ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಕನಸು ಕಂಡ ಗ್ರಾಮರಾಜ್ಯದ ಮೂಲಕ ರಾಮರಾಜ್ಯ ಸ್ಥಾಪನೆಯ ಕಲ್ಪನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಾಕಾರಗೊಳಿಸಿದ್ದಾರೆ ಎಂದು ಕಲ್ಬುರ್ಗಿ ಜಿಲ್ಲೆಯ ಮಳೇಂದ್ರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಧರ್ಮಸ್ಥಳದಲ್ಲಿ ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಹಮಿಲನ ಮತ್ತು ವ್ಯಸನಮುಕ್ತರ ಕುಟುಂಬೋತ್ಸವದಲ್ಲಿ ಆಶೀರ್ವಚನ ನೀಡಿದರು. ತಮ್ಮ ಆಚಾರ-ವಿಚಾರದಲ್ಲಿ ಹಾಗೂ ಬಹುಮುಖಿ ಸಮಾಜಸೇವಾ ಕಾರ್ಯಗಳಲ್ಲಿ ಅವರು ಗಾಂಧೀಜಿಯವರ ತತ್ವ, ಸಿದ್ಧಾಂತಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅವರ ಹಿತ-ಮಿತ ಮಾತು ಮತ್ತು ಕೃತಿಯಲ್ಲಿ ಸರ್ವರ ಸೇವಾ ಕಾಳಜಿ ಇದೆ. ಪ್ರಾಚೀನ ದೇಗುಲಗಳ ಜೀರ್ಣೋದ್ಧಾರ, ಕೆರೆಗಳಿಗೆ ಕಾಯಕಲ್ಪ, ಪ್ರಕೃತಿ-ಪರಿಸರ ಸಂರಕ್ಷಣೆ, ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮೊದಲಾದ ಜನಸೇವಾಕಾರ್ಯಗಳಿಂದ ಅವರು ನಡೆದಾಡುವ ದೇವರೆಂದೇ ಗೌರವಿಸಲ್ಪಡುತ್ತಾರೆ. ಧರ್ಮಸ್ಥಳದ ಇತಿಹಾಸದಲ್ಲಿ ಅವರ ಸೇವಾವಧಿ ಸುವರ್ಣಯುಗವಾಗಿದೆ. ಅವರ ಸರಳ ವ್ಯಕ್ತಿತ್ವ, ನಡೆ-ನುಡಿ, ಆದರ್ಶ ಹಾಗೂ ಅನುಕರಣೀಯವಾಗಿದ್ದು, ಪೂಜ್ಯರಿಗೆ ಎಲ್ಲಾ ವೀರಶೈವ ಮಠಗಳ ಪೂರ್ಣ ಬೆಂಬಲ, ಸಹಕಾರವಿದೆ ಎಂದು ಸ್ವಾಮೀಜಿ ಹೇಳಿದರು. ಗುಳೇದಗುಡ್ಡದಮಠದ ಒಪ್ಪಂತೇಶ್ವರ ಸ್ವಾಮೀಜಿ ಶುಭ ಹಾರೈಸಿದರು.
ಸಮಾರಂಭವನ್ನು ಉದ್ಘಾಟಿಸಿದ ಹೇಮಾವತಿ ಹೆಗ್ಗಡೆಯವರು, ಲಕ್ಷದೀಪೋತ್ಸವದ ಶುಭಾವಸರದಲ್ಲಿ ಸಾವಿರಾರು ಮಂದಿ ವ್ಯಸನಮುಕ್ತರಾಗಿ ಸಾರ್ಥಕ ಜೀವನ ನಡೆಸಲು ದೃಢಸಂಕಲ್ಪ ಮಾಡಿರುವುದು ಶ್ರೀ ಸ್ವಾಮಿಗೆ ಅರ್ಪಿಸುವ ದೊಡ್ಡ ಸೇವೆ ಆಗಿದೆ. ದುಶ್ಚಟಗಳಿಗೆ ಬಲಿಯಾದರೆ ಮಾನಹಾನಿ, ಧನಹಾನಿ ಹಾಗೂ ಪ್ರಾಣಹಾನಿಯೊಂದಿಗೆ ಸರ್ವಸ್ವವೂ ನಾಶವಾಗುತ್ತದೆ.. ವ್ಯಸನಮುಕ್ತರು ಇನ್ನಾದರೂ ಉತ್ತಮ ಜೀವನ ನಡೆಸಬೇಕು ಎಂದು ಅವರು ಶುಭ ಹಾರೈಸಿದರು.
ವ್ಯಸನಮುಕ್ತರ ಪರವಾಗಿ, ಮೈಸೂರು ಜಿಲ್ಲೆಯ ಬನ್ನೂರು ಚಂದನ್ ಮತ್ತು ಬೆಳಗಾವಿಯ ಶೈಲಾ ಜಗದೀಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶ್ರದ್ಧಾಅಮಿತ್ ಸಾಧಕರನ್ನು ಗೌರವಿಸಿದರು. ವ್ಯಸನಮುಕ್ತರಾಗಿ ಸಾರ್ಥಕ ಜೀವನ ನಡೆಸಲು ಸಹಕರಿಸಿದವರಿಗೆ ಜಾಗೃತಿಅಣ್ಣ ಮತ್ತು ಜಾಗೃತಿಮಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಮನೆ ಮತ್ತು ಮನಸ್ಸು ಪರಿಶುದ್ಧವಾಗಿದ್ದರೆ ಸುಖ-ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ. ಮದ್ಯವ್ಯಸನಿಗಳನ್ನು ವ್ಯಸನಮುಕ್ತರಾಗಿ ಸಾರ್ಥಕ ಜೀವನ ನಡೆಸಲು ಪ್ರೇರೇಪಿಸುವುದು ಅತ್ಯಂತ ಪವಿತ್ರ ಹಾಗೂ ಪುಣ್ಯದ ಕಾರ್ಯವಾಗಿದೆ. ಮಾನಸಿಕ ಪರಿವರ್ತನೆ ಮತ್ತು ದೃಢಸಂಕಲ್ಪದಿಂದ ಮಾತ್ರ ಇಂತಹ ಕಾರ್ಯಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಜನಜಾಗೃತಿವೇದಿಕೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರ ಸೇವೆ ಶ್ಲಾಘನೀಯವಾಗಿದೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್, ಸತೀಶ್ ಹೊನ್ನವಳ್ಳಿ, ರಾಮಸ್ವಾಮಿ, ರಾಜಣ್ಣ ಕೊರವಿ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾೈಸ್ ಸ್ವಾಗತಿಸಿದರು. ಅನಿಲ್ ಕುಮಾರ್ ಧನ್ಯವಾದವಿತ್ತರು. ಯೋಜನಾಧಿಕಾರಿಗಳಾದ ಮೋಹನ್ ಕೆ., ಮತ್ತು ಗಣೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ