ಮಂಗಳೂರು: ಡಿಜಿ ಯಕ್ಷ ಫೌಂಡೇಶನ್ (ರಿ) ವತಿಯಿಂದ ಮೂರನೇ ವರ್ಷದ ಶ್ರೀ ಹರಿಲೀಲಾ ಯಕ್ಷನಾದೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನ.19ರ ಭಾನುವಾರ ಅಪರಾಹ್ನ ಕುಡುಪು ಶ್ರೀ ಅನಂತಪದ್ಮನಾಭ ಸನ್ನಿಧಿಯಲ್ಲಿ ನಡೆಯಲಿದೆ. ಈ ಸಂದರ್ಭ ಪೂರ್ವರಂಗ, ಅಬ್ಬರತಾಳ, ತಾಳಮದ್ದಲೆ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ವೇದಮೂರ್ತಿ ಕುಡುಪು ನರಸಿಂಹ ತಂತ್ರಿಗಳು ಸಭಾಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದು, ಹಿರಿಯ ಮದ್ದಳೆಗಾರ ಮಿಜಾರು ಮೋಹನ ಶೆಟ್ಟಿಗಾರ್ ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹರಿನಾರಾಯಣ ಬೈಪಾಡಿತ್ತಾಯ- ರಾಜ್ಯ ಪ್ರಶಸ್ತಿ ಪುರಸ್ಕೃತ ಲೀಲಾವತಿ ಬೈಪಾಡಿತ್ತಾಯ ಗುರು ದಂಪತಿಯ ಹೆಸರಿನಲ್ಲಿ ನೀಡಲಾಗುವ "ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ 2023" ನೀಡಿ ಗೌರವಿಸಲಾಗುವುದು.
ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ ಅವರು ಅಧ್ಯಕ್ಷತೆ ವಹಿಸಲಿದ್ದು, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರ್, ಪಂಚಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಅವರು ಅತಿಥಿಗಳಾಗಿ ಭಾಗವಹಿಸುವರು. ಚಂದ್ರಶೇಖರ ಕೊಂಕಣಾಜೆ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಮಧ್ಯಾಹ್ನ 2ರಿಂದ ಯಕ್ಷಗಾನದ ಪೂರ್ವರಂಗ, ಪುಟಾಣಿಗಳಿಂದ 11 ಚೆಂಡೆಗಳ ಅಬ್ಬರತಾಳ ವೈಭವ ಹಾಗೂ ಯಕ್ಷಗಾನ ತಾಳಮದ್ದಲೆ "ಶ್ರೀರಾಮ ದರ್ಶನ" ಪ್ರದರ್ಶನಗೊಳ್ಳಲಿದೆ. ಶಾಲಿನಿ ಹೆಬ್ಬಾರ್ ನೇತೃತ್ವದ ಹಿಮ್ಮೇಳವಿರಲಿದ್ದು, ಮುಮ್ಮೇಳದಲ್ಲಿ ಎಂ.ಎಲ್.ಸಾಮಗ, ಗಣರಾಜ ಕುಂಬ್ಳೆ ಮತ್ತು ಅನಂತ ಬೈಪಾಡಿತ್ತಾಯ ಅವರು ಅರ್ಥಧಾರಿಗಳಾಗಿ ಭಾಗವಹಿಸುವರು. ಸಭಾ ಕಾರ್ಯಕ್ರಮದ ಬಳಿಕ ಪೀಠಿಕಾ ಸ್ತ್ರೀವೇಷ, ಬಳಿಕ ಗುರು ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ನಿರ್ದೇಶನದಲ್ಲಿ ಪರಂಪರೆಯ ವಿಶಿಷ್ಟ ರಂಗನಡೆಗಳಿರುವ ಕರ್ಣಾರ್ಜುನ ಕಾಳಗ ಯಕ್ಷಗಾನವನ್ನು ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರ, ತಲಕಳ- ಇದರ ಕಲಾವಿದರು ಪ್ರದರ್ಶಿಸಲಿರುವರು.
ಉಚಿತವಾಗಿ ದೊರೆಯವ ಯಕ್ಷ ನಾದದ ವೈಭವಕ್ಕೆ ಎಲ್ಲ ಕಲಾಭಿಮಾನಿಗಳನ್ನು ಡಿಜಿ ಯಕ್ಷ ಫೌಂಡೇಶನ್ ಗೌರವಾಧ್ಯಕ್ಷರಾದ ಹರಿನಾರಾಯಣ ಬೈಪಾಡಿತ್ತಾಯ ಹಾಗೂ ಲೀಲಾವತಿ ಬೈಪಾಡಿತ್ತಾಯ ಅವರು ಆತ್ಮೀಯವಾಗಿ ಆಮಂತ್ರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ