಯಾದ ಮಾಜಿ ನಿರ್ದೇಶಕ ಸುನಿಲ್ ಬೇಬಿ ನುಡಿದರು.


ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಆಯೋಜಿಸಿದ್ದ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ತು (ಎ.ಐ.ಸಿ.ಟಿ.ಇ) ಪ್ರಾಯೋಜಿತ ಅಮೃತಕಾಲ ಉಪನ್ಯಾಸ ಮಾಲಿಕೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. 


 'ನಾವು ಸ್ವಾತಂತ್ರ್ಯದ ನೂರನೇ ವರ್ಷ, 2047ರ ಹೊತ್ತಿಗೆ ವಿಕಸಿತ ಭಾರತವನ್ನು ಕಾಣಬೇಕಾದರೆ, ಈಗ ಇಪ್ಪತ್ತರ ಹರೆಯದ ಯುವ ಜನಾಂಗದಿಂದ ಐದು ಆಶ್ವಾಸನೆಗಳನ್ನು ಪಡೆಯುವ ಅಗತ್ಯವಿದೆ. ಆ ಐದು ಆಶ್ವಾಸನೆಗಳು ಯಾವುದೆಂದರೆ– ಅಲ್ಪಾವಧಿಯಲ್ಲಿ ವಿಕಸಿತ ಭಾರತದ ಗುರಿ ಸಾಧಿಸುವುದು, ವಸಾಹತುಶಾಹಿ ಮನಸ್ಥಿತಿಯಿಂದ ಸಂಪೂರ್ಣ ಹೊರಬರುವುದು, ಒಗ್ಗಟ್ಟು ಕಾಪಾಡುವುದು, ನಮ್ಮ ಸಂಸ್ಕೃತಿಯ ಬೇರುಗಳ ಬಗ್ಗೆ ಹೆಮ್ಮೆ ಪಡುವುದು ಹಾಗೂ ಕರ್ತವ್ಯ ಪ್ರಜ್ಞೆಯನ್ನು ಪಾಲಿಸುವುದು. ಈ ಆಶ್ವಾಸನೆಗಳನ್ನು ನಮ್ಮ ಯುವಜನ ನೀಡಿದರೆ ಬಹುಶಃ 2047ರ ಮೊದಲೇ ನಾವು ವಿಕಸಿತ ಭಾರತವನ್ನು ಕಾಣಬಹುದಾಗಿದೆ. ಏಕೆಂದರೆ, ಆ ನಿಟ್ಟಿನಲ್ಲಿ ಕಠಿಣ ಪರಿಶ್ರಮದಿಂದ ಸಾಗುವುದು ನಮಗೆ ತಿಳಿದಿದೆ. ಕೋವಿಡ್ ನಂತರದ ವರ್ಷಗಳಲ್ಲಿ ನಾವು ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಸಾಧಿಸಿರುವ ಅಪ್ರತಿಮ ಪ್ರಗತಿ ಸಾಕ್ಷಿ. ಇಂದು ನಮ್ಮ ದೇಶ ಡಿಜಿಟಲ್ ವ್ಯಾಪಾರ ವಹಿವಾಟುಗಳಲ್ಲಿ ಜಗತ್ತಿನ ಮೊದಲ ಮೂರು ರಾಷ್ಟ್ರಗಳಲ್ಲಿ ಒಂದಾಗಿದೆ. ಬಹುತೇಕ ಕಡೆ ನಾವು ದುಡ್ಡಿನ ಚೀಲ ಅಥವಾ ಪರ್ಸ್ ಒಯ್ಯುವ ಅಗತ್ಯವೇ ಇಲ್ಲ. ಈಗಾಗಲೇ ನಮ್ಮ ದೇಶದಲ್ಲಿ 800 ದಶಲಕ್ಷ ಮೊಬೈಲ್ ಬಳಕೆದಾರರು ಇಂಟರ್‌ನೆಟ್ ಸಂಪರ್ಕ ಹೊಂದಿದ್ದಾರೆ. ದೇಶದ 700 ಜಿಲ್ಲೆಗೆಳು ಸಂಪೂರ್ಣವಾಗಿ 5ಜಿ ಅಂತರ್ಜಾಲವನ್ನು ಹೊಂದಿವೆ. 1.2 ಬಿಲಿಯನ್ ಸಂಖ್ಯೆಯಷ್ಟು ಮೊಬೈಲ್ ಬಳಕೆದಾರರಿದ್ದಾರೆ. ಅವುಗಳ ಪೈಕಿ ಸ್ಮಾರ್ಟ್ಫೋನ್‌ಗಳ ಸಂಖ್ಯೆ 750 ದಶಲಕ್ಷ ದಾಟಿದೆ, ಎಂದರು.


ನೂರಾರು ಸಂಖ್ಯೆಯಲ್ಲಿ ಸೇರಿದ್ದ ತಂತ್ರಜ್ಞಾನದ ವಿದ್ಯಾರ್ಥಿಗಳು ತದನಂತರ ನಡೆದ ಸಂವಾದದಲ್ಲಿ ಪಾಲ್ಗೊಂಡು ಸ್ಟಾರ್ಟ್ಅಪ್‌ಗಳ ಸ್ಥಾಪನೆಯ ಬಗ್ಗೆ ಮಾಹಿತಿ ಪಡೆದರು. ಸಮಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಡಾ. ಎನ್. ನಳಿನಿ, ಅಂತರಾಷ್ಟ್ರೀಯ ವ್ಯವಹಾರಗಳ ಡೀನ್ ಡಾ. ಜೆ. ಸುಧೀರ್ ರೆಡ್ಡಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಪಿಯುಶ್ ಕುಮಾರ್ ಪರೀಕ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

Post a Comment

0 Comments
Post a Comment (0)
To Top