ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Upayuktha
0

ಉಡುಪಿ:   ಮಲ್ಪೆ ಬೀಚ್‌ನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ, ಯಾವುದೇ ಸಾವು-ನೋವುಗಳು ಆಗದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.


ಅವರು ಬುಧವಾರ ನಗರದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಮಲ್ಪೆ ಕಡಲ ತೀರದ ಸುಧಾರಣೆ ಹಾಗೂ ಪ್ರವಾಸಿಗರ ಅನುಕೂಲಕ್ಕೆ ಆಧುನಿಕ ಅಭಿವೃದ್ಧಿಯ ಮೂಲಸೌಕರ್ಯಗಳನ್ನು ಒದಗಿಸಲು ಕಡಲ ತೀರದ ನೈಸರ್ಗಿಕ ಸೌಂದರ್ಯ ಹಾಗೂ ಪರಿಸರಕ್ಕೆ ಮಾರಕವಾಗದಂತೆ ಮಾಸ್ಟರ್ ಪ್ಲಾನ್ ಅನ್ನು ತಯಾರಿ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಮಾಸ್ಟರ್ ಪ್ಲಾನ್‌ಗಳನ್ನು ತಯಾರಿಸುವ ಮುನ್ನ ಸ್ಥಳೀಯ ನುರಿತ ಅನುಭವಿಗಳು, ಮೀನುಗಾರರೊಂದಿಗೆ ಸಮುದ್ರದಲ್ಲಿ ಪ್ರವಾಸಿಗರ ಸುರಕ್ಷತೆ, ಭದ್ರತೆ ಹಾಗೂ ಸಮುದ್ರಗಳ ಏರಿಳಿತಗಳ ಕುರಿತು ಚರ್ಚಿಸಿ, ಮಾಹಿತಿ ಪಡೆದು ಸ್ಥಳೀಯ ಮೀನುಗಾರಿಕೆಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ರಚಿಸಬೇಕೆಂದರು. 


ಮಲ್ಪೆ ಬೀಚ್‌ನಲ್ಲಿ ಹಾಗೂ ಸೈಂಟ್ ಮೇರೀಸ್ ಐ-ಲ್ಯಾಂಡ್‌ನಲ್ಲಿ ಹೊರಗಿನಿಂದ ಬರುವ ಪ್ರವಾಸಿಗರಿಗೆ ನೀರಿನ ಆಳ ಹಾಗೂ ಸುರಕ್ಷತೆ ತೆಗೆದುಕೊಳ್ಳುವ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಕಳೆದ ಸಾಲಿನಲ್ಲಿ ಅನೇಕ ಜನರು ಮೃತರಾಗಿರುವ ಪ್ರಕರಣಗಳು ಆಗಿವೆ. ಇವುಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸುವುದರ ಜೊತೆಗೆ ಜೀವ ರಕ್ಷಕ ಸಿಬ್ಬಂದಿಗಳಿಗೆ ಹೆಚ್ಚಿನ ರೀತಿಯಲ್ಲಿ ಪ್ರವಾಸಿಗರ ಸುರಕ್ಷತೆ ಕುರಿತು ತರಬೇತಿ ನೀಡಿ, ನಿಯೋಜಿಸಬೇಕು ಎಂದರು. 


ಮಲ್ಪೆ ಸೀವಾಕ್ ಹಾಗೂ ಬೀಚ್‌ನಿಂದ ಸೈಂಟ್ ಮೇರೀಸ್ ದ್ವೀಪಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಪ್ರವಾಸಿ ಬೋಟುಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಹಾಗೂ ಪ್ರಯಾಣಿಕರಿಗೆ ಸೂಕ್ತ ರೀತಿಯ ಲೈಫ್ ಜಾಕೆಟ್‌ಗಳನ್ನು ಧರಿಸಲು ನೀಡದೇ ಕರೆದೊಯ್ಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಗುತ್ತಿಗೆ ಹೊಂದಿರುವ ಗುತ್ತಿಗೆದಾರರಿಗೆ ಈ ಕೂಡಲೇ ನೋಟೀಸ್ ನೀಡಿ, ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.


ಈಗಾಗಲೇ ಸಮುದ್ರ ತೀರದಲ್ಲಿ ಪ್ರವಾಸಿಗರು ನೀರಿನ ಸೆಳೆಯಲ್ಲಿ ಸಿಲುಕಿದಾಗ ಅವರ ರಕ್ಷಣೆಗೆ ಬಳಸಲು ಜೆಟ್ ಸ್ಕೀ ಬೋಟುಗಳನ್ನು ದುರಸ್ಥಿ ಮಾಡುವುದರೊಂದಿಗೆ ಸುಸ್ಥಿತಿಯಲ್ಲಿಟ್ಟುಕೊಂಡು ಅವಘಡಗಳು ಸಂಭವಿಸಿದಾಗ ಬಳಸಲು ಸನ್ನದ್ಧರಾಗಿರಬೇಕು ಎಂದರು.


ಬೀಚ್ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿರುವ ಕಾರ್ಟೆಜು, ಹೋಟೆಲ್‌ಗಳಿಂದ ರಾಜಸ್ವ ಶುಲ್ಕವನ್ನು ಆಗಿಂದ್ದಾಗೆ ವಸೂಲಿ ಮಾಡಬೇಕು. ಒಂದೊಮ್ಮೆ ಅವರಿಗೆ ಗುತ್ತಿಗೆ ಅವಧಿ ಮುಗಿದ್ದಲ್ಲಿ ಹೊಸದಾಗಿ ಗುತ್ತಿಗೆ ಆಧಾರದ ಮೇಲೆ ನೀಡಲು ಸಮಿತಿಯ ತೀರ್ಮಾನದನ್ವಯ ಕ್ರಮ ಕೈಗೊಳ್ಳಬೇಕು ಎಂದರು.


ಮಲ್ಪೆ ಬೀಚ್ ಪ್ರದೇಶದಲ್ಲಿ ಹೈಮಾಸ್ಟ್ ಕಂಬಗಳಿಗೆ ದೀಪ ಅಳವಡಿಸುವುದು, ದುರಸ್ಥಿ ಹಾಗೂ ಹೊಸ ದಾರಿದೀಪ ಅಳವಡಿಸುವ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ನಿಗಧಿತ ಕಾಲಾವಧಿಯ ಒಳಗೆ ಪೂರ್ಣಬೇಕೆಂದು ಸೂಚನೆ ನೀಡಿದರು. 


ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಲ್ಪೆ ಬೀಚ್ ಪ್ರದೇಶದಲ್ಲಿ ಜಲ ಸಾಹಸ ಚಟುವಟಿಕೆಗಳು ಸೇರಿದಂತೆ ಮತ್ತಿತರ ಪ್ರವಾಸಿ ಚಟುವಟಿಕೆಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡುವ ಮುನ್ನ ಪ್ರವಾಸಿಗರ ಸುರಕ್ಷತೆ ಸೇರಿದಂತೆ ಪ್ರವಾಸಿಗರಿಗೆ ಆರ್ಥಿಕ ಹೊರೆ ಆಗದಂತೆ ಷರತ್ತುಗಳನ್ನು ವಿಧಿಸುವುದರೊಂದಿಗೆ ಗುತ್ತಿಗೆ ನೀಡಬೇಕು. ಮಲ್ಪೆ ಬೀಚ್‌ನ ಸಮಗ್ರ ಅಭಿವೃದ್ಧಿಗೆ ಉತ್ತಮ ರೀತಿಯ ನೀಲನಕ್ಷೆಯನ್ನು ತಯಾರಿಸಿ, ಅಭಿವೃದ್ಧಿಪಡಿಸಬೇಕೆಂದು ಸಲಹೆ ನೀಡಿದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಪೌರಾಯುಕ್ತ ರಾಯಪ್ಪ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ಮಲ್ಪೆ ಭಾಗದ ನಗರಸಭಾ ಸದಸ್ಯರು, ಭಜನಾ ಮಂಡಳಿಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top