ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಉತ್ಥಾನದ್ವಾದಶಿ ಆಚರಣೆ

Upayuktha
0

ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥರಿಂದ ತುಳಸಿ ಪೂಜೆ, ಗಾಯನ-ನರ್ತನ ಸಹಿತ ಸಂಕೀರ್ತನೆ, ಗೋ ಗ್ರಾಸ ಸಮರ್ಪಣೆ




ಮೈಸೂರು: ಮೈಸೂರಿನ ಕೃಷ್ಣಮೂರ್ತಿ ಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಶುಕ್ರವಾರ ಉತ್ಥಾನ ದ್ವಾದಶಿ ಆಚರಣೆ ಸಂಭ್ರಮದಿಂದ ನೆರವೇರಿತು. ದ್ವಾದಶಿ ನಿಮಿತ್ತ ಮುಂಜಾನೆ 5ಕ್ಕೆ ಸುಪ್ರಭಾತ ಸೇವೆಯೊಂದಿಗೆ ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ  ಸಂಸ್ಥಾನ ಪೂಜೆ ನೆರವೇರಿಸಿದರು.


ವಿದ್ಯಾಪೀಠದ ವಿದ್ಯಾರ್ಥಿಗಳ ತಂಡದಿಂದ ವೇದ- ಮಂತ್ರ ಘೋಷ, ಪಾರಾಯಣದಿಂದ ಆರಂಭಗೊಂಡ ಚಟುವಟಿಕೆಗಳಲ್ಲಿ ಹಿರಿಯ ವಿದ್ವಾಂಸರೂ ಪಾಲ್ಗೊಂಡಿದ್ದರು. ಸೋಸಲೆ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಂಸ್ಥಾನ ಪೂಜೆ ನಂತರ ತುಳಸೀ ಕಟ್ಟೆಗೆ ವಿಶೇಷ ಆರತಿಗಳನ್ನು ಬೆಳಗಿದರು.


ತುಳಸಿ ಸಂಕೀರ್ತನೆ:  

ವಿದ್ಯಾಪೀಠದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಮ್ಮುಖ ಸ್ವಾಮೀಜಿ ಸಂಕೀರ್ತನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕೃಷ್ಣನ ಕುರಿತಾದ ಗೀತೆಗಳನ್ನು ಹಾಡುತ್ತಾ ತುಳಸಿ ಬೃಂದಾವನದ ಸುತ್ತ ವಿದ್ಯಾರ್ಥಿಗಳು, ಭಕ್ತರು ಮತ್ತು ವಿದ್ಯಾಶ್ರೀಶ ತೀರ್ಥರು  ಪ್ರದಕ್ಷಿಣೆ ಹಾಕಿ ನಮಸ್ಕರಿಸಿದರು. ತುಳಸಿ- ಧಾತ್ರಿಯರ (ನೆಲ್ಲಿಯ) ಪೂಜೆ, ತುಳಸಿ ವಿವಾಹವನ್ನು ನೆರವೇರಿಸುವ ಕಾರ್ಯಕ್ಕೆ ಶ್ರೀಗಳು ನೇತೃತ್ವ ವಹಿಸಿದ್ದರು. ನಂತರ ಶ್ರೀಗಳು ಮಠದ ಗೋಶಾಲೆಯ ಭಾರತೀಯ ಗೋವಿನ ತಳಿಗಳಿಗೆ ಪೂಜೆ ಮಾಡಿ ಗೋಗ್ರಾಸ ಸಮರ್ಪಣೆ ಮಾಡಿದರು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. ನಂತರ ಭಕ್ತರಿಗೆ ತೀರ್ಥ ಪ್ರಸಾದ, ದ್ವಾದಶಿ ಪಾರಣೆ ನಡೆಯಿತು.


ವ್ಯಾಸತೀರ್ಥ ವಿದ್ಯಾಪೀಠದ  ಗೌರವ ಕಾರ್ಯದರ್ಶಿ ಡಾ. ಡಿ.ಪಿ. ಮಧುಸೂದನಾಚಾರ್ಯ, ತಿರುಮಲ- ತಿರುಪತಿ ಆಡಳಿತ ಮಂಡಳಿ ನಿಕಟಪೂರ್ವ ಸದಸ್ಯ ಡಿ.ಪಿ. ಅನಂತಾಚಾರ್ಯ, ಗುರುಗಳ ಆಪ್ತ ಕಾರ್ಯದರ್ಶಿ ಅಭಿಜಿತ್, ಪಂಡಿತ ಪ್ರಣವ ಆಚಾರ್ಯ, ವಿದ್ವಾನ್ ಬಿದರಹಳ್ಳಿ ಕೃಷ್ಣಾಚಾರ್ಯ, ನಾಗಸಂಪಿಗೆ ಕೃಷ್ಣಾಚಾರ್ಯ ಸೇರಿದಂತೆ ವಿದ್ಯಾಪೀಠದ ಉಪನ್ಯಾಸಕರು, ವಿದ್ಯಾರ್ಥಿಗಳು ಇದಕ್ಕೆ ಸಾಕ್ಷಿಯಾದರು.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top