ನಿಟ್ಟೆ: 'ಪ್ರಸ್ತುತ ದಿನಗಳಲ್ಲಿ ಕಲಿಕೆ ನಿರಂತರ ಎಂಬ ವಿಚಾರ ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತದೆ. ವಿಶ್ವದ ವಿವಿಧ ದೇಶಗಳು ಹಣದುಬ್ಬರ, ಯುದ್ದಗಳು, ದಿವಾಳಿತನ, ಕೊರೋನಾದಂಥ ಕಷ್ಟಗಳನ್ನು ಅನುಭವಿಸುತ್ತಿರುವ ಸಂದರ್ಭದಲ್ಲಿ ಜೀವನದಲ್ಲಿ ಉನ್ನತಿ ಪಡಯುವಲ್ಲಿ ಉದ್ಯೋಗಾಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನ ನಡೆಸಬೇಕು' ಎಂದು ಮಂಗಳೂರಿನ ಅಕೊಲೇಡ್ ಟೆಕ್ ಸೊಲ್ಯೂಶನ್ಸ್ ನ ಸ್ಥಾಪಕ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಹರೀಶ್ ನೀರುಮಾರ್ಗ ಅಭಿಪ್ರಾಯಪಟ್ಟರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದ ವಾರ್ಷಿಕ ಎರಡು ದಿನಗಳ ಟೆಕ್ ಉತ್ಸವವಾದ 'ಸೆಮಫೋರ್'ನ್ನು ನ.20 ರಂದು ಉದ್ಘಾಟಿಸಿ ಅವರು ಮಾತನಾಡಿದರು. 'ಯಾವುದೇ ವೃತ್ತಿಯಲ್ಲಿ ನಾವು ನಮ್ಮ ಸ್ವಂತ ಜ್ಞಾನದಿಂದ ಸಮಾಜದ ವಿವಿಧ ಸವಾಲುಗಳನ್ನು ಪರಿಹರಿಸಬೇಕು. ಭವಿಷ್ಯವನ್ನು ಕಟ್ಟಿಕೊಳ್ಳಲು ಪಾಲಿಸಬೇಕಾದ ಕೆಲವಾರು ನೀತಿಗಳ ಬಗೆಗೆ ಅರಿತಿರುವುದು ಅತಿಮುಖ್ಯ' ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ 'ನಿಟ್ಟೆ ಸಂಸ್ಥೆಯ ಎಂ.ಸಿ.ಎ ವಿಭಾಗವು ಕಳೆದ ಇಪ್ಪತ್ತು ವರ್ಷಗಳಿಂದ ನಡೆಸುತ್ತಾಬಂದಿರುವ ಈ ಉತ್ಸವವು ಉತ್ತಮವಾಗಿ ಬೆಳೆಯುತ್ತಿದ್ದು ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ. ಯಾವುದೇ ಸಂಸ್ಥೆ ಒಂದು ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದರೆ ಅದರ ಹಿಂದಿನ ಕಾರಣವನ್ನು ಅರಿಯಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಚಂದ್ರಯಾನ-೩ ರನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಚಂದ್ರಯಾನಕ್ಕೆ ತಗುಲುವ ವೆಚ್ಚ, ಈ ಯೋಜನೆಯಿಂದ ಹೇಗೆ ದೇಶಕ್ಕೆ ಉಪಯುಕ್ತ ಮಾಹಿತಿ ಹಾಗೂ ವಿಶ್ವಮಟ್ಟದಲ್ಲಿ ಮನ್ನಣೆ ತಂದುಕೊಡಲಿದೆ ಎಂಬುದರ ಬಗೆಗೆ ತಿಳಿದುಕೊಳ್ಳುವ ಉತ್ಸಾಹ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು' ಎಂದು ಹೇಳಿದರು.
ಸೆಮಫೋರ್ ಫೆಸ್ಟ್ ಕಾರ್ಯಕ್ರಮದಡಿಯಲ್ಲಿ ನಡೆಸಲಾಗುವ 10 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ದಕ್ಷಿಣ ಭಾರತದ ಹಲವು ರಾಜ್ಯಗಳ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.
ಕಾಲೇಜಿನ ಎಂ.ಸಿ.ಎ ವಿಭಾಗದ ಮುಖ್ಯಸ್ಥೆ ಡಾ| ಮಮತಾ ಬಲಿಪ ಸ್ವಾಗತಿಸಿದರು. ಸೆಮಫೋರ್ ಸ್ಟಾಫ್ ಕಾರ್ಡಿನೇಟರ್ ಶರತ್ ಕೆ ಆರ್ ಅತಿಥಿಯನ್ನು ಪರಿಚಯಿಸಿದರು. ಸ್ಯಾಮ್ಕಾ ವಿದ್ಯಾರ್ಥಿ ಸಂಘದ ಟೆಕ್ನಿಕಲ್ ಕೋರ್ಡಿನೇಟರ್ ಶ್ರೀನಾಥ್ ಕಾರ್ಯಕ್ರಮದ ಬಗೆಗೆ ಪ್ರಾಸ್ತಾವಿಸಿದರು. ವಿದ್ಯಾರ್ಥಿನಿ ಮಿಶಲ್ ಪ್ರಾಂಶುಪಾಲರನ್ನು ಸಭೆಗೆ ಪರಿಚಯಿಸಿದರು. ಸ್ಯಾಮ್ಕಾ ವಿದ್ಯಾರ್ಥಿ ನಾಯಕ ವೈಶಾಖ್ ಗೌಡ ಜೆ.ಎಸ್ ಕಾರ್ಯಕ್ರಮವನ್ನು ಸಂಯೋಜಿಸುವಲ್ಲಿ ತೊಡಗಿದ್ದರು. ಸ್ಯಾಮ್ಕಾ ಕಾರ್ಯದರ್ಶಿ ಶ್ರಾವ್ಯಾ ವಂದಿಸಿದರು. ವಿದ್ಯಾರ್ಥಿನಿ ಮೇಘನಾ ಮತ್ತು ತಂಡ ಪ್ರಾರ್ಥಿಸಿದರು. ವಿದ್ಯಾರ್ಥಿಗಳಾದ ವರುಣ್ ಹಾಗೂ ವಿಶ್ವರೂಪ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ